ಆ್ಯಪ್ನಗರ

ಜೀವದ ಗೆಳೆಯನಿಗಾಗಿ ವೈದ್ಯರಾದ ಸುದೀಪ್‌

ಕಿಚ್ಚ ಸುದೀಪ್‌ 'ಕಿಚ್ಚು' ಸಿನಿಮಾದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ. ಸಮಾಜ ಸೇವೆ ಮಾಡುವಂಥ ವೈದ್ಯನಾಗಿ ಅವರಿಲ್ಲಿ ಕಾಣಿಸಿಕೊಂಡಿದ್ದು, ತಮ್ಮ ನೆಚ್ಚಿನ ಗೆಳೆಯ ಧ್ರುವನಿಗಾಗಿ ಈ ಪಾತ್ರವನ್ನು ಒಪ್ಪಿಕೊಂಡಿದ್ದಾರೆ.

Vijaya Karnataka 2 May 2018, 11:32 am
*ಶರಣು ಹುಲ್ಲೂರು
Vijaya Karnataka Web sudeep


ಕಿಚ್ಚ ಸುದೀಪ್‌ ಮತ್ತೊಮ್ಮೆ ಸ್ಪೆಷಲ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಧ್ರುವ ಶರ್ಮಾ ಮತ್ತು ರಾಗಿಣಿ ದ್ವಿವೇದಿ ಕಾಂಬಿನೇಷನ್‌ನ ಕಿಚ್ಚು ಸಿನಿಮಾದಲ್ಲಿ ಅವರು ಸಮಾಜ ಸೇವೆ ಮಾಡುವ ವೈದ್ಯರಾಗಿ ನಟಿಸಿದ್ದಾರೆ. ಪ್ರಮುಖ ಘಟ್ಟದಲ್ಲಿ ಎಂಟ್ರಿ ಕೊಡುವಂಥ ಪಾತ್ರ ಅದಾಗಿದ್ದು, ಸ್ನೇಹಿತನಿಗಾಗಿ ಕಿಚ್ಚ ಬಣ್ಣ ಹಚ್ಚಿದ್ದಾರಂತೆ.

ಧ್ರುವ ಶರ್ಮ ಮತ್ತು ಸುದೀಪ್‌ ಆತ್ಮೀಯ ಗೆಳೆಯರು. ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಕ್ರಿಕೆಟ್‌ ಕ್ಷೇತ್ರದಲ್ಲೂ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಇತ್ತೀಚೆಗಷ್ಟೇ ಅಗಲಿದ ಧ್ರುವನಿಗೆ ಸುದೀಪ್‌ ಕಂಬನಿ ಮಿಡಿದಿದ್ದರು. ಸಿನಿಮಾ ರಿಲೀಸ್‌ ಆಗುತ್ತಿರುವ ಸಂದರ್ಭದಲ್ಲೂ ನೆಚ್ಚಿನ ಗೆಳೆಯನ ಬಗ್ಗೆ ಸುದೀಪ್‌ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

'ನನ್ನ ಜೀವನದ ಒಂದು ಭಾಗವೇ ಆಗಿದ್ದ ಪ್ರೀತಿಯ ಸಹೋದರ ಧ್ರುವನನ್ನು ಕೊನೆಯ ಬಾರಿಗೆ ಪರದೆಯ ಮೇಲೆ ನೋಡುತ್ತಿದ್ದೇನೆ. ಅವನ ಕೊನೆಯ ಸಿನಿಮಾದಲ್ಲಿ ನಾನು ನಟಿಸಿದ್ದೇನೆ. ಅವನು ದೇವರು ಕೊಟ್ಟ ಅಪರೂಪದ ಕೊಡುಗೆ. ಅದ್ಭುತ ಪ್ರತಿಭೆ ಅವರಲ್ಲಿತ್ತು. ಅವನೊಬ್ಬ ಪ್ರತಿಭಾವಂತ ನಟ ಎಂದು ಹೇಳಲು ಹೆಮ್ಮೆ ಪಡುತ್ತೇನೆ' ಎಂದಿದ್ದಾರೆ ಸುದೀಪ್‌.

ಕಿಚ್ಚು ಈ ವಾರ ರಾಜ್ಯಾದ್ಯಂತ ರಿಲೀಸ್‌ ಆಗುತ್ತಿದ್ದು, ಪ್ರದೀಪ್‌ ರಾಜ್‌ ನಿರ್ದೇಶನದಲ್ಲಿ ಮೂಡಿ ಬಂದಿದೆ. ಈ ಸಿನಿಮಾದಲ್ಲಿ ರಾಗಿಣಿ ಗ್ಲಾಮರ್‌ ರಹಿತ ಪಾತ್ರದಲ್ಲಿ ನಟಿಸಿದ್ದಾರೆ. ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮಾಡುವ ಕಾರ್ಮಿಕಳ ಪಾತ್ರವದು. ಧ್ರುವ ಬುಡಕಟ್ಟು ಹುಡುಗನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷತೆ ಅಂದರೆ, ನಿಜ ಜೀವನದಲ್ಲೂ ಮಾತು ಬಾರದ ಮತ್ತು ಶ್ರವಣ ದೋಷವಿರುವ ಜೋಡಿಯೊಂದು, ಸಿನಿಮಾದಲ್ಲಿಯೂ ಅಂಥದ್ದೆ ಪಾತ್ರ ಮಾಡಿದೆ. ಧ್ರುವಗೆ ಜೋಡಿಯಾಗಿ ಬಹುಭಾಷಾ ನಟಿ ಅಭಿನಯಾ ಬಣ್ಣ ಹಚ್ಚಿದ್ದಾರೆ. ಇವರೂ ಕೂಡ ಮಾತು ಬಾರದ, ಕಿವಿ ಕೇಳಿಸದ ವಿಶೇಷ ಚೇತನ. ಈ ಹಿಂದೆ ಇವರು ಪುನೀತ್‌ ರಾಜ್‌ಕುಮಾರ್‌ ನಟನೆಯ ಹುಡುಗರು ಚಿತ್ರದಲ್ಲಿ ಇವರು ನಟಿಸಿದ್ದರು.

ಅಂದಹಾಗೆ ಈ ಸಿನಿಮಾದಲ್ಲಿ ಕಾಡು ಉಳಿಸಿ ಎಂಬ ವಿಷಯವನ್ನು ಆಧರಿಸಿದ ಕಥೆಯಿದ್ದು, ಮಹಿಳಾ ಶೋಷಣೆಯ ವಿರುದ್ಧದ ವಿಷಯಗಳನ್ನೂ ಹೇಳಲಿದೆಯಂತೆ.
ಧ್ರುವ ನನ್ನ ಸಹೋದರನಂತಿದ್ದ. ಅವನಿಗಾಗಿಯೇ ನಾನು ಕಿಚ್ಚು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದು. ಅವನನ್ನು ಕೊನೆಯ ಬಾರಿಗೆ ಪರದೆಯ ಮೇಲೆ ನೋಡುತ್ತಿದ್ದೇನೆ. ಮತ್ತು ಈ ಸಿನಿಮಾದಲ್ಲಿ ಅವನ ಜತೆ ತೆರೆ ಹಂಚಿಕೊಂಡಿದ್ದೇನೆ.
ಸುದೀಪ್‌, ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌