ಆ್ಯಪ್ನಗರ

ಮೋದಿ ನೀಚನಷ್ಟೇ ಅಲ್ಲ, ಕೊಳಕು ಬಾಯಿ ಪ್ರಧಾನಿ

ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ ತಿಂಗಳುಗಳ ಬಳಿಕ ಮತ್ತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ. 'ನೀಚ ಮನುಷ್ಯ' ಎನ್ನುವ ತಮ್ಮ ಹಿಂದಿನ ಟೀಕೆ ಸಮರ್ಥಿಸುವ ಜತೆಗೆ ಮೋದಿ ದೇಶ ಕಂಡ ಅತ್ಯಂತ 'ಕೊಳಕು ಬಾಯಿ'ಯ ಪ್ರಧಾನಿ ಎಂದು ಹೊಸ ವಿವಾದ ಸೃಷ್ಟಿಸಿದ್ದಾರೆ.

Vijaya Karnataka 15 May 2019, 5:00 am
ಹೊಸದಿಲ್ಲಿ: ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ ತಿಂಗಳುಗಳ ಬಳಿಕ ಮತ್ತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ. 'ನೀಚ ಮನುಷ್ಯ' ಎನ್ನುವ ತಮ್ಮ ಹಿಂದಿನ ಟೀಕೆ ಸಮರ್ಥಿಸುವ ಜತೆಗೆ ಮೋದಿ ದೇಶ ಕಂಡ ಅತ್ಯಂತ 'ಕೊಳಕು ಬಾಯಿ'ಯ ಪ್ರಧಾನಿ ಎಂದು ಹೊಸ ವಿವಾದ ಸೃಷ್ಟಿಸಿದ್ದಾರೆ.
Vijaya Karnataka Web mani shankar aiyar justifiies neech jibe against pm bjp retorts strongly
ಮೋದಿ ನೀಚನಷ್ಟೇ ಅಲ್ಲ, ಕೊಳಕು ಬಾಯಿ ಪ್ರಧಾನಿ


ರೈಸಿಂಗ್‌ ಕಾಶ್ಮೀರ್‌ ಮತ್ತು ದಿ ಪ್ರಿಂಟ್‌ ವೆಬ್‌ ಪತ್ರಿಕೆಗೆ ಬರೆದ ಲೇಖನದಲ್ಲಿ ಅಯ್ಯರ್‌ ಈ ಟೀಕೆ ಮಾಡಿದ್ದು, ಬಿಜೆಪಿ ಸೇರಿದಂತೆ ಹಲವು ಪಕ್ಷಗಳ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸ್ವತಃ ಕಾಂಗ್ರೆಸ್‌ ಕೂಡ ಈ ಹೇಳಿಕೆ ಖಂಡಿಸಿದೆ.

ಆರೋಪಗಳ ಸರಣಿ: ಲೇಖನದಲ್ಲಿ ಪ್ರಧಾನಿ ಮೋದಿ ವಿರುದ್ಧ ಮಾಜಿ ಕೇಂದ್ರ ಸಚಿವ ಅಯ್ಯರ್‌, ಆರೋಪಗಳ ಸುರಿಮಳೆ ಸುರಿಸಿದ್ದಾರೆ. ''ಹಿಂದೆ 2017ರ ಡಿಸೆಂಬರ್‌ 7ರಂದು ಅವರನ್ನು ನಾನು ಹೇಗೆ ಬಣ್ಣಿಸಿದ್ದೆ ಎನ್ನುವುದು ನೆನಪಿದೆಯೇ? ಮುಂದಿನದನ್ನು ಅಂದೇ ಹೇಳಿದ್ದ ನಾನು ಪ್ರವಾದಿಯಲ್ಲವೇ?,'' ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. 2017ರಲ್ಲಿ ಪ್ರಧಾನಿ ಮೋದಿ ಅವರನ್ನು 'ನೀಚ ಆದ್ಮಿ' ಎಂದು ಕರೆದು ಕಾಂಗ್ರೆಸ್‌ ಪಕ್ಷದಿಂದ ಅಮಾನತುಗೊಂಡಿದ್ದರು. ನಂತರ ಅವರ ಅಮಾನತನ್ನು ಪಕ್ಷ ಹಿಂಪಡೆದಿದೆ.

ಅಂದಿನ ತಮ್ಮ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿರುವ ಅಯ್ಯರ್‌, '' ಮೇ 23ರಂದು ಮೋದಿ ಈ ದೇಶದ ಜನರಿಂದ ಉಚ್ಚಾಟನೆಗೊಳ್ಳುವುದು ಖಚಿತ. ಅದು ದೇಶ ಕಂಡ ಅತಿ ಕೊಳಕು ಬಾಯಿಯ ಪ್ರಧಾನಿಗೆ ತಕ್ಕ ವಿದಾಯವಾಗಲಿದೆ,'' ಎಂದು ಬರೆದಿದ್ದಾರೆ.

ಬಿಜೆಪಿ ತಿರುಗೇಟು: ಮತ್ತೊಮ್ಮೆ ಸ್ಥಾನಮಾನದ ಘನತೆ ಮೀರಿ ಟೀಕಿಸಿದ ಮಣಿಶಂಕರ್‌ ಅಯ್ಯರ್‌ ಅವರಿಗೆ ಬಿಜೆಪಿ ಕಟು ಪದಗಳ ತಿರುಗೇಟು ನೀಡಿದೆ. 2017ರಲ್ಲಿ ತಾವು ಮಾಡಿದ್ದ 'ನೀಚ್‌ ಆದ್ಮಿ' ಟೀಕೆಯನ್ನು ಸಮರ್ಥಿಸಿರುವ ಅಯ್ಯರ್‌ 'ದೂಷಕರ ಮುಖ್ಯಸ್ಥ' (ಅಬ್ಯುಸರ್‌ ಇನ್‌ ಚೀಫ್‌) ಎಂದು ಬಿಜೆಪಿ ವಕ್ತಾರ ಜಿವಿಎಲ್‌ ನರಸಿಂಹರಾವ್‌ ಟ್ವೀಟ್‌ ಮೂಲಕ ಕುಟುಕಿದ್ದಾರೆ. ''...ಹಿಂದೆ ತಾವು ಆಡಿದ್ದ ತಪ್ಪು ಮಾತಿಗೆ ಹಿಂದಿ ಭಾಷೆ ಮೇಲೆ ಹಿಡಿತ ಇರದ ಕಾರಣ ಎಡವಟ್ಟಾಯಿತು, ಕ್ಷಮಿಸಿ ಎಂದು ಪರದಾಡಿದ್ದ ಅಯ್ಯರ್‌ ಈಗ ತಮ್ಮನ್ನು ಪ್ರವಾದಿಗೆ ಹೋಲಿಸಿಕೊಂಡಿದ್ದಾರೆ. ಇವರ ವಿರುದ್ಧದ ಅಮಾನತನ್ನು ಕಾಂಗ್ರೆಸ್‌ ಕಳೆದ ವರ್ಷ ಹಿಂಪಡೆಯುವ ಮೂಲಕ ದ್ವಂದ್ವ ನಡೆ ಹಾಗೂ ಉದ್ದಟತನ ಪ್ರದರ್ಶಿಸಿದೆ,'' ಎಂದು ನರಸಿಂಹರಾವ್‌ ಹೇಳಿದ್ದಾರೆ.

ಸ್ಯಾಮ್‌ ಪಿತ್ರೊಡಾ ಎಲ್ಲರ ಗಮನ ಸೆಳೆದಿದ್ದರಿಂದ ಬೇಸರಗೊಂಡ ಬೇಜವಾಬ್ದಾರಿ ಮಣಿಶಂಕರ್‌ ಅಯ್ಯರ್‌, ಅವರ ಬಾಯಲ್ಲಿನ ಚಪ್ಪಲಿಯನ್ನೇ ಕಿತ್ತುಕೊಂಡು ಈಗ ತಮ್ಮ ಬಾಯಲ್ಲಿ ಇಟ್ಟುಕೊಂಡಿದ್ದಾರೆ. ಆ ಮೂಲಕ ಪ್ರಧಾನಿ ವಿರುದ್ಧದ 'ನೀಚ' ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಅಮಿತ್‌ ಮಾಳವೀಯ ಟೀಕಿಸಿದ್ದಾರೆ.

ಕಾಂಗ್ರೆಸ್‌ ಖಂಡನೆ:

ಪ್ರಧಾನಿ ಮೋದಿ ಕುರಿತಾದ ಮಣಿಶಂಕರ್‌ ಅಯ್ಯರ್‌ ಅವರ ಕೀಳು ಅಭಿರುಚಿಯ ಪದ ಬಳಕೆಯನ್ನು ಕಾಂಗ್ರೆಸ್‌ ಕೂಡ ಖಂಡಿಸಿದೆ. ಆದರೆ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಬಳಸುತ್ತಿರುವ ಭಾಷೆ ಕೂಡ ಸರಿಯಿಲ್ಲ ಎಂದು ಜರಿದಿದೆ.

''ಮಣಿಶಂಕರ್‌ ಅಯ್ಯರ್‌ ಮಾಡಿರುವ ಟೀಕೆ ಸರಿಯಿಲ್ಲ. ದ್ವೇಷ, ಹಿಂಸೆ ಮತ್ತು ನಿಂದನೆಯ ಕೆಟ್ಟ ಜಾಯಮಾನವೇನಿದ್ದರೂ ಬಿಜೆಪಿಯ ಸ್ವತ್ತು. ಈ ಚುನಾವಣೆ ಸೇರಿದಂತೆ ಕಳೆದ ಐದು ವರ್ಷಗಳಲ್ಲಿ ನರೇಂದ್ರ ಮೋದಿ ಅವರು ತಮಗೆ ಆಗದವರ ವಿರುದ್ಧ ಬಳಸಿದ ಭಾಷೆ ಎಂತದ್ದು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಅವರ ದೂಷಣೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಆದರೆ ಅವರದ್ದೇ ಧಾಟಿಯಲ್ಲಿ ಮಣಿಶಂಕರ್‌ ಅಯ್ಯರ್‌ ಮಾಡಿರುವ ಟೀಕೆಯನ್ನೂ ಪಕ್ಷ ಒಪ್ಪುವುದಿಲ್ಲ, ಅದನ್ನು ಖಂಡಿಸುತ್ತದೆ,'' ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆವಾಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

..........

ಲೋಕಸಭೆ ಚುನಾವಣೆಯಲ್ಲಿ ತಾವು ಗೆಲ್ಲುವುದಿಲ್ಲ ಎನ್ನುವುದು ಪ್ರತಿಪಕ್ಷಗಳಿಗೆ ಮನವರಿಕೆಯಾಗಿದೆ. ಹೀಗಾಗಿ ಪ್ರತಿಪಕ್ಷಗಳ ನಾಯಕರು ನನ್ನನ್ನು ನಿಂದಿಸುವುದರಲ್ಲಿ ಪೈಪೋಟಿಗೆ ಇಳಿದಿವೆ.

- ನರೇಂದ್ರ ಮೋದಿ, ಪ್ರಧಾನಿ

......

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ