ಆ್ಯಪ್ನಗರ

ಸಂಕಷ್ಟಕರ ಗಣಪತಿ ಟ್ರೇಲರ್‌ಗೆ ಫಿದಾ ಆದ ಕಿಚ್ಚ

ಸಂಕಷ್ಟಕರ ಗಣಪತಿ ಎಂಬ ವಿಭಿನ್ನ ಶೀರ್ಷಿಕೆಯ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ರಿಲೀಸ್‌ ಆಗಿರುವ ಚಿತ್ರದ ಟ್ರೇಲರ್‌ ನೋಡಿರುವ ಕಿಚ್ಚ ಸುದೀಪ್‌ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Vijaya Karnataka 8 Jun 2018, 5:00 am
*ಶರಣು ಹುಲ್ಲೂರು
Vijaya Karnataka Web sankatakara-ganapati


ಸಂಕಷ್ಟಕರ ಗಣಪತಿ ಚಿತ್ರದ ಟ್ರೇಲರ್‌ ಎಲ್ಲೆಡೆ ಸದ್ದು ಮಾಡುತ್ತಿದ್ದು, ನಟ ಸುದೀಪ್‌ ಅವರು ಅದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವತಃ ಟ್ವಿಟ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಸುದೀಪ್‌ ಅವರು ಟ್ರೇಲರ್‌ ನೋಡಿ ಮೆಚ್ಚಿಕೊಂಡಿದ್ದಕ್ಕೆ ನಮ್ಮ ತಂಡಕ್ಕೆ ಆನೆಬಲ ಬಂದಿದೆ. ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರು ಈಗಾಗಲೇ ರಿಲೀಸ್‌ ಆಗಿರುವ ಫಸ್ಟ್‌ಲುಕ್‌ ಮತ್ತು ಟ್ರೇಲರ್‌ ಬಗ್ಗೆ ಪ್ರಂಶಸೆ ವ್ಯಕ್ತಪಡಿಸಿದ್ದಾರೆ. ಬೇರೆ ಬೇರೆ ಸಿನಿಮಾ ರಂಗಗಳ ತಂತ್ರಜ್ಞರು ಕೂಡ ಕನ್ನಡ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಹಜವಾಗಿಯೇ ನಮ್ಮ ತಂಡಕ್ಕೆ ಹೆಮ್ಮೆ ತಂದಿದೆ' ಅಂತಾರೆ ಈ ಸಿನಿಮಾದ ನಾಯಕ ಲಿಖಿತ್‌ ಶೆಟ್ಟಿ.

ಸಿನಿಮಾದ ಸ್ಟೋರಿ ಕೂಡ ವಿಭಿನ್ನವಾಗಿದೆ. ಆತ ಯುವ ವ್ಯಂಗ್ಯಚಿತ್ರಕಾರ. ಚಿತ್ರಬಿಡಿಸಲು ಬೇಕಾದ ಕೈಗಳೇ ಅವನ ಮಾತು ಕೇಳದಂತಾಗುತ್ತವೆ. ಅಂದರೆ, ಆತ ಏಲಿಯನ್‌ ಹ್ಯಾಂಡ್‌ ಸಿಂಡ್ರೋಮ್‌ನಿಂದ ಬಳಲುತ್ತಿರುತ್ತಾನೆ. ನೂರಾರು ಕನಸು ಕಟ್ಟಿರುವ ಈ ಚಿತ್ರಕಾರನ ಬದುಕು ಯಾವ ಹಾದಿ ಹಿಡಿಯುತ್ತದೆ ಎನ್ನುವುದೇ ಸಿನಿಮಾದ ಸ್ಟೋರಿ. ಪನ್ಮಂಡಿ ಎಂಬ ಕಿರುಚಿತ್ರವನ್ನು ಈಗಾಗಲೇ ನಿರ್ದೇಶಿಸಿರುವ ಎಸ್‌.ಅರ್ಜುನ್‌ ಕುಮಾರ್‌ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ವ್ಯಕ್ತಿಗೆ ಕೈಮೇಲೆ ಹಿಡಿತವೇ ಇಲ್ಲದಿದ್ದರೆ ಏನೆಲ್ಲ ಅನಾಹುತಗಳು ಆಗುತ್ತವೆ ಎನ್ನುವ ಸೂಕ್ಷ್ಮ ವಿಚಾರವನ್ನು ಹಾಸ್ಯ ರೂಪದಲ್ಲಿ ಹೇಳುವ ಪ್ರಯತ್ನ ಸಿನಿಮಾದಲ್ಲಿ ಆಗಿದೆ. ಈಗಾಗಲೇ ತುಳು ಚಿತ್ರಗಳಲ್ಲಿ ನಟಿಸಿರುವ ಲಿಖಿತ್‌ ಶೆಟ್ಟಿ ಈ ಚಿತ್ರದ ನಾಯಕ. ಟಿ.ವಿ.ಯಲ್ಲಿ ನಿರೂಪಕರಾಗಿದ್ದ ಅವರಿಗೆ ನಾಯಕನಾಗಬೇಕೆಂಬುದು ಹಲವು ವರ್ಷಗಳ ಕನಸಂತೆ. ಈಗದು ಈಡೇರಿದೆ. ಈ ಪಾತ್ರ ಮಾಡುವುದಕ್ಕಾಗಿಯೇ ಲಿಖಿತ್‌ ಏಲಿಯನ್‌ ಹ್ಯಾಂಡ್‌ ಸಿಂಡ್ರೋಮ್‌ನಿಂದ ಬಳುತ್ತಿರುವ ಇಬ್ಬರು ವ್ಯಕ್ತಿಗಳನ್ನು ಭೇಟಿ ಮಾಡಿದ್ದಾರಂತೆ.

ಗುಜರಾತಿ ಮೂಲದ ಶ್ರುತಿ ಗೊರಾಡಿಯ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮೊದಲ ಬಾರಿಗೆ ಕನ್ನಡ ಚಿತ್ರವನ್ನು ಇವರು ಒಪ್ಪಿಕೊಂಡಿದ್ದಾರೆ. ಇಲ್ಲಿ ಅವರದ್ದು ಪ್ರಸರಣ ವಿಭಾಗದ ಅಧಿಕಾರಿಯ ಪಾತ್ರ. ಅಚ್ಯುತ್‌ಕುಮಾರ್‌, ಮಂಜುನಾಥ್‌ ಹೆಗಡೆ ಸೇರಿದಂತೆ ಅನುಭವಿ ಕಲಾವಿದರ ಬಳಗವೇ ಸಿನಿಮಾದಲ್ಲಿದೆ. ರಿತ್ವಿಕ್‌ ಮುರಳೀಧರ್‌ ಸಂಗೀತ ಸಂಯೋಜನೆ ಮಾಡಿದ್ದರೆ, ಉದಯ್‌ ಲೀಲಾ ಅವರ ಛಾಯಾಗ್ರಹಣವಿದೆ. ಸದ್ಯದಲ್ಲಿಯೇ ಆಡಿಯೋ ಬಿಡುಗಡೆ ಮಾಡುವ ಪ್ಲಾನ್‌ ಸಿನಿಮಾ ತಂಡದ್ದು.
ಎಸ್‌.ಅರ್ಜುನ್‌ ಕುಮಾರ್‌, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌