ಆ್ಯಪ್ನಗರ

ಕಾಂಗ್ರೆಸ್‌ ಸೇರ್ಪಡೆ ಪ್ರಜ್ಞಾಪೂರ್ವಕ ನಿರ್ಧಾರ

ಬಿಜೆಪಿಗೆ ವಿದಾಯ ಹೇಳಿ, ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದು ರಾತ್ರೋರಾತ್ರಿಯ ಬೆಳವಣಿಗೆಯಲ್ಲ, ಅದರ ಹಿಂದೆ 'ಪ್ರಜ್ಞಾಪೂರ್ವಕ' ನಿರ್ಧಾರ ಇತ್ತು ಎಂದು ಶತ್ರುಘ್ನ ಸಿನ್ಹಾ ಸಂದರ್ಶನದಲ್ಲಿ ತಿಳಿಸಿದ್ದಾರೆ.

Vijaya Karnataka 8 Apr 2019, 5:00 am
ಹೊಸದಿಲ್ಲಿ: ಬಿಜೆಪಿ ಸಂಸದರಾಗಿದ್ದುಕೊಂಡೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ಅಧ್ಯಕ್ಷ ಅಮಿತ್‌ ಶಾ ವಿರುದ್ಧ ಅಸಮಾಧಾನ ಹೊರ ಹಾಕುತ್ತ ಬಂದಿದ್ದ ಶತ್ರುಘ್ನ ಸಿನ್ಹಾ ಬಿಜೆಪಿಯ ಸಂಸ್ಥಾಪನಾ ದಿನವಾದ ಏಪ್ರಿಲ್‌ 6ರಂದೇ ಕಾಂಗ್ರೆಸ್‌ ಸೇರಿದ್ದಾರೆ. ''ಬಿಜೆಪಿಗೆ ವಿದಾಯ ಹೇಳಿ, ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದು ರಾತ್ರೋರಾತ್ರಿಯ ಬೆಳವಣಿಗೆಯಲ್ಲ, ಅದರ ಹಿಂದೆ 'ಪ್ರಜ್ಞಾಪೂರ್ವಕ' ನಿರ್ಧಾರ ಇತ್ತು,'' ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
Vijaya Karnataka Web shatrughna


* ಬಿಜೆಪಿ ಸಂಸದರಾಗಿದ್ದ ನೀವು ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?


ಅವರದ್ದು ಕೆಟ್ಟ ಆಡಳಿತ ಶೈಲಿ. ನೋಟು ಅಮಾನ್ಯೀಕರಣ ಅವರು ಮಾಡಿದ ಮಹಾಪ್ರಮಾದ. ತೆರಿಗೆ ಸುಧಾರಣೆ ನೀತಿಯಾದ ಜಿಎಸ್‌ಟಿಯನ್ನು ಕೂಡ ಅವರು ಸರಿಯಾದ ಕ್ರಮದಲ್ಲಿ ಜಾರಿಗೊಳಿಸದೇ ಎಡವಟ್ಟು ಮಾಡಿದರು. ಅಷ್ಟೇ ಯಾಕೆ, ತಾವು ಮಹಾನ್‌ ಪ್ರಮಾಣಿಕ ಎಂದು ಪೋಸು ನೀಡುವ ಮೋದಿಯವರು ರಫೇಲ್‌ ಹಗರಣದ ವಿಷಯ ಬಂದಾಗ ಕುಗ್ಗುತ್ತಾರೆ ಯಾಕೆ?

*ಬಿಹಾರದ ಪಟನಾ ಸಾಹಿಬ್‌ ಕ್ಷೇತ್ರದಲ್ಲಿ ನೀವು ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೀರಿ. ಬಿಜೆಪಿಯಿಂದ ನಿಮ್ಮ ಮಾಜಿ ಸಹೋದ್ಯೋಗಿ ರವಿಶಂಕರ್‌ ಪ್ರಸಾದ್‌ ಕಣದಲ್ಲಿದ್ದಾರಲ್ಲ?

ಜನ ನನ್ನನ್ನು ಪ್ರೀತಿಯಿಂದ 'ಬಿಹಾರಿ ಬಾಬು' ಎಂದು ಕರೆಯುತ್ತಾರೆ. ಹ್ಯಾಟ್ರಿಕ್‌ ಸಾಧನೆಗೆ ಜನತೆಯ ಆಶೀರ್ವಾದ ನನ್ನ ಮೇಲೆ ಇದೆ ಎನ್ನುವ ವಿಶ್ವಾಸವಿದೆ. ಇದಾಗಿ ಎದುರಾಳಿ ಬಿಜೆಪಿಯ ರವಿಶಂಕರ್‌ ಪ್ರಸಾದ್‌ ಬಗ್ಗೆ ಹೇಳುವುದಾದರೆ, ಅವರ ಬಗ್ಗೆ ನನಗೆ ವೈಯಕ್ತಿಕವಾಗಿ ಪ್ರೀತಿ ಇದೆ. ನನ್ನ ಕುಟುಂಬ ಸ್ನೇಹಿತ. ನಮ್ಮಿಬ್ಬರಲ್ಲಿ ಯಾರು ಬೆಸ್ಟ್‌ ಎಂದು ಜನ ನಿರ್ಧರಿಸುತ್ತಾರೆ. ಸೋಲು-ಗೆಲುವಿನ ಬಗ್ಗೆ ತಲೆಕೆಡಿಸಿಕೊಳ್ಳಲಾರೆ.

*ಬಿಜೆಪಿ ಜತೆಗಿನ ದೀರ್ಘ ಕಾಲದ ನಂಟು ಕೊನೆಗೊಂಡಿದ್ದರ ಬಗ್ಗೆ ನಿಮಗೆ ವ್ಯಥೆ ಎನಿಸುವುದಿಲ್ಲವೇ?


ಇಲ್ಲ. ಅನುಮಾನ, ಆತಂಕ, ಸಂಶಯಗಳನ್ನು ಜತೆ ಕಟ್ಟಿಕೊಂಡು ಯಾವ ಪಕ್ಷದೊಂದಿಗೂ ಹೆಚ್ಚು ಕಾಲ ಹೆಜ್ಜೆಹಾಕುವುದು ಕಷ್ಟ. ಕಳೆದ 25 ವರ್ಷಗಳಲ್ಲಿ ಅಂತಹ ಅನೇಕ ಅಡೆತಡೆಗಳನ್ನು ಆ ಪಕ್ಷದೊಳಗಿದ್ದು ಅನುಭವಿಸಿದ್ದೇನೆ. ಅಷ್ಟಕ್ಕೂ ಪಕ್ಷ ತೊರೆಯುವ ನಿರ್ಧರ ದಿಢೀರನೆ ತೆಗೆದುಕೊಂಡದ್ದಲ್ಲ. ಸಾಕಷ್ಟು ಅಳೆದು-ತೂಗಿಯೇ ನಿರ್ಧಾರ ತೆಗೆದುಕೊಂಡಿದ್ದೇನೆ.

*ಕಾಂಗ್ರೆಸ್‌ ಬಗೆಗಿನ ನಿಮ್ಮ ಪ್ರೀತಿಗೆ ರಾಜಕೀಯ ಹೊರತಾದ ಕಾರಣಗಳಿವೆಯೇ?


ಕಾಂಗ್ರೆಸ್‌ ಮತ್ತು ನೆಹರೂ ಗಾಂಧಿ ಕುಟುಂಬ ಈ ದೇಶದ ರಾಜಕಾರಣದಲ್ಲಿ ಉನ್ನತ ಮೌಲ್ಯಗಳನ್ನು ಪ್ರತಿಪಾದಿಸುತ್ತ ಬಂದಿದೆ. ಇಂದಿರಾ ಗಾಂಧಿಯವರಿಗೆ ನನ್ನ ಬಗ್ಗೆ ವಿಶೇಷ ಅಕ್ಕರೆ ಇತ್ತು. ನಾನು ಬರೆದಿರುವ 'ಎನಿಥಿಂಗ್‌ ಬಟ್‌ ಖಾಮೋಶ್‌' ಪುಸ್ತಕದಲ್ಲಿ ಅದನ್ನು ಹೇಳಿಕೊಂಡಿದ್ದೇನೆ. ಅವರು ಬದುಕಿದ್ದರೆ ಕಾಂಗ್ರೆಸ್‌ ಹೊರತುಪಡಿಸಿ ಬೇರೆ ಯಾವುದೇ ಪಕ್ಷದತ್ತ ನಾನು ಹೋಗುತ್ತಿರಲಿಲ್ಲ. ಬಿಜೆಪಿಯಲ್ಲಿ ಇದ್ದಾಗಲೂ ನಾನು ಸೋನಿಯಾ ಗಾಂಧಿ ಮತ್ತು ನೆಹರು-ಗಾಂಧಿ ಕುಟುಂಬದ ಬಗ್ಗೆ ಒಂದೇ ಒಂದು ಕೆಟ್ಟ ಪದ ಬಳಕೆ ಮಾಡಿಲ್ಲ. ಈ ದೇಶಕ್ಕಾಗಿ ಅವರು ಸಾಕಷ್ಟು ತ್ಯಾಗ ಮಾಡಿದ್ದಾರೆ.

*ಬಿಜೆಪಿಯಲ್ಲಿ ಈಗ ಅಂತಹ ಪ್ರಮಾದ ಏನು ಕಂಡಿರಿ?

ಆ ಪಕ್ಷದಲ್ಲಿ ಹಿಂದೆ ವಾಜಪೇಯಿ ಅವಧಿಯಲ್ಲಿ ಇದ್ದ ಪ್ರಜಾಸತ್ತಾತ್ಮಕ ಮೌಲ್ಯಗಳು ಈಗ ಉಳಿದಿಲ್ಲ. ಸರ್ವಾಧಿಕಾರ ಧೋರಣೆ ವಿಜೃಂಬಿಸುತ್ತಿದೆ. ಆಡ್ವಾಣಿ, ಮುರಳಿ ಮನೋಹರ ಜೋಷಿ, ಯಶವಂತ್‌ ಸಿನ್ಹಾ, ಅರುಣ್‌ ಶೌರಿ ಅವರಂತಹ ಹಿರಿಯ ನಾಯಕರಿಗೆ ಎಂತಹ ಗತಿ ಒದಗಿದೆ ಎನ್ನುವುದು ಎಲ್ಲರಿಗೂ ತಿಳಿದೇ ಇದೆಯಲ್ಲ....

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌