ಆ್ಯಪ್ನಗರ

ಹೊಸ ನೋಟಿಗಾಗಿ ಸಾಲಿನಲ್ಲಿ ನಿಂತುಕೊಂಡ ತಾರೆಯರು

ಐನೂರು ಮತ್ತು ಸಾವಿರ ನೋಟುಗಳ ಬದಲಾವಣೆಗಾಗಿ ಬ್ಯಾಂಕ್‌ ಮುಂದೆ ಸಾಲುಗಟ್ಟಿ ನಿಂತಿದ್ದಾರೆ ಜನಸಾಮಾನ್ಯರು. ಈ ಬಿಸಿ ಸ್ಯಾಂಡಲ್‌ವುಡ್‌ನ ಸಿಲಿಬ್ರಿಟಿಗಳನ್ನೂ ಬಿಟ್ಟಿಲ್ಲ. ಆ ಅನುಭವನ್ನು ಲವಲವಿಕೆಯ ಜತೆ ಅವರು ಹಂಚಿಕೊಂಡಿದ್ದು ಇಲ್ಲಿದೆ.

Vijaya Karnataka Web 17 Nov 2016, 4:00 am

ಬಹುತೇಕ ಬ್ಯಾಂಕ್‌ಗಳು ಮುಂದೆ ಜನರ ಸಾಲು ಸಾಲು. ಐನೂರು ಮತ್ತು ಸಾವಿರ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಮತ್ತು ಹೊಸ ನೋಟು ಪಡೆಯಲು ಜನಸಾಮಾನ್ಯರಂತೆಯೇ ಸರದಿ ಸಾಲಿನಲ್ಲಿ ನಿಂತಿದ್ದಾರೆ ಸ್ಯಾಂಡಲ್‌ವುಡ್‌ ಸಿಲಿಬ್ರಿಟಿಗಳು. ಕೆಲವರು ನೇರವಾಗಿ ಬ್ಯಾಂಕ್‌ಗೆ ಹೋಗಿ ಹಣ ಪಡೆದರೆ, ಇನ್ನೂ ಕೆಲವರು ತಮ್ಮ ಕುಟುಂಬದ ಸಹಾಯ ಕೇಳಿದ್ದಾರೆ. ಮೊದಲ ಬಾರಿಗೆ ಹೊಸ ನೋಟು ಕಂಡು ಥ್ರಿಲ್‌ ಆಗಿದ್ದಾರೆ.

Vijaya Karnataka Web sandalwood stars queue for new currency notes
ಹೊಸ ನೋಟಿಗಾಗಿ ಸಾಲಿನಲ್ಲಿ ನಿಂತುಕೊಂಡ ತಾರೆಯರು


ನಟಿ ಹರಿಪ್ರಿಯಾ, ರಚಿತಾ ರಾಮ್‌, ನಟ ನೆನಪಿರಲಿ ಪ್ರೇಮ್‌, ಸಂಗೀತ ನಿರ್ದೇಶಕ ಮಣಿಕಾಂತ್‌ ಕದ್ರಿ ಹೀಗೆ ಅನೇಕರು ತಾವು ನೋಟು ತಂದ ಆ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ. ಸ್ವಲ್ಪ ದಿನಗಳ ಕಾಲ ಕಷ್ಟವಾದರೂ, ಜನರು ಸಹಕರಿಸಬೇಕೆಂದೂ ಇವರೆಲ್ಲ ಮನವಿ ಮಾಡಿಕೊಂಡಿದ್ದಾರೆ.

-----

ಸಂಜೆ ಸಿಕ್ಕಿತು

ಕ್ರೆಡಿಟ್‌ ಕಾರ್ಡ್‌ಗಳ ಮೂಲಕವೇ ಹಣ ಸಂದಾಯ ಮಾಡುತ್ತಿದ್ದ ಹರಿಪ್ರಿಯಾಗೆ ಐನೂರು ಮತ್ತು ಸಾವಿರ ನೋಟಿನ ಬದಲಾವಣೆ ಅಷ್ಟೇನೂ ಕಿರಿಕಿರಿ ಅನಿಸಿಲ್ಲವಂತೆ. ಆದರೆ, ಹೊಸ ನೋಟನ್ನು ನೋಡುವ ಕುತೂಹಲಕ್ಕಾಗಿ ತಾವೇ ಬ್ಯಾಂಕ್‌ಗೆ ಹೋಗಿದ್ದರಂತೆ. ಅಲ್ಲಿದ್ದ ಉದ್ದದ ಕ್ಯೂ ಕಂಡ ಅಚ್ಚರಿ ಪಟ್ಟರಂತೆ. 'ಬ್ಯಾಂಕ್‌ ಮುಂದೆ ಅಷ್ಟೊಂದು ಜನರು. ತುಂಬಾ ಹೊತ್ತು ನಾನು ನಿಲ್ಲೋದು ಕಷ್ಟ ಅಂತ ಗೊತ್ತಾಯಿತು. ಅವತ್ತು ರಾತ್ರಿಯವರೆಗೂ ಬ್ಯಾಂಕ್‌ ತೆರೆದಿರುತ್ತದೆ ಅಂತ ಕೇಳಿದೆ. ಬ್ಯಾಂಕ್‌ ಮ್ಯಾನೇಜರ್‌ಗೆ ಫೋನ್‌ ಮಾಡಿ, ಜನರು ಕಡಿಮೆಯಾದ ನಂತರ ಬರುತ್ತೇನೆಂದು ಹೊರಟೆ. ಸಾಲು ಕರಗುವ ಹೊತ್ತಿಗೆ ಸಂಜೆಯಾಗಿತ್ತು. ಬ್ಯಾಂಕ್‌ನವರಿಂದಲೇ ವಿಷಯ ಗೊತ್ತಾಯ್ತು. ಸಾಯಂಕಾಲ ಹೋಗಿ ಹೊಸ ನೋಟು ತಗೆದುಕೊಂಡು ಬಂದೆ' ಅಂತಾರೆ ಹರಿಪ್ರಿಯಾ.

ಎರಡು ಸಾವಿರದ ಹೊಸ ನೋಟು ಕಂಡು ಗಲಿಬಿಲಿಗೊಂಡರಂತೆ ಹರಿಪ್ರಿಯಾ. ಎರಡು ಸಾವಿರ ಮುಖಬೆಲೆಯ ನೋಟು ಇಷ್ಟು ಚಿಕ್ಕದಾ ಅಂತ ಅವರಿಗೆ ಅನಿಸಿತಂತೆ.

**

ಸಾಲಿನಲ್ಲಿ ಸುಸ್ತಾದೆ

ಹೊಸ ನೋಟುಗಳನ್ನು ಅಭಿಮಾನದಿಂದಲೇ ಸ್ವಾಗತಿಸಿರುವ ನಟ ಪ್ರೇಮ್‌, ತಾವೇ ಸ್ವತಃ ಬ್ಯಾಂಕಿಗೆ ಹೋಗಿ ಕರೆನ್ಸಿ ಬದಲಾವಣೆ ಮಾಡಿಕೊಂಡರಂತೆ. ಸಾಲಿನಲ್ಲಿದ್ದಾಗ ಸುಸ್ತಾಗಿ ಹೋದರಂತೆ. 'ಬ್ಯಾಂಕ್‌ನಲ್ಲಿ ಪರಿಚಯವಿದ್ದ ಕಾರಣ, ಅವರಿಗೆ ಫೋನ್‌ ಮಾಡಿ ಹೋಗಿದ್ದೆ. ಆದರೂ, ಅಷ್ಟೊಂದು ಜನರು ಸಾಲಿನಲ್ಲಿ ನಿಂತಿದ್ದರಿಂದ ನಾನೂ ಅವರ ಹಿಂದೆ ಹೋಗಿ ನಿಂತೆ. ಪಾಪ, ಜನರೇ ನನ್ನನ್ನು ಒಳಗೆ ಕಳುಹಿಸಿದರು. ಹೊಸ ನೋಟಿನಲ್ಲಿ ನಾನು ಭಾರತದ ಉಜ್ವಲ ಭವಿಷ್ಯ ಕಂಡೆ' ಅನ್ನುವುದು ಪ್ರೇಮ್‌ ಮಾತು.

ಕಪ್ಪು ಹಣ ಆದಷ್ಟು ಬೇಗ ದೇಶದಿಂದ ತೊಲಗಬೇಕು ಅಂದುಕೊಳ್ಳುತ್ತಿದ್ದ ಪ್ರೇಮ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯು ಹೆಮ್ಮೆ ಅನಿಸಿದೆಯಂತೆ.

**

ಆಟದ ನೋಟು ಅನಿಸ್ತು

ಶೂಟಿಂಗ್‌ ಮತ್ತು ಪರ್ಚೇಸ್‌ ಮಾಡುವಂತಹ ಸನ್ನಿವೇಶ ಇರದೇ ಇರುವ ಕಾರಣದಿಂದಾಗಿ ಹೊಸ ನೋಟನ್ನು ತಡವಾಗಿ ನೋಡಿದರಂತೆ ರಚಿತಾ ರಾಮ್‌. ಟಿವಿಯಲ್ಲಿ ಮತ್ತು ಪೇಪರ್‌ನಲ್ಲಿ ಜನರು ಪಡುತ್ತಿದ್ದ ಕಷ್ಟಕಂಡು ಇವರು ಬ್ಯಾಂಕ್‌ಗೆ ಹೋಗಲೇ ಇಲ್ಲವಂತೆ. ಮೊದಲ ಬಾರಿಗೆ ಹೊಸ ನೋಟು ನೋಡಿದ್ದು, ಅವರ ತಾಯಿ ತಂದಾಗ. ಆ ಅನುಭವವನ್ನು ಇವರು ಹಂಚಿಕೊಂಡಿದ್ದು ಹೀಗೆ, 'ಎರಡು ನೂರು ರೂಪಾಯಿ ನೋಡಿದಾಗ, ಇದು ನಮ್ಮ ಭಾರತದ ಕರೆನ್ಸಿ ಅಂತ ಅನಿಸಲೇ ಇಲ್ಲ. ತಕ್ಷಣ ನನಗೆ ನೆನಪಾಗಿದ್ದು ಚಿಕ್ಕವಯಸ್ಸಿನಲ್ಲಿ ಆಡುತ್ತಿದ್ದ ಬಿಜಿನೆಸ್‌ ಆಟ. ಈ ಗೇಮ್‌ ಆಡುವಾಗ ಡೆಮ್ಮಿ ನೋಟು ಕೊಡುತ್ತಿದ್ದರು. ನನಗೆ ಅದೇ ನೋಟುಗಳು ನೆನಪಾದವು' ಅಂತಾರೆ ರಚಿತಾ ರಾಮ್‌.

ಹಳೆಯ ಐನೂರು ಮತ್ತು ಸಾವಿರ ನೋಟುಗಳನ್ನು ತುಂಬಾನೇ ಮಿಸ್‌ ಮಾಡಿಕೊಂಡಿದ್ದಾರಂತೆ ರಚಿತಾ.

**

ಖುಷಿ ಆಯಿತು

ಸದಾ ಮ್ಯೂಸಿಕ್‌ ಗುಂಗಿನಲ್ಲೇ ಇರುವ ಸಂಗೀತ ನಿರ್ದೇಶಕ ಮಣಿಕಾಂತ್‌ ಕದ್ರಿ ಕೂಡ ಕರೆನ್ಸಿ ಇಲ್ಲದೇ ಪರದಾಡಿದ್ದಾರಂತೆ. ಹೊಸ ನೋಟುಗಳನ್ನು ಪಡೆಯುವುದಕ್ಕಾಗಿ ಸ್ವತಃ ಅವರೇ ಬ್ಯಾಂಕ್‌ಗೂ ಹೋಗಿದ್ದಾರೆ. 'ಹೊಸ ನೋಟನ್ನು ನಾನೇ ಪಡೆಯಬೇಕು ಅನ್ನುವ ಕಾರಣಕ್ಕಾಗಿ ಬ್ಯಾಂಕ್‌ಗೆ ಹೋದೆ. ನಾನು ಹೋದಾಗ ಅಷ್ಟೇನೂ ಸಾಲು ಇರಲಿಲ್ಲ. ಹಣ ಪಡೆಯುವುದಕ್ಕಾಗಿಯೇ ಕೊಂಚ ಟೈಮ್‌ ಮೀಸಲಿಟ್ಟು ಹೊಸ ನೋಟು ಪಡೆದುಕೊಂಡು ಬಂದೆ. ಇದೊಂದು ರೀತಿಯಲ್ಲಿ ಹೊಸ ಅನುಭವ' ಅಂತಾರೆ ಮಣಿಕಾಂತ್‌.

ಹೊಸ ನೋಟು ನೋಡಿ ಖುಷಿಪಟ್ಟ ಮಣಿಕಾಂತ್‌. ಎರಡೆರಡು ಬಾರಿ ಎರಡು ಸಾವಿರ ರೂಪಾಯಿಯ ನೋಟು ನೋಡಿ, ಸಂಭ್ರಮಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌