ಆ್ಯಪ್ನಗರ

ಹಾಜರಾತಿಯಲ್ಲಿ ಫಸ್ಟ್‌, ಚರ್ಚೆ ಮಾತ್ರ ಕಡಿಮೆ: ಇದು ನಳಿನ್ ರಿಪೋರ್ಟ್

ಸಂಸದ ನಳಿನ್‌ ಅವರು ಸಂಸತ್‌ ಕಲಾಪದಲ್ಲಿ ಪಾಲ್ಗೊಳ್ಳುವ ವಿಷಯದಲ್ಲಿ ಅನನ್ಯ ಸಾಧನೆ ಮಾಡಿದ್ದಾರೆ ಎನ್ನುವುದನ್ನು ಸಂಸತ್ತಿನ ಹಾಜರಾತಿ ಅಂಕಿಅಂಶ ದೃಢಪಡಿಸುತ್ತದೆ.

Vijaya Karnataka Web 23 Mar 2019, 12:20 pm
ಅಶೋಕ್‌ ಕಲ್ಲಡ್ಕ
Vijaya Karnataka Web Nalin

ಮಂಗಳೂರು:
ಟಿಕೆಟ್‌ ಸಮರದಲ್ಲಿ ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಗೆದ್ದಿದ್ದಾರೆ. ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರವನ್ನು ಎರಡು ಅವಧಿಗಳಲ್ಲಿ ಪ್ರತಿನಿಧಿಸಿದ ಅವರು ಮೂರನೇ ಬಾರಿ ಸಂಸತ್‌ ಪ್ರವೇಶಕ್ಕೆ ಕದ ತಟ್ಟುತ್ತಿದ್ದಾರೆ. ಒಬ್ಬ ಸಂಸದನಾಗಿ ಅತ್ಯಂತ ಹೆಚ್ಚು ಸಂಸತ್‌ ಕಲಾಪದಲ್ಲಿ ಭಾಗವಹಿಸಿದ ಕೀರ್ತಿ ನಳಿನ್‌ಗೆ ಸಲ್ಲುತ್ತದೆ. ಆದರೆ ಸಂಸತ್‌ ಕಲಾಪದ ವೇಳೆ ವಿವಿಧ ವಿಷಯಗಳ ಕುರಿತು ನಡೆಯುವ ಡಿಬೇಟ್‌(ಚರ್ಚೆ)ನಲ್ಲಿ ಅವರು ಪಾಲ್ಗೊಂಡಿದ್ದು ಮಾತ್ರ ಬಹಳ ಕಡಿಮೆ.

ಸಂಸದ ನಳಿನ್‌ ಅವರು ಸಂಸತ್‌ ಕಲಾಪದಲ್ಲಿ ಪಾಲ್ಗೊಳ್ಳುವ ವಿಷಯದಲ್ಲಿ ಅನನ್ಯ ಸಾಧನೆ ಮಾಡಿದ್ದಾರೆ ಎನ್ನುವುದನ್ನು ಸಂಸತ್ತಿನ ಹಾಜರಾತಿ ಅಂಕಿಅಂಶ ದೃಢಪಡಿಸುತ್ತದೆ. ಜೂನ್‌ 1, 2014ರಿಂದ ಫೆಬ್ರವರಿ 13, 2019 ವರೆಗೆ ನಳಿನ್‌ ಅವರು ಕಲಾಪದಲ್ಲಿ ಭಾಗವಹಿಸಿದ ಕುರಿತು ಶೇ.92 ಹಾಜರಾತಿ ಹೊಂದಿದ್ದಾರೆ. ರಾಷ್ಟ್ರೀಯ ಸರಾಸರಿ ಹಾಜರಾತಿ ಶೇ.80 ಆಗಿದ್ದರೆ, ನಳಿನ್‌ ಅವರು ಶೇ.12ರಷ್ಟು ಹೆಚ್ಚುವರಿ ಹಾಜರಾತಿ ಹೊಂದಿದ್ದಾರೆ.

ಇದೇ ವೇಳೆ ಸಂಸತ್‌ನಲ್ಲಿ ನಿಗದಿತ ವಿಷಯಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಕುರಿತು ನಳಿನ್‌ ಬಳಿ ಕೇವಲ ಶೇ.45 ಅಂಕ ಮಾತ್ರವಿದೆ. ರಾಷ್ಟ್ರೀಯ ಸರಾಸರಿ ಶೇ.67.1 ಹಾಗೂ ರಾಜ್ಯ ಸರಾಸರಿ ಶೇ.48.2 ಆಗಿದೆ. ಇದೆಲ್ಲ ಸಂಸದರು ವಿವಿಧ ವಿಷಯಗಳ ಕುರಿತು ನಡೆದ ಡಿಬೇಟ್‌ನಲ್ಲಿ ಪಾಲ್ಗೊಂಡಿರುವುದು ಬಹಳ ಕಡಿಮೆ ಎನ್ನುವುದನ್ನು ಸೂಚಿಸುತ್ತದೆ.

ಲೋಕಸಭೆ ಸದಸ್ಯರೊಬ್ಬರು ಉತ್ತಮ ಸಂಸದೀಯ ಪಟುವಾದರೆ ಮಾತ್ರ ಭಾರತೀಯ ನೆನಪಿನಂಗಳದಲ್ಲಿ ದೀರ್ಘಕಾಲ ಉಳಿಯುತ್ತಾರೆ. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಲೋಕಸಭೆ ಮಾಜಿ ಸ್ವೀಕರ್‌ ಸೋಮನಾಥ ಚಟರ್ಜಿ ಅವರು ಉತ್ತಮ ಸಂಸದೀಯಪಟುಗಳಾಗಿದ್ದರು. ಸಂಸತ್‌ನಲ್ಲಿ ನಡೆಯುವ ಎಲ್ಲ ಪ್ರಮುಖ ಚರ್ಚೆಗಳಲ್ಲಿ ಅವರು ಪಾಲ್ಗೊಳ್ಳುವ ಮೂಲಕ ಇಡೀ ದೇಶದ ಗಮನ ಸೆಳೆಯುತ್ತಿದ್ದರು ಎಂದು ರಾಜಕೀಯ ಶಾಸ್ತ್ರ ಉಪನ್ಯಾಸಕ ರಾಜಶೇಖರ್‌ ಹೇಳುತ್ತಾರೆ.

ಶೋಭಾ ಬೆಟರ್‌, ಹಾಜರಾತಿ ಪೂವರ್‌: ಸಂಸತ್‌ ಚರ್ಚೆಯಲ್ಲಿ ಪಾಲ್ಗೊಂಡ ವಿಷಯದಲ್ಲಿ ನಳಿನ್‌ ಕುಮಾರ್‌ ಕಟೀಲ್‌ಗೆ ಹೋಲಿಸಿದರೆ ನೆರೆಯ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಮುಂದಿದ್ದಾರೆ.

ಕರಂದ್ಲಾಜೆ ಅವರು 111 ಚರ್ಚೆಯಲ್ಲಿ ಪಾಲ್ಗೊಂಡ ಬಗ್ಗೆ ಅಂಕಿಅಂಶಗಳಿವೆ. ಆದರೆ ಹಾಜರಾತಿ ವಿಷಯದಲ್ಲಿ ಕರಂದ್ಲಾಜೆ ಅವರು ನಳಿನ್‌ಗಿಂತ ಹಿಂದಿದ್ದಾರೆ. ಶೇ.89 ಹಾಜರಾತಿಯನ್ನು ಕರಂದ್ಲಾಜೆ ಹೊಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌