ಆ್ಯಪ್ನಗರ

ಸೋಲಿನ ನಂತರ ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ; ರಾಹುಲ್‌ ಪದತ್ಯಾಗ?

ಇಂದು ಮಹತ್ವ ದ ಕಾರ್ಯಕಾರಿಣಿ | ರಾಹುಲ್‌ ಪದತ್ಯಾಗ ಘೋಷಿಸುವ ಸಾಧ್ಯತೆ

Vijaya Karnataka 25 May 2019, 5:30 am
ಹೊಸದಿಲ್ಲಿ: ಲೋಕಸಮರದಲ್ಲಿ ಹೀನಾಯ ಸೋಲಿನ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ ಆರಂಭವಾಗಿದೆ.
Vijaya Karnataka Web Rahul Gandhi New


ಸೋಲಿನ ಪರಾಮರ್ಶೆಗಾಗಿ ಶನಿವಾರ ದಿಲ್ಲಿಯಲ್ಲಿ ನಡೆಯಲಿರುವ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಸಹ ಸೋಲಿನ ಹೊಣೆ ಹೊತ್ತು ರಾಜೀನಾಮೆ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.

ಈಗಾಗಲೇ ಉತ್ತರ ಪ್ರದೇಶ ಕಾಂಗ್ರೆಸ್‌ ಮುಖ್ಯಸ್ಥ ರಾಜ್‌ಬಬ್ಬರ್‌ ಮತ್ತು ಒಡಿಶಾ ಪ್ರದೇಶದ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ನಿರಂಜನ್‌ ಪಟ್ನಾಯಕ್‌ ಅವರು ತಮ್ಮ ರಾಜ್ಯದಲ್ಲಿ ಪಕ್ಷದ ಕಳಪೆ ಪ್ರದರ್ಶನದ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸಚಿನ್‌ ಪೈಲಟ್‌, ಹರಿಯಾಣ ಕಾಂಗ್ರೆಸ್‌ ಮುಖ್ಯಸ್ಥ ಅಶೋಕ್‌ ತನ್ವಾರ್‌ ಸಹ ಪದತ್ಯಾಗ ಮಾಡುವ ಸಾಧ್ಯತೆಯಿದೆ. ಜತೆಗೆ ಮಧ್ಯಪ್ರದೇಶದಲ್ಲಿ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನವನ್ನು ಕಮಲ್‌ನಾಥ್‌ ತೊರೆಯುವ ಸಾಧ್ಯತೆ ಇದೆ.

ಕಾಂಗ್ರೆಸ್‌ನಲ್ಲಿ ಮನೆಮಾಡಿರುವ ಹತಾಶ ಸ್ಥಿತಿಯ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 11 ಗಂಟೆಗೆ ದಿಲ್ಲಿಯಲ್ಲಿ ಪಕ್ಷದ ಅತ್ಯುನ್ನತ ನಿರ್ಧಾರ ಮಂಡಳಿಯಾಗಿರುವ ಕಾರ್ಯಕಾರಣಿ ಸಮಿತಿ ಸಭೆಯನ್ನು ಕರೆಯಲಾಗಿದೆ. ಬಿಜೆಪಿ ಎದುರು ಸತತ ಎರಡನೇ ಬಾರಿಗೆ ಕಾಂಗ್ರೆಸ್‌ ಹೀನಾಯವಾಗಿ ಸೋಲಲು ಕಾರಣಗಳ ಬಗ್ಗೆ ಸಭೆಯಲ್ಲಿ ಪಕ್ಷದ ವರಿಷ್ಠರು ಪರಾಮರ್ಶೆ ನಡೆಸಲಿದ್ದಾರೆ.

ಹೊರಗಿನವರಿಗೆ ಪಟ್ಟ?

ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆಯಲ್ಲಿ ರಾಹುಲ್‌ ಗಾಂಧಿ ಅವರ ರಾಜೀನಾಮೆಯನ್ನು ತಿರಸ್ಕರಿಸುವ ಸಾಧ್ಯತೆಯೇ ಹೆಚ್ಚು. ಒಂದೊಮ್ಮೆ ರಾಹುಲ್‌ ಬಿಗಿ ಪಟ್ಟಿನಿಂದಾಗಿ ರಾಜೀನಾಮೆ ಅಂಗೀಕರಿಸಿದರೆ, ಮುಂದಿನ ಸಾರಥಿ ಯಾರಾಗಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಈಗಾಗಲೇ ಪಕ್ಷದ ಅಧ್ಯಕ್ಷತೆ ವಹಿಸಿಕೊಳ್ಳಲು ನಿರಾಕರಿಸಿದ್ದಾರೆ ಎನ್ನಲಾಗಿದ್ದು, ನೆಹರೂ- ಗಾಂಧಿ ಕುಟುಂಬದಿಂದ ಹೊರಗಿನವರಿಗೆ ಪಕ್ಷದ ಅಧ್ಯಕ್ಷರ ಪಟ್ಟ ನೀಡುವುದು ಅನಿವಾರ್ಯವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ