ಆ್ಯಪ್ನಗರ

ಉಪಚುನಾವಣೆ ಬಳಿಕ ಕಾಂಗ್ರೆಸ್ ಮೂರು ಹೋಳು: ಕಾರಜೋಳ ಹೊಸ ಬಾಂಬ್

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ. ಜಿ. ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ ಹಾಗೂ ಎಂಬಿ ಪಾಟೀಲ, ಆರ್.ವಿ. ದೇಶಪಾಂಡೆ ನೇತೃತ್ವದಲ್ಲಿ ಮೂರು ಭಾಗಗಳಾಗಿ ಕಾಂಗ್ರೆಸ್ ಒಡೆಯಲಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

Vijaya Karnataka Web 15 May 2019, 2:23 pm
ಹುಬ್ಬಳ್ಳಿ: ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭೆ ಉಪಚುನಾವಣೆ ಬಳಿಕ ಕಾಂಗ್ರೆಸ್‌ದಲ್ಲಿ ಪರಸ್ಪರ ಕಿತ್ತಾಡಿಕೊಂಡು ಪಕ್ಷ ಮೂರು ಹೋಳಾಗಲಿದೆ ಎಂದು ಬಿಜೆಪಿ ಉಪಾಧ್ಯಕ್ಷ, ಮುಧೋಳ ಶಾಸಕ ಗೋವಿಂದ ಕಾರಜೋಳ ಹೊಸ ಬಾಂಬ್ ಸಿಡಿಸಿದ್ದಾರೆ.
Vijaya Karnataka Web Govind Karajol


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಾ. ಜಿ. ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ ಹಾಗೂ ಎಂಬಿ ಪಾಟೀಲ, ಆರ್.ವಿ. ದೇಶಪಾಂಡೆ ನೇತೃತ್ವದಲ್ಲಿ ಮೂರು ಭಾಗಗಳಾಗಿ ಕಾಂಗ್ರೆಸ್ ಒಡೆಯಲಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ ಡಿಕೆಶಿ, ಎಂ.ಬಿ ಪಾಟೀಲ, ಖರ್ಗೆ, ಡಾ.ಪರಮೇಶ್ವರ, ದೇಶಪಾಂಡೆ, ಸಿದ್ದರಾಮಯ್ಯ ಟವೆಲ್ ಹಾಕಿದ್ದು, ಪರಸ್ಪರರ ನಡುವೆ ಈಗಲೇ ಕಚ್ಚಾಟ ಶುರುವಾಗಿದೆ. ದಲಿತ ಸಿಎಂ ಮಾಡುವೆ ಎಂದಿದ್ದ ಸಿದ್ದರಾಮಯ್ಯ ಇದೀಗ ತನ್ನ ಶಿಷ್ಯರ ಮೂಲಕ ಲಾಬಿ ನಡೆಸಿದ್ದಾರೆ. ದಾಖಲೆಯಲ್ಲಿ ಗೆಲುವು ಸಾಧಿಸಿದ್ದೇನೆ, ನನಗೂ ಸಿಎಂ ಹುದ್ದೆ ಬೇಕು ಎಂದು ಖರ್ಗೆ ಹೇಳುತ್ತಿದ್ದಾರೆ. ಈ ಮಧ್ಯೆ ಡಿಕೆ ಶಿವಕುಮಾರ್ ಸಹ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ. ಉಪಚುನಾವಣೆ ಬಳಿಕ ಇದು ಮತ್ತಷ್ಟು ತೀವ್ರಗೊಳ್ಳಲಿದ್ದು, ಸರಕಾರ ಪತನಗೊಳ್ಳಲಿದೆ ಎಂದು ಕಾರಜೋಳ ವಿಶ್ಲೇಷಿಸಿದರು.

ದೇವರಾಜು ಅರಸುರವರ ಗರಡಿಯಲ್ಲಿ ಬೆಳೆದಿರುವ ಜೆಡಿಎಸ್ ಅಧ್ಯಕ್ಷ ಎಚ್. ವಿಶ್ವನಾಥ ಹೇಳಿಕೆಯನ್ನು ಕಾಂಗ್ರೆಸ್‌ನವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಅವರ ಮೇಲೆ ಎಲ್ಲರೂ ಮುಗಿಬೀಳುತ್ತಿದ್ದಾರೆ ಎಂದು ಟೀಕಿಸಿದ ಅವರು, ಭೂ ಮಾಫಿಯಾದವರಿಗೆ ಬೆಂಗಾವಲಾಗಿ ನಿಂತುಕೊಂಡಿರುವ ಸಿದ್ದರಾಮಯ್ಯ, ಸಾಮಾಜಿಕ ನ್ಯಾಯ ಪಾಲಿಸಿದ ದೇವರಾಜ್ ಅರಸು ಅವರ ಜತೆ ಹೋಲಿಸಿಕೊಳ್ಳಬೇಡಿ ಎಂದು ಕುಟುಕಿದರು.

ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ, ಉಪಚುನಾವಣೆ ಗೆಲ್ಲಲ್ಲು ಡಿ.ಕೆ. ಶಿವಕುಮಾರ್ ಮತ್ತು ಎಂಬಿ ಪಾಟೀಲ ಅವರು 50 ಕೋಟಿ ರೂ. ಬಂಡವಾಳ ಹೂಡಿದ್ದಾರೆ. ಇದಲ್ಲದೇ ಮಂತ್ರಿ ಸ್ಥಾನ ಉಳಿಯಬೇಕೆಂದರೆ ಕೋಟಿಗಟ್ಟಲೇ ಹಣ ಖರ್ಚು ಮಾಡಬೇಕೆಂದು ಸಚಿವರಿಗೆ ಧಮಕಿ ಹಾಕಿದ್ದಾರೆ. ಈ ಹಣ ಹಂಚಲು ಬೆಂಗಳೂರು, ಕನಕಪುರದಿಂದ 500ಕ್ಕೂ ಹೆಚ್ಚು ಜನರನ್ನು ಕರೆತಂದಿದ್ದಾರೆ ಎಂದು ಆರೋಪಿಸಿದರು.

ಹೊರಗಿನವರ ಮೂಲಕ ಹಣ ಹಂಚುತ್ತಿರುವುದನ್ನು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪಿಸಿದ್ದುಘಿ, ತಿರುಗಿಬಿದ್ದಿದ್ದಾರೆ. ಅವರೆಲ್ಲರೂ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌ನವರು ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇವೆ ಎಂದೂ ಹೇಳುತ್ತಿಲ್ಲ. ಹರ್ಲಾಪುರದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡರೂ ಸಿಎಂ ಆದಿಯಾಗಿ ಸಚಿವರಾರು ಆ ಕುಟುಂಬದವರಿಗೆ ಸಾಂತ್ವನ ಹೇಳಲಿಲ್ಲ. ಇದಕ್ಕೆ ಸಮಯ ಸಿಗುತ್ತಿಲ್ಲವೇ ಎಂದು ಛೇಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ