ಆ್ಯಪ್ನಗರ

ದೇಶದಲ್ಲಿ ಜಯಿಸಿದರೂ ಕೇರಳದಲ್ಲಿ ಖಾತೆ ತೆರೆಯದ ಬಿಜೆಪಿ!

2019 ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದಲ್ಲೇ ಪ್ರಧಾನಿ ನರೇಂದ್ರ ಮೋದಿ ಹವಾ ಹಬ್ಬಿದರೂ ನೆರೆಯ ಕೇರಳದಲ್ಲಿ ಒಂದೇ ಒಂದು ಸೀಟು ಗೆಲ್ಲುವಲ್ಲಿ ಮಾತ್ರ ಎನ್‌ಡಿಎ ವಿಫಲವಾಗಿದೆ. ಅಲ್ಲದೆ ಯುಡಿಎಫ್ ಅಲೆ ಅಬ್ಬರಿಸಿದೆ.

Vijaya Karnataka Web 23 May 2019, 4:39 pm
ತಿರುವನಂತಪುರ: 2019 ಲೋಕಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿವೃದ್ಧಿ ಕಾರ್ಯಗಳಿಗೆ ಮನ್ನಣೆ ನೀಡಿರುವ ಜನ ಸಾಮಾನ್ಯರು ಎರಡನೇ ಬಾರಿಗೆ ಅಧಿಕಾರ ಗದ್ದುಗಗೇರಿಸಿದೆ.
Vijaya Karnataka Web amit-shah


ಹಿಂದಿನ ಬಾರಿಗಿಂತಲೂ ಉತ್ತಮ ಪ್ರದರ್ಶನ ನೀಡಿರುವ ಬಿಜೆಪಿ ನೇತೃತ್ವದ ಎನ್‌ಡಿಎ 350ರಷ್ಟು ಸೀಟುಗಳನ್ನು ಜಯಿಸುವುದು ಬಹುತೇಕ ಖಚಿತವೆನಿಸಿದೆ. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನಿ ಮಂತ್ರಿ ಪದವಿ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ.

ಏತನ್ಮಧ್ಯೆ ದೇಶದೆಲ್ಲೆಡೆ ಮೋದಿ ಹವಾ ನಡುವೆಯೂ ಕೇರಳದಲ್ಲಿ ಈ ಬಾರಿಯೂ ಖಾತೆ ತೆರೆಯುವಲ್ಲಿ ಎನ್‌ಡಿಎ ವಿಫಲವಾಗಿದೆ. ಇದರೊಂದಿಗೆ ನರೇಂದ್ರ ಮೋದಿ ಸರಕಾರದ ವಿರುದ್ಧವಾಗಿ ಅಲೆಯೆಬ್ಬಿಸಿದ ಕೆಲವೇ ಕೆಲವು ರಾಜ್ಯಗಳಲ್ಲಿ ಕೇರಳ ಕಾಣಿಸಿಕೊಂಡಿದೆ.

ಇವೆಲ್ಲದಕ್ಕಿಂತಲೂ ಮಿಗಿಲಾಗಿ ಆಡಳಿತಾರೂಢ ಎಲ್‌ಡಿಎಫ್ ಸರಕಾರದ ವಿರುದ್ಧ ಯುಡಿಎಫ್ ಅಲೆ ಅಬ್ಬರಿಸಿದೆ. 20 ಲೋಕಸಭಾ ಕ್ಷೇತ್ರಗಳ ಪೈಕಿ ಯುಡಿಎಫ್ 19 ಸ್ಥಾನಗಳಲ್ಲಿ ಗೆಲುವು ಖಚಿತಪಡಿಸಿಕೊಂಡಿದೆ.

ಅಮೇಠಿಯಲ್ಲಿ ಸೋಲಿನ ಮುಖಭಂಗ ಅನುಭವಿಸಿರುವ ರಾಹುಲ್ ಗಾಂಧಿ, ಕೇರಳದ ವಯನಾಡಿನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಮತಗಳ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ತಿರುವನಂತಪುರಂ, ಅಟ್ಟಿಂಗಾಲ್‌, ಪತ್ತನಂತಿಟ್ಟ, ತ್ರಿಶೂರ್‌ ಮತ್ತು ಪಾಲಕ್ಕಾಡ್‌ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ನಿರೀಕ್ಷೆಯಿತ್ತಾದರೂ ನಿರೀಕ್ಷೆಗಳೆಲ್ಲ ಹುಸಿಯಾಗಿದೆ.

ಶಬರಿಮಲೆ ಮಹಿಳಾ ಪ್ರವೇಶ ವಿಚಾರದಲ್ಲಿ ರಾಜ್ಯ ಸರಕಾರ ತೆಗೆದುಕೊಂಡ ನಿಲುವುಗಳಿಂದ ಹಿಂದೂ ಮತದಾರರು ತಿರುಗಿ ಬೀಳಲಿದ್ದಾರೆಂದು ಅಂದಾಜಿಸಲಾಗಿತ್ತು. ಆದರೆ ಇದರ ಸ್ಪಷ್ಟ ಪ್ರಯೋಜನ ಪಡೆಯುವಲ್ಲಿ ಬಿಜೆಪಿ ವಿಫಲವಾಗಿದೆ.

ಮಿಜೋರಾಂ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿ ತಿರುವನಂತಪುರದಲ್ಲಿ ಸ್ಪರ್ಧಿಸಿರುವ ಬಿಜೆಪಿ ಹಿರಿಯ ನಾಯಕ ಕುಮ್ಮನಂ ರಾಜಶೇಖರನ್‌ ವಿರುದ್ದ ಕಾಂಗ್ರೆಸ್‌ನ ಶಶಿ ತರೂರ್ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಹ್ಯಾಟ್ರಿಕ್ ಗೆಲುವು ಬಾರಿಸಿದ್ದಾರೆ. ಪತ್ತನತಿಟ್ಟಂನಲ್ಲಿ ಗೆಲುವಿನ ನಿರೀಕ್ಷೆಯಾಗಿದ್ದ ಕೆ. ಸುರೇಂದ್ರನ್ ಸಹ ಪ್ರಭಾವಿ ಎನಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಆಲೆಪ್ಪಿಯಲ್ಲಿ ಗೆಲುವು ದಾಖಲಿಸಿರುವ ಕಮ್ಯೂನಿಸ್ಟ್ ಪಕ್ಷ ದೇಶದಲ್ಲೇ ಏಕಮಾತ್ರ ಸೀಟಿಗೆ ಸೀಮಿತಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ