ಆ್ಯಪ್ನಗರ

ದೇಸಿ ಕ್ರೀಡೆಗೆ ಮನಸೋತ ಸುದೀಪ್‌

ದೇಸಿ ಕ್ರೀಡೆಗೆ ಮನಸೋತ ಸುದೀಪ್‌ ಥಾಯ್ಲೆಂಡ್‌ನಲ್ಲಿ ಹೊಸ ಸಿನಿಮಾದ ಫೋಟೋ ಶೂಟ್‌ ಮೊದಲ ಬಾರಿಗೆ ಬಾಡಿಬಿಲ್ಡ್‌ ಮಾಡುತ್ತಿರುವ ಕಿಚ್ಚ

Vijaya Karnataka 29 Aug 2017, 7:00 am

*ಶರಣು ಹುಲ್ಲೂರು

Vijaya Karnataka Web s krishna to direct again sudeep
ದೇಸಿ ಕ್ರೀಡೆಗೆ ಮನಸೋತ ಸುದೀಪ್‌


ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್‌ ಕ್ರೀಡೆ ಆಧರಿಸಿದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೆಬ್ಬುಲಿ ಖ್ಯಾತಿಯ ನಿರ್ದೇಶಕ ಕೃಷ್ಣ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು, ದೇಸಿ ಕ್ರೀಡೆಯೊಂದನ್ನು ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

ಬಾಲಿವುಡ್‌ನಲ್ಲಿ ಲಗಾನ್‌ ಚಿತ್ರದ ಮೂಲಕ ಅಮೀರ್‌ ಖಾನ್‌ ಆರಂಭಿಸಿದ ಟ್ರೆಂಡ್‌ ಇದೀಗ ಕನ್ನಡಕ್ಕೂ ಕಾಲಿಟ್ಟಿದೆ. ಇತ್ತೀಚೆಗೆ ದಂಗಲ್‌ ಚಿತ್ರ ತೆರೆಕಂಡು ಭರ್ಜರಿ ಹಿಟ್‌ ಆದ ಮೇಲೆ ಕನ್ನಡದ ಕೆಲ ನಿರ್ದೇಶಕರು ಕ್ರೀಡಾ ಕತೆಗಳ ಹಿಂದೆ ಬಿದ್ದಿದ್ದಾರೆ.

ಈ ಪೈಕಿ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರುವ ಸುದೀಪ್‌ ಇದೀಗ ಹಳ್ಳಿಗಾಡಿನ ಆಟ ಆಧರಿಸಿದ ಕತೆಗೆ ಓಕೆ ಎಂದಿದ್ದು, ಇನ್ನಷ್ಟೇ ಸೆಟ್ಟೆರಲಿದೆ. ಈಗಾಗಲೇ ಮಾಡಿಕೊಂಡಿರುವ ಕಮಿಟ್‌ಮೆಂಟ್‌ಗಳು ಮುಗಿದ ಕೂಡಲೇ ಅವರು ಈ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಈಗಾಗಲೇ ಥಾಯ್ಲೆಂಡ್‌ನಲ್ಲಿ ಸುದೀಪ್‌ ಅವರ ಫೋಟೋ ಶೂಟ್‌ ಆಗಿದ್ದು, ಫಸ್ಟ್‌ಲುಕ್‌ ಬಗ್ಗೆ ಕೆಲಸ ಮಾಡಲಾಗುತ್ತಿದೆ. ಅಭಿಮಾನಿಗಳಿಗೆ ಹಾಗೂ ಇಂಡಸ್ಟ್ರಿಗೂ ಥ್ರಿಲ್‌ ಆಗುವ ರೀತಿಯಲ್ಲಿ ಫೋಟ್‌ ಶೂಟ್‌ ಮಾಡಲಾಗಿದೆ ಎಂದು ಕೃಷ್ಣ ಲವಲವಿಕೆ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಸೆಪ್ಟೆಂಬರ್‌ 2ರಂದು ಸುದೀಪ್‌ ಹುಟ್ಟು ಹಬ್ಬವಿದ್ದು, ಅದರ ಮುನ್ನಾ ದಿನ ಫಸ್ಟ್‌ ಲುಕ್‌ ರಿಲೀಸ್‌ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೆಬ್ಬುಲಿ ಚಿತ್ರ ನಿರ್ದೇಶಿಸಿದ್ದ ಎಸ್‌.ಕೃಷ್ಣ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ತಮ್ಮದೇ ಬ್ಯಾನರ್‌ ಮೂಲಕ ಸಿನಿಮಾ ನಿರ್ಮಾಣಕ್ಕೂ ಅವರು ಮುಂದಾಗಿದ್ದಾರೆ.

'ಹೆಬ್ಬುಲಿ ನಂತರ ಸುದೀಪ್‌ ಅವರ ಜತೆ ಮತ್ತೊಂದು ಸಿನಿಮಾ ಮಾಡಲು ಅವಕಾಶ ಸಿಕ್ಕಿದ್ದು ಖುಷಿಯಾಗಿದೆ. ಅವರು ಯಾವಾಗಲೂ ಹೊಸ ರೀತಿಯ ಪಾತ್ರಗಳನ್ನು ಬಯಸುತ್ತಾರೆ. ಹಾಗಾಗಿ ಈವರೆಗೂ ಸುದೀಪ್‌ ಮಾಡದೇ ಇರುವ ಕತೆಯನ್ನು ಬರೆಯಬೇಕು ಅಂತ ಅನಿಸಿತು. ಸ್ಪೋರ್ಟ್ಸ್ಗೆ ಸಂಬಂಧಿಸಿದ ಕತೆಗಳು ಕನ್ನಡದಲ್ಲಿ ಕಡಿಮೆ. ಈ ಹಿನ್ನೆಲೆಯ ಪಾತ್ರವನ್ನು ಸೃಷ್ಟಿ ಮಾಡಿ ಸಿನಿಮಾ ಮಾಡುತ್ತಿದ್ದೇನೆ. ವೈಯಕ್ತಿಕವಾಗಿ ನನಗೂ ಈ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲವಿದೆ' ಎಂದು ಕೃಷ್ಣ ತಿಳಿಸಿದ್ದಾರೆ.

ಈಗಾಗಲೇ ಕಿರುತೆರೆಯಲ್ಲಿ ನಟಿ, ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ಕೃಷ್ಣ ಅವರ ಪತ್ನಿ ಸ್ವಪ್ನ ಕೃಷ್ಣ ಈ ಚಿತ್ರದ ನಿರ್ಮಾಪಕಿ. ಕಿರುತೆರೆಯಲ್ಲಿ ಗೆದ್ದಿರುವ ಇವರು, ಹಿರಿತೆರೆಯಲ್ಲೂ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಬಳ್ಳಾರಿ, ಹುಬ್ಬಳ್ಳಿ, ವಿಜಯಪುರ, ದಾವಣಗೆರೆ ಸೇರಿದಂತೆ ಹಲವು ಕಡೆ ಚಿತ್ರೀಕರಣ ಮಾಡುವ ಪ್ಲಾನ್‌ ಕೂಡ ನಿರ್ದೇಶಕರದ್ದು.

ಮೊದಲ ಬಾರಿಗೆ ಬಾಡಿ ಬಿಲ್ಡ್‌

ಸುದೀಪ್‌ ಈವರೆಗೂ ಯಾವುದೇ ಸಿನಿಮಾಗಾಗಿ ಬಾಡಿಬಿಲ್ಡ್‌ ಮಾಡಿಲ್ಲ. ಇದೇ ಮೊದಲ ಬಾರಿಗೆ ಅವರು ದೇಹ ಹುರಿಗೊಳಿಸಿಕೊಳ್ಳುತ್ತಿದ್ದಾರೆ. ಬರೋಬ್ಬರಿ 4 ತಿಂಗಳಗಳ ಕಾಲ ಜಿಮ್‌ನಲ್ಲಿ ಬೆವರಿಳಿಸಲಿದ್ದಾರೆ. ಅಲ್ಲದೇ, ಓಪನ್‌ ಶರ್ಟ್‌ನಲ್ಲಿ ಸುದೀಪ್‌ ಹಲವು ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ. ಹಾಗಂತ ಇದು ಕೇವಲ ಕ್ರೀಡೆಯನ್ನಷ್ಟೇ ಆಧರಿಸಿದ ಚಿತ್ರವಲ್ಲ. ಗಂಡ ಹೆಂಡ್ತಿ ನಡುವಿನ ಭಾವನಾತ್ಮಕ ಸನ್ನಿವೇಶಗಳು ಕೂಡ ಈ ಸಿನಿಮಾದಲ್ಲಿವೆಯಂತೆ.

'ಸುದೀಪ್‌ ಅವರ ಹೊಸ ಸಿನಿಮಾ ಹಲವು ಪ್ರಥಮಗಳಿಗೆ ಸಾಕ್ಷಿ ಆಗಲಿದೆ. ಫಸ್ಟ್‌ ಟೈಮ್‌ ಅವರು ಪಾತ್ರಕ್ಕಾಗಿ ಬಾಡಿಬಿಲ್ಡ್‌ ಮಾಡುತ್ತಿರುವುದು ಅಭಿಮಾನಿಗಳಿಗೆ ಥ್ರಿಲ್‌ ನೀಡುವಂತಹ ಸಂಗತಿ.'

- ಎಸ್‌.ಕೃಷ್ಣ, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌