ಆ್ಯಪ್ನಗರ

ಭಯೋತ್ಪಾದಕನೆಂದು ಘೋಷಿಸಿಕೊಂಡ ಪಿಡಿಪಿ ನಾಯಕ: ಮೆಹಬೂಬಾ ಮುಫ್ತಿ ಅನರ್ಹತೆಗೆ ಬಿಜೆಪಿ ಆಗ್ರಹ

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 370 ಹಾಗೂ 35 ಎ ವಿಧಿಗಳನ್ನು ರದ್ದುಪಡಿಸುವುದಾಗಿ ಬಿಜೆಪಿಯ ಚುನಾವಣೆ ವಾಗ್ದಾನದ ವಿರುದ್ಧ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಿಗೇ ಪಿಡಿಪಿ ಅಭ್ಯರ್ಥಿಯೊಬ್ಬ ತಾನು ಭಯೋತ್ಪಾದಕ ಎಂದು ಘೋಷಿಸಿಕೊಂಡಿದ್ದಾನೆ.

Vijaya Karnataka Web 14 Apr 2019, 2:01 pm
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಲೋಕಸಭೆ ಚುನಾವಣೆ ಕಾವು ಏರುತ್ತಿದ್ದು, ಏಪ್ರಿಲ್ 18ರಂದು ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ. ಎಲ್ಲ ಪಕ್ಷಗಳ ಅಭ್ಯರ್ಥಿಗಳು ರ‍್ಯಾಲಿ, ಪ್ರಚಾರ ಸಭೆಗಳು ಮತ್ತು ರೋಡ್‌ಶೋಗಳನ್ನು ನಡೆಸುತ್ತಿದ್ದಾರೆ.
Vijaya Karnataka Web PDP_worker


ಬಡ್ಗಾಂನಲ್ಲಿ ಪಿಡಿಪಿ ಅಭ್ಯರ್ಥಿಯೊಬ್ಬ ಆಟಿಕೆ ಪಿಸ್ತೂಲು ಪ್ರದರ್ಶಿಸುತ್ತ ತನ್ನನ್ನು ತಾನು ಭಯೋತ್ಪಾದಕ ಎಂದು ಬಿಂಬಿಸಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಪಿಡಿಪಿ ಮುಖ್ಯಸ್ತೆ ಮೆಹಬೂಬಾ ಮುಫ್ತಿಯನ್ನು ಅನರ್ಹಗೊಳಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಆಗ್ರಹಿಸಿದೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 370 ಹಾಗೂ 35 ಎ ವಿಧಿಗಳನ್ನು ರದ್ದುಪಡಿಸುವುದಾಗಿ ಬಿಜೆಪಿಯ ಚುನಾವಣೆ ವಾಗ್ದಾನದ ವಿರುದ್ಧ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಿಗೇ ಪಿಡಿಪಿ ಅಭ್ಯರ್ಥಿಯೊಬ್ಬ ತಾನು ಭಯೋತ್ಪಾದಕ ಎಂದು ಘೋಷಿಸಿಕೊಂಡಿದ್ದಾನೆ.

ಬಿಜೆಪಿ ಪ್ರಣಾಳಿಕೆ ವಿರುದ್ಧ ಪಿಡಿಪಿ ಮಾತ್ರವಲ್ಲ, ನ್ಯಾಷನಲ್ ಕಾನ್ಫರೆನ್ಸ್ ಕೂಡ ಧ್ವನಿಯೆತ್ತಿದೆ. ಸಂವಿಧಾನದ ಈ ಎರಡು ವಿಧಿಗಳನ್ನು ರದ್ದುಪಡಿಸಿದಲ್ಲಿ ಭಾರತದ ಸಂವಿಧಾನ ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ ಎಂದು ಮೆಹಬೂಬಾ ಎಚ್ಚರಿಕೆ ನೀಡಿದ್ದರು.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಜಮ್ಮು-ಕಾಶ್ಮೀರ ಭಾರತದ ಭಾಗವಾಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

'ಆರ್ಟಿಕಲ್ 370 ರದ್ದುಪಡಿಸಿದರೆ ನಾವು ಸುಮ್ಮನಿರುತ್ತೇವೆ ಎಂದು ಅವರು ಭಾವಿಸಿದ್ದಾರೆಯೆ? ಹಾಗೆ ಭಾವಿಸಿದ್ದಲ್ಲಿ ಅದು ತಪ್ಪು. ನಾವು ಪ್ರತಿ ಹೋರಾಟ ನಡೆಸುತ್ತೇವೆ. ಅವರು ಈ ವಿಧಿಗಳನ್ನು ರದ್ದುಪಡಿಬೇಕೆಂಬುದು ಅಲ್ಲಾನ ಇಚ್ಛೆಯಾಗಿದೆ ಎಂದು ತೋರುತ್ತದೆ. ಅವರು ಮಾಡುವುದನ್ನು ಮಾಡಲಿ. ಅದರಿಂದ ನಮ್ಮ ಸ್ವಾತಂತ್ರ್ಯ ಘೋಷಣೆಗೆ ದಾರಿಯಾಗುತ್ತದೆ' ಎಂದು ಅಬ್ದುಲ್ಲಾ ಹೇಳಿದ್ದಾರೆ.

ಯಥಾಸ್ಥಿತಿ ಉಳಿಸಿಕೊಳ್ಳುವುದಾಗಿ ಕಾಂಗ್ರೆಸ್ ಭರವಸೆ ನೀಡಿದ್ದರೆ, ರಾಜ್ಯದ ಅಭಿವೃದ್ಧಿಗೆ 370ನೇ ವಿಧಿ ಅಡ್ಡಿಯಾಗಿದೆ ಎಂದು ಬಿಜೆಪಿ ಪ್ರತಿಪಾದಿಸಿದೆ. ಮತ್ತೆ ಅಧಿಕಾರಕ್ಕೆ ಬಂದಲ್ಲಿ 370ನೇ ವಿಧಿ ರದ್ದುಪಡಿಸುವುದಾಗಿ ಬಿಜೆಪಿ ಘೋಷಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಐದು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಬಾರಾಮುಲ್ಲಾ ಮತ್ತು ಜಮ್ಮುವಿನಲ್ಲಿ ಏಪ್ರಿಲ್ 11ರಂದು ಮತದಾನ ನಡೆದಿದೆ. ಶ್ರೀನಗರ, ಉಧಂಪುರ, ಅನಂತನಾಗ್ ಮತ್ತು ಲಡಾಖ್ ಕ್ಷೇತ್ರಗಳಲ್ಲಿ ಮತದಾನ ಬಾಕಿಯಿದೆ. ಶ್ರೀನಗರ ಮತ್ತು ಉಧಂಪುರದಲ್ಲಿ ಏಪ್ರಿಲ್ 18ರಂದು ಮತದಾನ ನಡೆಯಲಿದೆ.

ಅನಂತನಾಗ್ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ