ಆ್ಯಪ್ನಗರ

ಪಕ್ಷಾಂತರದಲ್ಲಿ ನಿಸ್ಸೀಮ ವಿಖೆ ಪಾಟೀಲ್‌ ಕುಟುಂಬ

ಸಹಕಾರ ಚಳವಳಿಯಲ್ಲಿ ಬೆಳೆದು ಬಂದ ಅಹಮದ್‌ನಗರ ಮೂಲದ ವಿಖೆ ಪಾಟೀಲ್‌ ಕುಟುಂಬ ಮಹಾರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿ ಎನಿಸಿದೆ. ವಿಖೆ ಪಾಟೀಲ್‌ ಕುಟುಂಬ ರಾಜಕಾರಣದ ಜತೆಗೆ ಏಷ್ಯಾದಲ್ಲಿ ಮೊಟ್ಟಮೊದಲ ಬಾರಿಗೆ ಅಹಮದ್‌ನಗರದಲ್ಲಿ ಕಬ್ಬು ಅರೆಯುವ ಸಹಕಾರ ಕಾರ್ಖಾನೆ ಸ್ಥಾಪಿಸಿದ ಹೆಗ್ಗಳಿಕೆ ಹೊಂದಿದೆ.

Vijaya Karnataka 21 Mar 2019, 5:00 am
ಮುಂಬಯಿ: ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ದಿನದಿಂದಲೂ ಅಭ್ಯರ್ಥಿಗಳ ಪಕ್ಷ 'ಜಿಗಿದಾಟ' ಜೋರಾಗಿಯೇ ಇದೆ. ಮಹಾರಾಷ್ಟ್ರದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿದ್ದ ಕಾಂಗ್ರೆಸ್‌ನ ರಾಧಾಕೃಷ್ಣ ವಿಖೆ ಪಾಟೀಲ್‌ ಅವರ ಪುತ್ರ ಸುಜಯ್‌ ವಿಖೆ ಪಾಟೀಲ್‌ ಇತ್ತೀಚೆಗಷ್ಟೇ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದರು. ಇದರ ಬೆನ್ನಲ್ಲೇ ರಾಧಾಕೃಷ್ಣ ಸಹ ನೈತಿಕ ಹೊಣೆ ಹೊತ್ತು ಮಹಾರಾಷ್ಟ್ರ ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರೂ ಬಿಜೆಪಿ ಸೇರಿದರೆ ಅಚ್ಚರಿ ಇಲ್ಲ. ಆದರೆ ರಾಜಕೀಯ ಪಂಡಿತರಿಗೆ ಇದ್ಯಾವುದೂ ಆಶ್ಚರ್ಯ ಮೂಡಿಸಿಲ್ಲ. ಏಕೆಂದರೆ ಆಗಾಗ ಪಕ್ಷ ನಿಷ್ಠೆ ಬದಲಿಸುವ 'ಕುಖ್ಯಾತಿ'ಯ ಇತಿಹಾಸ ವಿಖೆ ಪಾಟೀಲ್‌ ಕುಟುಂಬ ಹೊಂದಿದೆ.
Vijaya Karnataka Web sujay


ಸಹಕಾರ ಚಳವಳಿಯಲ್ಲಿ ಬೆಳೆದು ಬಂದ ಅಹಮದ್‌ನಗರ ಮೂಲದ ವಿಖೆ ಪಾಟೀಲ್‌ ಕುಟುಂಬ ಮಹಾರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿ ಎನಿಸಿದೆ. ವಿಖೆ ಪಾಟೀಲ್‌ ಕುಟುಂಬ ರಾಜಕಾರಣದ ಜತೆಗೆ ಏಷ್ಯಾದಲ್ಲಿ ಮೊಟ್ಟಮೊದಲ ಬಾರಿಗೆ ಅಹಮದ್‌ನಗರದಲ್ಲಿ ಕಬ್ಬು ಅರೆಯುವ ಸಹಕಾರ ಕಾರ್ಖಾನೆ ಸ್ಥಾಪಿಸಿದ ಹೆಗ್ಗಳಿಕೆ ಹೊಂದಿದೆ.

ರಾಧಾಕೃಷ್ಣ ಅವರ ತಂದೆ ಬಾಳಾ ಸಾಹೇಬ್‌ ವಿಖೆ ಪಾಟೀಲ್‌ ಈ ಮೂಲತಃ ಕಾಂಗ್ರೆಸ್ಸಿಗರು. ಅಹಮದ್‌ನಗರ ಉತ್ತರ ಲೋಕಸಭೆ ಕ್ಷೇತ್ರದಿಂದ ಏಳು ಬಾರಿ ಸ್ಪರ್ಧಿಸಿ ಗೆದ್ದಿದ್ದರು. ಇವರು ಕಾಂಗ್ರೆಸ್‌ ಸೇರುವ ಮುನ್ನ ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ ಜತೆ ಗುರುತಿಸಿಕೊಂಡಿದ್ದರು. 1975 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಸರಕಾರ ತುರ್ತು ಪರಿಸ್ಥಿತಿ ಹೇರಿದ ನಂತರದ ದಿನಗಳಲ್ಲಿ ಅನೇಕ ಕಾಂಗ್ರೆಸಿಗರಂತೆ ಬಾಳಾ ಸಾಹೇಬ್‌ ವಿಖೆ ಪಾಟೀಲ್‌ ಸಹ ಪಕ್ಷ ತೊರೆದು ಇಂದಿರಾ ಕ್ರಮವನ್ನು ಪ್ರತಿಭಟಿಸಿದರು. 1978ರಲ್ಲಿ ಮಹಾರಾಷ್ಟ್ರ ಸಮಾಜವಾದಿ ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾದರು. ತುರ್ತು ಪರಿಸ್ಥಿತಿ ಸೋಲಿನ ನಂತರ ಪುನಃ ಇಂದಿರಾ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಬಾಳಾ ಸಾಹೇಬ್‌ ವಿಖೆ ಪಾಟೀಲ್‌ ಪುನಃ ಕಾಂಗ್ರೆಸ್‌ ಸೇರಿದರು. 1989ರಲ್ಲಿ ವಿಪಿ ಸಿಂಗ್‌ ಅವರ 'ಕಾಂಗ್ರೆಸ್‌ ಫೋರಂ ಫಾರ್‌ ಆ್ಯಕ್ಷನ್‌' ರಾಜಕೀಯ ತಂಡದ ಮೂಲಕ ರಾಜೀವ್‌ ಗಾಂಧಿ ಸರಕಾರದ ವಿರುದ್ಧ ಬಂಡಾಯ ಸಾರಿದ್ದರು. 1990ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸರಕಾರ ಬಂದಾಗ ಇದೇ ಬಾಳಾ ಸಾಹೇಬ್‌ ವಿಖೆ ಪಾಟೀಲ್‌ ಶಿವಸೇನೆಗೆ ಜಿಗಿದು ವಾಜಪೇಯಿ ಸಂಪುಟದಲ್ಲಿ ಬೃಹತ್‌ ಕೈಗಾರಿಕಾ ಸಚಿವರಾಗಿದ್ದರು.

ತಂದೆಯಂತೆ ಮಗ: ಅಧಿಕಾರದ ಹಪಾಹಪಿ ತಂದೆಯಂತೆ ಮಗ ರಾಧಾಕೃಷ್ಣ ವಿಖೆ ಪಾಟೀಲ್‌ ಅವರಿಗೂ ಇದೆ. ಇವರೂ ಸಹ ಕಾಂಗ್ರೆಸ್‌ನಿಂದ ಶಿವಸೇನೆಗೆ ಜಿಗಿದು ಮನೋಹರ ಜೋಶಿ ನೇತೃತ್ವದ ಸರಕಾರದಲ್ಲಿ ಸಚಿವರಾಗಿದ್ದರು. 1999ರಲ್ಲಿ ತಂದೆ-ಮಗ ಇಬ್ಬರೂ ಪುನಃ ಕಾಂಗ್ರೆಸ್‌ ಸೇರಿ ಅಧಿಕಾರ ಅನುಭವಿಸಿದರು. ಸದ್ಯ ರಾಧಾಕೃಷ್ಣ ವಿಖೆ ಪಾಟೀಲ್‌ ಕಾಂಗ್ರೆಸ್‌ನಲ್ಲಿಯೇ ಇದ್ದಾರಾದರೂ ಅವರೂ ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅಹಮದ್‌ನಗರ ಲೋಕಸಭೆ ಕ್ಷೇತ್ರಕ್ಕೆ ಎನ್‌ಸಿಪಿ ಪಟ್ಟು ಹಿಡಿದು ತನ್ನದಾಗಿಸಿಕೊಂಡ ನಂತರ ಅವರ ಪುತ್ರ ಸುಜಯ್‌ ವಿಖೆ ಪಾಟೀಲ್‌ ಅವರು ಇದೇ ಕ್ಷೇತ್ರದಿಂದ ಟಿಕೆಟ್‌ ಬಯಸಿ ಮಾರ್ಚ್‌ 12ರಂದು ಬಿಜೆಪಿ ಸೇರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌