ಆ್ಯಪ್ನಗರ

ಮಾಂಗಲ್ಯದ ಮಹತ್ವ ಹೇಳುವ ಮಾಂಗಲ್ಯಂ ತಂತುನಾನೇನಾ

ನಾವು ಎಷ್ಟೇ ಮುಂದುವರಿದಿದ್ದರೂ ನಮ್ಮ ಸಂಪ್ರದಾಯಗಳು ಬದಲಾಗಿಲ್ಲ ಅಂತಹ ಸಂಪ್ರದಾಯದಲ್ಲಿ ಮಾಂಗಲ್ಯವೂ ಒಂದು...

Vijaya Karnataka 22 Jun 2018, 5:00 am
ಹರೀಶ್‌ ಬಸವರಾಜ್‌
Vijaya Karnataka Web _SP_5236


ನಮ್ಮ ಸಂಸ್ಕೃತಿಯಲ್ಲಿ ಅತಿ ಹೆಚ್ಚು ಮಹತ್ವ ಹೊಂದಿರುವ ಮಾಂಗಲ್ಯದ ಮಹತ್ವ ಹೇಳುವ 'ಮಾಂಗಲ್ಯಂ ತಂತುನಾನೇನಾ' ಸೀರಿಯಲ್‌ ಇದೇ 25ರಿಂದ ಕಲರ್ಸ್‌ ಸೂಪರ್‌ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ಈ ಸೀರಿಯಲ್‌ ಒಂದು ಆಕಸ್ಮಿಕ ಮದುವೆಯಿಂದ ಆರಂಭವಾಗುತ್ತದೆ. ಸೋಷಿಯಲ್‌ ಡ್ರಾಮಾ ಇರುವ ಈ ಧಾರಾವಾಹಿ, ಶ್ರಾವಣಿ ಎಂಬ ಮಧ್ಯಮ ವರ್ಗದ ಹುಡುಗಿ ಹಾಗೂ ತೇಜಸ್ವಿ ಎಂಬ ರಾಜಕಾರಣಿಯ ಪುತ್ರನ ಮಧ್ಯೆ ನಡೆಯುವ ಒಂದು ಕಥೆಯಾಗಿದೆ. ಶ್ರಾವಣಿ ಬಹಳ ಅದೃಷ್ಟವಂತೆ. ಅವಳು ಆಟೋಗಾಗಿ ಕಾಯುವುದಿಲ್ಲ, ಅವಳು ತರಕಾರಿ ತೆಗೆದುಕೊಳ್ಳಬೇಕು ಅಂತಾ ಹೊರಗೆ ಹೊರಟರೆ, ತರಕಾರಿ ಗಾಡಿಯೇ ಆಕೆಯ ಮನೆ ಮುಂದೆ ಪ್ರತ್ಯಕ್ಷವಾಗುತ್ತದೆ. ಬಿಸಿಲು ಜಾಸ್ತಿ ಆದರೆ ಅಲ್ಲಿ ಮಳೆ ಬರುತ್ತೆ, ಅಯ್ಯೋ ಮಳೆ ಬಂತು ಅಂದ್ರೆ ಇನ್ಯಾರೋ ಕೊಡೆ ಹಿಡಿಯುತ್ತಾರೆ. ಇಂತಹ ಸಾಕಷ್ಟು ಸಣ್ಣ ಸಣ್ಣ ಅದೃಷ್ಟಗಳು ಆಕೆಗೆ ಸಿಗುತ್ತಾ ಇರುತ್ತವೆ. ಆದರೆ ನಾಯಕ ತೇಜಸ್ವಿ ಬಹಳ ನತದೃಷ್ಟ. ತೀರಾ ತುರ್ತು ಇದ್ದಾಗಲೇ ಫ್ಲೈಟ್‌ ತಪ್ಪಿಸಿಕೊಳ್ಳುತ್ತಾನೆ. ಯಾರೋ ಮಾಡಿದ ತಪ್ಪಿಗೆ ತಂದೆಯ ಬಳಿ ತಾನು ಬೈಸಿಕೊಳ್ಳುತ್ತಾನೆ. ಇವರಿಬ್ಬರು ಆಕಸ್ಮಿಕವಾಗಿ ಮದುವೆಯಾಗುತ್ತಾರೆ. ಈ ಮದುವೆಯಿಂದ ಇವರಿಬ್ಬರ ಬದುಕಿನಲ್ಲಿ ಏನೇನು ಬದಲಾವಣೆಯಾಗುತ್ತದೆ. ಆ ಬದಲಾವಣೆಗಳಲ್ಲಿ ಮಾಂಗಲ್ಯಕ್ಕೆ ಏನು ಮಹತ್ವ ಎಂಬುದನ್ನು ಈ ಸೀರಿಯಲ್‌ನಲ್ಲಿ ಹೇಳಲಾಗಿದೆ ಎಂದು ನಿರ್ದೇಶಕ, ನಿರ್ಮಾಪಕ ರಘು ಚರಣ್‌ ತಿಳಿಸಿದ್ದಾರೆ.

'ಸಾಮಾನ್ಯವಾಗಿ ಮಾಂಗಲ್ಯ, ಸೋಷಿಯಲ್‌ ಡ್ರಾಮಾ, ಮದುವೆ ಎಂದರೆ ಅದೇ ಹಳೆಯ ಕಥೆ ಎನ್ನುತ್ತಾರೆ. ಇಲ್ಲಿ ಹೊಸ ರೀತಿಯಲ್ಲಿ ಸೋಷಿಯಲ್‌ ಡ್ರಾಮಾ ತೋರಿಸುತ್ತಿದ್ದೇವೆ. ನಮ್ಮ ಉದ್ದೇಶ ಮಾಂಗಲ್ಯಕ್ಕೆ ನಮ್ಮಲ್ಲಿ ಎಷ್ಟು ಮಹತ್ವ ಇದೆ ಎನ್ನುವುದನ್ನು ತೋರಿಸಬೇಕು ಎನ್ನುವುದು' ಎಂದು ಅವರು ಹೇಳಿದ್ದಾರೆ.

ಶ್ರಾವಣಿ ಪಾತ್ರದಲ್ಲಿ ದಿವ್ಯಾ ಎಂಬ ಯುವತಿ ನಟಿಸುತ್ತಿದ್ದಾರೆ. ತೇಜಸ್ವಿ ಪಾತ್ರದಲ್ಲಿ ಚಂದನ್‌ ಕಾಣಿಸಿಕೊಂಡರೆ, ವೀಣಾ ಸುಂದರ್‌, ಹನುಮಂತೇಗೌಡ್ರು, ಸ್ಪಂದನಾ ಸೇರಿದಂತೆ ಸಾಕಷ್ಟು ಮಂದಿ ನಟಿಸುತ್ತಿದ್ದಾರೆ.

ರಘು ಚರಣ್‌ ಈ ಹಿಂದೆ ಸಾಕಷ್ಟು ಸೀರಿಯಲ್‌ಗಳಿಗೆ ಬರಹಗಾರರಾಗಿ, ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅವರು ಕೆಲಸ ಮಾಡಿರುವ ಎಲ್ಲವೂ ಹಿಟ್‌ ಮತ್ತು ಸ್ವಮೇಕ್‌ ಸೀರಿಯಲ್‌ಗಳಾಗಿವೆ. ಒಂದೊಳ್ಳೆ ಸಾಮಾಜಿಕ ಸಂದೇಶದೊಂದಿಗೆ ಈ ಸೀರಿಯಲ್‌ನ್ನು ವೀಕ್ಷಕರ ಮುಂದಿಡಲು ಕಲರ್ಸ್‌ ಸೂಪರ್‌ ವಾಹಿನಿ ಕೂಡಾ ಸಜ್ಜಾಗಿದೆ. ಈ ಸೀರಿಯಲ್‌ ಜೂನ್‌ 25ರಿಂದ ಪ್ರತಿ ಸೋಮವಾರದಿಂದ, ಶುಕ್ರವಾರದವರೆಗೆ ಪ್ರತಿ ದಿನ ಸಂಜೆ 7.30ಕ್ಕೆ ಪ್ರಸಾರವಾಗಲಿದೆ.

---

ಇದನ್ನು ಜನ ಸೀರಿಯಲ್‌ ಅಂತಾ ನೋಡುವುದಕ್ಕಿಂತ, ತಮ್ಮ ಮನೆಯ ಪಕ್ಕದ ಕಿಟಕಿ ಎಂದುಕೊಂಡು ನೋಡುತ್ತಾರೆ. ಅಷ್ಟು ಚೆನ್ನಾಗಿದೆ ಇದರ ಸಬ್ಜೆಕ್ಟ್. ಮೆಸೆಜ್‌ ಜತೆ ಮನರಂಜನೆಯೂ ಇದರಲ್ಲಿದೆ.
-ರಘು ಚರಣ್‌, ನಿರ್ದೇಶಕ
--
ಶ್ರಾವಣಿ ಕ್ಯಾರೆಕ್ಟರ್‌ಗೂ ನನ್ನ ರಿಯಲ್‌ ಲೈಫ್‌ ಕ್ಯಾರೆಕ್ಟರ್‌ಗೂ ಬಹಳ ಹತ್ತಿರದ ನಂಟಿದೆ. ಇದು ನನ್ನ ಮೊಟ್ಟ ಮೊದಲ ಸೀರಿಯಲ್‌, ಮೊದಲನೇ ಬಾರಿಗೆ ಒಳ್ಳೆ ಪಾತ್ರ ಸಿಕ್ಕಿರುವುದಕ್ಕೆ ನನಗೆ ಖುಷಿ ಇದೆ.
-ದಿವ್ಯಾ, ನಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌