ಆ್ಯಪ್ನಗರ

ಮಗಳ ಮದುವೆಗೆ ಹೂಗುಚ್ಛ ತರಬೇಡಿ ಎಂದು ಮನವಿ ಮಾಡಿದ ರವಿಚಂದ್ರನ್‌

ಮೇ.29 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರಿ ಗೀತಾಂಜಲಿ ಮದ್ವೆ ನಡೆಯಲಿದೆ. ಕನಸುಗಾರನ ಕನಸಾಗಿರುವ ಮದುವೆಯ ಬಗ್ಗೆ ಕ್ರೇಜಿಸ್ಟಾರ್‌ ಲವಲವಿಕೆ ಜತೆ ಮಾತನಾಡಿದ್ದಾರೆ.

Vijaya Karnataka 18 May 2019, 8:00 am
* ಶರಣು ಹುಲ್ಲೂರು
Vijaya Karnataka Web ravichandran


ನಟ ರವಿಚಂದ್ರನ್‌ ಪುತ್ರಿ ಗೀತಾಂಜಲಿ ಅವರ ಮದುವೆ ಆಹ್ವಾನ ಪತ್ರಿಕೆ ಸದ್ಯ ದೇಶದ ವಿವಿಧ ಚಿತ್ರಂಗಗಳ ಬಹುತೇಕ ತಾರೆಯರ ಮನೆಗೂ ತಲುಪುತ್ತಿದ್ದು, ಬೆಂಗಳೂರಿನ ಪ್ಯಾಲೇಸ್‌ ಮೈದಾನದಲ್ಲಿ ನಡೆಯಲಿರುವ ಈ ಮದುವೆಗೆ ಬಾಲಿವುಡ್‌, ಟಾಲಿವುಡ್‌, ಕಾಲಿವುಡ್‌, ಮಾಲಿವುಡ್‌ನ ಅತಿರಥಮಹಾರಥರೆಲ್ಲ ಆಗಮಿಸಲಿದ್ದಾರೆ.

3ಡಿ ವಿನ್ಯಾಸದಲ್ಲಿರುವ ಆಹ್ವಾನ ಪತ್ರಿಕೆಯನ್ನು ಸ್ವತಃ ರವಿಚಂದ್ರನ್‌ ಅವರೇ ವಿನ್ಯಾಸ ಮಾಡಿಸಿದ್ದು, ಮದುವೆಗೆ ಈ ರೀತಿ ಇನ್ನೂ ಹಲವು ಅಚ್ಚರಿಗಳನ್ನು ನೀಡುತ್ತಿದ್ದಾರೆ. ಜತೆಗೆ ಮಗಳಿಗೆ ಬ್ಲ್ಯಾಕ್‌ ಮತ್ತು ಗ್ರೀನ್‌ ಕಲರ್‌ ಗೌನ್‌, ಅಳಿಯನಿಗೆ ಸೂಟ್‌ ಅನ್ನು ಕೂಡ ಅವರೇ ಡಿಸೈನ್‌ ಮಾಡಿದ್ದಾರೆ.

ಮೇ 29ರಂದು ನಡೆಯಲಿರುವ ಮದುವೆಗೆ ಭಾರತೀಯ ಸಿನಿಮಾ ರಂಗದ ದಿಗ್ಗಜರು ಆಗಮಿಸಲಿದ್ದಾರೆ. ಅಮಿತಾಭ್‌ ಬಚ್ಚನ್‌, ರಜನೀಕಾಂತ್‌, ಕಮಲ್‌ ಹಾಸನ್‌, ಚಿರಂಜೀವಿ, ಶಿಲ್ಪಾ ಶೆಟ್ಟಿ, ಮುಮ್ಮುಟ್ಟಿ, ಜ್ಯೂ.ಎನ್‌ಟಿಆರ್‌ ಸೇರಿದಂತೆ ಅನೇಕ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಖುದ್ದಾಗಿ ರವಿಚಂದ್ರನ್‌ ದಂಪತಿಯೇ ಆಹ್ವಾನ ಪತ್ರಿಕೆ ಕೊಟ್ಟು ಬಂದಿದ್ದಾರೆ. ಹಾಗಾಗಿ ಅಂದು ಗೀತಾಂಜಲಿ ಮದುವೆ ನೆಪದಲ್ಲಿ ಭಾರತೀಯ ಸಿನಿಮಾ ರಂಗವೇ ನಗರದಲ್ಲಿ ಸೇರಲಿದೆ.

'ನಾನು ಮತ್ತು ನನ್ನ ಪತ್ನಿ ಎಲ್ಲ ಕಲಾವಿದರ ಮನೆಗೂ ಹೋಗಿ ಆಮಂತ್ರಣ ಪತ್ರಿಕೆ ತಲುಪಿಸಿ ಬಂದಿದ್ದೇವೆ. ಎಲ್ಲರೂ ಬರುವುದಾಗಿ ಹೇಳಿದ್ದಾರೆ. ಅಂದು ಎಲ್ಲರೂ ನನ್ನೊಟ್ಟಿಗೆ ಇರಬೇಕು ಎನ್ನುವುದು ನನ್ನಾಸೆ' ಎಂದು ರವಿಚಂದ್ರನ್‌ ತಿಳಿಸಿದ್ದಾರೆ.

ಹೂವು ಎಂದರೆ ಕ್ರೇಜಿಸ್ಟಾರ್‌ಗೆ ಇಷ್ಟ. ಆದರೆ, ಮದುವೆ ಮಂಟಪ ಅಂದು ಹೂವಿನ ಅಲಂಕಾರದಿಂದ ಕೂಡಿರದೇ, ಗಾಜಿನ ವಿನ್ಯಾಸದಲ್ಲಿ ರೆಡಿ ಆಗಲಿದೆ. ಮೂರ್ನಾಲ್ಕು ತಿಂಗಳಿಂದ ಮದುವೆ ಮಂಟಪದ ಸಿದ್ಧತೆ ನಡೆದಿದೆ. ಈ ವಿನ್ಯಾಸವನ್ನು ಸ್ವತಃ ರವಿಚಂದ್ರನ್‌ ಮಾಡಿದ್ದಾರೆ.

'ಮಂಟಪದ ಅಲಂಕಾರಕ್ಕೆ ಹೂವುಗಳನ್ನು ಬಳಸಬಾರದು ಎಂದುಕೊಂಡಿದ್ದೇನೆ. ಸ್ಟೇಜ್‌ ಸಂಪೂರ್ಣ ಗಾಜಿನಿಂದ ಕೂಡಿರುತ್ತದೆ. ಸುಂದರ ಲೋಕವನ್ನೇ ಸೃಷ್ಟಿಸುವಂತಹ ವಿನ್ಯಾಸ ಅಲ್ಲಿರುತ್ತದೆ. ದುಡ್ಡಿಗಿಂತ ನನ್ನ ಬುದ್ಧಿ ಮತ್ತು ಹೃದಯವನ್ನು ಇದಕ್ಕಾಗಿ ಖರ್ಚು ಮಾಡುತ್ತಿದ್ದೇನೆ. ಬಂದ ಅತಿಥಿಗಳಿಗೆ ತೊಂದರೆ ಆಗದೇ ಇರುವ ರೀತಿಯಲ್ಲಿ ವ್ಯವಸ್ಥೆ ಮಾಡಿದ್ದೇನೆ' ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಮಗಳ ಮದುವೆಗಾಗಿ ಹಾಡೊಂದನ್ನು ರೆಡಿ ಮಾಡಿಕೊಂಡಿದ್ದಾರೆ ರವಿಚಂದ್ರನ್‌. ಅಂದು ಹಂಸಲೇಖ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅಭಿಮಾನಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

------------

ಮಗಳ ಮದುವೆಗೆ ಉಡುಗೊರೆಯಾಗಿ ಯಾರೂ ಹೂಗುಚ್ಛ ತರಬೇಡಿ ಎಂದು ಮನವಿ ಮಾಡಿದ್ದೇನೆ. ಅದೇ ವೆಚ್ಚದ ವೋಚರ್‌ ತಗೆದುಕೊಂಡು ಬನ್ನಿ. ಅದನ್ನು ಒಟ್ಟಾಗಿಸಿ ಅನಾಥಾಶ್ರಮಕ್ಕೆ ಕೊಡುತ್ತೇನೆ. ಇದರಿಂದ ಅದೆಷ್ಟೋ ಮಕ್ಕಳಿಗೆ ಅನುಕೂಲವಾಗುತ್ತದೆ.

- ರವಿಚಂದ್ರನ್‌, ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌