ಆ್ಯಪ್ನಗರ

ದಾರಿ ಯಾವುದಯ್ಯಾ ಕೋಟಿ ಕೋಟಿ ಲಾಭಕ್ಕೆ?!

ಈ ರಾಜಕಾರಣಿಗಳಿಗೆ ಎಲ್ಲಿಂದ ಬಂತು ಇಷ್ಟೊಂದು ಹಣ ? ಹೇಗೆ ದುಡಿದರೆ ಇಷ್ಟೊಂದು ಕೋಟಿ ಕೋಟಿ ರೂ. ಗಳನ್ನು ?

Vijaya Karnataka 22 Apr 2018, 12:34 pm
ಆರಗ ರವಿ
Vijaya Karnataka Web politican


ಚಿಕ್ಕಮಗಳೂರು: ಈ ರಾಜಕಾರಣಿಗಳಿಗೆ ಎಲ್ಲಿಂದ ಬಂತು ಇಷ್ಟೊಂದು ಹಣ ? ಹೇಗೆ ದುಡಿದರೆ ಇಷ್ಟೊಂದು ಕೋಟಿ ಕೋಟಿ ರೂ. ಗಳನ್ನು ?

-ಇದು ಅಭ್ಯರ್ಥಿಗಳ ಆದಾಯ ಘೋಷಣೆ ಕಂಡು, ಶ್ರೀ ಸಾಮಾನ್ಯರು ಎತ್ತುತ್ತಿರುವ ಪ್ರಶ್ನೆ ಇದು. ಬಿಸಲು, ಮಳೆ, ಚಳಿ ಲೆಕ್ಕಿಸದೆ, ಹಗಲು-ರಾತ್ರಿಯೆನ್ನದೆ ಬೆವರು ಹರಿಸಿ ದುಡಿದವರೆಲ್ಲ ರಾಜಕಾರಣಿಗಳ ಕೋಟಿ ಲೆಕ್ಕದ ಮುಂದೆ ನಾಚಿ ನೀರಾಗಿದ್ದಾರೆ. ದುಡ್ಡು ದುಡಿಯುವ ಕಲೆ ಅರಿಯದ ದಡ್ಡ ಶಿಖಾಮಣಿಗಳೆಲ್ಲ ರಾಜಕಾರಣಿಗಳ ಬಳಿ ಟ್ಯೂಷನ್‌ಗೆ ಹೋಗುವ ಚಿಂತನೆಯನ್ನೂ ಮಾಡಿದ್ದಾರಂತೆ !

ಉದ್ದಿಮೆ, ಕೃಷಿ, ವ್ಯಾಪಾರ-ವ್ಯವಹಾರದಲ್ಲಿ ಹಗಲಿರುಳು ದುಡಿದರೂ ಕೋಟಿಗಟ್ಟಲೆ ಲಾಭ ಗಳಿಸಲು ಸಾಧ್ಯವಾಗದೆ ಕೈಸುಟ್ಟುಕೊಳ್ಳುವವರ ನಡುವೆ ಒಂದೇ ಒಂದು ಹನಿ ಬೆವರು ಸುರಿಸದೆ ಕೇವಲ 5 ವರ್ಷದೊಳಗೆ ಆಸ್ತಿ ಮೌಲ್ಯವನ್ನು ದುಪ್ಪಟ್ಟು ಮಾಡಿಕೊಂಡ ರಾಜಕಾರಣಿಗಳ ‘ಡಬ್ಲಿಂಗ್‌ ಕಲೆ’ ಜನಸಾಮಾನ್ಯರನ್ನು ಹುಬ್ಬೇರಿಸಿದೆ. ದಿನದ 24 ಗಂಟೆ ರಾಜಕಾರಣ ಮಾಡುವ ರಾಜಕಾರಣಿಗಳು ಅದ್ಯಾವಾಗ ಅಷ್ಟೊಂದು ಹಣ ದುಡಿದರು? ಅಷ್ಟೊಂದು ಹಣ ಗಳಿಸಲು ಹೇಗೆ ದುಡಿದರು? ಅಷ್ಟು ಸುಲಭವಾಗಿ ಹಣ ದುಡಿಯುವ ಮಾರ್ಗ ಯಾವುದು? ಈ ಪಾಟಿ ದುಡ್ಡು ಕೂಡಿಡಲು ರಾಜಕಾರಣಿಗಳ ಬಳಿ ಮಂತ್ರದಂಡ ಇದೆಯೇ? ನಿನ್ನೆ ಮೊನ್ನೆ ಕಣ್ಣೆದುರೇ ಅರ್ಧ ಚಹಾ ಕುಡಿಯಲು ತಿಣುಕಾಡುತ್ತಿದ್ದವರಿಗೆ ಐಷಾರಾಮಿ ಕಾರುಗಳು ಹೇಗೆ ಬಂದವು? ಝಗಮಗಿಸುವ ಬಂಗಲೆ, ಗರಿ ಗರಿ ಬಟ್ಟೆ, ದಿಕ್ಕಿಗೊಂದು ಮನೆ, ಜಮೀನು...ಇವೆಲ್ಲ ಕೈಸೇರಿದ್ದು ಹೇಗೆ? ಜನರಿಗೆ ತಲೆ ತಿರುಗುವುದೊಂದೇ ಬಾಕಿ!

2018ರ ವಿಧಾನಸಭೆ ಚುಣಾವಣೆ ಕಣದಲ್ಲಿರುವ ಒಬ್ಬೊಬ್ಬ ಅಭ್ಯರ್ಥಿಯೂ ನಾಮಪತ್ರದೊಂದಿಗೆ ಘೋಷಣೆ ಮಾಡಿಕೊಂಡಿರುವ ಆಸ್ತಿಮೌಲ್ಯ ಜನರನ್ನು ಬೇಸ್ತುಬೀಳಿಸಿದೆ. ‘‘ಅಧಿಕೃತವಾಗಿಯೇ ಇಷ್ಟೊಂದು ಆಸ್ತಿ ಘೋಷಣೆ ಮಾಡಿಕೊಂಡಿರುವ ಕೆಲವು ರಾಜಕಾರಣಿಗಳ ಬೇನಾಮಿ ಆಸ್ತಿಯ ಮೌಲ್ಯ ಕೆಲವು ಸಾವಿರ ಕೋಟಿಗಳನ್ನಾದರೂ ದಾಟುತ್ತದೆಯಲ್ಲವೇ,’’ ಎಂದು ಅಚ್ಚರಿಯಿಂದ ಪ್ರಶ್ನಿಸುತ್ತಾರೆ ಉಪನ್ಯಾಸಕ ಚಿಕ್ಕಮಗಳೂರು ತೇಜಸ್ವಿ.

‘‘ ಹಣದ ಥೈಲಿ ರಾಜಕಾರಣಿಗಳನ್ನೇ ಹುಡುಕಿಕೊಂಡು ಹೋಗುತ್ತಿರುವುದರ ಮರ್ಮ ಗುಟ್ಟೇನೂ ಅಲ್ಲ. ಹರುಕು-ಮುರುಕು ರಸ್ತೆಗಳು, ಕಳಪೆ ಕಾಮಗಾರಿಗಳೇ ರಾಜಕಾರಣಿಗಳ ಕೊಪ್ಪರಿಗೆ ತುಂಬಿದ್ದರ ಕತೆ ಹೇಳುತ್ತವೆ,’’ ಎಂಬುದು ಅವರೇ ಕಂಡುಕೊಂಡಿರುವ ಉತ್ತರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌