ಆ್ಯಪ್ನಗರ

ಕರ್ಚೀಫ್ ಇಲ್ಲದೆ 'ದಕ್ಷಿಣದ ಕೋಗಿಲೆ' ಎಸ್ ಜಾನಕಿ ಹಾಡುತ್ತಿರಲಿಲ್ಲ ಏಕೆ?

ಇದೇ ರೀತಿ ಕರ್ಚೀಫ್ ಇಲ್ಲದೆ ಮತ್ತೊಬ್ಬ ಖ್ಯಾತ ಗಾಯಕರಾದ ಘಂಟಸಾಲ ಸಹ ಹಾಡುತ್ತಿರಲಿಲ್ಲ. ಅವರು ಎಲ್ಲೇ ರೆಕಾರ್ಡಿಂಗ್‌ಗೆ ಹೋದರೂ ಅವರ ಶ್ರೀಮತಿ ಸಾವಿತ್ರಿ ಅವರು ಕರ್ಚೀಫನ್ನು ಮಡಚಿ ತಮ್ಮ ಪತಿಗೆ ನೀಡುತ್ತಿದ್ದರಂತೆ. "ಕೈಯಲ್ಲಿ ಕರ್ಚೀಫ್ ಇಲ್ಲದಿದ್ದರೆ ನಾನು ಹೇಗೆ ಹಾಡುವುದು" ಎಂದು ಸ್ವತಃ ಘಂಟಸಾಲ ಅವರೇ ಹೇಳುತ್ತಿದ್ದರು.

Vijaya Karnataka Web 23 Apr 2019, 1:13 pm
ದಕ್ಷಿಣದ ಕೋಗಿಲೆ, ಹಾಡು ಹಕ್ಕಿ ಎಸ್ ಜಾನಕಿ ಅವರಿಗೆ ಇಂದು (ಏಪ್ರಿಲ್ 23) 81ನೇ ಹುಟ್ಟುಹಬ್ಬದ ಸಂಭ್ರಮ. ಎಫ್‌ಎಂ ರೇಡಿಯೋಗಳಲ್ಲಿ ಅವರದೇ ಹಾಡುಗಳ ಆಲಾಪನೆ. ಎಸ್ ಜಾನಕಿ ಮೈಕ್ ಮುಂದೆ ನಿಂತು ಹಾಡಬೇಕಾದರೆ ಸದಾ ಅವರ ಕೈಯಲ್ಲಿ ಒಂದು ಕರ್ಚೀಫ್ ಇರಲೇಬೇಕಿತ್ತು. ಶ್ರೀಕೃಷ್ಣನ ಆರಾಧಿಸುವ ಅವರ ಹಾಡುಗಳ ಪುಸ್ತಕದಲ್ಲಿ ಅವರದೊಂದು ಫೋಟೋ ಸದಾ ಇರುತ್ತಿತ್ತು.
Vijaya Karnataka Web s-janaki1


ಎಲ್ಲೇ ಹೋಗಲಿ ಶ್ರೀಕೃಷ್ಣನ ಫೋಟೋ ಹಾಗೂ ಕರ್ಚೀಫ್ ಇರಲೇಬೇಕಿತ್ತು. ಅದ್ಯಾಕೋ ಏನೋ ಕೈಯಲ್ಲಿ ಕರ್ಚೀಫ್ ಇಲ್ಲದಿದ್ದರೆ ಅವರಿಗೆ ಹಾಡಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲೇ ಹಾಡಲು ಹೋದರೂ ತನ್ನ ಹಿಟ್ ಹಾಡುಗಳ ಪುಸ್ತಕ, ಅದರಲ್ಲಿ ಶ್ರೀಕೃಷ್ಣನ ಫೋಟೋ ಇರಲೇಬೇಕಿತ್ತು. ಜೊತೆಗೆ ಕರ್ಚೀಫ್.

ವಿಶೇಷ ಎಂದರೆ ರೆಕಾರ್ಡಿಂಗ್ ಸಮಯದಲ್ಲೂ ಕರ್ಚೀಫ್ ಕಡ್ಡಾಯ. ಈ ಸಂಗತಿ ಗೊತ್ತಿದ್ದ ಎಸ್ ಪಿ ಬಾಲಸುಬ್ರಹ್ಮಣ್ಯಂ ಒಮ್ಮೆ ಅವರನ್ನು ಸಖತ್ ಆಟ ಆಡಿಸಿದ್ದರಂತೆ. ಒಮ್ಮೆ ಜಾನಕಿ ಅವರ ಕರ್ಚೀಫ್ ಬಚ್ಚಿಟ್ಟಿದ್ದರಂತೆ ಎಸ್‍ಪಿಬಿ. ರಿಹರ್ಸಲ್ ಎಲ್ಲಾ ಮುಗಿದ ಬಳಿಕ ಇನ್ನೇನು ಹಾಡು ಹಾಡಬೇಕಾಗಿತ್ತು, ಆದರೆ ಎಸ್ ಜಾನಕಿ ಅವರಿಗೆ ಸ್ವರವೇ ಹೊರಡುತ್ತಿಲ್ಲ! ಗಾಬರಿಯಾದ ಸಂಗೀತ ನಿರ್ದೇಶಕರು "ಮೇಡಂ ಏನಾಯಿತು, ಏನಾಯಿತು?" ಎಂದು ಕೇಳುತ್ತಿದ್ದರು. ಆಗ ಅವರು ಟೆನ್ಷನ್‌ನಲ್ಲಿ ತನ್ನ ಕರ್ಚೀಫ್ ಹುಡುಕುತ್ತಿದ್ದರಂತೆ!

ಅವರ ಪರಿಸ್ಥಿತಿ ನೋಡಿ ಕಡೆಗೆ ಕರ್ಚೀಫ್ ತಂದುಕೊಟ್ಟಿದ್ದರಂತೆ ಎಸ್‍ಪಿಬಿ. ಒಮ್ಮೆ ಅವರ ಕೈಗೆ ಕರ್ಚೀಫ್ ಸಿಕ್ಕಿದ ಕೂಡಲೆ ಗಾನ ಗಂಗೆಯಂತೆ ಅವರ ಹಾಡು ಜುಳು ಜುಳು ಎಂದು ಹರಿಯಲು ಶುರುವಾಗುತ್ತಿತ್ತು. ಇದಿಷ್ಟು ಅವರ ಕರ್ಚೀಫ್ ಹಿಂದಿರುವ ರಹಸ್ಯ.

ಇದೇ ರೀತಿ ಕರ್ಚೀಫ್ ಇಲ್ಲದೆ ಮತ್ತೊಬ್ಬ ಖ್ಯಾತ ಗಾಯಕರಾದ ಘಂಟಸಾಲ ಸಹ ಹಾಡುತ್ತಿರಲಿಲ್ಲ. ಅವರು ಎಲ್ಲೇ ರೆಕಾರ್ಡಿಂಗ್‌ಗೆ ಹೋದರೂ ಅವರ ಶ್ರೀಮತಿ ಸಾವಿತ್ರಿ ಅವರು ಕರ್ಚೀಫನ್ನು ಮಡಚಿ ತಮ್ಮ ಪತಿಗೆ ನೀಡುತ್ತಿದ್ದರಂತೆ. "ಕೈಯಲ್ಲಿ ಕರ್ಚೀಫ್ ಇಲ್ಲದಿದ್ದರೆ ನಾನು ಹೇಗೆ ಹಾಡುವುದು" ಎಂದು ಸ್ವತಃ ಘಂಟಸಾಲ ಅವರೇ ಹೇಳುತ್ತಿದ್ದರು.

ಎಸ್ ಜಾನಕಿ ಅವರು ದಕ್ಷಿಣದಲ್ಲೇ ಒಟ್ಟು 48,000 ಹಾಡುಗಳನ್ನು ಹಾಡಿದ್ದಾರೆ. 1957ರಲ್ಲಿ ಹಾಡಲು ಆರಂಭಿಸಿದ ಅವರು ಈಗ ಹಾಡುವುದನ್ನು ನಿಲ್ಲಿಸಿದ್ದಾರೆ. ವಿದೇಶಿ ಸೇರಿದಂತೆ ಹದಿನೈದು ಭಾಷೆಗಳಲ್ಲಿ ಹಾಡಿದ ಖ್ಯಾತಿ ಎಸ್ ಜಾನಕಿ ಅವರದು.

1997ರಲ್ಲಿ ಜಾನಕಿ ಅವರ ಪತಿ ವಿಧಿವಶರಾದ ಬಳಿಕ ಅವರು ಹೆಚ್ಚಾಗಿ ಬಣ್ಣದ ಸೀರೆ, ಪ್ರಿಂಟೆಡ್ ಹಾಗೂ ಚಿನ್ನದ ಝರಿ ಇರುವ ಸೀರೆ ಉಡುವುದನ್ನು ನಿಲ್ಲಿಸಿದರು. ಕನ್ನಡದಲ್ಲೇ ಅತಿ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಜರ್ಮನಿ, ಜಪಾನೀಸ್, ಇಂಗ್ಲಿಷ್, ತುಳು ಭಾಷೆಗಳಲ್ಲೂ ಹಾಡಿದ್ದಾರೆ. ಉಸಿರಾಟದ ತೊಂದರೆಗಳಿದ್ದರೂ ಅದ್ಯಾವುದನ್ನೂ ಲೆಕ್ಕಿಸದೆ ಇಷ್ಟೆಲ್ಲಾ ಹಾಡಿದ್ದು ಜಾನಕಿ ಅವರ ಹೆಗ್ಗಳಿಕೆ.

ಕನ್ನಡದಲ್ಲಿ ಅವರಿಗೆ ಹೆಚ್ಚು ಕ್ಲಿಷ್ಟಕರ ಅನ್ನಿಸಿದ ಹಾಡು 'ಹೇಮಾವತಿ' ಚಿತ್ರದ "ಶಿವ ಶಿವ ಎನ್ನದ ನಾಲಿಯೇಕೆ" ಎಂಬ ಹಾಡು. ಈ ಹಾಡು ಎರಡು ಭಿನ್ನ ರಾಗಗಳನ್ನು ಹೊಂದಿದ್ದು ಎಸ್ ವೈದ್ಯನಾಥನ್ ಸಂಗೀತ ಸಂಯೋಜಿಸಿದ್ದರು. ಇಂದಿಗೂ ಸಹ ಈ ಹಾಡನ್ನು ಯಾರೂ ಟಚ್ ಮಾಡಕ್ಕೆ ಹೋಗಲ್ಲ ಎನ್ನುತ್ತಾರೆ ಕೆಎಸ್ ಚಿತ್ರಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌