ಆ್ಯಪ್ನಗರ

ಕಾಶ್ಮೀರದಲ್ಲಿ ಸೈನಿಕರ ಜತೆ ಸಂಭ್ರಮಿಸಿದ ಶಿವರಾಜ್‌

ಕಾಶ್ಮೀರದಲ್ಲಿ ಲೀಡರ್‌ ಸಿನಿಮಾದ ಚಿತ್ರೀಕರಣದ ನಡುವೆಯೇ ಸೈನಿಕರ ಜತೆ ಒಂದಿಷ್ಟು ಸಮಯ ಕಳೆದಿದ್ದಾರೆ ಶಿವರಾಜ್‌ ಕುಮಾರ್‌. ಕರ್ನಾಟಕದ ಯೋಧರು ಇವರ ಜತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.

Vijaya Karnataka Web 8 Feb 2017, 4:00 am

ಕಾಶ್ಮೀರದಲ್ಲಿ ಲೀಡರ್‌ ಸಿನಿಮಾದ ಚಿತ್ರೀಕರಣದ ನಡುವೆಯೇ ಸೈನಿಕರ ಜತೆ ಒಂದಿಷ್ಟು ಸಮಯ ಕಳೆದಿದ್ದಾರೆ ಶಿವರಾಜ್‌ ಕುಮಾರ್‌. ಕರ್ನಾಟಕದ ಯೋಧರು ಇವರ ಜತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.

ಶಿವರಾಜ್‌ಕುಮಾರ್‌ ಲೀಡರ್‌ ಚಿತ್ರದ ಶೂಟಿಂಗ್‌ಗಾಗಿ ಕಾಶ್ಮೀರದಲ್ಲಿ ಬೀಡುಬಿಟ್ಟಿದ್ದಾರೆ. ಹವಾಮಾನ ವೈಪರೀತ್ಯದ ನಡುವೆಯೂ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಇವರು, ಶೂಟಿಂಗ್‌ ಮಧ್ಯೆ ಒಂದಿಷ್ಟು ಹೊತ್ತು ಸೈನಿಕರ ಜತೆ ಸಮಯ ಕಳೆದಿದ್ದಾರೆ. ಇದೇ ವೇಳೆಯಲ್ಲೇ ಶಿವರಾಜ್‌ಕುಮಾರ್‌ ಅವರನ್ನು ನೋಡಲು ಶ್ರೀನಗರ ಜಡ್ಜ್‌ ಕೂಡ ಆಗಮಿಸಿದ್ದರು ಅನ್ನುವುದು ವಿಶೇಷ.

ಲೀಡರ್‌ ಸಿನಿಮಾದ ಚಿತ್ರೀಕರಣ ಕಾಶ್ಮೀರದ ಗುಲ್ಮಾರ್ಗ ಎಂಬ ಪ್ರದೇಶದಲ್ಲಿ ನಡೆಯುತ್ತಿದೆ. ಸಾಮಾನ್ಯವಾಗಿ ಅಲ್ಲಿನ ಉಷ್ಣಾಂಶ -15 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ. ಆ ಕೊರೆವ ಚಳಿಯಲ್ಲಿ ಕೆಲಸ ಮಾಡುವ ಸೈನಿಕರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ ಶಿವರಾಜ್‌ಕುಮಾರ್‌.

'ನಾವು ಕೆಲಸ ಮಾಡುವ ಪ್ರದೇಶವು ಮಿಲಿಟರಿ ಕ್ಯಾಂಪ್‌ಗಳಿಂದ ಸುತ್ತುವರಿದಿದೆ. ಅದು ಐದು ಬೆಟಾಲಿಯನ್‌ಗಳಿಂದ ಕೂಡಿದ ಪ್ರದೇಶ. ಇಲ್ಲಿ ಬಹುತೇಕ ಕನ್ನಡದ ಸೈನಿಕರೇ ಇದ್ದಾರೆ. ಅವರು ನನ್ನ ಮೇಲೆ ತೋರಿಸಿದ ಪ್ರೀತಿಗೆ ನಾನು ಮಂಜಿನಂತೆ ಕರಗಿದ್ದೇನೆ. ನನಗೂ ಅವರ ಮೇಲೆ ಅಷ್ಟೇ ಅಭಿಮಾನವಿದೆ. ಇಲ್ಲಿ ಒಂದೆರಡು ದಿನ ಇರುವುದಕ್ಕೆ ನಮ್ಮಿಂದ ಆಗಲ್ಲ. ಆದರೆ ಸೈನಿಕರು ತಮ್ಮ ಸವೀರ್‍ಸ್‌ ಮುಗಿಯುವ ತನಕ ಮಂಜಿನೊಂದಿಗೆ ಕೆಲಸ ಮಾಡುತ್ತಾರೆ. ನಾವೆಲ್ಲರೂ ಸೈನಿಕರಿಗೆ ಋುಣಿ ಆಗಿರಬೇಕು' ಅಂತಾರೆ ಶಿವರಾಜ್‌.

ಆಕಸ್ಮಿಕ ಎನ್ನುವಂತೆ ಶ್ರೀನಗರ ಜಡ್ಜ್‌ ಕೂಡ ಸಿನಿಮಾ ಶೂಟಿಂಗ್‌ ನೋಡಲು ಆಗಮಿಸಿದ್ದರು. ಭಜರಂಗಿ ಸೇರಿದಂತೆ ಶಿವರಾಜ್‌ಕುಮಾರ್‌ರ ಹಲವು ಚಿತ್ರಗಳು ಹಿಂದಿಗೆ ಡಬ್‌ ಆಗಿವೆ. ಅವುಗಳಲ್ಲಿ ಬಹುತೇಕ ಚಿತ್ರಗಳನ್ನು ಈ ನ್ಯಾಯಾಧೀಶರು ನೋಡಿದ್ದಾರಂತೆ. ಆ ಸಿನಿಮಾಗಳ ಕುರಿತಾಗಿ ಶಿವರಾಜ್‌ಕುಮಾರ್‌ ಜತೆ ಜಡ್ಜ್‌ ಹಂಚಿಕೊಂಡಿದ್ದಾರೆ. ಅಲ್ಲದೇ ತಾವು ಆ್ಯಕ್ಷನ್‌ ಚಿತ್ರಗಳ ಪ್ರಿಯ ಎಂದು ಹೇಳಿದ್ದಾರೆ.

ಕಾಶ್ಮೀರದಲ್ಲಿ ಶಿವರಾಜ್‌ ಕುಮಾರ್‌ ಜತೆ ಅವರ ಪತ್ನಿ ಗೀತಾ, ಚಿತ್ರದ ನಾಯಕಿ ಪ್ರಣೀತಾ, ಗುರು ಜಗ್ಗೇಶ್‌, ವಿಜಯ್‌ ರಾಘವೇಂದ್ರ, ಸುಧಾ ಬೆಳವಾಡಿ, ಆಶಿಕಾ, ಲಹರಿ ವೇಲು ಸೇರಿದಂತೆ ಅನೇಕರ ತಂಡವೇ ಇಲ್ಲಿದೆ. ಎರಡು ಮಹತ್ವದ ದೃಶ್ಯಗಳನ್ನು ಇಲ್ಲಿ ಚಿತ್ರೀಕರಿಸಲಾಗುತ್ತಿದೆ. ಅದರಲ್ಲೂ ಇದೇ ಮೊದಲ ಬಾರಿಗೆ ಸ್ನೋ ಬೈಕ್‌ ಆ್ಯಕ್ಷನ್‌ನಲ್ಲಿ ಶಿವರಾಜ್‌ಕುಮಾರ್‌ ಪಾಲ್ಗೊಳ್ಳುತ್ತಿದ್ದಾರೆ. ಈ ದೃಶ್ಯಕ್ಕಾಗಿಯೇ ಹೈದರಾಬಾದ್‌ ಮತ್ತು ಬೆಂಗಳೂರಿನ ಐವತ್ತು ಜನ ಫೈಟರ್‌ಗಳು ಕಾಶ್ಮೀರಕ್ಕೆ ಹೊರಟಿದ್ದಾರೆ. ಅಲ್ಲದೇ ಸ್ಥಳೀಯ 250ಕ್ಕೂ ಹೆಚ್ಚು ಜ್ಯೂನಿಯರ್ಸ್‌ ಕೂಡ ಈ ದೃಶ್ಯಕ್ಕೆ ಸಾಕ್ಷಿಯಾಗಲಿದ್ದಾರೆ.

'ಚಿತ್ರದಲ್ಲಿ ಈ ಎರಡೂ ದೃಶ್ಯಗಳು ಮಹತ್ವದ್ದು. ಹಾಗಾಗಿ ಗುಲ್ಮಾರ್‌ ಅನ್ನು ಆಯ್ಕೆ ಮಾಡಿಕೊಂಡಿದ್ದೇವೆ. ನಮಗೆಲ್ಲ ಪೊಲೀಸ್‌ ರಕ್ಷಣೆ ಇದೆ. ಹಾಗಾಗಿ ನೆಮ್ಮದಿಯಿಂದ ಚಿತ್ರೀಕರಣ ನಡೆಸಿದ್ದೇವೆ' ಅಂತಾರೆ ನಿರ್ಮಾಪಕ ತರುಣ್‌.

ಸೈನಿಕರ ಶ್ರಮ ನಿಜಕ್ಕೂ ದೊಡ್ಡದು. ಅವರೊಂದಿಗೆ ಮಾತಾಡುವುದೇ ಒಂದು ಖುಷಿ. ಅದರಲ್ಲೂ ನಮ್ಮ ಸಿನಿಮಾಗಳ ಬಗ್ಗೆ ಸೈನಿಕರು ಮಾತನಾಡಿದಾಗ ಸಂಭ್ರಮವು ಇಮ್ಮಡಿಯಾಗುತ್ತದೆ.

- ಶಿವರಾಜ್‌ಕುಮಾರ್‌, ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌