ಆ್ಯಪ್ನಗರ

ಅಪ್ಪನಂತೆ ಮಗಳು ಎಂದ ಯಶ್‌ ತಾಯಿ ಪುಷ್ಪಾ

ಯಶ್‌ ಮತ್ತು ರಾಧಿಕಾ ಪಂಡಿತ್‌ ಮಗುವಿನ ಕುರಿತು ಕುತೂಹಲ ಹೆಚ್ಚಾಗಿದೆ. ಮೊದಲ ಬಾರಿಗೆ ಮಗು ಮತ್ತು ಸ್ಟಾರ್‌ ದಂಪತಿಯ ಸಂಭ್ರಮದ ಬಗ್ಗೆ ಯಶ್‌ ಮತ್ತು ರಾಧಿಕಾ ಕುಟುಂಬ ಮಾತನಾಡಿದೆ. ಯಶ್‌ ಹುಟ್ಟಿದಾಗ ಹೇಗಿದ್ದನೋ, ಅವನ ಮಗು ಕೂಡ ಹಾಗೆಯೇ ಇದೆ. ಅವರಪ್ಪನನ್ನೇ ನಾನು ಅವಳಲ್ಲಿ ಕಂಡೆ. ಅವಳನ್ನು ನೋಡುವುದಕ್ಕೆ ಹೋದಾಗ ಪಿಳಿಪಿಳಿ ಕಣ್ಣು ಬಿಟ್ಟು ನಮ್ಮನ್ನೆ ನೋಡುತ್ತಿತ್ತು. ಈಗಲೇ ತುಂಬಾ ಚೂಟಿಯಾಗಿದ್ದಾಳೆ. ಯಶ್‌ ಆಸೆಯಂತೆಯೇ ಅವನಿಗೆ ಹೆಣ್ಣು ಮಗುವಾಗಿದ್ದು ನಮ್ಮೆಲ್ಲರಿಗೂ ಸಂತಸ ತಂದಿದೆ' ಎಂದರು ಯಶ್‌ ತಾಯಿ.

Vijaya Karnataka 4 Dec 2018, 7:47 am
ಹರೀಶ್‌ ಬಸವರಾಜ್‌
Vijaya Karnataka Web yash


ಯಶ್‌ ಹುಟ್ಟಿದ್ದು ಹಾಸನದ ಸರಕಾರಿ ಆಸ್ಪತ್ರೆಯಲ್ಲಿ, ಮೊಮ್ಮಗಳು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಜನ್ಮತಾಳಿದ್ದಾಳೆ. ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ. ಮನೆಗೆ ಮಹಾಲಕ್ಷ್ಮಿಯಂಥ ಮೊಮ್ಮಗಳು ಬಂದಿರುವುದು ಖುಷಿ ತಂದಿದೆ ಎಂದಿದ್ದಾರೆ ಯಶ್‌ ತಾಯಿ ಪುಷ್ಪಾ. ಲವಲವಿಕೆಯ ಜತೆ ಮಾತನಾಡಿದ ಅವರು ಈ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

'ಯಶ್‌ ಹುಟ್ಟಿದಾಗ ಮನೆಯಲ್ಲಿ ನಾನೊಬ್ಬಳೆ ಇದ್ದೆ. ಹೆರಿಗೆ ನೋವು ಕಾಣಿಸಿಕೊಂಡಾಗ, ಹಾಸನದ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿಯೇ ಯಶ್‌ ಹುಟ್ಟಿದ್ದು. ಆಗ ಅವರ ತಂದೆ ಮೈಸೂರಿನಲ್ಲಿದ್ದರು. ಡಾಕ್ಟರ್‌ ಕೊಟ್ಟಿದ್ದ ಡೇಟ್‌ಗಿಂತಲೂ ಅವನು 20 ದಿನ ಮುಂಚೆಯೇ ಹುಟ್ಟಿದ. ಅವನ ಮಗಳು ಕೂಡ ಕೊಟ್ಟಿದ್ದ ಡೇಟ್‌ಗಿಂತ ಮೊದಲೇ ಹುಟ್ಟಿದ್ದಾಳೆ. ಇಬ್ಬರಲ್ಲೂ ನಾನು ಅನೇಕ ಸಾಮಿಪ್ಯ ಕಂಡೆ' ಎಂದರು ಪುಷ್ಪಾ.

'ಮಗುವಿನ ಬರುವಿಕೆಗೆ ನಾವೆಲ್ಲ ಕಾತರದಿಂದ ಕಾಯುತ್ತಿದ್ದೆವು. ಆಕೆ ಹುಟ್ಟಿದಾಗ ನಾವೆಲ್ಲ ಹಾಸನದಿಂದ ಬರುತ್ತಿದ್ದೆವು. ಫೋನ್‌ ಮಾಡಿ ಯಶ್‌ ವಿಷಯ ತಿಳಿಸಿದಾಗ ತುಂಬಾ ಖುಷಿ ಆಯಿತು. ಅದರಲ್ಲೂ ಮೊಮ್ಮಗಳು ಹುಟ್ಟಿದ್ದಾಳೆ ಎಂದು ಕೇಳಿದಾಗ ಮತ್ತಷ್ಟು ಸಂಭ್ರಮಿಸಿದೆವು. ಸಂತಸದಿಂದಲೇ ಮಗುವನ್ನು ಮನೆಗೆ ಬರಮಾಡಿಕೊಳ್ಳುತ್ತಿದ್ದೇವೆ' ಎನ್ನುವುದು ಪುಷ್ಪಾ ಮಾತು.

'ಮಗು ಆರೋಗ್ಯವಾಗಿದೆ. ಮೂರು ಕಾಲು ಕೇಜಿ ತೂಕವಿದೆ. ಯಶ್‌ ಹುಟ್ಟಿದಾಗ ಹೇಗಿದ್ದನೋ, ಅವನ ಮಗು ಕೂಡ ಹಾಗೆಯೇ ಇದೆ. ಅವರಪ್ಪನನ್ನೇ ನಾನು ಅವಳಲ್ಲಿ ಕಂಡೆ. ಅವಳನ್ನು ನೋಡುವುದಕ್ಕೆ ಹೋದಾಗ ಪಿಳಿಪಿಳಿ ಕಣ್ಣು ಬಿಟ್ಟು ನಮ್ಮನ್ನೆ ನೋಡುತ್ತಿತ್ತು. ಈಗಲೇ ತುಂಬಾ ಚೂಟಿಯಾಗಿದ್ದಾಳೆ. ಯಶ್‌ ಆಸೆಯಂತೆಯೇ ಅವನಿಗೆ ಹೆಣ್ಣು ಮಗುವಾಗಿದ್ದು ನಮ್ಮೆಲ್ಲರಿಗೂ ಸಂತಸ ತಂದಿದೆ' ಎಂದರು ಯಶ್‌ ತಾಯಿ.

'ಈ ವೇಳೆಯಲ್ಲಿ ಅಂಬರೀಶ್‌ ಅವರು ಇರಬೇಕಿತ್ತು. ಅವರು ಕೂಡ ನನ್ನ ಮೊಮ್ಮಗಳನ್ನು ನೋಡಲು ಬರುತ್ತೇನೆ ಎಂದು ಹೇಳಿದ್ದರು. ಅವರ ಆಶೀರ್ವಾದ ನನ್ನ ಮೊಮ್ಮಗಳ ಮೇಲೆ ಸದಾ ಇರುತ್ತದೆ' ಎನ್ನುವುದು ಯಶ್‌ ತಾಯಿಯ ಮಾತು.

ಮಗುವಿನ ನಾಮಕರಣದ ಕುರಿತು ಇನ್ನೂ ನಿರ್ಧಾರ ಕೈಗೊಂಡಿಲ್ಲವಂತೆ. ಯಶ್‌ ಮತ್ತು ರಾಧಿಕಾ ಪಂಡಿತ್‌ ಈ ಕುರಿತು ನಿರ್ಧಾರ ತಗೆದುಕೊಳ್ಳುತ್ತಾರೆ. ಸದ್ಯದಲ್ಲಿಯೇ ಮಗುವಿನ ಹೆಸರು ಫೈನಲ್‌ ಕೂಡ ಮಾಡಲಿದ್ದಾರಂತೆ.

ರಾಧಿಕಾ ಪಂಡಿತ್‌ ತಂದೆ ಕೃಷ್ಣ ಪ್ರಸಾದ್‌ ಕೂಡ ಸಂತಸ ಹಂಚಿಕೊಂಡಿದ್ದಾರೆ. 'ಮೊಮ್ಮಗಳು ಮನೆಗೆ ಬಂದಿರುವುದು ಸಹಜವಾಗಿ ಸಂಭ್ರಮ ತಂದಿದೆ. ಯಶ್‌ ಆಸೆಯಂತೆಯೇ ಹೆಣ್ಣು ಮಗು ಆಗಿದ್ದಕ್ಕೆ ರಾಧಿಕಾ ಕೂಡ ಹರ್ಷ ವ್ಯಕ್ತ ಪಡಿಸಿದ್ದಾರೆ. ನಮ್ಮಷ್ಟೇ ಅವರ ಅಭಿಮಾನಿಗಳು ಕೂಡ ಖುಷಿ ಪಡುತ್ತಿರುವುದು ನಮ್ಮ ಸೌಭಾಗ್ಯ' ಅಂದರು ಕೃಷ್ಣ ಪ್ರಸಾದ್‌.

ಮಗುವಿಗೆ ಯಾವ ಹೆಸರು ಇಡಬೇಕು ಎನ್ನುವುದು ಯಶ್‌ ಮತ್ತು ರಾಧಿಕಾಗೆ ಬಿಟ್ಟಿದ್ದೇವೆ. ಅವರೇ ಸೂಕ್ತವಾದ ಒಂದು ಹೆಸರು ಹುಡುಕುತ್ತಿದ್ದಾರೆ. ಮನೆಗೆ ಮೊಮ್ಮಗು ಬಂದಿದ್ದು ನಮಗೆಲ್ಲ ಖುಷಿ ತಂದಿದೆ-
ಪುಷ್ಪಾ, ಯಶ್‌ ತಾಯಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌