ಆ್ಯಪ್ನಗರ

ರಾಜ್ ಹುಟ್ಟಿದ ಗಾಜನೂರು ಮನೇಲಿ ಗ್ರಾಮಾಯಣ ಟೀಸರ್ ಚಿತ್ರೀಕರಣ

ವಿನಯ್‌ ರಾಜ್‌ಕುಮಾರ್‌ ನಟನೆಯ ಹೊಸ ಚಿತ್ರಕ್ಕೂ ಡಾ.ರಾಜ್‌ಕುಮಾರ್‌ ಅವರಿಗೂ ವಿಶೇಷ ನಂಟು ಏರ್ಪಟ್ಟಿದೆ. ಈ ಚಿತ್ರದ ಟೀಸರನ್ನು ಡಾ.ರಾಜ್‌ ಹುಟ್ಟಿದ ಮನೆಯಲ್ಲಿ ಚಿತ್ರೀಕರಿಸಲಾಗುತ್ತಿದೆ.

Vijaya Karnataka 17 Jul 2018, 8:32 am
*ಹರೀಶ್‌ ಬಸವರಾಜ್‌
Vijaya Karnataka Web gajanuru


ರಾಜ್‌ ಮೊಮ್ಮಗ ವಿನಯ್‌ ರಾಜ್‌ಕುಮಾರ್‌ ನಟನೆಯ ಹೊಸ ಚಿತ್ರ 'ಗ್ರಾಮಾಯಣ' ಚಿತ್ರದ ಟೀಸರನ್ನು ಅಣ್ಣಾವ್ರು ಹುಟ್ಟಿದ ಮನೆಯಲ್ಲಿ ಶೂಟಿಂಗ್‌ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.

ವಿನಯ್‌ ರಾಜ್‌ಕುಮಾರ್‌ 'ರನ್‌ ಆ್ಯಂಟನಿ' ಚಿತ್ರದ ನಂತರ ಒಪ್ಪಿಕೊಂಡಿರುವ ಚಿತ್ರ 'ಗ್ರಾಮಾಯಣ'. ಈ ಸಿನಿಮಾದ ಟೀಸರ್‌ ಸದ್ಯದಲ್ಲೇ ಚಿತ್ರೀಕರಣಗೊಳ್ಳಲಿದ್ದು, ಅದನ್ನು ಗಾಜನೂರಿನ ಅಣ್ಣಾವ್ರು ಹುಟ್ಟಿ ಬೆಳೆದ ಮನೆಯಲ್ಲಿಯೇ ಶೂಟ್‌ ಮಾಡುತ್ತಾರಂತೆ. 'ಗಾಜನೂರಿನ ಆ ಮನೆಯಲ್ಲಿ ಅಪ್ಪಾಜಿ ಹುಟ್ಟಿ, ಬೆಳೆದು ಆಡಿದ್ದಾರೆ, ಅವರು ಎಲ್ಲೆಲ್ಲಿ ಓಡಾಡಿದ್ದಾರೋ ಅಲ್ಲೆಲ್ಲ ಒಂದೊಂದು ಶಾಟ್‌ ತೆಗೆಯಲು ಹೇಳಿದ್ದೇನೆ. ಅಪ್ಪಾಜಿಯವರು ಓಡಾಡಿರೋ ಜಾಗದಲ್ಲಿ ಒಂದು ಪಾಸಿಟಿವ್‌ ವೈಬ್ಸ್‌ ಇದೆ, ಅದರಲ್ಲಿ ಕೆಲವಷ್ಟಾದರೂ ವಿನಯ್‌ಗೆ ಬರಲಿ ಎಂದು ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಅಲ್ಲದೇ ಚಂದ್ರು ಅವರ ಸಬ್ಜೆಕ್ಟ್ಗೆ ನಮ್ಮ ಗಾಜನೂರು ಸೂಟ್‌ ಆಗುತ್ತದೆ' ಎಂದು ಹೇಳುತ್ತಾರೆ ರಾಘವೇಂದ್ರ ರಾಜ್‌ಕುಮಾರ್‌.

'ಗ್ರಾಮಾಯಣ' ವಿಭಿನ್ನ ಸಬ್ಜೆಕ್ಟ್ ಉಳ್ಳ ಚಿತ್ರ. ರಂಗಭೂಮಿಯ ಪ್ರತಿಭೆ ದೇವನೂರು ಚಂದ್ರು ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಚಿತ್ರ ಸಂಪೂರ್ಣವಾಗಿ ಹಳ್ಳಿ ವಾತಾವಾರಣದಲ್ಲಿ ನಡೆಯುತ್ತದೆ. ರಾಘವೇಂದ್ರ ರಾಜ್‌ಕುಮಾರ್‌ ಈ ಚಿತ್ರದ ಕಥೆಯನ್ನು ಕೇಳಿದ ತಕ್ಷಣ ಒಪ್ಪಿಕೊಂಡಿದ್ದಾರೆ. ಡಾ.ರಾಜ್‌ ಅಭಿಮಾನಿ ಎ ಎಲ್‌ ಎನ್‌ ಮೂರ್ತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

'ಕನ್ನಡ ಚಿತ್ರರಂಗದಲ್ಲಿ ಹಳ್ಳಿ ಸಬ್ಜೆಕ್ಟ್ಗಳು ಬರುವುದು ಕಡಿಮೆ. ಈ ಗ್ರಾಮಾಯಣ ಸಬ್ಜೆಕ್ಟನ್ನು ಚಂದ್ರು ನನಗೆ ಹೇಳಿದಾಗ, ಬಂಗಾರದ ಮನುಷ್ಯ, ಜನುಮದ ಜೋಡಿ ಚಿತ್ರಗಳು ಕಣ್ಣ ಮುಂದೆ ಬಂದವು. ಈ ಚಿತ್ರಗಳಲ್ಲಿರುವ ಹಳ್ಳಿಯ ಸೊಗಡು ಗ್ರಾಮಾಯಣದಲ್ಲಿದೆ. ಈ ಸಿನಿಮಾ ನೋಡಿ ಹೊರಬಂದವರು ತಮ್ಮ ಸ್ವಂತ ಹಳ್ಳಿಯನ್ನು ಮಿಸ್‌ ಮಾಡಿಕೊಳ್ಳುತ್ತಾರೆ, ಅಷ್ಟರ ಮಟ್ಟಿಗೆ ಈ ಚಿತ್ರ ಕಾಡುತ್ತದೆ. ಚಂದ್ರು ಪ್ರತಿಭಾವಂತ. ಈ ಸಬ್ಜೆಕ್ಟ್ ಆತ ಅಂದುಕೊಂಡಿರುವಂತೆ ಮಾಡಿದರೆ, ಜನಕ್ಕೆ ಇಷ್ಟವಾಗುತ್ತದೆ' ಅಂತಾರೆ ರಾಘವೇಂದ್ರ ರಾಜ್‌ಕುಮಾರ್‌.

ಇನ್ನು ರಂಗಭೂಮಿ ಪ್ರತಿಭೆ ದೇವನೂರು ಚಂದ್ರು ಈ ಸಿನಿಮಾಗಾಗಿ ಈಗಾಗಲೇ ಎಲ್ಲ ಕಡೆಯೂ ಲೋಕೇಶನ್‌ ನೋಡಿದ್ದಾರೆ. ಈ ಚಿತ್ರದಲ್ಲಿ ಅರೆ ಬಯಲು ಸೀಮೆಯ ಕಥೆ ಇದೆ ಎನ್ನಲಾಗಿದೆ. ರಾಜ್ಯದ ಎಲ್ಲ ಕಡೆಯೂ ಅದ್ಭುತವಾಗಿ ಮಳೆ ಆದರೂ ಕಡೂರು, ಸಿಂಗಟಗೆರೆ, ಚಿತ್ರದುರ್ಗ,ತುಮಕೂರು ಜಿಲ್ಲೆಯ ಕೆಲ ಊರುಗಳಲ್ಲಿ ಬರ ಎಂಬುದು ಎಂದಿಂದಿಗೂ ಇರುತ್ತದೆ. ಅಂತಹ ಒಂದು ಹಳ್ಳಿಯ ಕಥೆ ಗ್ರಾಮಾಯಣದಲ್ಲಿದೆ. ಈ ಮೇಲಿನ ಭಾಗದ ಭಾಷೆ ಈ ಸಿನಿಮಾದಲ್ಲಿ ಬಳಕೆ ಮಾಡುತ್ತಾರಂತೆ ದೇವನೂರು ಚಂದ್ರು.

ಈ ಸಿನಿಮಾದ ಸ್ಕ್ರಿಪ್ಟ್‌ ಇಷ್ಟವಾಗಿ ವಿನಯ್‌ರಾಜ್‌ಕುಮಾರ್‌ ಎಲ್ಲ ಲೊಕೇಶನ್‌ಗೂ ಚಿತ್ರತಂಡದ ಜತೆ ಹೋಗಿದ್ದಾರೆ. ಅವರಲ್ಲಿ ಒಬ್ಬರಾಗಿ ಪ್ರತಿ ಹಳ್ಳಿಯನ್ನು ಅರಿಯುವ ಪ್ರಯತ್ನ ಮಾಡಿದ್ದಾರೆ.

ಅಪ್ಪಾಜಿಯವರ ಆಶಿರ್ವಾದ ವಿನಯ್‌ ಮತ್ತು ಚಿತ್ರತಂಡದ ಮೇಲಿರಲಿ ಎಂದು ನಾನು ಗಾಜನೂರಿನಲ್ಲಿ ಚಿತ್ರೀಕರಣ ಮಾಡಲು ತಿಳಿಸಿದ್ದೇನೆ. ಗ್ರಾಮಾಯಣ ಕನ್ನಡಕ್ಕೆ ಒಂದೊಳ್ಳೆ ಸಬ್ಜೆಕ್ಟ್ ಆಗುತ್ತದೆ. ಚಂದ್ರು ಅವರಂತಹ ಪ್ರತಿಭಾವಂತರು ಚಿತ್ರರಂಗಕ್ಕೆ ಬೇಕು.
ರಾಘವೇಂದ್ರ ರಾಜ್‌ಕುಮಾರ್‌, ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌