ಆ್ಯಪ್ನಗರ

‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಆ್ಯಕ್ಷನ್‌ ಹೀರೋ ಆಗಲಿದ್ದಾರೆ ಅಭಿಷೇಕ್‌ ಅಂಬರೀಷ್‌

‘ಅಮರ್‌’ ಚಿತ್ರದಲ್ಲಿ ರೊಮ್ಯಾಂಟಿಕ್‌ ಹೀರೋ ಆಗಿ ಚಿತ್ರರಂಗಕ್ಕೆ ಪರಿಚಯವಾಗಿದ್ದ ಅಭಿಷೇಕ್‌ ಅಂಬರೀಷ್‌ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದಲ್ಲಿ ಆ್ಯಕ್ಷನ್‌ ಹೀರೋ ಆಗಿರಲಿದ್ದಾರಂತೆ. ಅದಕ್ಕಾಗಿ ಅಭಿಷೇಕ್‌ ಅಂಬರೀಷ್‌ ಕೂಡ ಜಿಮ್‌ನಲ್ಲಿ ಸಿಕ್ಕಾಪಟ್ಟೆ ಬೆವರು ಸುರಿಸುತ್ತಿದ್ದಾರೆ.

Vijaya Karnataka Web 30 Sep 2021, 12:03 pm
(ಹರೀಶ್‌ ಬಸವರಾಜ್‌)
Vijaya Karnataka Web abhishek ambareesh will be seen as action hero in duniya soori directorial bad manners
‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಆ್ಯಕ್ಷನ್‌ ಹೀರೋ ಆಗಲಿದ್ದಾರೆ ಅಭಿಷೇಕ್‌ ಅಂಬರೀಷ್‌


ಚಿತ್ರರಂಗದ ಕೆಲಸಗಳು ಅಕ್ಟೋಬರ್‌ ತಿಂಗಳಿನಿಂದ ಕೊಂಚ ವೇಗ ಪಡೆದುಕೊಳ್ಳಲಿವೆ. ಕೊರೊನಾದ ಎರಡನೇ ಅಲೆಯಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿದ್ದ ಸಿನಿಮಾಗಳಲ್ಲಿ ಕೆಲವನ್ನು ಈಗಾಗಲೇ ಆರಂಭಿಸಲಾಗಿದೆ. ಸೂರಿ ನಿರ್ದೇಶನದ ‘ಬ್ಯಾಡ್‌ ಮ್ಯಾನರ್ಸ್‌’ ಸಿನಿಮಾದ ಚಿತ್ರೀಕರಣ ಅಕ್ಟೋಬರ್‌ 5ರಿಂದ ಆರಂಭವಾಗುತ್ತಿದೆ.

‘ಅಮರ್‌’ ಚಿತ್ರದಲ್ಲಿ ರೊಮ್ಯಾಂಟಿಕ್‌ ಹೀರೋ ಆಗಿ ಚಿತ್ರರಂಗಕ್ಕೆ ಪರಿಚಯವಾಗಿದ್ದ ಅಭಿಷೇಕ್‌ ಅಂಬರೀಷ್‌ ಈ ಸಿನಿಮಾದಲ್ಲಿ ಆ್ಯಕ್ಷನ್‌ ಹೀರೋ ಆಗಿರಲಿದ್ದಾರಂತೆ. ಅದಕ್ಕಾಗಿ ಅಭಿಷೇಕ್‌ ಅಂಬರೀಷ್‌ ಕೂಡ ಜಿಮ್‌ನಲ್ಲಿ ಸಿಕ್ಕಾಪಟ್ಟೆ ಬೆವರು ಸುರಿಸುತ್ತಿದ್ದಾರೆ.

‘ಇಲ್ಲಿಯವರೆಗೂ ಚಿತ್ರೀಕರಣ ಮಾಡಿರುವುದರಲ್ಲಿ ಮುಖ್ಯವಾದ ಶಾಟ್ಸ್‌ ತೆಗೆದುಕೊಂಡು ಒಂದು ಸಣ್ಣ ವಿಡಿಯೋ ಮಾಡುತ್ತಿದ್ದೇವೆ. ಅಭಿ ಅವರ ಕ್ಯಾರೆಕ್ಟರ್‌ ಮತ್ತು ಸಿನಿಮಾದಲ್ಲಿ ಅವರು ಯಾವ ರೀತಿ ಕಾಣುತ್ತಾರೆ ಎಂಬ ವಿವರಗಳು ಈ ವಿಡಿಯೋದಲ್ಲಿರುತ್ತವೆ. ಅದನ್ನು ಅಕ್ಟೋಬರ್‌ 3ಕ್ಕೆ ಅಭಿಷೇಕ್‌ ಅಂಬರೀಷ್ ಅವರ ಹುಟ್ಟುಹಬ್ಬಕ್ಕೆ ರಿಲೀಸ್‌ ಮಾಡುತ್ತಿದ್ದೇವೆ. ಅಭಿಷೇಕ್‌ ಅವರು ಆ್ಯಕ್ಷನ್‌ ಹೀರೋ ಎಂಬುದನ್ನು ಈ ವಿಡಿಯೋ ಮೂಲಕ ತಿಳಿದುಕೊಳ್ಳಬಹುದು’ ಎಂದಿದ್ದಾರೆ ಸೂರಿ.

ವಿಡಿಯೋದಲ್ಲಿ ಡೈಲಾಗ್ ಇರುವುದಿಲ್ಲ

‘ಅಕ್ಟೋಬರ್‌ 3ಕ್ಕೆ ಬಿಡುಗಡೆ ಮಾಡುತ್ತಿರುವ ವಿಡಿಯೋದಲ್ಲಿ ಯಾವುದೇ ಡೈಲಾಗ್‌ ಇರುವುದಿಲ್ಲ. ಅದನ್ನು ಟ್ರೇಲರ್‌ನಲ್ಲಿ ತೋರಿಸುತ್ತೇನೆ. ನಮ್ಮ ಸಿನಿಮಾದಲ್ಲಿ ಕೆಲವು ಕಡೆ ಅಭಿಷೇಕ್‌ ಅವರ ಧ್ವನಿ, ಮತ್ತು ಕಣ್ಣುಗಳು ಅಂಬರೀಷ್‌ ಅವರ ನೆನಪನ್ನು ತರಿಸುತ್ತದೆ. ಹಾಗಾಗಿ ಧ್ವನಿಯನ್ನು ಸಿನಿಮಾದಲ್ಲಿಯೇ ಕೇಳಲಿ ಎಂಬುದು ನನ್ನಾಸೆ’ ಅಂತ ನಿರ್ದೇಶಕ ಸೂರಿ ಹೇಳಿದ್ದಾರೆ.

''ಜನ ಬಯಸಿದರೆ ಎಲೆಕ್ಷನ್‌ಗೆ ನಿಲ್ತೀನಿ'': ರಾಜಕೀಯಕ್ಕೆ ಧುಮುಕುವ ಸೂಚನೆ ಕೊಟ್ಟ ಅಂಬಿ ಪುತ್ರ ಅಭಿಷೇಕ್!

ಎಚ್ಚರಿಕೆ ಅಗತ್ಯ

‘ಅಕ್ಟೋಬರ್‌ 5ರಿಂದ ಚಿತ್ರೀಕರಣ ಆರಂಭಿಸಬೇಕು ಎಂದು ಪ್ಲಾನ್‌ ಮಾಡಿಕೊಂಡಿದ್ದೇವೆ. ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದೇವೆ. ಕೊರೊನಾ ಕೊಂಚ ಬಿಡುವು ಕೊಟ್ಟಿದೆ. ಹಾಗಂತ ನಾವು ಎಚ್ಚರಿಕೆ ತಪ್ಪಬಾರದು. ಶಿಸ್ತಾಗಿ ಕೆಲಸ ಮಾಡಬೇಕು. ಅವಶ್ಯಕತೆ ಎಷ್ಟಿರುತ್ತದೋ ಅಷ್ಟೇ ಜನರನ್ನು ಚಿತ್ರೀಕರಣಕ್ಕೆ ಕರೆಸಿಕೊಳ್ಳಬೇಕು. ನಮಗೆ ವ್ಯಾಕ್ಸಿನ್‌ ಹಾಕಿಸಿಕೊಂಡಿದ್ದೇವೆ, ಅದು ಕವಚದ ರೀತಿ ಇರುತ್ತದೆ ಎಂದು ಯಾಮಾರಿದರೆ ಕಷ್ಟವಾಗುತ್ತದೆ. ಹಾಗಾಗಿ ನಾವು ಕೂಡ ಯೋಚನೆ ಮಾಡಿ ಚಿತ್ರೀಕರಣ ಆರಂಭಿಸುತ್ತಿದ್ದೇವೆ. ಎಲ್ಲ ರೀತಿಯ ಎಚ್ಚರಿಕೆಯನ್ನು ಚಿತ್ರೀಕರಣದ ಸಮಯದಲ್ಲಿ ಪಾಲಿಸುತ್ತೇವೆ’ ಎಂದು ವಿವರ ನೀಡಿದ್ದಾರೆ ಸೂರಿ.

ಅಭಿಷೇಕ್ ಅಂಬರೀಷ್ ನಟನೆಯ ಬ್ಯಾಡ್‌ ಮ್ಯಾನರ್ಸ್‌ನಲ್ಲಿ ರಚಿತಾ ರಾಮ್‌ಗೆ ಏನು ಪಾತ್ರ?

ಆ್ಯಕ್ಷನ್‌ ಸನ್ನಿವೇಶ

ಈಗ ಆರಂಭವಾಗಲಿರುವ ಚಿತ್ರೀಕರಣದಲ್ಲಿ ಬರೀ ಆ್ಯಕ್ಷನ್‌ ಸನ್ನಿವೇಶ ಮಾತ್ರ ಚಿತ್ರೀಕರಣ ಮಾಡಲು ಪ್ಲಾನ್‌ ಮಾಡಿಕೊಳ್ಳಲಾಗಿದ್ದು ನಾಯಕಿಯರು ಈಗ ಶೂಟಿಂಗ್‌ನಲ್ಲಿಇರುವುದಿಲ್ಲ ಎಂದರು ಸೂರಿ. ‘ಚರಣ್‌ ರಾಜ್‌ ಒಂದು ಅದ್ಭುತವಾದ ಹಾಡೊಂದನ್ನು ಮಾಡಿಕೊಟ್ಟಿದ್ದಾರೆ. ಅದು ಅಭಿಷೇಕ್‌ ಅವರ ಮೇಲಿರುತ್ತದೆ. ಅದನ್ನು ಸಹ ಈಗ ಚಿತ್ರೀಕರಿಸುತ್ತೇವೆ. ಹಾಡಿನ ಮೂಲಕ ಚರಣ್‌ ಮತ್ತೊಮ್ಮೆ ಇಷ್ಟವಾಗುತ್ತಾರೆ’ ಎಂದು ಮಾಹಿತಿ ನೀಡಿದ್ದಾರೆ ಸೂರಿ.

ಅಭಿಷೇಕ್‌ ಅಂಬರೀಷ್‌ 'ಬ್ಯಾಡ್‌ ಮ್ಯಾನರ್ಸ್‌'ಗಾಗಿ ಜೊತೆಯಾದ 'ಟಗರು' ತಂಡ!

ಸೂರಿ ಸಿನಿಮಾ ಸ್ಕೂಲ್‌

ನಿರ್ದೇಶಕ ಸೂರಿಯವರು ಕನ್ನಡ ಚಿತ್ರರಂಗದ ಯಶಸ್ವಿ ಮತ್ತು ಸ್ಟಾರ್‌ ನಿರ್ದೇಶಕ. ಇವರ ಜತೆ ಕೆಲಸ ಮಾಡುವುದು ಹಲವರ ಬಯಕೆ. ಹಲವು ಯುವಕರು ಸೂರಿಯವರ ಜತೆ ಕೆಲಸ ಮಾಡಿ ನಿರ್ದೇಶಕರಾಗುತ್ತಿದ್ದಾರೆ. ಅವರ ಬಗ್ಗೆ ಮಾತನಾಡಿರುವ ಸೂರಿ ತಮ್ಮ ಜತೆಗಾರರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ‘ಹಲವು ಯುವ ಬರಹಗಾರರು ಹುಟ್ಟಿಕೊಳ್ಳುತ್ತಿದ್ದಾರೆ. ನನ್ನ ಜತೆ 9 ವರ್ಷಗಳ ಕಾಲ ಕೆಲಸ ಮಾಡಿದ್ದ ಅಭಿ ಉತ್ತಮವಾದ ಕಥೆ ಬರೆದುಕೊಂಡು ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಇನ್ನು ‘ಪಾಪ್‌ಕಾರ್ನ್‌ ಮಂಕಿ ಟೈಗರ್‌’, ‘ಬ್ಯಾಡ್‌ ಮ್ಯಾನರ್ಸ್‌’ ಸಿನಿಮಾಗಳಿಗೆ ಬರಹಗಾರ್ತಿಯಾಗಿ ಕೆಲಸ ಮಾಡಿರುವ ಅಮ್ರಿ ಸಹ ಉತ್ತಮವಾದ ಕಥೆ ಬರೆದುಕೊಂಡು ನಿರ್ದೇಶನಕ್ಕೆ ಸಜ್ಜಾಗುತ್ತಿದ್ದಾರೆ. ಸುರೇಶ್‌ ಎಂಬ ಹುಡುಗ ‘ಡರ್ಟಿಫೆಲೋ’ ಎಂಬ ಸಿನಿಮಾ ಮಾಡುತ್ತಿದ್ದಾನೆ. ಎಲ್ಲರ ಕಥೆಯಲ್ಲಿ ಒಂದು ಮುಗ್ಧತೆ ಇದೆ. ಜನ ಮೆಚ್ಚಿಕೊಳ್ಳುವಂತಹ ಅಂಶಗಳಿವೆ. ವಿಷಯಾಧರಿತವಾಗಿ ಕಥೆ ಕಟ್ಟಿದ್ದಾರೆ. ಕಥೆ ಕೇಳುತ್ತಿದ್ದರೆ ನಿಜಕ್ಕೂ ಖುಷಿಯಾಗುತ್ತದೆ’ ಎಂದು ಸಂತಸ ವ್ಯಕ್ತಪಡಿಸಿದರು. ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿದ ನಂತರ ಬಿಡುಗಡೆಯಾಗುತ್ತಿರುವ ಎಲ್ಲ ಸಿನಿಮಾಗಳಿಗೂ ಆಲ್‌ ದಿ ಬೆಸ್ಟ್‌ ಎಂದಿದ್ದಾರೆ ಸೂರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌