ಆ್ಯಪ್ನಗರ

ಸೋಲು-ಗೆಲುವಿನ ಲೆಕ್ಕಾಚಾರ; ಬೆಟ್ಟಿಂಗ್‌ ಜೋರು

ಮತಯಂತ್ರ ಸೇರಿರುವ ಜನಾದೇಶದ ಗುಟ್ಟು ಬಹಿರಂಗವಾಗಲು ಇನ್ನೂ ಸುಮಾರು 5 ವಾರಗಳ ಸುದೀರ್ಘ ಸಮಯ ಕಾಯಬೇಕಿದೆ. ಆದರೆ, ಮತದಾನ ಪ್ರಮಾಣ ಹಾಗೂ ಬೂತ್‌ ಮಟ್ಟದಲ್ಲಿನ ಮಾಹಿತಿ ಕಲೆಹಾಕಿರುವ ನಾಯಕರು ಹಾಗೂ ಅಭ್ಯರ್ಥಿಗಳು ಸೋಲು -ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಪಕ್ಷಗಳ ಕಾರ್ಯಕರ್ತರ ಮಟ್ಟದಲ್ಲೂ ಯಾರು ಸೋಲುತ್ತಾರೆ, ಗೆಲ್ಲುತ್ತಾರೆ ಎಂಬ ಚರ್ಚೆ ನಡೆಯುತ್ತಿದ್ದು, ಬೆಟ್ಟಿಂಗ್‌ ವ್ಯವಹಾರವೂ ಜೋರಾಗಿದೆ.

Vijaya Karnataka Web 19 Apr 2019, 6:30 am
ಬೆಂಗಳೂರು: ಅಬ್ಬರದ ಪ್ರಚಾರದಿಂದಾಗಿ ಗಮನ ಸೆಳೆದಿದ್ದ ಮಂಡ್ಯ ಸೇರಿದಂತೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಗುರುವಾರ ಮತದಾನ ಮುಗಿದಿದ್ದು, ಸೋಲು - ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ.
Vijaya Karnataka Web evm


ಮತಯಂತ್ರ ಸೇರಿರುವ ಜನಾದೇಶದ ಗುಟ್ಟು ಬಹಿರಂಗವಾಗಲು ಇನ್ನೂ ಸುಮಾರು 5 ವಾರಗಳ ಸುದೀರ್ಘ ಸಮಯ ಕಾಯಬೇಕಿದೆ. ಆದರೆ, ಮತದಾನ ಪ್ರಮಾಣ ಹಾಗೂ ಬೂತ್‌ ಮಟ್ಟದಲ್ಲಿನ ಮಾಹಿತಿ ಕಲೆಹಾಕಿರುವ ನಾಯಕರು ಹಾಗೂ ಅಭ್ಯರ್ಥಿಗಳು ಸೋಲು -ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಪಕ್ಷಗಳ ಕಾರ್ಯಕರ್ತರ ಮಟ್ಟದಲ್ಲೂ ಯಾರು ಸೋಲುತ್ತಾರೆ, ಗೆಲ್ಲುತ್ತಾರೆ ಎಂಬ ಚರ್ಚೆ ನಡೆಯುತ್ತಿದ್ದು, ಬೆಟ್ಟಿಂಗ್‌ ವ್ಯವಹಾರವೂ ಜೋರಾಗಿದೆ.

ಗುರುವಾರ ಮತದಾನ ಮುಗಿಯುತ್ತಿದ್ದಂತೆ ಅಭ್ಯರ್ಥಿಗಳು ಹಾಗೂ ಮುಖಂಡರು ಬೂತ್‌ ಮಟ್ಟದಿಂದ ಮಾಹಿತಿ ಕಲೆಹಾಕಿದರು. ವಿಶೇಷವಾಗಿ, ಸಿಎಂ ಪುತ್ರ ನಿಖಿಲ್‌ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ನಡುವಿನ ಜಿದ್ದಾಜಿದ್ದಿಯಿಂದ ಇಡೀ ರಾಜ್ಯದ ಗಮನ ಸೆಳೆದಿದ್ದ ಮಂಡ್ಯದಲ್ಲಿ ಫಲಿತಾಂಶ ಏನಾಗಲಿದೆ ಎಂಬ ಕುತೂಹಲದೊಂದಿಗೆ ಚರ್ಚೆ ನಡೆದಿದೆ. ಮಂಡ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲವೇ ಬೆಟ್ಟಿಂಗ್‌ ವ್ಯವಹಾರಕ್ಕೆ ಇಂಬು ನೀಡಿದ್ದು, ಜತೆಗೆ, ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಮತ್ತು ಎ.ಮಂಜು, ತುಮಕೂರಿನಲ್ಲಿ ಎಚ್‌.ಡಿ.ದೇವೇಗೌಡ ಮತ್ತು ಜಿ.ಎಸ್‌.ಬಸವರಾಜು ಪರ - ವಿರುದ್ಧ ಬೆಟ್ಟಿಂಗ್‌ ಭರ್ಜರಿಯಾಗಿ ನಡೆಯುತ್ತಿದೆ. ಮೈಸೂರು, ಕೋಲಾರ, ಬೆಂಗಳೂರು ಉತ್ತರ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಸೋಲು -ಗೆಲುವಿನ ಬಾಜಿ ಜೋರಾಗಿ ನಡೆಯುತ್ತಿದೆ.

ಮೊದಲ ಹಂತದ ಕ್ಷೇತ್ರಗಳಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ಬಿಜೆಪಿ ಹಾಗೂ ಮೈತ್ರಿಕೂಟದ ನಾಯಕರು 2ನೇ ಹಂತದಲ್ಲಿ ಚುನಾವಣೆ ನಡೆಯಲಿರುವ ಕ್ಷೇತ್ರಗಳತ್ತ ಪ್ರಚಾರಕ್ಕೆ ಹೊರಟಿದ್ದಾರೆ. ಕಾಂಗ್ರೆಸ್‌ನ ಅಭ್ಯರ್ಥಿಗಳಿಗೆ 2ನೇ ಹಂತದಲ್ಲಿ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ಉಸ್ತುವಾರಿ ನಿಗದಿಯಾಗಿದ್ದು, ಅವರು ಪಕ್ಷದ ಸೂಚನೆಯಂತೆ ನಿಯೋಜಿತ ಕ್ಷೇತ್ರದಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳ ಪ್ರಚಾರಕ್ಕೆ ಹೊರಡಬೇಕಿದೆ. ಆದರೆ, ಕಳೆದ ಮೂರು ವಾರಗಳಿಂದ ಪ್ರಚಾರದ ಕಣದಲ್ಲಿ ಸುತ್ತಿ ಹೈರಾಣಾಗಿರುವ ಉಳಿದ ಅಭ್ಯರ್ಥಿಗಳು ವಿಶ್ರಾಂತಿ ಮೊರೆಹೋಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ