ಆ್ಯಪ್ನಗರ

ಬಿಜೆಪಿಯದ್ದು ಜಾತಿ ಆಧಾರಿತ, ಕಾಂಗ್ರೆಸ್‌ನದ್ದು ಸಂವಿಧಾನಾಧಾರಿತ ರಾಜಕೀಯ: ಗುಲಾಂ ನಬಿ ಆಜಾದ್‌

ಜಾತಿಯಾಧಾರಿತ ರಾಜಕಾರಣಕ್ಕೆ ನಾವು ಬೆಂಬಲ ನೀಡಲ್ಲ. ಸಂವಿಧಾನಾಧಾರಿತ ರಾಜಕೀಯಕ್ಕೆ ನಮ್ಮ ಬೆಂಬಲವಿದೆ. ಭಾರತದಲ್ಲಿ ಹುಟ್ಟಿದ ಎಲ್ಲರಿಗೂ ಸಂವಿಧಾನ ರಕ್ಷಣೆ, ಸಮ್ಮಾನ ನೀಡುತ್ತದೆ.

Vijaya Karnataka Web 20 Apr 2019, 5:12 pm
ಬೀದರ್: ಇಡೀ ಭಾರತ ದೇಶವೇ ಸಂವಿಧಾನದ ಮೇಲೆ ನಿಂತಿದೆ. ಆದರೆ, ಈ ಸಂವಿಧಾನವನ್ನು ಬಿಜೆಪಿ ಒಪ್ಪದು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ, ಕೇಂದ್ರದ ಮಾಜಿ ಸಚಿವ ಗುಲಾಂ ನಬಿ ಆಜಾದ್ ಹೇಳಿದರು.
Vijaya Karnataka Web ಗುಲಾಮ್‌ ನಬಿ ಆಜಾದ್‌
ಗುಲಾಮ್‌ ನಬಿ ಆಜಾದ್‌


ಬೀದರ್‌ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ದೇಶದಲ್ಲಿನ ಆಯಾ ಧರ್ಮಗಳಿಗೆ ಧರ್ಮ ಗ್ರಂಥಗಳಿರುವಂತೆ, ದೇಶಕ್ಕೆ ಹಾಗೂ ರಾಜಕೀಯಕ್ಕೆ ಧರ್ಮ ಗ್ರಂಥವಾಗಿ ಸಂವಿಧಾನವಿದೆ. ಈ ಸಂವಿಧಾನದಡಿಯೇ ಕಾಂಗ್ರೆಸ್‌ನವರು ಚುನಾವಣೆ ಎದುರಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಜಾತಿಯಾಧಾರಿತ ರಾಜಕಾರಣಕ್ಕೆ ನಾವು ಬೆಂಬಲ ನೀಡಲ್ಲ. ಸಂವಿಧಾನಾಧಾರಿತ ರಾಜಕೀಯಕ್ಕೆ ನಮ್ಮ ಬೆಂಬಲವಿದೆ. ಭಾರತದಲ್ಲಿ ಹುಟ್ಟಿದ ಎಲ್ಲರಿಗೂ ಸಂವಿಧಾನ ರಕ್ಷಣೆ, ಸಮ್ಮಾನ ನೀಡುತ್ತದೆ. ಆದರೆ, ಬಿಜೆಪಿ ಇಂದು ಧರ್ಮಾಧಾರಿತ ರಾಜಕೀಯ ಮಾಡುವುದಲ್ಲದೆ, ರಾಜಕೀಯಕ್ಕೆ ಧರ್ಮದ ಸಹಾಯವನ್ನು ಪಡೆಯುತ್ತಿದೆ ಎಂದು ಗುಲಾಂ ನಬಿ ಆಜಾದ್‌ ಆರೋಪಿಸಿದರು.

ಈ ಚುನಾವಣೆಯು ಧರ್ಮ, ಜಾತಿಯ ಹೋರಾಟವಲ್ಲ. ಬಿಜೆಪಿ ಪಕ್ಷವು ಸಂವಿಧಾನವನ್ನು ಒಪ್ಪುತ್ತದೆಯೋ ಅಥವಾ ಇಲ್ಲವೋ ಎನ್ನುವುದರ ಮೇಲೆ ನಿಂತಿದೆ. ನನ್ನ ಅಭಿಪ್ರಾಯದಂತೆ ಬಿಜೆಪಿ ಸಂವಿಧಾನವನ್ನು ಒಪ್ಪಿಕೊಳ್ಳುವುದಿಲ್ಲ. ಸಂವಿಧಾನವು ನಮಗೆಲ್ಲರಿಗೂ ನೀಡಿರುವ ವಾಕ್, ಉಡುಗೆ, ತೊಡುಗೆ, ಊಟ, ಬರವಣಿಗೆಯ ಸ್ವಾತಂತ್ರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪುವುದಿಲ್ಲ ಎಂದು ತಿಳಿಸಿದರು.

ಮೋದಿ ಅವರು ಸಿಬಿಐ ಬಳಕೆ ಮಾಡಿಕೊಂಡು ಕಾಂಗ್ರೆಸ್, ಡಿಎಂಕೆ, ಆಪ್, ಆರ್‌ಜೆಡಿಯ ಲಾಲೂ ಪ್ರಸಾದ್ ಯಾದವ್, ಮಾಯಾವತಿ, ಶರದ್ ಪವಾರ್, ಮುಲಾಯಮ್‌ಸಿಂಗ್ ಯಾದವ್, ಫಾರೂಕ್ ಅಬ್ದುಲ್ಲಾ ಸೇರಿದಂತೆ ಎದುರಾಳಿ ಪಕ್ಷಗಳ ಮುಖಂಡರು, ಸಂಬಂಧಿಕರ ಮೇಲೆ ದಾಳಿ ನಡೆಸಿದ್ದಾರೆ. ಎದುರಾಳಿಗಳ ಮೇಲೆ ಸಿಬಿಐ ಬಳಕೆ ಮಾಡಿಕೊಂಡು ದಾಳಿ ಮಾಡಿಸಿರುವ ಜಗತ್ತಿನ ಮೊದಲ ಪ್ರಧಾನಿ ಮೋದಿ ಎಂದು ಆಜಾದ್ ಟೀಕಿಸಿದರು.

ಇಡೀ ದೇಶದಲ್ಲಿ ಬಿಜೆಪಿಯವರು ಮಾತ್ರ ಪ್ರಾಮಾಣಿಕರು ಎಂಬಂತೆ ಎಂಬಂತೆ ಮೋದಿ ನಡೆದುಕೊಳ್ಳುತ್ತಿದ್ದಾರೆ. ಬಿಜೆಪಿ ಬಿಟ್ಟು ಉಳಿದವರು ಪ್ರಾಮಾಣಿಕರಿಲ್ಲವೇ ಎಂದು ಪ್ರಶ್ನಿಸಿದ ಗುಲಾಂ ನಬಿ ಆಜಾದ್ ಅವರು, ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮೋದಿ ಅವರಿಗೆ ನಂಬಿಕೆಯೇ ಇಲ್ಲ. ಆದರೆ, ನಾವು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯದಡಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಭಾರತವನ್ನು ಸರ್ವಾಧಿಕಾರಿಗಳು ಆಳುತ್ತಿರುವಂತಾಗಿದೆ. ಎಲ್ಲದ್ದಕ್ಕೂ ನಿರ್ಬಂಧ ಹೇರಲಾಗುತ್ತಿದೆ. ಊಟ, ಉಡುಗೆ, ತೊಡುಗೆ ಹೀಗೆ ಇರಬೇಕು ಎಂಬ ನಿರ್ಣಯಗಳು ಸಂವಿಧಾನಕ್ಕೆ ವಿರೋಧವಾದದ್ದಾಗಿವೆ ಎಂದರು.

ಸಂಸತ್ತಿನಲ್ಲಿ ಎಂದೂ ಮಾತನಾಡದ ಪ್ರಧಾನಿ ಮೋದಿಯವರು, ಹೊರಗಡೆ ಮಾತ್ರ ಮಾತನಾಡುತ್ತಾರೆ. ಓರ್ವ ಪ್ರಧಾನಿಯಾಗಿ ಸುದ್ದಿಗೋಷ್ಠಿಯನ್ನು ನಡೆಸದ ಮೊದಲ ಪ್ರಧಾನಿಗಳಿವರು ಎಂದರು.

ನರೇಂದ್ರ ಮೋದಿ ಅವರು ಸಂವಿಧಾನಕ್ಕೆ ವಿರೋಧವಾಗಿಯೇ ಎಲ್ಲವನ್ನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ತಿಳಿಸಿದರು.

ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ಅವರು ಇದಕ್ಕೆ ತದ್ವಿರುದ್ಧವಾಗಿದ್ದರು. ಅವರೊಬ್ಬ ಉತ್ತಮ ಪ್ರಧಾನಿಗಳಾಗಿದ್ದರು ಎಂದು ಗುಣಗಾನ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌