ಆ್ಯಪ್ನಗರ

ಮತ ಪೆಟ್ಟಿಗೆ ತಲೆಮೇಲೆ ಹೊತ್ತು ಸಾಗಿಸಿದ ತಹಶೀಲ್ದಾರ್ ಚಿತ್ರ ವೈರಲ್‌

ಕಳೆದ 18 ರಂದು ಕರ್ನಾಟಕದಲ್ಲಿ ಮೊದಲ ನಡೆದ ಮೊದಲ ಹಂತದ ಚುನಾವಣೆಯ ಭಾಗವಾಗಿ ದಕ್ಷಿಣ ಕನ್ನಡದಲ್ಲಿ ಕೂಡ ಮತದಾನ ನಡೆದಿತ್ತು. ಮತದಾನ ಬಳಿಕ ಚುನಾವಣಾ ಪೆಟ್ಟಿಗೆಗಳನ್ನು ಸ್ಟ್ರಾಂಗ್ ರೂಮ್‌ನಲ್ಲಿಡಲು ಇತರ ಸಿಬ್ಬಂದಿಗಳೊಂದಿಗೆ ಕೈ ಜೋಡಿಸಿದ ತಹಶೀಲ್ದಾರ್ ಗಣಪತಿ ಅವರು ತಲೆಯ ಮೇಲೆ ಮತ ಪೆಟ್ಟಿಗೆಗಳನ್ನಿಟ್ಟು ಸಾಗಿಸಿದ್ದಾರೆ. ಈ ದೃಶ್ಯ ಕಳೆದೊಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

TIMESOFINDIA.COM 24 Apr 2019, 11:08 am
ಬೆಳ್ತಂಗಡಿ: ಕಳೆದ 18 ರಂದು ಕರ್ನಾಟಕದಲ್ಲಿ ಮೊದಲ ನಡೆದ ಮೊದಲ ಹಂತದ ಚುನಾವಣೆಯ ಭಾಗವಾಗಿ ದಕ್ಷಿಣ ಕನ್ನಡದಲ್ಲಿ ಕೂಡ ಮತದಾನ ನಡೆದಿತ್ತು. ಮತದಾನ ಬಳಿಕ ಚುನಾವಣಾ ಪೆಟ್ಟಿಗೆಗಳನ್ನು ಸ್ಟ್ರಾಂಗ್ ರೂಮ್‌ನಲ್ಲಿಡಲು ಇತರ ಸಿಬ್ಬಂದಿಗಳೊಂದಿಗೆ ಕೈ ಜೋಡಿಸಿದ ತಹಶೀಲ್ದಾರ್ ಗಣಪತಿ ಅವರು ತಲೆಯ ಮೇಲೆ ಮತ ಪೆಟ್ಟಿಗೆಗಳನ್ನಿಟ್ಟು ಸಾಗಿಸಿದ್ದಾರೆ. ಈ ದೃಶ್ಯ ಕಳೆದೊಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Vijaya Karnataka Web Ganapati s


ಚುನಾವಣಾ ಕರ್ತವ್ಯಕ್ಕೆ ಹಾಜರಾಗಲು ಹಲವಾರು ನೆಪವೊಡ್ಡಿ ಕರ್ತವ್ಯದಿಂದ ಹಿಂಜರಿಯುವ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಸಂವಿಧಾನಾತ್ಮಕವಾದ ಮತದಾನ ಹೇಗಿರಬೇಕು, ಹೇಗೆ ಕರ್ತವ್ಯ ನಿರ್ವಹಿಸಬೇಕು ಎಂದು ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರೀ ಎಲ್ಲರಿಗೂ ಮಾದರಿಯಾಗಿದ್ದಾರೆ.

ಚುನಾವಣೆ ಎನ್ನುವುದು ಜನಪ್ರತಿನಿಗಳಿಗೆ ಮೇಲಾಟದ ಹೋರಾಟವಾದರೆ, ಕಾರ್ಯಾಂಗಕ್ಕೆ ಇದೊಂದು ಶಿಕ್ಷೆ ಎಂದು ಪರಿಗಣಿಸುವವರಿದ್ದಾರೆ. ಚುನಾವಣಾ ಎಂದರೆ ಹಬ್ಬದ ರೀತಿಯಲ್ಲಿ ಆಚರಿಸಬೇಕು, ಪಾರದರ್ಶಕವಾಗಿ ಇರಬೇಕು, ನಿಷ್ಪಕ್ಷಪಾತವಾಗಿ, ನಿರ್ಭಿತಿಯಿಂದ ಮತದಾರ ಮತ ಚಲಾಯಿಸಬೇಕು ಎಂಬುದು ಚುನಾವಣಾ ಆಯೋಗದ ಧ್ಯೇಯವಾಕ್ಯ.

ನಿಜವಾಗಿಯೂ ಇದೊಂದು ಪ್ರಜಾಪ್ರಭುತ್ವದ ಹಬ್ಬ. ಒಂದು ತಂಡವನ್ನು ಕಟ್ಟಿಕೊಂಡು ನಾಯಕನಾದವನು ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕಾಗುತ್ತದೆ. ಅದನ್ನು ಶಿರಸಾವಹಿಸಿ, ಕಾರ್ಯಾಂಗದ ವ್ಯವಸ್ಥೆಗೆ ಚ್ಯುತಿ ಬಾರದಂತೆ ಅಚ್ಚುಕಟ್ಟಾಗಿ ನಿರ್ವಹಿಸಿ, ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡುತ್ತಾ, ಸ್ವತಃ ತಾನೇ ಮುಂದೆ ನಿಂತು ಕರ್ತವ್ಯದಲ್ಲಿ ದಕ್ಷತೆ ತೋರಿದ ದಕ್ಷ ಅಧಿಕಾರಿ ಗಣಪತಿ ಶಾಸ್ತ್ರೀ ಅವರಾಗಿದ್ದಾರೆ. ಅವರಿಗೆ ಸಹಾಯಕ ಚುನಾವಣಾ ಅಧಿಕಾರಿ ಎಚ್.ಆರ್. ನಾಯಕ್ ಸಾಥ್ ನೀಡಿದ್ದಾರೆ.
ಚುನಾವಣೆಯಂದು ಉಜಿರೆ ಎಸ್‌ಡಿಎಂ ಪಿಯು ಕಾಲೇಜಿನ ಮಸ್ಟರಿಂಗ್ ಡಿ ಮಸ್ಟರಿಂಗ್‌ನಲ್ಲಿ ಎಲ್ಲಾ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕರ್ತವ್ಯವನ್ನು ನಿಭಾಯಿಸಿದ್ದಾರೆ. ಅಂಚೆ ಮತಗಳ ಪೆಟ್ಟಿಗೆ, ಚುನಾವಣೆಗೆ ಸಂಬಂಧಪಟ್ಟ ಪರಿಕರ ಪೆಟ್ಟಿಗೆಗಳನ್ನು ಭದ್ರತೆಯ ಕೊಠಡಿಯಲ್ಲಿರಿಸಲು ಸಿಬ್ಬಂದಿಗಳ ಜತೆ ಸ್ವತಃ ತಾವೇ ತಲೆಯಲ್ಲಿ ಹೊತ್ತುಕೊಂಡು ಸಾಗಿಸಿದ್ದರು. ಚುನಾವಣೆಯಲ್ಲಿ ಕರ್ತವ್ಯಕ್ಕೆ ಹಾಜರಾದ ಎಲ್ಲ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಚುನಾವಣೆ ಮುಗಿಸಿ ಡಿ ಮಸ್ಟರಿಂಗ್ ಬಂದಾಗ ತಂಪು ಪಾನೀಯದ ವ್ಯವಸ್ಥೆಯನ್ನೂ ಮಾಡಿದ್ದರು. ಅಲ್ಲದೆ ರಾತ್ರಿ 2 ಗಂಟೆಯ ತನಕ ಪ್ರತಿಯೊಂದು ಮತಗಟ್ಟೆಯಿಂದ ಬಂದ ಮತಯಂತ್ರಗಳನ್ನು ಕ್ರಮ ಪ್ರಕಾರ ಇರಿಸಿ, ಬಳಿಕ ಸೂಕ್ತ ಭದ್ರತೆಯೊಂದಿಗೆ ಸುರತ್ಕಲ್ ಎನ್‌ಐಟಿಕೆ ಸ್ಟ್ರಾಂಗ್ ರೂಂಗೆ ಕೊಂಡೊಯ್ಯವವರೆಗೂ ಎಲ್ಲಾ ಮಸ್ಟರಿಂಗ್ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು, ನೋಡೆಲ್ ಅಧಿಕಾರಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

ಚುನಾವಣೆ ಕರ್ತವ್ಯ ಎಂದಾಗ ಮೂಗುಮುರಿಯುವ ಕಾಲದಲ್ಲೂ ತಮ್ಮ ಕರ್ತವ್ಯವನ್ನು ಸೇವೆಯೆಂದು ಮನಗಾಣಿಸಿ, ಉತ್ಸಾಹದಿಂದ ಕೆಲಸ ಮಾಡುವ ಅಧಿಕಾರಿಗಳ ಜತೆ ಕರ್ತವ್ಯ ನಿರ್ವಹಿಸಿದ್ದೇ ಸಂತೋಷ. ಪ್ರತಿಯೊಂದರಲ್ಲೂ ಅಚ್ಚುಕಟ್ಟಾದ ವ್ಯವಸ್ಥೆ, ಸಿಬ್ಬಂದಿಗಳಿಗೆ ಕರ್ತವ್ಯವನ್ನು ಹಂಚಿ, ತಾವು ಕರ್ತವ್ಯವನ್ನು ಮಾಡುತ್ತಿದ್ದು, ಉತ್ತೇಜನ ನೀಡಿದ್ದಾರೆ. ಈ ಮೊದಲು ಇಂತಹ ವಾತಾವರಣವನ್ನು ನೋಡಿರಲಿಲ್ಲ, ಈ ಬಾರಿ ತಹಸೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿಯವರು ಬೆಳ್ತಂಗಡಿಯಲ್ಲಿ ಚುನಾವಣೆಯನ್ನು ಹಬ್ಬದಂತೆ ಸಂಭ್ರಮಿಸುವ ವಾತಾವರಣವನ್ನು ನಿರ್ಮಾಣ ಮಾಡಿ ಇತರರಿಗೆ ಪ್ರೇರಣೆ ನೀಡಿದ್ದಾರೆ ಎಂದು ವಿವಿಎಂ, ವಿವಿ ಪ್ಯಾಟ್ ನೋಡೆಲ್ ಅಧಿಕಾರಿ ಶಂಭುಶಂಕರ್ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಚುನಾವಣಾ ಕರ್ತವ್ಯವನ್ನು ವ್ಯವಸ್ಥಿತವಾಗಿ ಪೂರೈಸಿ, ದಕ್ಷತೆ ತೋರಿದ್ದಷ್ಟೇ ಅಲ್ಲದೆ ಸರಳತೆ ಮೆರೆದ ತಹಶೀಲ್ದಾರ್ ಅವರಿಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು ನಾನಿದನ್ನು ಪ್ರಚಾರಕ್ಕೆಂದು ಮಾಡಲಿಲ್ಲ. ಒಬ್ಬ ನಿವೃತ್ತ ಸೈನಿಕನಾಗಿ ನಾನು ನಂಬಿರುವುದೇನೆಂದರೆ ಕೆಲಸದಲ್ಲಿ ನಾವು ಯಾವಾಗಲೂ ಮುಂದಾಳತ್ವ ವಹಿಸಬೇಕು. ನನ್ನ ಸಿಬ್ಬಂದಿ ಕೆಲಸ ಮಾಡುವಾಗ ನಾನು ಸೋಮಾರಿ ತರಹ ಕುಳಿತುಕೊಂಡಿರಲಾಗದು. ಸೈನ್ಯದಲ್ಲಿದ್ದಾಗ ನಾವು ಮುಂದೆ ಮುಂದೆ ನಿಂತು ತಂಡವನ್ನು ಮುನ್ನಡೆಸಬೇಕಿತ್ತು. ಇದನ್ನೇ ನಾನು ಈ ಕರ್ತವ್ಯದಲ್ಲು ಕೂಡ ಮುಂದುವರೆಸಿದ್ದೇನೆ ಎಂದರು.

ಬೆಳ್ತಂಗಡಿಯಲ್ಲಿ ಮತದಾನಕ್ಕೆ ಮೊದಲು ಮತ್ತು ನಂತರ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಮಾಡುವಾಗ ತಹಶೀಲ್ದಾರ್ ಅವರು ಸಿಬ್ಬಂದಿಗೆ ಸಹಾಯ ಮಾಡಿದರು. ಏಪ್ರಿಲ್ 17ರ ಮುಂಜಾನೆ 6ಕ್ಕೆ ನಾವು ಕೆಲಸ ಆರಂಭಿಸಿದ್ದೆವು ಮತ್ತು ಏಪ್ರಿಲ್ 19, 9 ಗಂಟೆಗೆ ಮುಗಿಸಿದೆವು. ಎಲ್ಲರು ಕೆಲಸ ಮಾಡುವಾಗ ಬಾಸಿಸಮ್ ಮಾಡುತ್ತ ಕುಳಿತುಕೊಳ್ಳುವುದು ಸರಿ ಅಲ್ಲ. ಇಲ್ಲಿ ಹೊಂದಾಣಿಕೆ ಮಹತ್ವದ್ದಾಗಿರುತ್ತದೆ. ಬಾಲೆಟ್ ಯೂನಿಟ್ , ಕಂಟ್ರೋಲ್ ಮತ್ತು 248 ವಿವಿ ಪ್ಯಾಟ್ಸ್ ‌ಗಳನ್ನೊಳಗೊಂಡಿದ್ದ 58 ಪೆಟ್ಟಿಗೆಗಳನ್ನು ಲಿಫ್ಟ್ ಸಹಾಯವಿಲ್ಲದೆ, ಮೆಟ್ಟಿಲು ಹತ್ತಿ ಎರಡನೇ ಮಹಡಿಗೆ ಹೊತ್ತು ಸಾಗುವುದು ಸುಲಭದ ಮಾತಲ್ಲ. ಹೀಗಾಗಿ ನಾನು ಕೂಡ ಕೈ ಜೋಡಿಸಿದೆ ಎನ್ನುತ್ತಾರೆ ಸರಳತೆಯ ಸಾಕಾರಮೂರ್ತಿಯಂತಿರುವ ಅಧಿಕಾರಿ.

ಅವರೊಬ್ಬ ದಕ್ಷ ಅಧಿಕಾರಿ ಮತ್ತು ಮಾಜಿ ಸೈನಿಕ. ಅವರು ತಾವೇ ಮುಂದಾಗಿ ನಿಂತು ಎಲ್ಲ ಕೆಲಸವನ್ನು ಮಾಡಿಸುವುದನ್ನು ನೋಡಲು ನಿಜಕ್ಕೂ ಸಂತೋಷವಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಸ್, ಶಶಿಕಾಂತ್ ಸೆಂಥಿಲ್ ಹೇಳುತ್ತಾರೆ.

1996ರಿಂದ 2011ರವರೆಗೆ ಭಾರತೀಯ ನೌಕಾ ಸೇನೆಯಲ್ಲಿ ಸೇವೆ ಸಲ್ಲಿಸಿದ ಅವರು 2011ರಿಂದ 2017ರವರೆಗೆ ಭಾರತೀಯ ಅಂಚೆಯಲ್ಲಿ ಸೇವೆಯಲ್ಲಿದ್ದರು. ಅವರು ಮೂಲತಃ ಉತ್ತರ ಕನ್ನಡದ ಹೊನ್ನಾವರದ ಕೆಕ್ಕಾರ ಗ್ರಾಮದವರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ