ಆ್ಯಪ್ನಗರ

ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭ: ಸಿನಿಮಾ ತಾರೆಯರ ರಂಗು!

ರಾಷ್ಟ್ರಪತಿ ಭವನದ ಅಂಗಳದಲ್ಲಿ 8000ಕ್ಕೂ ಹೆಚ್ಚು ಅತಿಥಿಗಳ ಸಮಕ್ಷಮದಲ್ಲಿ ನಡೆದ ಅದ್ಧೂರಿ ಸಮಾರಂಭ ವಿಶ್ವದ ಗಮನ ಸೆಳೆಯಿತು. 'ಬಿಮ್‌ಸ್ಟೆಕ್‌' ದೇಶಗಳ ಮುಖ್ಯಸ್ಥರು, 25ಕ್ಕೂ ಹೆಚ್ಚು ರಾಜ್ಯಗಳ ಮುಖ್ಯಮಂತ್ರಿಗಳು, ಪ್ರತಿಪಕ್ಷಗಳ ಮುಖಂಡರು, ಮಾಜಿ ಪ್ರಧಾನಿಗಳು, ಮಾಜಿ ಸಿಎಂಗಳು, ವಿವಿಧ ದೇಶಗಳ ರಾಯಭಾರಿಗಳು, ಉದ್ಯಮಿಗಳು ಹಾಗೂ ಸಿನಿ ಕ್ಷೇತ್ರದ ಪ್ರಮುಖ ಉಪಸ್ಥಿತಿಯೊಂದಿಗೆ ಕಾರ್ಯಕ್ರಮ ವರ್ಣರಂಜಿತವಾಗಿತ್ತು.

Vijaya Karnataka Web 31 May 2019, 10:32 am
'ಫಿರ್‌ ಏಕ್‌ ಬಾರ್‌ ಮೋದಿ ಸರ್ಕಾರ್‌' ಎಂದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೊಳಗಿಸಿದ ಘೋಷವಾಕ್ಯ ಗುರುವಾರ ರಾತ್ರಿ ಅಧಿಕೃತವಾಗಿ ಸಾಕಾರಗೊಂಡಿತು. ಭಾರಿ ನಿರೀಕ್ಷೆಗಳು, ಮಹತ್ವಾಕಾಂಕ್ಷೆಯ ಗುರಿಗಳು, ಹೊಸ ಸವಾಲುಗಳ ನಡುವೆ ನರೇಂದ್ರ ಮೋದಿ (68) ಅವರು ಸತತ ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಅಧಿಕೃತವಾಗಿ 'ಮೋದಿ ಸರ್ಕಾರ್‌ 2' ಆಡಳಿತಕ್ಕೆ ಚಾಲನೆ ದೊರೆಯಿತು.
Vijaya Karnataka Web modi-rajini3105


ರಾಷ್ಟ್ರಪತಿ ಭವನದ ಅಂಗಳದಲ್ಲಿ 8000ಕ್ಕೂ ಹೆಚ್ಚು ಅತಿಥಿಗಳ ಸಮಕ್ಷಮದಲ್ಲಿ ನಡೆದ ಅದ್ಧೂರಿ ಸಮಾರಂಭ ವಿಶ್ವದ ಗಮನ ಸೆಳೆಯಿತು. 'ಬಿಮ್‌ಸ್ಟೆಕ್‌' ದೇಶಗಳ ಮುಖ್ಯಸ್ಥರು, 25ಕ್ಕೂ ಹೆಚ್ಚು ರಾಜ್ಯಗಳ ಮುಖ್ಯಮಂತ್ರಿಗಳು, ಪ್ರತಿಪಕ್ಷಗಳ ಮುಖಂಡರು, ಮಾಜಿ ಪ್ರಧಾನಿಗಳು, ಮಾಜಿ ಸಿಎಂಗಳು, ವಿವಿಧ ದೇಶಗಳ ರಾಯಭಾರಿಗಳು, ಉದ್ಯಮಿಗಳು ಹಾಗೂ ಸಿನಿ ಕ್ಷೇತ್ರದ ಪ್ರಮುಖ ಉಪಸ್ಥಿತಿಯೊಂದಿಗೆ ಕಾರ್ಯಕ್ರಮ ವರ್ಣರಂಜಿತವಾಗಿತ್ತು.

ಸಿನಿಮಾ ಕ್ಷೇತ್ರದ ತಾರೆಗಳಲ್ಲಿ ಭಾರತದ ಸೂಪರ್ ಸ್ಟಾರ್ ರಜನಿಕಾಂತ್, ಖ್ಯಾತ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಹಾಗೂ ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಅಲ್ಲಿ ಹಾಜರಿದ್ದು ಸಂಪೂರ್ಣ ಕಾರ್ಯಕ್ರಮ ವೀಕ್ಷಿಸಿದ್ದಾರೆ. ನಟ ರಜನಿಕಾಂತ್ ಅವರು ಮೋದಿ ಗೆಲುವು ಪಡೆದ ತಕ್ಷಣ ಟ್ವೀಟ್ ಮಾಡಿ ಶುಭ ಹಾರೈಸಿದ್ದರು. ಕಂಗನಾ ಹಾಗೂ ಕರಣ್ ಜೋಹರ್ ಸಹ ಮೋದಿಗೆ ಸೋಷಿಯಲ್ ಮೀಡಿಯಾ ಮೂಲಕ ಮತ್ತೊಮ್ಮೆ ಗೆದ್ದು ಪ್ರಧಾನಿಯಾದ ಮೋದಿಗೆ ಅಭಿನಂದನೆ ಸಲ್ಲಿಸಿದ್ದರು.

ಮೋದಿ ಅವರೊಂದಿಗೆ 24 ಸಂಪುಟ ದರ್ಜೆ ಸಚಿವರು, 9 ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ) ಹಾಗೂ 24 ರಾಜ್ಯ ಸಚಿವರು ಸೇರಿದಂತೆ 58 ಸಚಿವರ ಸಂಪುಟ ಅಸ್ತಿತ್ವಕ್ಕೆ ಬಂದಿತು. ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಅಧಿಕಾರ ಮತ್ತು ಗೋಪ್ಯತೆಯ ಪ್ರತಿಜ್ಞಾವಿಧಿ ಬೋಧಿಸಿದರು. 2014ರ ಮೇ 26ರಂದು ಮೋದಿ ಮೊದಲ ಸಲ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಿದಾಗ ಒಟ್ಟು 46 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು.

ಮೋದಿ ಬಳಿಕ ರಾಜನಾಥ್‌ ಸಿಂಗ್‌ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ನಿತಿನ್‌ ಗಡ್ಕರಿ, ಸದಾನಂದ ಗೌಡ, ನಿರ್ಮಲಾ ಸೀತಾರಾಮನ್‌, ರವಿಶಂಕರ್‌ ಪ್ರಸಾದ್‌ ಸೇರಿದಂತೆ ಮೋದಿ ಅವರ ಹಿಂದಿನ ಸಂಪುಟದ ಹಲವು ಪ್ರಮುಖ ಸಚಿವರು ಮತ್ತೊಮ್ಮೆ ಸಂಪುಟ ದರ್ಜೆ ಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡರು. ಡಿ.ವಿ.ಸದಾನಂದ ಗೌಡ ಸೇರಿದಂತೆ ಸೇರಿದಂತೆ ಕರ್ನಾಟಕದ ಎಲ್ಲಾ ನಾಲ್ವರು ಸಚಿವರೂ ಇಂಗ್ಲೀಷ್‌ನಲ್ಲೇ ಪ್ರಮಾಣ ವಚನ ಸ್ವೀಕರಿಸಿದರು. ಈ ಬಾರಿ ಮೋದಿ ಸಂಪುಟದಲ್ಲಿ ಆರು ಮಂದಿ ಮಹಿಳೆಯರು ಸ್ಥಾನ ಪಡೆದಿದ್ದಾರೆ.

ಸಮಾರಂಭದ ಬಳಿಕ ಮೋದಿ ಸಂಪುಟದ ಎಲ್ಲ ಸಚಿವರೂ ವೇದಿಕೆ ಮೇಲೇರಿ, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರೊಂದಿಗೆ ಗ್ರೂಪ್‌ ಫೋಟೊಗೆ ಪೋಸ್‌ ನೀಡಿದರು. ಬಳಿಕ 'ಬಿಮ್‌ಸ್ಟೆಕ್‌' ಮುಖಂಡರು, ಕಿರ್ಗಿಸ್ತಾನ್‌ ಅಧ್ಯಕ್ಷ ಸೂರೊನ್‌ಬೇ ಹಾಗೂ ಇತರೆ ವಿದೇಶಿ ಗಣ್ಯರು ಪ್ರಧಾನಿ ಮೋದಿ ಅವರಿಗೆ ಒಬ್ಬೊಬ್ಬರಾಗಿಯೇ ಕೈಕುಲುಕಿ ಅಭಿನಂದನೆ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌