ಬಾಹುಬಲಿ ಸಿನಿಮಾ ಖ್ಯಾತಿಯ ಪ್ರಭಾಸ್ ಅವರ ಮುಂದಿನ ಸಿನಿಮಾಗೆ ನಟಿ ಪೂಜಾ ಹೆಗ್ಡೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮೊಹೆಂಜೋದಾರೊ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟ ಪೂಜಾ ಹೆಗ್ಡೆ, ದುವ್ವಾಡ ಜಗನ್ನಾಥಮ್ ಸಿನಿಮಾದಲ್ಲಿ ನಟಿಸಿ ದಕ್ಷಿಣ ಭಾರತದ ಚಿತ್ರರಂಗಕ್ಕೂ ಕಾಲಿಟ್ಟಿದ್ದರು. ಈಗ ಅವರು ರಾಧಾಕೃಷ್ಣ ಕುಮಾರ್ ನಿರ್ದೇಶನದ ಪ್ರೇಮ ಕಥೆಯುಳ್ಳ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಪ್ರಭಾಸ್ ನಾಯಕ.
ಈ ಸಿನಿಮಾವನ್ನು ಯುವಿ ಕ್ರಿಯೇಶನ್ಸ್ ಬ್ಯಾನರ್ ನಿರ್ಮಾಣ ಮಾಡುತ್ತಿದ್ದು, ಇದೇ ಜುಲೈನಿಂದ ಚಿತ್ರೀಕರಣ ಆರಂಭವಾಗಲಿದೆ. ಇದು ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಪೂಜಾ ಹೆಗ್ಡೆ ತೆಲುಗಿನ ಸ್ಟಾರ್ ನಟರಾದ ಮಹೇಶ್ ಬಾಬು, ಎನ್ಟಿಆರ್ ಜತೆಯೂ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಒಟ್ಟಿನಲ್ಲಿ ದಕ್ಷಿಣ ಭಾರತದ ಸ್ಟಾರ್ ಸಿನಿಮಾಗಳು ಪೂಜಾ ಹೆಗ್ಡೆಯವರನ್ನು ಹುಡುಕಿಕೊಂಡು ಹೋಗುತ್ತಿವೆ ಎಂಬಂತಾಗಿದೆ.