ಆ್ಯಪ್ನಗರ

ಒಂದೇ ಕುಟುಂಬದ 61 ಜನರಿಂದ ಮತದಾನ

ದೇಶದಲ್ಲಿ ಸದ್ಯ, ಅವಿಭಕ್ತ ಕುಟುಂಬಗಳು ಕಾಣ ಸಿಗುವುದೇ ಅಪರೂಪ. ಅಂತಹುದರಲ್ಲಿ ನಗರದಲ್ಲೇ ಒಂದೇ ಕುಟುಂಬದ 61 ಜನ ಮತ ಚಲಾಯಿಸಿದ್ದಾರೆ.

TIMESOFINDIA.COM 13 May 2018, 12:40 pm
ಬೆಂಗಳೂರು: ದೇಶದಲ್ಲಿ ಸದ್ಯ ಅವಿಭಕ್ತ ಕುಟುಂಬಗಳು ಕಾಣ ಸಿಗುವುದೇ ಅಪರೂಪ. ಅಂತಹುದರಲ್ಲಿ ನಗರದಲ್ಲಿ ಒಂದೇ ಕುಟುಂಬದ 61 ಜನ ಮತ ಚಲಾಯಿಸಿದ್ದಾರೆ. ತುಬರಹಳ್ಳಿ ಬಳಿಯ ಸಿದ್ದಾಪುರದಲ್ಲಿ ಅವಿಭಜಿತ ಕುಟುಂಬದ 61 ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
Vijaya Karnataka Web 61 people voting


ಮಾರತಹಳ್ಳಿ - ವರ್ತೂರು ರಸ್ತೆಯ ಬಳಿಯಲ್ಲಿರುವ ಚಿಕ್ಕಗೌಡರ ಕುಟುಂಬ ಎಂದೇ ಕರೆಯಲ್ಪಡುವ ಒಂದೇ ಕುಟುಂಬದ 61 ಜನ ತಮ್ಮ ಹಕ್ಕನ್ನು ಚಲಾಯಿಸಿರುವುದು ಈ ಬಾರಿಯ ಚುನಾವಣೆಯ ವಿಶೇಷತೆಗಳಲ್ಲಿ ಒಂದು. ಕುಟುಂಬದ ಹಿರಿಯರಾದ 95 ವರ್ಷದ ಬೈರಮ್ಮ ಸೇರಿ ಮೊದಲ ಬಾರಿಗೆ ಹಕ್ಕು ಚಲಾಯಿಸಿದ ನಯನ, ಮೋಹಿತ್, ಹರ್ಷಿತ್ ಹಾಗೂ ರಿತ್ವಿಕ್ ಸಹ ವೋಟ್ ಮಾಡಿದ್ದಾರೆ. ಅಲ್ಲದೆ, ಮತ ಹಾಕಿದ ಬಳಿಕ ತಮಗೆ ಹೆಮ್ಮೆ ಎನಿಸಿತು ಎಂದು ಮೊದಲ ಬಾರಿಗೆ ಮತ ಚಲಾಯಿಸಿದ ಯುವಕ - ಯುವತಿಯರು ಹೇಳಿಕೊಂಡಿದ್ದಾರೆ.

ಹಿರಿಯರು ನಮಗೆ ಮತದಾನದ ಮಹತ್ವದ ಬಗ್ಗೆ ತಿಳಿಸಿಕೊಟ್ಟಿದ್ದರು. ಹೀಗಾಗಿ ನಾವೆಲ್ಲರೂ ಮತ ಹಾಕುತ್ತೇವೆ ಆದರೆ, ಈಗಿನ ಯುವಕರಲ್ಲಿ ಚುನಾವಣೆ ಬಗ್ಗೆ ಅಷ್ಟು ಆಸಕ್ತಿ ಇಲ್ಲ. ರಾಜಕಾರಣಿಗಳ ಬಗ್ಗೆ ಅಪನಂಬಿಕೆ ಹಾಗೂ ಅವರ ದುರ್ವರ್ತನೆಗಳು ಇದಕ್ಕೆ ಕಾರಣವಿರಬಹುದು ಎಂದು 78 ವರ್ಷದ ಕೃಷ್ಣಪ್ಪ ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ, ಯಾರಿಗೆ ಮತ ಹಾಕಬೇಕು ಎಂಬುದು ಅವರಿಗೆ ಬಿಟ್ಟ ವಿಚಾರ ಎಂದು ಯುವಕ - ಯುವತಿಯರಿಗೆ ತಿಳಿಸಿದ್ದಾರೆ. ಇನ್ನು, ನಮ್ಮ ವ್ಯವಸ್ಥೆಯಿಂದ ಭ್ರಷ್ಟಾಚಾರವನ್ನು ಹೇಗಾದ್ರೂ ಮಾಡಿ ತೆಗೆಯಬೇಕು ಎಂದು ಮನೆಯ ಹಿರಿಯ ಮಹಿಳೆಯೊಬ್ಬರು ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ಶತಮಾನಕ್ಕೂ ಅಧಿಕ ಕಾಲದಿಂದ ಸಿದ್ದಾಪುರ - ತುಬರಹಳ್ಳಿಯಲ್ಲೇ ಚಿಕ್ಕಗೌಡರ ಕುಟುಂಬ ನೆಲೆಸಿದ್ದು, ವ್ಯವಸಾಯವನ್ನೇ ಕುಟುಂಬದ ಮೂಲ ಆಧಾರವನ್ನಾಗಿ ಮಾಡಿಕೊಂಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲು ನಮಗೆ ಬೆಂಗಳೂರಿನಿಂದ ಹೊಸಕೋಟೆ ನಡುವೆ ನೂರಾರು ಎಕರೆ ಭೂಮಿಯಿತ್ತು. ಈಗ ಸುಮಾರು 50 ಎಕರೆಯಷ್ಟು ಕೃಷಿ ಭೂಮಿ ಮಾತ್ರ ಉಳಿದುಕೊಂಡಿದೆ. ಹಾಗೂ, ನಮ್ಮ ಕುಟುಂಬದ ಅನೇಕ ಮಂದಿ ವೈದ್ಯರು, ಎಂಜಿನಿಯರ್‌ಗಳು ಹಾಗೂ ಸರ್ಕಾರಿ ಉದ್ಯೋಗಿಗಳಾಗಿದ್ದಾರೆ ಎಂದು 78 ವರ್ಷದ ಕೃಷ್ಣಪ್ಪ ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ