ಆ್ಯಪ್ನಗರ

ರಾಹುಲ್‌ಗೆ ಕೋರ್ಟ್‌ ತರಾಟೆ

ಅಫಿಡವಿಟ್‌ನಲ್ಲಿ ಆಗಿರುವ ಹೊಸ ಎಡವಟ್ಟನ್ನು ಗಂಭೀರವಾಗಿ ತೆಗೆದುಕೊಂಡ ಸಿಜೆಐ ರಂಜನ್‌ ಗೊಗೊಯ್‌ ನೇತೃತ್ವದ ನ್ಯಾಯಪೀಠ, ಸಿಂಘ್ವಿ ಅವರ ಬೆವರಿಳಿಸಿತು. ಇಷ್ಟೊಂದು ದೊಡ್ಡ ಪ್ರಮಾದ ಆಗಿರುವಾಗ 'ಕ್ಷಮೆಯಾಚಿಸುವ' ಸೌಜನ್ಯ ಇಲ್ಲದಿದ್ದರೆ ಹೇಗೆ ಎಂದು ನ್ಯಾ.ಗೊಗೊಯ್‌ ಪ್ರಶ್ನಿಸಿದರು.

Vijaya Karnataka 1 May 2019, 5:00 am
ಹೊಸದಿಲ್ಲಿ: ನ್ಯಾಯಾಲಯದ ನಂಟಿನ ವಿಷಯಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಸುಪ್ರೀಂ ಕೋರ್ಟ್‌ ಮತ್ತೊಮ್ಮೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
Vijaya Karnataka Web 2-2-30042-PTI4_30_2019_000081B


''ರಫೇಲ್‌ ವಿವಾದ ಕುರಿತ ಕೋರ್ಟ್‌ ತೀರ್ಪಿನ ವಿಚಾರದಲ್ಲಿ ರಾಹುಲ್‌ ಗಾಂಧಿ ಅವರಿಂದ ಆಗಿರುವ ಪ್ರಮಾದ ಉದ್ದೇಶಪೂರ್ವಕವಲ್ಲ. ತೀರ್ಪಿನ ಸೂಕ್ಷ್ಮತೆ ಅರಿಯದೇ ಆಗಿರುವ ಎಡವಟ್ಟು. ಆದ್ದರಿಂದ ಇದನ್ನು ಮನ್ನಿಸಬೇಕು,'' ಎಂದು ರಾಹುಲ್‌ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ಮನವಿ ಮಾಡಿದರು. ಈ ಕುರಿತು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಆಗಿರುವ ಹೊಸ ಎಡವಟ್ಟನ್ನು ಗಂಭೀರವಾಗಿ ತೆಗೆದುಕೊಂಡ ಸಿಜೆಐ ರಂಜನ್‌ ಗೊಗೊಯ್‌ ನೇತೃತ್ವದ ನ್ಯಾಯಪೀಠ, ಸಿಂಘ್ವಿ ಅವರ ಬೆವರಿಳಿಸಿತು. ಇಷ್ಟೊಂದು ದೊಡ್ಡ ಪ್ರಮಾದ ಆಗಿರುವಾಗ 'ಕ್ಷಮೆಯಾಚಿಸುವ' ಸೌಜನ್ಯ ಇಲ್ಲದಿದ್ದರೆ ಹೇಗೆ ಎಂದು ನ್ಯಾ.ಗೊಗೊಯ್‌ ಪ್ರಶ್ನಿಸಿದರು.

ಆದರೆ ಸಿಂಘ್ವಿ ಅವರು ಅಫಿಡವಿಟ್‌ನಲ್ಲಿ 'ವಿಷಾದಿಸುತ್ತೇವೆ' ಎಂಬ ಪದವನ್ನು ಉಲ್ಲೇಖಿಸಿರುವ ಬಗ್ಗೆ ನ್ಯಾಯಾಲಯದ ಗಮನ ಸೆಳೆದರು. ಇದರಿಂದ ಇನ್ನಷ್ಟು ಕೆಂಡಾಮಂಡಲವಾದ ಸಿಜೆಐ, ''ವಿಷಾದ ವ್ಯಕ್ತಪಡಿಸುವ ವಿಧಾನ ಇದೇನಾ? 'ವಿಷಾದ' ಎನ್ನುವ ಪದದ ಅರ್ಥ ಏನು? 22 ಪುಟಗಳ ಸುದೀರ್ಘ ಪ್ರಮಾಣಪತ್ರದಲ್ಲಿ ಎಲ್ಲಿ ವಿಷಾದ ವ್ಯಕ್ತಪಡಿಸಿದ್ದೀರಿ ತೋರಿಸಿ. ಅವರು (ರಾಹುಲ್‌) ಸುಶಿಕ್ಷಿತ ಎಂದು ಹೇಳಿಕೊಳ್ಳುತ್ತಾರೆ. ಆದರೆ, ತೀರ್ಪನ್ನು ಸರಿಯಾಗಿ ಅರ್ಥೈಸಲು ಬರುವುದಿಲ್ಲ,'' ಎಂದು ತರಾಟೆಗೆ ತೆಗೆದುಕೊಂಡರು.

ಪುನಃ ಸಮರ್ಥನೆಗೆ ಇಳಿದ ಸಿಂಘ್ವಿ, ''ವಿಷಾದ ಎನ್ನುವ ಪದದ ಇನ್ನೊಂದು ಅರ್ಥ 'ಕ್ಷಮೆಯಾಚನೆ' ಎನ್ನುವುದೇ ಆಗಿದೆ. ಡಿಕ್ಷನರಿ ಆಧರಿಸಿಯೇ ನಾನು ಇದನ್ನು ಹೇಳುತ್ತಿದ್ದೇನೆ,'' ಎಂದರು. ಇದಾಗಿ ನ್ಯಾಯಮೂರ್ತಿಗಳ ಸಿಟ್ಟು ಶಮನಕ್ಕೆ ಮುಂದಾದ ಸಿಂಘ್ವಿ , ಮುಂದಿನ ಸೋಮವಾರದ ಒಳಗೆ ರಾಹುಲ್‌ ಗಾಂಧಿ ತಮ್ಮಿಂದಾದ ತಪ್ಪಿಗೆ ಪ್ರಾಮಾಣಿಕ ಕ್ಷಮೆಯಾಚನೆ ಮಾಡಿದ ಹೊಸ ಅಫಿಡವಿಟ್‌ ಸಲ್ಲಿಸಲಿದ್ದಾರೆ. ಅದಕ್ಕೆ ಅವಕಾಶ ನೀಡಬೇಕು ಎಂದು ಕೋರಿದರು.

ಇದಕ್ಕೂ ನ್ಯಾಯಮೂರ್ತಿಗಳಿಂದ ಬೇಸರ ವ್ಯಕ್ತಪಡಿಸಿದರು. ''ಇನ್ನು ಎಷ್ಟು ಕಾಲ ಈ ವಿಷಯ ವಿಳಂಬಿಸಲು ನೀವು ಬಯಸಿದ್ದೀರಿ? ಆರಂಭದಲ್ಲಿ ನಿಮ್ಮ ಅಭಿಪ್ರಾಯ ಕೇಳಿ ಪ್ರಕರಣ ಕೊನೆಗೊಳಿಸಲು ನಾವು ಇಚ್ಛಿಸಿದ್ದೆವು. ಆದರೆ ನೀವು ಸರಣಿ ಅಫಿಡವಿಟ್‌ಗಳ ಮೂಲಕ ವಿಳಂಬಿಸುತ್ತಿದ್ದೀರಿ. ವಿಚಾರಣೆಗೊಂದು ಅರ್ಥ ಬೇಡವೆ?,'' ಎಂದು ಕಿಡಿಕಾರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ