ಆ್ಯಪ್ನಗರ

ವೋಟ್‌ ಭಕ್ತಿ ವರ್ಸಸ್‌ ದೇಶ್‌ ಭಕ್ತಿ

ಬಿಹಾರದ ಅರಾರಿಯಾದಲ್ಲಿ ಶುಕ್ರವಾರ ಚುನಾವಣಾ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಮೋದಿ ಅವರು, ಲೋಕಸಭಾ ಸಮರದ ಎರಡು ಹಂತಗಳ ಮತದಾನದ ಟ್ರೆಂಡ್‌, ಬಾಲಾಕೋಟ್‌ ದಾಳಿ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದ ಪ್ರತಿಪಕ್ಷಗಳ ವಿರುದ್ಧ ವಾಕ್‌ ಪ್ರಹಾರ ನಡೆಸಿದರು.

Vijaya Karnataka 21 Apr 2019, 5:00 am
ಪಟನಾ/ಕೋಲ್ಕೊತಾ: ದೇಶದ ಹಿತಕ್ಕಿಂತಲೂ ಮತ ಬ್ಯಾಂಕ್‌ ರಾಜಕಾರಣಕ್ಕೇ ಹೆಚ್ಚು ಆದ್ಯತೆ ನೀಡುವ ಮೂಲಕ ಕಾಂಗ್ರೆಸ್‌ 'ವೋಟ್‌ ಭಕ್ತಿ' ಪ್ರದರ್ಶಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
Vijaya Karnataka Web 2-2-05032-PTI3_5_2019_000084B


ಬಿಹಾರದ ಅರಾರಿಯಾದಲ್ಲಿ ಶುಕ್ರವಾರ ಚುನಾವಣಾ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಅವರು, ಲೋಕಸಭಾ ಸಮರದ ಎರಡು ಹಂತಗಳ ಮತದಾನದ ಟ್ರೆಂಡ್‌, ಬಾಲಾಕೋಟ್‌ ದಾಳಿ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದ ಪ್ರತಿಪಕ್ಷಗಳ ವಿರುದ್ಧ ವಾಕ್‌ ಪ್ರಹಾರ ನಡೆಸಿದರು.

''ಪ್ರತಿಪಕ್ಷ ಕಾಂಗ್ರೆಸ್‌ ಮತ್ತು ಅವರ ಮಿತ್ರ ಪಕ್ಷಗಳು ಎರಡು ಹಂತಗಳ ಮತದಾನದಲ್ಲಿ ಟ್ರೆಂಡ್‌ ನೋಡಿದ ಬಳಿಕ ಗಾಬರಿಗೊಂಡಿವೆ. ಸೇನಾಪಡೆಗಳು ಗಡಿಯಾಚೆಗೆ ತೆರಳಿ ನಡೆಸಿದ ಬಾಲಾಕೋಟ್‌ನಂತಹ ದಾಳಿಗಳಿಗೆ ಪುರಾವೆ ಕೇಳುವ ಹುಚ್ಚು ಧೈರ್ಯ ಈಗ ಪ್ರತಿಪಕ್ಷಗಳಲ್ಲಿ ಉಳಿದಿಲ್ಲ,'' ಎಂದರು.

''ದೇಶವು ಎರಡು ಬಗೆಯ ರಾಜಕೀಯಗಳಿಗೆ ಸಾಕ್ಷಿಯಾಗಿದೆ. ಅವೆಂದರೆ 'ವೋಟ್‌ ಭಕ್ತಿ' ಮತ್ತು 'ದೇಶ್‌ ಭಕ್ತಿ'. ಮೊದಲನೆಯದ್ದು 26/11 ಮುಂಬಯಿ ದಾಳಿ ಬಳಿಕ ಅನಾವರಣಗೊಂಡಿತು. ಆಗ ದೇಶದ ಮೇಲೆ ಅಷ್ಟು ದೊಡ್ಡ ಉಗ್ರ ದಾಳಿ ನಡೆದರೂ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ಕೊಡಲು ಆಗಿನ ಸರಕಾರ ಮುಂದಾಗಲಿಲ್ಲ. ಬದಲಿಗೆ 'ಹಿಂದೂ ಉಗ್ರ'ವಾದ ಸಿದ್ಧಾಂತದ ಮೂಲಕ ಇಡಿ ತನಿಖೆಯನ್ನೇ ಹಾದಿ ತಪ್ಪಿಸುವ ಪ್ರಯತ್ನ ನಡೆಯಿತು,'' ಎಂದು ಆಗಿನ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರದ ವಿರುದ್ಧ ಪ್ರಹಾರ ನಡೆಸಿದರು. 'ದೇಶ್‌ ಭಕ್ತಿ' ರಾಜಕೀಯವನ್ನು ಬಿಜೆಪಿಯ ಸದ್ಯದ ನೀತಿಯೊಂದಿಗೆ ಸಮೀಕರಿಸಿದ ಅವರು ಉರಿ ಮತ್ತು ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಪಾಕಿಸ್ತಾನಕ್ಕೆ ನೀಡಿದ ದಿಟ್ಟ ಉತ್ತರವನ್ನು ಇದಕ್ಕೆ ಉದಾಹರಣೆಯಾಗಿ ನೀಡಿದರು.

ಮೊದಲ ಮತ್ತು ಎರಡನೇ ಹಂತದ ಚುನಾವಣೆ ಬಳಿಕ ಸೋಲಿನ ಭೀತಿಯಲ್ಲಿರುವ ಪ್ರತಿಪಕ್ಷಗಳು ಸುಳ್ಳುಗಳನ್ನು ಹಬ್ಬಿಸುತ್ತಿದ್ದು, ಅವರ ಮಾತುಗಳನ್ನು ಮತದಾರರು ನಂಬಬಾರದೆಂದು ಮನವಿ ಮಾಡಿದರು.

ದೀದಿಯಿಂದ 'ತ್ರಿವಿಧ' ವಂಚನೆ

ಪಶ್ಚಿಮ ಬಂಗಾಳದ ಬನಿಯಾದ್‌ಪುರದಲ್ಲಿಯೂ ಪಕ್ಷದ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಅವರು, ಅಭಿವೃದ್ಧಿ ಕಾರ್ಯಗಳಿಗೆ ದೊಡ್ಡ ಅಡ್ಡಿಯಾಗಿರುವ 'ಸ್ಪೀಡ್‌ ಬ್ರೇಕರ್‌' ಮಮತಾ ಬ್ಯಾನರ್ಜಿ ಅವರು 'ಮಾ, ಮತಿ ಮತ್ತು ಮನುಷ್ಯ್‌' (ತಾಯಿ, ಭೂಮಿ ಮತ್ತು ಜನ) ಈ ಮೂರು ಹೆಸರುಗಳಿಂದ ಪಶ್ಚಿಮ ಬಂಗಾಳದ ಮುಗ್ಧ ಜನರನ್ನು ಮೂರ್ಖರನ್ನಾಗಿಸಿದ್ದಾರೆ,'' ಎಂದು ಆರೋಪಿಸಿದರು.

ಕಳೆದ ಒಂದು ತಿಂಗಳ ಅವಧಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಮೋದಿ ಭಾಗವಹಿಸಿ ಐದನೇ ರಾರ‍ಯಲಿ ಇದು.

ಬಾಂಗ್ಲಾದೇಶದ ನಟರನ್ನು ಟಿಎಂಸಿ ಪ್ರಚಾರಕ್ಕೆ ಕರೆತಂದದ್ದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು, ''ಟಿಎಂಸಿ ಪರವಾಗಿ ನೆರೆಯ ದೇಶದ ಜನರು ಬಂದು ಪ್ರಚಾರ ಮಾಡುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಮುಸ್ಲಿಮರನ್ನು ಓಲೈಸಲು ಇಂತಹ ದೀದಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಪಕ್ಕದ ರಾಷ್ಟ್ರದ ಜನರು ಬಂದು ಭಾರತದಲ್ಲಿ ಪ್ರಚಾರ ಮಾಡುವಂತಹ ಪ್ರಸಂಗ ದೇಶ ರಾಜಕಾರಣದಲ್ಲಿ ಹಿಂದೆಂದೂ ನಡೆದಿರಲಿಲ್ಲ,'' ಎಂದು ಕಿಡಿಕಾರಿದರು. ''ಒಂದು ಮತ್ತು ಎರಡನೇ ಹಂತದ ಮತದಾನದ ನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ಸೋಲಿನ ಭಯದಿಂದ ನಿದ್ದೆ ಮಾಡಿಲ್ಲ,'' ಎಂದರು.


ಮಮತಾ ಬ್ಯಾನರ್ಜಿ ಅವರನ್ನು ಅತ್ಯಂತ ಸರಳ ಮಹಿಳೆ ಎಂದು ತಿಳಿದಿದ್ದೆ. ಆದರೆ ಅವರು ರಾಜ್ಯದ ಜನರ ಮೇಲೆ ಜನ ವಿರೋಧಿ ನೀತಿಗಳನ್ನು ಹೇರುವ ಮೂಲಕ ನನ್ನ ಊಹೆ ತಪ್ಪೆಂದು ಸಾಬೀತುಪಡಿಸಿದರು. ಅವರನ್ನು ನೀವೆಲ್ಲರೂ (ರಾಜ್ಯದ ಜನತೆ) ನಂಬಿದಿರಿ. ಆದರೆ ಅವರು ನಿಮ್ಮನ್ನು ವಂಚಿಸಿದರು.

- ನರೇಂದ್ರ ಮೋದಿ, ಪ್ರಧಾನಿ

ಪ್ರಧಾನಿ ಮೋದಿ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿ ಕಾಡುತ್ತಿದ್ದು, ಜನರನ್ನು ಕೋಮು ಆಧಾರದ ಮೇಲೆ ವಿಭಜಿಸುವ ಮೂಲಕ ರಾಜ್ಯದಲ್ಲಿ ಗೆಲುವಿಗಾಗಿ ಪ್ರಯತ್ನಿಸುತ್ತಿದ್ದಾರೆ. ಇತರೆ ರಾಜ್ಯಗಳಲ್ಲಿ ಸೀಟು ಗಳಿಕೆ ಬಗ್ಗೆ ಅನುಮಾನ ಮೂಡಿರುವುದರಿಂದ ಪದೇಪದೇ ಪ.ಬಂಗಾಳಕ್ಕೆ ಭೇಟಿ ನೀಡಿ ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ.

- ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಸಿಎಂ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌