ಶಶಾಂಕ್ ಚಿತ್ರದಲ್ಲಿ ಪುನೀತ್ 20 ಯುವಕ
ಶಶಾಂಕ್ ನಿರ್ದೇಶನದಲ್ಲಿ ಮೊದಲ ಬಾರಿಗೆ ನಟಿಸಲಿರುವ ಪುನೀತ್ ರಾಜ್ಕುಮಾರ್ ಹೊಸ ಚಿತ್ರದಲ್ಲಿ 20ರ ಹರೆಯದ ಹುಡುಗನಾಗಿ ಕಾಣಿಸಿಕೊಳ್ಳಲಿದ್ದಾರೆ.
ಅಂಜನಿಪುತ್ರ ಚಿತ್ರ ಮುಗಿಸಿದ ಪುನೀತ್ ಶಶಾಂಕ್ ನಿರ್ದೇಶನದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಈ ಚಿತ್ರವನ್ನು ಅವರು ತಮ್ಮ ಹೋಂ ಬ್ಯಾನರ್ನಲ್ಲೇ ನಿರ್ಮಾಣ ಮಾಡುತ್ತಿರುವುದು ವಿಶೇಷ. ಪುನೀತ್ ಈ ಚಿತ್ರದಲ್ಲಿ 20ರ ಹರೆಯದ ಯುವಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ನಟ ಪುನೀತ್ ರಾಜ್ಕುಮಾರ್ ಎಲ್ಲಾ ನಟರಂತಲ್ಲ. ಒಂದು ಸಿನಿಮಾ ಪೂರ್ಣಗೊಳ್ಳದೆ ಇನ್ನೊಂದು ಸಿನಿಮಾ ಬಗ್ಗೆ ಮಾತನಾಡೋಲ್ಲ. ರಾಜಕುಮಾರ ಚಿತ್ರದ ಭರ್ಜರಿ ಯಶಸ್ಸಿನ ನಂತರ ಪುನೀತ್ ಮುಂದಿನ ಚಿತ್ರಕ್ಕೆ ಪ್ರೇಕ್ಷಕರು ಕಾದಿದ್ದಾರೆ. ಈಗ ಅಂಜನಿಪುತ್ರ ಚಿತ್ರವನ್ನು ಮುಗಿಸಿದ ಅವರು ಶಶಾಂಕ್ ನಿರ್ದೇಶನದ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ ಇತ್ತೀಚೆಗೆ ಪ್ರಾರಂಭಿಸಿದ ತಮ್ಮ ಸ್ವಂತ ಬ್ಯಾನರ್ ಪಿಆರ್ಕೆ ಪ್ರೊಡಕ್ಷನ್ ಮೂಲಕ ಚಿತ್ರ ನಿರ್ಮಾಣ ಮಾಡಲಿದ್ದಾರೆ.
ಮುಂದಿನ ತಿಂಗಳು ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಚಿತ್ರದಲ್ಲಿ ಪುನೀತ್ರನ್ನು ಡಿಫರೆಂಟ್ ಆಗಿ ತೋರಿಸುವ ಸಲುವಾಗಿ ಹಲವು ಬಾರಿ ಅವರ ಲುಕ್ ಬದಲಿಸಿ ಪರೀಕ್ಷೆ ಮಾಡಲಾಗುತ್ತಿದೆ ಎಂದಿದ್ದಾರೆ ನಿರ್ದೇಶಕ ಶಶಾಂಕ್. ಸಂಗೀತ ಸಂಯೋಜಕ ಹರಿಕೃಷ್ಣ ಮತ್ತೆ ಪುನೀತ್ ಚಿತ್ರಕ್ಕೆ ಕೆಲಸ ಮಾಡಲಿದ್ದಾರೆ. ಇಲ್ಲೀವರೆಗೆ ಅವರು ಪುನೀತ್ ಅಭಿನಯದ 11 ಚಿತ್ರಗಳಿಗೆ ಸಂಗೀತ ನೀಡಿರುವುದು ವಿಶೇಷ. ರಾಜ್ ದಿ ಶೋ ಮ್ಯಾನ್, ಜಾಕಿ, ರಾಮ್, ಹುಡುಗರು, ಪರಮಾತ್ಮ ಮತ್ತಿತರ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.