ಆ್ಯಪ್ನಗರ

ನಟ ದರ್ಶನ್ ಮನೆ ಮೇಲೆ ಕಲ್ಲು ತೂರಾಟ: ಸಿಎಂ ಕುಮಾರಸ್ವಾಮಿ ಹೇಳಿದ್ದೇನು?

"ಮಂಡ್ಯದಲ್ಲಿ ನಮ್ಮ ಎದುರಾಳಿಗಳು ಪಂಚೆ ಎತ್ತಿಸುವ ಮಾತನಾಡಿದ್ದಾರೆ,. ಆದರೆ ಅವೆಲ್ಲಾ ಜಾಸ್ತಿ ದಿನ ನಡೆಯೊಲ್ಲ.. ನಾವು ಈ ಮಣ್ಣಿನ ಧೂಳಿನಿಂದ ರಾಜಕಾರಣ ಮಾಡುತ್ತಾ ಬಂದಿದ್ದೇವೆ, ಅವರ ಆಟಕ್ಕೆಲ್ಲಾ ಜಗ್ಗಲ್ಲ.. ನಮ್ಮ ಕಾರ್ಯಕರ್ತರು ಸರಿಯಾದ ಉತ್ತರ ಕೊಡುತ್ತಾರೆ. ಸಿನಿಮಾದಲ್ಲಿ ಡ್ರಾಮಾ ಮಾಡಿದ ಹಾಗೆ ಇಲ್ಲಿ ಡ್ರಾಮಾ ಮಾಡಿದ್ರೆ ಬಹಳ ದಿನ ಉಳಿಯಲ್ಲ.."

Vijaya Karnataka Web 24 Mar 2019, 9:42 pm
ಕನ್ನಡದ ಚಾಲೆಂಜಿಂಗ್‌ ಸ್ಟಾರ್, ನಟ ದರ್ಶನ್ ಮನೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿರುವ ಘಟನೆ ಇತ್ತೀಚಿಗೆ ನಡೆದಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಷ್ಟೇ ಅಲ್ಲ, ನಟ ದರ್ಶನ್ ಅವರ ಕಾರಿನ ಗ್ಲಾಸ್ ಕೂಡ ಪುಡಿ ಪುಡಿ ಆಗಿದೆ. ಇಂದು, ಮಾರ್ಚ್ 23ರಂದು ಬೆಳಗಿನ ಜಾವ ಒಂದು ಗಂಟೆ ಸುಮಾರಿಗೆ ಈ ದುಷ್ಕೃತ್ಯ ನಡೆದಿದೆ ಎನ್ನಲಾಗಿದೆ.
Vijaya Karnataka Web kumarswamy


ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು "ಅಲ್ಲಾ ರೀ..ಯಾರಾದ್ರೂ ಮೂರು ಗಂಟೆ ರಾತ್ರಿಯಲ್ಲಿ ಕಲ್ಲು ಹೊಡೆಯುತ್ತಾರಾ..? ನಟ ದರ್ಶನ್ ಮನೆಗೆ ಕಲ್ಲು ಹೊಡೆದ ಮರುಕ್ಷಣವೇ ಆ ಭಾಗದ ಅಧಿಕಾರಿಗಳಿಗೆ ಸಿಸಿಟಿವಿ ಫೂಟೇಜ್ ಸೀಜ್ ಮಾಡಲು ಹೇಳಿದ್ದೆ. ಆದರೆ ಸಿಸಿಟಿವಿ ಆಫ್ ಆಗಿತ್ತಂತೆ. ಹಾಗಾದ್ರೆ ಅದನ್ನು ಯಾರು ಆಫ್ ಮಾಡಿದ್ದು...?" ಎಂದು ಕೇಳುವ ಮೂಲಕ ನಡೆಯಿತು ಎನ್ನಲಾದ ಘಟನೆಯನ್ನೇ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

"ಮಂಡ್ಯದಲ್ಲಿ ನಮ್ಮ ಎದುರಾಳಿಗಳು ಪಂಚೆ ಎತ್ತಿಸುವ ಮಾತನಾಡಿದ್ದಾರೆ,. ಆದರೆ ಅವೆಲ್ಲಾ ಜಾಸ್ತಿ ದಿನ ನಡೆಯೊಲ್ಲ.. ನಾವು ಈ ಮಣ್ಣಿನ ಧೂಳಿನಿಂದ ರಾಜಕಾರಣ ಮಾಡುತ್ತಾ ಬಂದಿದ್ದೇವೆ, ಅವರ ಆಟಕ್ಕೆಲ್ಲಾ ಜಗ್ಗಲ್ಲ.. ನಮ್ಮ ಕಾರ್ಯಕರ್ತರು ಸರಿಯಾದ ಉತ್ತರ ಕೊಡುತ್ತಾರೆ. ಸಿನಿಮಾದಲ್ಲಿ ಡ್ರಾಮಾ ಮಾಡಿದ ಹಾಗೆ ಇಲ್ಲಿ ಡ್ರಾಮಾ ಮಾಡಿದ್ರೆ ಬಹಳ ದಿನ ಉಳಿಯಲ್ಲ.." ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ ಎನ್ನಲಾಗಿದೆ.

ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಮಗ ನಿಖಲ್ ಅವರು "ಇಂತಹ ಕೆಲಸವನ್ನು ನಾವ್ಯಾಕೆ ಮಾಡೋಣ? ನಮಗೆ ಇಡೀ ಮಂಡ್ಯದಲ್ಲಿ ಜನರ ಕಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ" ಎಂದಿದ್ದಾರೆ. ಸುಮಲತಾ ಪ್ರಚಾರ ಹಾಗೂ ಜನಪ್ರಿಯತೆ ಅಬ್ಬರಕ್ಕೆ ಜೆಡಿಎಸ್ ನಡುಗುತ್ತಿದೆ ಎಂಬ ಸೋಷಿಯಲ್ ಮೀಡಿಯಾ ಸುದ್ದಿಯ ಹಿನ್ನೆಲೆಯಲ್ಲಿ ನಿಖಿಲ್ ನೀಡಿರುವ ಈ ಹೇಳಿಕೆ ಪ್ರಾಮುಖ್ಯತೆ ಪಡೆಯಲಿದೆ ಎನ್ನಬಹುದು.

ಈ ಹಿನ್ನೆಲೆಯಲ್ಲಿ, ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ನಟಿ ಸುಮಲತಾ ಪರ ಪ್ರಚಾರ ಕೈಗೊಂಡಿರುವ ಇನ್ನೊಬ್ಬ ನಟ ರಾಕಿಂಗ್ ಸ್ಟಾರ್ ಯಶ್ ಅವರ ನಿವಾಸದ ಸುತ್ತ ಪೊಲೀಸ್ ಬಿಗಿಭದ್ರತೆ ಮಾಡಲಾಗಿದೆ. ಈಗಾಗಲೇ ದರ್ಶನ್ ಮನೆಗೆ ಕಲ್ಲುತೂರಾಟದ ಮೂಲಕ ಕಿಡಿಗೇಡಿಗಳು ದುಷ್ಕೃತ್ಯಕ್ಕೆ ಕೈ ಹಾಕಿದ್ದು ಮುಂಜಾಗ್ರತೆ ಕ್ರಮವಾಗಿ ನಟ ಯಶ್ ಮನೆ ಸುತ್ತ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ನಟಿ ಹಾಗೂ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು "ದರ್ಶನ್ ಹೆಸರೇ ಚಾಲೆಂಜಿಂಗ್ ಸ್ಟಾರ್. ಇದನ್ನೆಲ್ಲಾ ಅವರು ಚಾಲೆಂಜ್ ಆಗಿಯೇ ಸ್ವೀಕರಿಸುತ್ತಾರೆ. ಯಶ್ ಮತ್ತು ದರ್ಶನ್ ಅವರನ್ನು ಹೆದರಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಇದಕ್ಕೆಲ್ಲ ಯಶ್ ಮತ್ತು ದರ್ಶನ ತಲೆಕೆಡಿಸಿಕೊಳ್ಳುವುದಿಲ್ಲ. ಎಲ್ಲವನ್ನು ಚಾಲೆಂಜ್ ಆಗಿ ಸ್ವೀಕರಿಸುತ್ತಾರೆ" ಎಂದಿದ್ದಾರೆ.

ನಟ ದರ್ಶನ್ ಮನೆಗೆ ಕಲ್ಲು ತೂರಿರುವ ಘಟನೆಗೆ ಸಂಬಂಧಪಟ್ಟಂತೆ, ನಟ ದರ್ಶನ್ ಮ್ಯಾನೇಜರ್ ಶ್ರೀನಿವಾಸ ಈ ಕುರಿತು ದೂರು ದಾಖಲಿಸಿದ್ದಾರೆ. ಪಶ್ಚಿಮ ವಿಭಾಗದ ಡಿಸಿಪಿ 'ರವಿ ಡಿ ಚನ್ನಣ್ಣನವರ್' ಅವರು ತನಿಖೆ ಚುರುಕುಗೊಳಿಸುವಂತೆ ಎಸಿಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ರಾಜರಾಜೇಶ್ವರಿ ನಗರ ಪೊಲೀಸರು ಹಾಗೂ ಕೆಂಗೇರಿ ಗೇಟ್ ಪೊಲೀಸ್ ಎಸಿಪಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಅವರ ಮನೆಯ ಸಿಸಿ ಟಿವಿ ಪೂಟೇಜ್ ಹಾಗೂ ಸುತ್ತಮುತ್ತಲಿನ ಪರಿಸರದ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ, ಅದನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ಮನೆ 'ತೂಗುದೀಪ ನಿಲಯ'ದ ಮೇಲೆ ನಡದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಸೆಕ್ಯೂರಿಟಿ ಗಾರ್ಡ್ ಕೆಂಪೇಗೌಡ ಹೇಳಿಕೆ ನೀಡಿದ್ದಾರೆ. "ಮಧ್ಯರಾತ್ರಿ ಒಬ್ಬ ದುಷ್ಕರ್ಮಿ ಮನೆಗೆ ಬಂದು ಕಲ್ಲು ತೂರಿ ಓಡಿ ಹೋಗಿದ್ದಾನೆ. ನಾನು ಅಲ್ಲಿಗೆ ಬರುವಷ್ಟರಲ್ಲಿಯೇ ಆತ ಓಡಿ ಹೋಗಿದ್ದಾನೆ" ಎಂದು ತಿಳಿಸಿದ್ದಾನೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌