ಆ್ಯಪ್ನಗರ

ತೆರೆ ಮೇಲೆ ಡಾಕ್ಟರ್‌

ಕಾದಂಬರಿ ಆಧಾರಿತ ಹಳೆಯ ಕನ್ನಡ ಸಿನಿಮಾಗಳಲ್ಲಿನ ವೈದ್ಯರ ಪಾತ್ರಗಳು ಈ ಹೊತ್ತಿಗೂ ನೆನಪಾಗುತ್ತವೆ. ಬದಲಾದ ದಿನಗಳಲ್ಲಿ ಅಂತಹ ಕತೆ, ಪಾತ್ರಗಳಿಗೆ ಜಾಗವಿಲ್ಲದಂತಾಗಿದೆ. ಡಾಕ್ಟರ್‌ ಥೀಮ್‌ನ ಜನಪ್ರಿಯ ಸಿನಿಮಾ, ಪಾತ್ರಗಳ ಬಗ್ಗೆ ಒಂದು ನೋಟ.

Vijaya Karnataka Web 15 Jul 2016, 4:00 am

ಕಾದಂಬರಿ ಆಧಾರಿತ ಹಳೆಯ ಕನ್ನಡ ಸಿನಿಮಾಗಳಲ್ಲಿನ ವೈದ್ಯರ ಪಾತ್ರಗಳು ಈ ಹೊತ್ತಿಗೂ ನೆನಪಾಗುತ್ತವೆ. ಬದಲಾದ ದಿನಗಳಲ್ಲಿ ಅಂತಹ ಕತೆ, ಪಾತ್ರಗಳಿಗೆ ಜಾಗವಿಲ್ಲದಂತಾಗಿದೆ. ಡಾಕ್ಟರ್‌ ಥೀಮ್‌ನ ಜನಪ್ರಿಯ ಸಿನಿಮಾ, ಪಾತ್ರಗಳ ಬಗ್ಗೆ ಒಂದು ನೋಟ.

ಡಾಕ್ಟರ್‌ ಹರೀಶ್‌

'ಬಂಧನ' ಚಿತ್ರದಲ್ಲಿನ ಡಾ.ಹರೀಶ್‌ ಪಾತ್ರ ವಿಷ್ಣುವರ್ಧನ್‌ ವೃತ್ತಿ ಬದುಕಿನ ಮಹತ್ವದ ಪಾತ್ರವಾಯ್ತು. ಉಷಾ ನವರತ್ನರಾಂ ಕೃತಿಯನ್ನು ಆಧರಿಸಿ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ನಿರ್ದೇಶಿಸಿದ್ದ ಚಿತ್ರವಿದು. ತ್ರಿಕೋನ ಪ್ರೇಮಕತೆಯ ವಸ್ತು ಇದ್ದರೂ ಇಲ್ಲಿ ವೈದ್ಯ ವೃತ್ತಿಗೊಂದು ಘತನೆ ಸಂದಿತ್ತು. ಸಹಪಾಠಿ ಡಾ.ನಂದಿನಿ ಪ್ರೀತಿ ಸಿಗದಿದ್ದರೂ, ಆಕೆಯ ಒಳಿತಿಗಾಗಿ ಪ್ರಾರ್ಥಿಸುವ, ಕೊನೆಗೆ ನಂದಿನಿಯ ಕುಡಿಗಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ಡಾ.ಹರೀಶ್‌ ಪಾತ್ರದಲ್ಲಿ ವಿಷ್ಣು ಅಮೋಘವಾಗಿ ನಟಿಸಿದ್ದರು. ವೈದ್ಯಕೀಯ ಕಾಲೇಜಿನ ಕ್ಯಾಂಪಸ್‌ ಲವ್‌, ಹಳ್ಳಿಗಳಲ್ಲಿ ಬೀಡು ಬಿಟ್ಟ ತಪಾಸಣಾ ಶಿಬಿರ, ಕೊನೆಗೆ ಆಪರೇಷನ್‌ ಥಿಯೇಟರ್‌ನಲ್ಲಿ ಕೊನೆಗೊಳ್ಳುವ ಸಿನಿಮಾದಲ್ಲಿ ನಿರ್ದೇಶಕ ಸಿಂಗ್‌ ಬಾಬು 'ಡಾಕ್ಟರ್‌ ಥೀಮ್‌'ಗೆ ಮೆರುಗು ಕೊಟ್ಟಿದ್ದರು.

'ಅರುಣರಾಗ' ಚಿತ್ರದ ವೈದ್ಯ ಪಾತ್ರಗಳಲ್ಲಿ ಅನಂತನಾಗ್‌ ಮತ್ತು ಗೀತಾ ಅವರದ್ದು ಅತ್ಯುತ್ತಮ ಅಭಿನಯ. ವಿವಾಹಕ್ಕೆ ಅಡ್ಡಿಯಾಗುವ ದೊಡ್ಡ ಓದಿನ ಅಹಂ, ಇದನ್ನು ಮೆಟ್ಟಿ ನಿಂತು ಸಾಧನೆಯ ಹಾದಿ ಹಿಡಿಯುವ ನಾಯಕಿ, ಅಂತಿಮವಾಗಿ ತನ್ನ ತಪ್ಪನ್ನರಿತು ಸೋಲಿನಲ್ಲೇ ಗೆಲ್ಲುವ ನಾಯಕ... ಅನಂತನಾಗ್‌ ಮತ್ತು ಗೀತಾ ಪ್ರಬುದ್ಧ ಅಭಿನಯ, ಕೆ.ವಿ.ಜಯರಾಂ ಅವರ ಸಮರ್ಥ ನಿರ್ದೇಶನದೊಂದಿಗೆ ಚಿತ್ರ ದೊಡ್ಡ ಯಶಸ್ಸು ಕಂಡಿತ್ತು. ಗೀತಪ್ರಿಯ ನಿರ್ದೇಶನದ 'ಹೊಂಬಿಸಿಲು' ಚಿತ್ರದಲ್ಲೊಂದು ಸುಮಧುರ 'ಡಾಕ್ಟರ್‌ ಕತೆ'ಯಿತ್ತು. ನಿರ್ದೇಶಕರು ಡಾಕ್ಟರ್‌ ಥೀಮ್‌ ಜತೆ ಪ್ರೇಮಕತೆಯನ್ನು ಸೊಗಸಾಗಿ ಬೆರೆಸಿದ್ದರು.

ಶ್ರುತಿ ಸೇರಿದಾಗ

Vijaya Karnataka Web doctor on screen
ತೆರೆ ಮೇಲೆ ಡಾಕ್ಟರ್‌

'ಪ್ರತಿಜ್ಞೆ', 'ಶ್ರುತಿ ಸೇರಿದಾಗ' ಚಿತ್ರಗಳಲ್ಲಿ ರಾಜಕುಮಾರ್‌ ವೈದ್ಯನ ಪಾತ್ರಗಳಲ್ಲಿದ್ದರು. 'ಶ್ರುತಿ ಸೇರಿದಾಗ' ಚಿತ್ರದಲ್ಲಿ ನಿರ್ದೇಶಕ ದತ್ತರಾಜ್‌ ಇಬ್ಬರು ನಾಯಕಿಯರ ಪ್ರೀತಿಯ ಸುಳಿಯಲ್ಲಿ ಸಿಲುಕುವ ಡಾ.ಮೂರ್ತಿ (ರಾಜ್‌) ಪಾತ್ರವನ್ನು ಸೂಕ್ಷ ್ಮವಾಗಿ ಚಿತ್ರಿಸಿದ್ದರು. ಸಿನಿಮಾ ಕತೆಗೆ ತಿರುವು ನೀಡುವಂತಹ ಕೆಲವು ವೈದ್ಯಕೀಯ ಅಂಶಗಳೂ ಇಲ್ಲಿ ಪ್ರಸ್ತಾಪವಾಗಿದ್ದವು. ಚಿತ್ರ ದೊಡ್ಡ ಯಶಸ್ಸು ಕಂಡಿತ್ತು. 'ಪ್ರತಿಜ್ಞೆ' ಚಿತ್ರದಲ್ಲಿಯೂ ವೈದ್ಯನ ಪಾತ್ರದಲ್ಲಿ ರಾಜ್‌ ಗಮನ ಸೆಳೆದಿದ್ದರು. 'ಗುರಿ' ಚಿತ್ರದಲ್ಲಿ ರಾಜ್‌ ಡಾಕ್ಟರ್‌ ಕೋಟ್‌ ಹಾಕಿ ಮಾರು ವೇಷದಲ್ಲಿ ಕಾಣಿಸಿಕೊಂಡಿದ್ದರೆ, ಇದೇ ಚಿತ್ರದಲ್ಲಿ ಫಂಡರೀಬಾಯಿ ವೈದ್ಯೆಯಾಗಿ ನಟಿಸಿದ್ದರು.

ಇನ್ನು 60, 70ರ ದಶಕಗಳಲ್ಲಿ ತೆರೆಕಂಡ ಬಹಳಷ್ಟು ಸಿನಿಮಾಗಳಲ್ಲಿ ನಟ ಸಂಪತ್‌ ವೈದ್ಯನಾಗಿ ಕಾಣಿಸಿಕೊಂಡಿದ್ದಿದೆ. ಕನ್ನಡ ಸಿನಿ ಪ್ರೇಮಿಗಳಿಗೆ ಮೃದು ಮಾತಿನ, ಕೊರಳಿಗೆ ಸ್ಟೆಷೋಸ್ಕೋಪ್‌ ತೊಟ್ಟ ಸಂಪತ್‌ ಕಣ್ಮುಂದೆ ಬಂದರೆ ಅಚ್ಚರಿಯೇನಿಲ್ಲ. ಹಿರಿಯ ನಟರಾದ ಎಚ್‌.ಜಿ.ಸೋಮಶೇಖರ್‌ ರಾವ್‌, ಲೋಕನಾಥ್‌ ವೈದ್ಯರ ಪಾತ್ರಗಳಲ್ಲಿ ನೆನಪಾಗುವುದಿದೆ. ಇವರ ನಟನೆಯ ಅನುಭವ, ತೂಕದ ಮಾತು, ಹದವರಿತ ನೋಟ... ವೈದ್ಯ ಪಾತ್ರಗಳಿಗೆ ಜೀವ ತುಂಬಿದೆ ಎಂದೇ ಹೇಳಬಹುದು. 'ಶುಭಮಂಗಳ' ಚಿತ್ರದಲ್ಲಿ ನಟ ಅಶ್ವಥ್‌ರ 'ಕಾಮಿಡಿ ಡಾಕ್ಟರ್‌' ಪಾತ್ರ ಕಚಗುಳಿಯಿಡುತ್ತದೆ.

ಹೃದಯ ಹಾಡಿತು

ಎಂ.ಎಸ್‌.ರಾಜಶೇಖರ್‌ ನಿರ್ದೇಶನದಲ್ಲಿ ತಯಾರಾದ 'ಹೃದಯ ಹಾಡಿತು' ಡಾಕ್ಟರ್‌ ಥೀಮ್‌ನ ಕತೆಯೂ ಗಮನ ಸೆಳೆಯುತ್ತದೆ. ಡಾ.ಪ್ರಸಾದ್‌ (ಅಂಬರೀಶ್‌), ಡಾ.ಅಬಿಲಾಶಾ (ಭವ್ಯ) ಮತ್ತು ಹೃದಯ ರೋಗಿ ಆಶಾ (ಮಾಲಾಶ್ರೀ) ಮಧ್ಯೆ ತ್ರಿಕೋನ ಪ್ರೇಮಕತೆಯ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಸುರೇಶ್‌ ಹೆಬ್ಳೀಕರ್‌ ನಿರ್ದೇಶನದ 'ಪ್ರಥಮ ಉಷಾ ಕಿರಣ' ಒಂದೊಳ್ಳೆಯ ಮನೋವೈಜ್ಞಾನಿಕ ಚಿತ್ರವಾಗಿ ದಾಖಲಾಗಿದೆ. 'ಮಾನಸ ಸರೋವರ' ಚಿತ್ರದಲ್ಲಿ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಮನೋವೈದ್ಯ ಶ್ರೀನಾಥ್‌ ಪಾತ್ರವನ್ನು ಅಮರವಾಗಿಸಿದ್ದಾರೆ.

ಮುನ್ನಾಭಾಯ್‌ ಎಂಬಿಬಿಎಸ್‌

ಡಾಕ್ಟರ್‌ ಥೀಮ್‌ನ ಹತ್ತಾರು ಉತ್ತಮ ಚಿತ್ರಗಳು ಹಿಂದಿಯಲ್ಲಿ ತೆರೆಕಂಡಿವೆ. ರಾಜ್‌ಕುಮಾರ್‌ ಹಿರಾನಿ ನಿರ್ದೇಶನದಲ್ಲಿ ತಯಾರಾಗಿದ್ದ 'ಮುನ್ನಾಭಾಯ್‌ ಎಂಬಿಬಿಎಸ್‌' ವಿಡಂಬನೆಯೊಂದಿಗೆ ಟ್ರೆಂಡ್‌ ಸೆಟ್ಟರ್‌ ಎನಿಸಿಕೊಂಡಿತು. ಪ್ರೀತಿ, ಜೀವನೋತ್ಸಾಹದಿಂದ ರೋಗಿಗಳಿಗೆ ಮರುಜೀವ ನೀಡಬಹುದು ಎನ್ನುವ ಸಂದೇಶವಿದ್ದ ಚಿತ್ರ ಕನ್ನಡ, ತೆಲುಗು, ತಮಿಳಿಗೆ ರೀಮೇಕ್‌ ಆಗಿತ್ತು. 'ಉಪ್ಪಿದಾದಾ ಎಂಬಿಬಿಎಸ್‌' ಕನ್ನಡ ಅವತರಣಿಕೆಯಲ್ಲಿ ಉಪೇಂದ್ರ ನಟಿಸಿದ್ದರು. ರಾಜೇಶ್‌ ಖನ್ನಾ ಮತ್ತು ಅಮಿತಾಭ್‌ ಬಚ್ಚನ್‌ ಅಭಿನಯದ 'ಆನಂದ್‌' ಮಹೋನ್ನತ ಚಿತ್ರವಾಗಿ ದಾಖಲಾಗಿದೆ. ಕ್ಯಾನ್ಸರ್‌ಗೆ ತುತ್ತಾದ ಸ್ನೇಹಿತನನ್ನು ಬದುಕಿಸಿಕೊಳ್ಳಲು ಸಾಧ್ಯವಾಗದೆ ತೊಳಲಾಡುವ ಡಾ.ಭಾಸ್ಕರ್‌ ಬ್ಯಾನರ್ಜಿಯಾಗಿ ಅಮಿತಾಭ್‌ ಅಮೋಘ ಅಭಿನಯ ನೀಡಿದ್ದರು. 'ಅಮರ್‌ ಕಹಾನಿ' (ವಿ.ಶಾಂತಾರಾಂ), 'ಏಕ್‌ ಡಾಕ್ಟರ್‌ ಕಿ ಮೌತ್‌' (ಪಂಕಜ್‌ ಕಪೂರ್‌), 'ಅಪ್ನಾ ಆಸ್ಮಾನ್‌' (ಅನುಪಮ್‌ ಖೇರ್‌), 'ವಿಕ್ಕಿ ಡೋನರ್‌' (ಅನ್ನು ಕಪೂರ್‌) ನೆನಪಾಗುವ 'ಡಾಕ್ಟರ್‌ ಥೀಮ್‌'ನ ಕೆಲವು ಪ್ರಮುಖ ಹಿಂದಿ ಚಿತ್ರಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌