ಆ್ಯಪ್ನಗರ

'ನಿಮ್ಮ ಅಜ್ಞಾನವು ದಿಗ್ಭ್ರಮೆಗೊಳಿಸುವಂತಿದೆ'- ನಟ ಅಜಯ್ ದೇವ್‌ಗನ್‌ಗೆ ರಮ್ಯಾ ತಿರುಗೇಟು!

ನಟ ಕಿಚ್ಚ ಸುದೀಪ್ ಅವರು 'ಹಿಂದಿ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ' ಎಂಬ ಹೇಳಿಕೆಗೆ ಬಾಲಿವುಡ್‌ ನಟ ಅಜಯ್ ದೇವ್‌ಗನ್ ಪ್ರತಿಕ್ರಿಯೆ ನೀಡಿದ್ದರು. 'ನಿಮ್ಮ ಮಾತೃ ಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಏಕೆ ಬಿಡುಗಡೆ ಮಾಡುತ್ತೀರಿ? ಹಿಂದಿ ನಮ್ಮ ಮಾತೃ ಭಾಷೆ ಮತ್ತು ರಾಷ್ಟ್ರ ಭಾಷೆ ಆಗಿದ್ದು, ಇಂದು ಮತ್ತು ಎಂದೆಂದಿಗೂ ಆಗಿರುತ್ತದೆ' ಎಂದು ಹೇಳಿದ್ದರು. ಈ ಟ್ವೀಟ್‌ ವಾರ್‌ಗೆ ಈಗ ನಟಿ ರಮ್ಯಾ ಎಂಟ್ರಿ ಆಗಿದ್ದಾರೆ. ಹಿಂದಿಯನ್ನು ರಾಷ್ಟ್ರ ಭಾಷೆ ಎಂದ ಅಜಯ್‌ ದೇವ್‌ಗನ್‌ಗೆ ತಿರುಗೇಟು ನೀಡಿದ್ದಾರೆ. ಕನ್ನಡದ ಇನ್ನೂ ಅನೇಕ ಸೆಲೆಬ್ರಿಟಿಗಳು ಟ್ವೀಟ್ ಮಾಡಿದ್ದಾರೆ.

Authored byಅವಿನಾಶ್ ಜಿ. ರಾಮ್ | Vijaya Karnataka Web 28 Apr 2022, 12:08 pm

ಹೈಲೈಟ್ಸ್‌:

  • ‘ಹಿಂದಿ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ’ ಎಂದಿದ್ದ ನಟ 'ಕಿಚ್ಚ' ಸುದೀಪ್
  • 'ಹಿಂದಿ ಎಂದೆಂದಿಗೂ ರಾಷ್ಟ್ರ ಭಾಷೆಯಾಗಿಯೇ ಇರುತ್ತದೆ' ಎಂದ ಅಜಯ್ ದೇವ್‌ಗನ್‌
  • ಅಜಯ್ ದೇವ್‌ಗನ್‌ಗೆ ತಿರುಗೇಟು ನೀಡಿದ ನಟಿ ರಮ್ಯಾ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Ramya
ನಟ ಕಿಚ್ಚ ಸುದೀಪ್ ಅವರು ಈಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, 'ಹಿಂದಿ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ...' ಎಂದು ಹೇಳಿದ್ದರು. ಈ ಮಾತಿಗೆ ಇಂದು ಪ್ರತಿಕ್ರಿಯಿಸಿದ ನಟ ಅಜಯ್ ದೇವ್‌ಗನ್, 'ಹಿಂದಿ ನಮ್ಮ ಮಾತೃ ಭಾಷೆ ಮತ್ತು ರಾಷ್ಟ್ರ ಭಾಷೆ ಆಗಿದ್ದು, ಇಂದು ಮತ್ತು ಎಂದೆಂದಿಗೂ ಆಗಿರುತ್ತದೆ' ಎಂದಿದ್ದರು. ಆ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ಈ ಬಗ್ಗೆ ರಾಜಕೀಯ ನಾಯಕರು ಕೂಡ ಟ್ವೀಟ್ ಮಾಡುತ್ತಿದ್ದಾರೆ. ನಟಿ ರಮ್ಯಾ ಅವರು ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, 'ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ' ಎಂದಿದ್ದಾರೆ.
ರಮ್ಯಾ ಹೇಳಿದ್ದೇನು?
'ಇಲ್ಲ, ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ. ಅಜಯ್ ದೇವ್‌ಗನ್ ನಿಮ್ಮ ಅಜ್ಞಾನವು ದಿಗ್ಭ್ರಮೆಗೊಳಿಸುವಂತಿದೆ. 'ಕೆಜಿಎಫ್', 'ಪುಷ್ಪ', 'ಆರ್‌ಆರ್‌ಆರ್‌'ನಂತಹ ಸಿನಿಮಾಗಳು ಹಿಂದಿ ಏರಿಯಾಗಳಲ್ಲಿ ಉತ್ತಮ ಪ್ರದರ್ಶನ ಕಂಡಿರುವುದು ಖುಷಿಯಾದ ವಿಷಯ. ಕಲೆಗೆ ಯಾವುದೇ ಭಾಷೆಯ ಗಡಿ ಇಲ್ಲ. ನಾವು ನಿಮ್ಮ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡಿದಂತೆಯೇ, ದಯವಿಟ್ಟು ನಮ್ಮ ಸಿನಿಮಾಗಳನ್ನು ನೋಡಿ ಎಂಜಾಯ್‌ ಮಾಡಿ.. ಹಿಂದಿ ಹೇರಿಕೆ ನಿಲ್ಲಿಸಿ..' ಎಂದು ಟ್ವೀಟ್ ಮಾಡಿದ್ದಾರೆ ರಮ್ಯಾ.

ಅನುವಾದದಲ್ಲಿ ಏನೋ ತಪ್ಪಾಗಿದೆ: ‘ರಾಷ್ಟ್ರ ಭಾಷೆ’ ವಿವಾದಕ್ಕೆ ಅಜಯ್ ದೇವ್ಗನ್ ಫುಲ್ ಸ್ಟಾಪ್!
ಅಜಯ್ ಮಾಡಿದ್ದ ಟ್ವೀಟ್ ಏನು?
'ನನ್ನ ಸಹೋದರ ಕಿಚ್ಚ ಸುದೀಪ್ ಅವರೇ, ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದಾದರೆ, ನಿಮ್ಮ ಮಾತೃ ಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಏಕೆ ಬಿಡುಗಡೆ ಮಾಡುತ್ತೀರಿ? ಹಿಂದಿ ನಮ್ಮ ಮಾತೃ ಭಾಷೆ ಮತ್ತು ರಾಷ್ಟ್ರ ಭಾಷೆ ಆಗಿದ್ದು, ಇಂದು ಮತ್ತು ಎಂದೆಂದಿಗೂ ಆಗಿರುತ್ತದೆ. ಜನ ಗಣ ಮನ..' ಎಂದು ಅಜಯ್ ದೇವ್ಗನ್ ಟ್ವೀಟ್ ಮಾಡಿದ್ದಾರೆ. ನಂತರ ಕಿಚ್ಚ ಸುದೀಪ್ ಅವರು ಟ್ವೀಟ್‌ಗಳ ಮೂಲಕ ಸ್ಪಷ್ಟನೆ ನೀಡಿದರು. ಆ ಬಳಿಕ ಮತ್ತೆ ಟ್ವೀಟ್ ಮಾಡಿದ್ದ ಅಜಯ್ ದೇವ್‌ಗನ್, 'ಹಾಯ್ ಕಿಚ್ಚ ಸುದೀಪ್.. ನೀವು ನನ್ನ ಸ್ನೇಹಿತ. ತಪ್ಪು ತಿಳುವಳಿಕೆಯನ್ನು ಸರಿ ಪಡಿಸಿದ್ದಕ್ಕಾಗಿ ಧನ್ಯವಾದಗಳು. ಫಿಲ್ಮ್ ಇಂಡಸ್ಟ್ರಿ ಒಂದೇ ಎಂದು ಯಾವಾಗಲೂ ನಂಬಿರುವವನು ನಾನು. ನಾವು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇವೆ. ಹಾಗೇ, ನಮ್ಮ ಭಾಷೆಯನ್ನೂ ಇತರರು ಗೌರವಿಸಬೇಕು ಎಂದು ಭಾವಿಸುತ್ತೇವೆ. ಬಹುಶಃ ಅನುವಾದದಲ್ಲಿ ಏನೋ ತಪ್ಪಾಗಿರುವ ಹಾಗಿದೆ..' ಎಂದು ಎಂದಿದ್ದಾರೆ.

ನಿಮ್ಮ ಟ್ವೀಟ್‌ಗೆ ನಾನು ಕನ್ನಡದಲ್ಲಿ ಉತ್ತರ ಕೊಟ್ಟರೆ? ಅಜಯ್ ದೇವ್ಗನ್‌ಗೆ ಸುದೀಪ್ ತಿರುಗುಬಾಣ!
ನೀನಾಸಂ ಸತೀಶ್, ಶ್ರೀನಗರ ಕಿಟ್ಟಿ ಹೇಳಿದ್ದೇನು?
ಈ ಬಗ್ಗೆ ಟ್ವೀಟ್ ಮಾಡಿರುವ ನಟ ಶ್ರೀನಗರ ಕಿಟ್ಟಿ, 'ಹಿಂದಿ ಎಂದಿಗೂ ರಾಷ್ಟ್ರ ಭಾಷೆ ಆಗುವುದಿಲ್ಲ..' ಎಂದಿದ್ದಾರೆ. ಹಾಗೆಯೇ ನಟ ಸತೀಶ್ ನೀನಾಸಂ, 'ಹತ್ತಾರು ವರ್ಷಗಳಿಂದ ನಿಮ್ಮ ಹಿಂದಿ ಸಿನಿಮಾಗಳು ಕನ್ನಡ ನೆಲದಲ್ಲಿ ಹಣ ಮಾಡಿವೆ. ಈಗಷ್ಟೆ ನಮ್ಮ ಕನ್ನಡ ಸಿನಿಮಾಗಳು ಅಲ್ಲಿಗೆ ಕಾಲಿಟ್ಟಿವೆ. ನಮ್ಮಂತೆ ನೀವು ನಮ್ಮನ್ನು, ನಮ್ಮ ಭಾಷೆಯನ್ನು ಗೌರವಿಸಿ. ಹಿಂದಿ ಅಂದಿಗೂ ಎಂದಿಗೂ ನಮ್ಮ ರಾಷ್ಟ್ರ ಭಾಷೆಯಲ್ಲ. ನಿಮ್ಮ ಧ್ವನಿಗೆ ನಮ್ಮ ಧ್ವನಿ ಕಿಚ್ಚ ಸುದೀಪ್ ಸರ್..' ಎಂದಿದ್ದಾರೆ.

Fill this survey and get a chance to win an attractive gift




ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌