Please enable javascript.ನಗುತಾ ನಗಿಸುತಾ ನಾಯಕರಾದವರು - ನಗುತಾ ನಗಿಸುತಾ ನಾಯಕರಾದವರು - Vijay Karnataka

ನಗುತಾ ನಗಿಸುತಾ ನಾಯಕರಾದವರು

Vijaya Karnataka Web 7 Sep 2013, 4:33 am
Subscribe

ಮೊದಲ ಸಿನಿಮಾದಲ್ಲೇ ಹೀರೊ ಆಗಬೇಕೆಂದು ಬಂದವರು ಇವರಲ್ಲ. ಆರಂಭದಲ್ಲಿ ಹಾಸ್ಯ ಪಾತ್ರಗಳನ್ನು ಮಾಡುತ್ತ, ನಗಿಸುತ್ತ, ಪ್ರೇಕ್ಷಕರ ಮನ ಗೆಲ್ಲುತ್ತ... ಕ್ರಮೇಣ ನಾಯಕನ ಪಾತ್ರಗಳಲ್ಲಿ ಮಿಂಚಿದವರು ಅನೇಕರಿದ್ದಾರೆ.

ನಗುತಾ ನಗಿಸುತಾ ನಾಯಕರಾದವರು
* ಮಹಾಂತೇಶ್ ಬಹಾದುಲೆ
ಗಾಂಧಿ ನಗರದಲ್ಲಿ ಸುಮಾರು ವರ್ಷ ಸೈಕಲ್ ತುಳಿದಿದೀನಿ ಸಾರ್... ಎನ್ನುತ್ತ ಅನೇಕರು ರಾಗ ಎಳೆದು ತಮ್ಮ ಸಂಕಷ್ಟ, ಅದರ ನಂತರದ ಸಂಭ್ರಮ ಹೇಳಿಕೊಳ್ಳುವುದನ್ನು ಕೇಳಿದ್ದೇವೆ. ಕೆಲವು ಸೈಕಲ್ ತುಳಿಯುತ್ತ, ತುಳಿಯುತ್ತ ವಿಮಾನ ಹತ್ತಿದವರು ಇದ್ದಾರೆ. ಇನ್ನು ಹಲವರು ಇದ್ದ ಸೈಕಲನ್ನೇ ಮಾರಿಕೊಂಡವರೂ ಸಿಗುತ್ತಾರೆ.

ಇಂಥವರ ನಡುವೆ ತಮ್ಮದೇ ಆದ ಹಾದಿಯನ್ನು ಹುಡುಕಿಕೊಂಡವರೂ ಇದ್ದಾರೆ. ಮೊದಲ ಸಿನಿಮಾದಲ್ಲೇ ಹೀರೊ ಆಗಬೇಕೆಂದು ಬಂದವರು ಇವರಲ್ಲ. ಆರಂಭದಲ್ಲಿ ಹಾಸ್ಯ ಪಾತ್ರಗಳನ್ನು ಮಾಡುತ್ತ, ನಗಿಸುತ್ತ, ಪ್ರೇಕ್ಷಕರ ಮನ ಗೆಲ್ಲುತ್ತ... ಕ್ರಮೇಣ ನಾಯಕನ ಪಾತ್ರಗಳಲ್ಲಿ ಮಿಂಚಿದವರು ಅನೇಕರಿದ್ದಾರೆ.

ಗಣೇಶ್:
ನಾನು ಕಾಮಿಡಿ ಟೈಮ್ ಗಣೇಶ್ ಅನ್ನುತ್ತಲೇ ಟಿವಿ ಮುಂದೆ ಕುಳಿತ ನೋಡುಗರಿಗೆ ಕಚಗುಳಿ ಇಟ್ಟವರು ಈ ಗಣೇಶ್. ಅದು ಹಿಟ್ ಆಗುತ್ತಲೇ ಧಾರಾವಾಹಿಗಳಿಗೆ ಶಿಫ್ಟ್ ಆದರು. ನಂತರ ಮೆಲ್ಲನೇ ಬೆಳ್ಳಿ ತೆರೆಯತ್ತ ಪಯಣ ಸಾಗಿತು.

ಇಲ್ಲಿಗೆ ಬಂದಾಗ ಇವರು ಮೊದಲು ಕಾಣಿಸಿಕೊಂಡಿದ್ದು ಹಾಸ್ಯ ಪಾತ್ರಗಳಲ್ಲಿಯೆ. ಅಹಂ ಪ್ರೇಮಾಸ್ಮಿ , ಬಾ ಬಾರೋ ರಸಿಕ, ಓ ಪ್ರಿಯತಮ, ಅಮೃತಧಾರ...ಹೀಗೆ ಸಾಗುತ್ತದೆ ಕಾಮಿಡಿ ಟ್ರ್ಯಾಕ್. ನಂತರ ಚೆಲ್ಲಾಟದಲ್ಲಿ ನಾಯಕರಾಗಿ ಕಾಣಿಸಿಕೊಂಡರು. ಆಮೇಲೆ ಮುಂಗಾರು ಮಳೆ, ಚೆಲುವಿನ ಚಿತ್ತಾರ, ಗಾಳಿಪಟ ಸೇರಿದಂತೆ ಅನೇಕ ಚಿತ್ರಗಳಲ್ಲಿ ಹೀರೊ ಆಗಿದ್ದು ಇತ್ತೀಚಿನ ಸಕ್ಕರೆಯ ತನಕ ಅದು ಮುಂದುವರಿದಿದೆ.

ಶರಣ್:
ಕಲಾವಿದರ ಕುಟುಂಬದಲ್ಲಿಯೇ ಬೆಳೆದ ಶರಣ್‌ಗೆ ಅಭಿನಯ ಲೀಲಾಜಾಲ. ಹೀಗಾಗಿ ಎಂಥ ಪಾತ್ರಗಳಿಗೂ ಜೀವ ತುಂಬುವ ತಾಕತ್ತು ಇವರಿಗಿದೆ. ತಮಾಷೆ ಮಾಡುವುದೂ ಇವರ ವ್ಯಕ್ತಿತ್ವದ ಅಂಶವೆ. ಸಹಜವಾಗಿ ಸಿನಿಮಾಕ್ಕೆ ಬಂದಾಗ ಸಿಕ್ಕಿದ್ದು ಕಾಮಿಡಿ ಕ್ಯಾರೆಕ್ಟರ್‌ಗಳೆ. ಆಗ ಫ್ರೆಂಡ್ಸ್, ಮೊನಾಲಿಸಾ, ಹನಿಮೂನ್ ಎಕ್ಸ್‌ಪ್ರೆಸ್, ಸಿಕ್ಸರ್, ಗುಣವಂತ, ಜೋಶ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದರು. ಇನ್ನು ಕೆಲವಲ್ಲಿ ಪ್ರಮುಖ ಪಾತ್ರದ ಛಾಯೆಯಲ್ಲಿಯೇ ಕಾಣಿಸಿಕೊಂಡರು.

ಆಮೇಲೆ ಸುಂದರಿ ಗಂಡ ಸದಾನಂದ, ರ‌್ಯಾಂಬೊ ಹಾಗೂ ವಿಕ್ಟರಿಯಲ್ಲಿ ಪೂರ್ಣ ಪ್ರಮಾಣದ ನಾಯಕರಾದರು. ವಿಶೇಷ ಎಂದರೆ ರ‌್ಯಾಂಬೊ ಮೂಲಕ ಇವರು ನಿರ್ಮಾಪಕರೂ ಆಗಿದ್ದಾರೆ. ಇನ್ನು ಮಿಸ್. ಜಯಲಲಿತಾ ಚಿತ್ರೀಕರಣ ಮುಂದುವರಿದಿದೆ.

ಜಗ್ಗೇಶ್:

ಗಾಂಧಿನಗರದಲ್ಲಿ ಜಗ್ಗೇಶ್ ಕೂಡ ಒಂದು ಕಾಲದಲ್ಲಿ ಅವಕಾಶಗಳಿಗಾಗಿ ಎದುರು ನೋಡಿದವರೆ. ಆ ಘಟನೆಗಳನ್ನು ಇವರು ಈಗಲೂ ತಮಾಷೆಯಾಗಿಯೇ ನೆನಪಿಸಿಕೊಳ್ಳುತ್ತಾರೆ. ರಾಜಕೀಯದಲ್ಲಿಯೂ ಗುರುತಿಸಿಕೊಂಡಿರುವ ಇವರು ಮೊದಲು ಬಣ್ಣದ ಪಯಣ ಶುರುಮಾಡಿದ್ದು ರೌಡಿ ಎಂಎಲ್‌ಎ ಚಿತ್ರದಿಂದ. ರಾಣಿ ಮಹಾರಾಣಿಯಲ್ಲಿನ ಕ್ಯಾರೆಕ್ಟರ್ ಗುರುತಿಸಿಕೊಳ್ಳುವಂತೆ ಮಾಡಿತು. ನಂತರ ಪೊಲೀಸ್ ಬೆಲ್ಟ್‌ದೊಂದಿಗೆ ಹಾಸ್ಯಯಾನ ಮುಂದುವರಿಯಿತು.

ನಾಯಕನಾಗಿ ಬಡ್ತಿ ಪಡೆದಿದ್ದು ಭಂಡ ನನ್ನ ಗಂಡ ಸಿನಿಮಾದೊಂದಿಗೆ. ತರ‌್ಲೆ ನನ್ನ ಮಗ, ಎದ್ದೇಳು ಮಂಜುನಾಥ... ಹೀಗೆ ಶುರುವಾಗಿದ್ದು ಅಗ್ರಜನತನಕ ಮುಂದುವರಿದಿದೆ.

ಕೋಮಲ್:
ಅಣ್ಣ ಜಗ್ಗೇಶ್ ಅವರ ಛಾಯೆಯಡಿಯೇ ಮೂಡಿ ಬಂದ ಕೋಮಲ್ ಹಾಸ್ಯ ಪಾತ್ರಗಳಿಗೆ ಜೀವ ತುಂಬಿದ ಮತ್ತೊಬ್ಬ ನಟ. ವಂಶಿ, ಅರಸು, ದತ್ತ, ಗಜ, ಗೌರಮ್ಮದಂಥ ಸಿನಿಮಾಗಳು ಇವರಿಗೆ ತಮ್ಮದೇ ಛಾಪು ಮೂಡಿಸಲು ಸಹಕಾರಿಯಾದವು. ಆಪ್ತರಕ್ಷಕದಲ್ಲೂ ಗಮನಸೆಳೆದರು.

ಎಲ್ಲೊ ಒಂದು ಕಡೆ ತಾವೂ ಹೀರೊ ಆಗಬೇಕೆಂಬ ತುಡಿತವೂ ಇತ್ತು. ಅದುವೇ ಗರಗಸದಲ್ಲಿ ನಾಯಕ ಆಗಲು ಪ್ರೇರಣೆ ನೀಡಿದ್ದು. ನಂತರ ಚಮ್ಕಾಯಿಸಿ ಚಿಂದಿ ಉಡಾಯಿಸಿ, ಕಳ್ಳಮಂಜ, ಮರ್ಯಾದೆ ರಾಮಣ್ಣ, ಗೋವಿಂದಾಯ ನಮಃ, ಪ್ಯಾರ‌್ಗೆ ಆಗ್ಬಿಟೈತೆದಲ್ಲಿ ಪೂರ್ಣ ಪ್ರಮಾಣದ ಹೀರೊ ಆಗಿ ಮಿಂಚಿದ್ದಾರೆ.

ರಂಗಾಯಣ ರಘು:

ಹೆಸರಿನಲ್ಲಿಯೇ ರಂಗಾಯಣ ಅಂತ ಇರುವುದರಿಂದ ರಂಗಭೂಮಿಯ ಹಿನ್ನೆಲೆ ಇವರದ್ದು ಅಂತ ಹೇಳುವ ಅನಿವಾರ್ಯತೆಯೇನಿಲ್ಲ. ನಾಟಕಗಳಲ್ಲಿ ನಟಿಸುತ್ತ ನಂತರ ಧಾರಾವಾಹಿಗಳೆಡೆ ಸರಿದರು. ಅಲ್ಲಿಯೂ ಹೆಸರು ಮಾಡಿದ್ದು ಬೆಳ್ಳಿತೆರೆಗೆ ಬರುವಂತಾಯಿತು. ಮೇಘ ಬಂತು ಮೇಘ, ಆರ‌್ಯಭಟದಲ್ಲಿ ನಟಿಸಿದರು ಮಣಿ ಇವರಿಗೆ ಹೆಸರು ತಂದುಕೊಟ್ಟಿತು. ಗಾಳಿಪಟ, ಜಂಗ್ಲಿ, ಮಿಲನ, ಕಡ್ಡಿಪುಡಿಯಂಥ ಸಿನಿಮಾಗಳು ಇವರ ಕಲೆಯ ನೈಪುಣ್ಯವನ್ನು ಬಹಿರಂಗಪಡಿಸಿದವು.

ಇದೀಗ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಐಸ್ ಪೈಸ್ ಮತ್ತು ಚೆಡ್ಡಿ ದೋಸ್ತ್‌ನಲ್ಲಿ. ಇವೂ ಕಾಮಿಡಿ ಟ್ರ್ಯಾಕಿನಲ್ಲೇ ಇದ್ದರೂ ಇಡೀ ಚಿತ್ರದ ಮುಖ್ಯ ಪಾತ್ರಗಳೆ.

ಸಾಧು ಕೋಕಿಲ:
ನೋಡಿದ ತಕ್ಷಣವೇ ಇವರು ಕಾಮಿಡಿಯನ್ ಅಂತ ಹೇಳುವಷ್ಟು ಹಾಸ್ಯವು ಇವರ ವ್ಯಕ್ತಿತ್ವದಲ್ಲಿ ಹಾಸುಹೊಕ್ಕಾಗಿದೆ. ಇನ್ನೂ ಒಂದು ವಿಶೇಷ ಎಂದರೆ ಇವರು ಸಂಗೀತ ನಿರ್ದೇಶಕರೂ ಹೌದು. ತುಂಬ ಮೆಲೊಡಿಯಸ್ ಆಗಿರುವ ಟ್ಯೂನ್‌ಗಳನ್ನು ಕೊಟ್ಟಿದ್ದಾರೆ.

ಸಾರಿ, ಶ್, ಬೊಂಬಾಟ್ ಹಲ್ವ, ಖಿಲಾಡಿ, ಮೆಲ್ಲುಸಿರೆ ಸವಿಗಾನದಲ್ಲಿ ಹಾಸ್ಯದ ಹೊನಲು ಹರಿಸಿದ್ದಾರೆ. ತೀರ ಇತ್ತೀಚೆಗೆ ನೈಂಟಿ ಸಿನಿಮಾದ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಚೆಡ್ಡಿ ದೋಸ್ತ್‌ನಲ್ಲಿಯೂ ಪ್ರಮುಖ ಕ್ಯಾರೆಕ್ಟರ್‌ನಲ್ಲಿ ಮಿಂಚಿದ್ದಾರೆ. ಅಂದಹಾಗೆ ಇವರು ಚಿತ್ರನಿರ್ದೇಶನದಲ್ಲೂ ಪಳಗಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ