ಆ್ಯಪ್ನಗರ

ಲಾಲು ಹುಟ್ಟೂರಲ್ಲಿ ಅನುಕಂಪ, ರಾಬ್ಡಿ ದೇವಿ ಹುಟ್ಟೂರಲ್ಲಿ ಮೋದಿ ಅಲೆ

ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಹುಟ್ಟೂರಿನಲ್ಲಿ ಲಾಲು ಬಗ್ಗೆ ಅನುಕಂಪವಿದ್ದರೆ, ಲಾಲು ಪತ್ನಿ ರಾಬ್ಡಿ ದೇವಿ ಹುಟ್ಟೂರಲ್ಲಿ ಲಾಲು ಕುಟುಂಬದ ವಿರುದ್ಧ ಆಕ್ರೋಶ, ಮೋದಿ ಪರ ಅಲೆ ಗೋಚರಿಸುತ್ತಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಕ ಸೋದರ ಪತ್ರಿಕೆ ಟೈಮ್ಸ್ ಆಫ್‌ ಇಂಡಿಯಾ ಈ ಊರುಗಳಲ್ಲಿ ಸುತ್ತಾಡಿದಾಗ ಕಂಡು ಬಂದ ಚಿತ್ರಣವಿದು.

Vijaya Karnataka Web 10 May 2019, 2:50 pm
ಫುಲ್ವರಿಯಾ (ಗೋಪಾಲ್‌ಗಂಜ್): ಜೈಲಿನಲ್ಲಿರುವ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಹುಟ್ಟೂರು ಫುಲ್ವರಿಯಾದಲ್ಲಿ (ಗೋಪಾಲ್‌ಗಂಜ್ ಮೀಸಲು ಲೋಕಸಭಾ ಕ್ಷೇತ್ರ ವ್ಯಾಪ್ತಿ) ಅನುಕಂಪದ ಅಲೆಯಿದೆ. ಆದರೆ, ಪಕ್ಕದ ಊರು, ಲಾಲು ಪತ್ನಿ ರಾಬ್ಡಿದೇವಿ ಅವರ ಹುಟ್ಟೂರಾದ ಸೆಲರ್ ಕಾಲನ್ ನಲ್ಲಿ ಲಾಲು ವಿರುದ್ಧ ಗೊಣಗಾಟವೇ ಹೆಚ್ಚು ಕೇಳಿ ಬರುತ್ತಿದೆ.
Vijaya Karnataka Web PM Modi


ಇಲ್ಲಿ ಮೋದಿ ಅಲೆಯೇ ಹೆಚ್ಚಾಗಿ ಬೀಸುತ್ತಿದ್ದು, ಕೆಲವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಸರಕಾರದ ಸಾಧನೆಗಳನ್ನು ಮೆಚ್ಚಿಕೊಂಡು ಪ್ರಚಾರಕ್ಕಿಳಿದಿದ್ದಾರೆ.

ಲಾಲು ತಮ್ಮ ಅಧಿಕಾರಾವಧಿಯಲ್ಲಿ ಕೇವಲ ತಮ್ಮ ಫುಲ್ವರಿಯಾ ಗ್ರಾಮಕ್ಕೆ ಮಾತ್ರ ಕೆಲಸ ಮಾಡಿದ್ದಾರೆ ಎಂದು ಆರೋಪಿಸುತ್ತಾರೆ. ಲಾಲು ರೈಲ್ವೇ ಸಚಿವರಾಗಿದ್ದಾಗ ರೈಲ್ವೇ ಇಲಾಖೆಯಲ್ಲಿ ಈ ಗ್ರಾಮದ ಹಲವರಿಗೆ ಉದ್ಯೋಗ ದೊರೆತಿದೆ ಎಂದು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ.

ಲಾಲು ಅವರ ಫುಲ್ವರಿಯಾ ಗ್ರಾಮದಲ್ಲಿ ರೈಲು ನಿಲ್ದಾಣ, ಹೆಲಿಪ್ಯಾಡ್‌, ಲಾಲು ತಾಯಿ ಮರಚಿಯಾ ದೇವಿ ಹೆಸರಲ್ಲಿ ಸರಕಾರಿ ಆಸ್ಪತ್ರೆ, ಒಂದು ಬೃಹತ್ ದೇವಾಲಯ, ಭೂ ವ್ಯವಹಾರಗಳ ನೋಂದಣಿ ಕಚೇರಿ, ಬ್ಯಾಂಕು, ಅಂಚೆ ಕಚೇರಿ ಮತ್ತು ಸರಕಾರಿ ಶಾಲೆಗಳನ್ನು ಸ್ಥಾಪಿಸಲಾಗಿದೆ.

ಕೇವಲ ಒಂದು ಪ್ಯಾಸೆಂಜರ್ ರೈಲು ಮಾತ್ರ ಫುಲ್ವರಿಯಾ ನಿಲ್ದಾಣದಲ್ಲಿ ನಿಲುಗಡೆ ಹೊಂದಿದೆ. 2008ರಲ್ಲಿ ರಾಬ್ರಿ ದೇವಿ ಅವರ ಹುಟ್ಟೂರಿನಲ್ಲೂ ರೈಲು ನಿಲುಗಡೆ ಆರಂಭಿಸಲಾಯಿತು.

ಲಾಲು ಅವರ ಐವರು ಸೋದರರ ಪೈಕಿ ಒಬ್ಬರಾದ ದಿವಂಗತ ಗುಲಾಬ್ ಯಾದವ್ ಪುತ್ರ ಪ್ರದೀಪ್ ಕುಮಾರ್ ಯಾದವ್ (18) ಪ್ರಕಾರ, ಫುಲ್ವರಿಯಾ ಗ್ರಾಮದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳು ಲಾಲು ರೈಲ್ವೇ ಸಚಿವರಾಗಿದ್ದಾಗ ನಡೆದಿವೆ. 'ಲಾಲು ಚಾಚಾ ಅಧಿಕಾರದಿಂದ ಇಳಿದ ಬಳಿಕ ಇಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ರಾಜಕೀಯ ಸಂಚಿನಿಂದಾಗಿ ಅವರು ಜೈಲುಪಾಲಾದರು. ಇದಕ್ಕಾಗಿ ಈ ಊರಿನ ಜನರಲ್ಲಿ ಆಕ್ರೋಶವಿದೆ' ಎಂದು ಪ್ರದೀಪ್ ಹೇಳುತ್ತಾರೆ. ರೈತ ಮುನ್ನಾ ಯಾದವ್ ಇದಕ್ಕೆ ದನಿಗೂಡಿಸುತ್ತಾರೆ.

'ಲಾಲೂಜಿ ವಿರುದ್ಧ ರಾಜಕೀಯ ಸಂಚು ಮಾಡಿದ್ದಕ್ಕಾಗಿ ಆಡಳಿತಾರೂಢ ಸರಕಾರದ ವಿರುದ್ಧ ಆಕ್ರೋಶವಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾಗೆ ಇದೇ ಮೇವು ಪ್ರಕರಣದಲ್ಲಿ ಜಾಮೀನು ನೀಡಲಾಗಿದೆ. ಅವರು ಮೇಲ್ಜಾತಿಗೆ ಸೇರಿದವರು ಮತ್ತು ಅವರ ಪುತ್ರ ಬಿಜೆಪಿಯಲ್ಲಿದ್ದಾನೆ ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ. ಲಾಲೂಜಿ ಬಗ್ಗೆ ಅನುಕಂಪ ಚುನಾವಣೆಯಲ್ಲಿ ವ್ಯಕ್ತವಾಗಲಿದೆ' ಎಂದು ಮುನ್ನಾ ಯಾದವ್ ಹೇಳಿದರು. ಲಾಲು ಎಲ್ಲ ಸಮುದಾಯಗಳಿಗೂ ಕೊಡುಗೆ ನೀಡಿದ್ದಾರೆ ಎಂದು 70 ವರ್ಷ ವಯಸ್ಸಿನ ಸುಖ್‌ದೇವ್ ರಾಮ್ ಹೇಳಿದರು.

'ನಾನು ಬಾಲ್ಯದಿಂದಲೂ ಲಾಲು ಜತೆ ಹಸುಗಳನ್ನು ಮೇಯಿಸಲು ಹೋಗುತ್ತಿದ್ದೆ. ಈ ಹಳ್ಳಿಯಲ್ಲಿ ಯಾದವರು, ತೆಲಿಗಳು, ಭೂಮಿಹಾರರು, ಬ್ರಾಹ್ಮಣರು ಮತ್ತು ಪಾಸ್ವಾನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಗ್ರಾಮದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳಿಂದ ಎಲ್ಲ ಸಮುದಾಯದವರಿಗೂ ಲಾಭವಾಗಿದೆ' ಎಂದು ಸುಖ್‌ದೇವ್ ಹೇಳುತ್ತಾರೆ.

ರಾಬ್ಡಿದೇವಿ ಹುಟ್ಟೂರಿನ ಜನತೆ ಪ್ರಧಾನಿ ಮೋದಿ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ. ಕಳ್ಳರು, ಹಗರಣ ನಡೆಸುವವರು ಜೈಲುಪಾಲಾಗುತ್ತಾರೆ. ಮೋದೀಜಿ ಅವರ ಕೈಯ್ಯಲ್ಲಿ ದೇಶ ಸುರಕ್ಷಿತವಾಗಿದೆ' ಎಂದು 76 ವರ್ಷ ವಯಸ್ಸಿನ ಬಿಶೇಶ್ವರ್ ನಾಥ್ ಸಿಂಗ್ ಹೇಳುತ್ತಾರೆ. ರಾಬ್ಡಿ ದೇವಿ ಹುಟ್ಟೂರಿನ ಮಹಿಳೆಯರು ಕೂಡ ಲಾಲು ಕುಟುಂಬಕ್ಕೆ ಬೆಂಬಲಿಸುತ್ತಿಲ್ಲ. ಲಾಲು ಅವರ ಕಡು ವಿರೋಧಿ ನಿತೀಶ್ ಕುಮಾರ್ ಅವರನ್ನು ಪ್ರಮೀಳಾ ದೇವಿ ಶ್ಲಾಘಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ