ಆ್ಯಪ್ನಗರ

ಪಂಚನಹಳ್ಳಿಯ ವಿಜಯ್ ಎಂಬ ಸಾಮಾನ್ಯ ಹುಡುಗ 'ರಾಷ್ಟ್ರ ಪ್ರಶಸ್ತಿ' ಪಡೆಯುವವರೆಗೆ ಸಾಗಿ ಬಂದ ಹಾದಿ

ರಸ್ತೆ ಅಪಘಾತದಿಂದಾಗಿ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದ ನಟ ಸಂಚಾರಿ ವಿಜಯ್ ಅವರ ಸಿನಿ ಜರ್ನಿ ಇಲ್ಲಿದೆ

Authored byಅವಿನಾಶ್ ಜಿ. ರಾಮ್ | Vijaya Karnataka Web 15 Jun 2021, 6:21 am
'ಸಂಚಾರಿ' ವಿಜಯ್- ಹೆಸರಿಗೆ ತಕ್ಕಂತೆ ವಿಜಯ್ ಒಂದು ಕಡೆ ನಿಂತವರಲ್ಲ. ಸಂಚಾರಿ ಅವರು.. ಸದಾ ಸಿನಿಮಾ, ರಂಗಭೂಮಿ, ಸಮಾನ ಮನಸ್ಕ ಗೆಳೆಯರ ಭೇಟಿ.. ಹೀಗೆಯೇ ಇರುತ್ತಿತ್ತು ಅವರ ದಿನಚರಿ. ಲಾಕ್‌ಡೌನ್‌ ಘೋಷಣೆಯಾಗಿ ದೇಶವೇ ಸ್ತಬ್ಧವಾಗಿದ್ದರೂ, ವಿಜಯ್ ಸುಮ್ಮನೇ ಕುಳಿತಿರಲಿಲ್ಲ. ಕಷ್ಟದಲ್ಲಿರುವ ಬಡವರಿಗೆ ಆಸರೆಯಾಗಿದ್ದರು. ಊಟಕ್ಕೂ ತೊಂದರೆ ಪಡುತ್ತಿದ್ದವರಿಗೆ ಫುಡ್ ಕಿಟ್ ನೀಡಿ, ಹಸಿವು ನೀಗಿಸಿದರು. ಅಲ್ಲೆಲ್ಲೋ ಮಳೆ ಬಂದು ನೆರೆ ಉಂಟಾದರೆ, ಅಲ್ಲಿಯೂ ವಿಜಯ್ ಅವರ ಒಂದು ಸಹಾಯ ಹಸ್ತ ಕಾಣಿಸುತ್ತಿತ್ತು.
Vijaya Karnataka Web here is the full details of actor sanchari vijay
ಪಂಚನಹಳ್ಳಿಯ ವಿಜಯ್ ಎಂಬ ಸಾಮಾನ್ಯ ಹುಡುಗ 'ರಾಷ್ಟ್ರ ಪ್ರಶಸ್ತಿ' ಪಡೆಯುವವರೆಗೆ ಸಾಗಿ ಬಂದ ಹಾದಿ


ಚಿಕ್ಕಮಗಳೂರು ಜಿಲ್ಲೆಯ ಕಡೂರಿನಿಂದ 40 ಕಿ.ಮೀ. ದೂರದ ಪಂಚನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ವಿಜಯ್‌ಕುಮಾರ್, 'ರಾಷ್ಟ್ರ ಪ್ರಶಸ್ತಿ' ಪಡೆಯುವವರೆಗಿನ ಹಾದಿ ಸಾಮಾನ್ಯದ್ದೇನೆಲ್ಲ. ಬಾಲ್ಯದಲ್ಲೇ ಕಷ್ಟಗಳನ್ನು ಉಂಡರೂ, ತಮ್ಮ ಗುರಿಯನ್ನು ವಿಜಯ್ ಎಂದಿಗೂ ಮರೆತಿರಲಿಲ್ಲ. ವಿಜಯ್‌ಗೆ ಸಿನಿಮಾ, ನಟನೆ ಮೇಲೆ ವಿಪರೀತ ಆಸಕ್ತಿ. ಅದರ ಪರಿಣಾಮವೇ ಅವರು ಬಣ್ಣದ ಲೋಕದತ್ತ ಮುಖ ಮಾಡಿದ್ದು. ಆನಂತರ ರಂಗಭೂಮಿಯಲ್ಲಿ ಪಯಣ ಆರಂಭಿಸಿದರು. ಸಂಚಾರಿ ನಾಟಕ ತಂಡದಲ್ಲಿ ಇದ್ದಿದ್ದರಿಂದ ವಿಜಯ್‌ ಕುಮಾರ್‌, ಸಂಚಾರಿ ವಿಜಯ್ ಆಗಿ ಬದಲಾದರು. ಆರಂಭದಲ್ಲಿ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳು, ಸಾಕ್ಷ್ಯಚಿತ್ರಗಳಲ್ಲಿ ನಟಿಸಿದರು.

ಒಗ್ಗರಣೆ ಸಿನಿಮಾದಲ್ಲಿ ಗಮನಸೆಳೆದ ವಿಜಯ್‌

ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ವಿಜಯ್, ರಮೇಶ್ ಅರವಿಂದ್ ನಟನೆಯ 'ರಂಗಪ್ಪ ಹೋಗ್ಬಿಟ್ನಾ' ಹಾಗೂ 'ಜೋಗಿ' ಪ್ರೇಮ್ ನಟಿಸಿದ್ದ 'ದಾಸ್ವಾಳ' ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ 'ದಾಸ್ವಾಳ' ಚಿತ್ರದಲ್ಲಿನ ಅವರ ನಟನೆಗೆ ಎಲ್ಲರಿಂದಲೂ ಮೆಚ್ಚುಗೆ ಸಿಕ್ಕಿತ್ತು. ಆ ಬಳಿಕವೇ ಬಹುಭಾಷಾ ನಟ ಪ್ರಕಾಶ್ ರೈ ನಟಿಸಿ, ನಿರ್ದೇಶನ ಮಾಡಿದ್ದ 'ಒಗ್ಗರಣೆ' ಚಿತ್ರದಲ್ಲಿ ಒಂದು ಮಹತ್ವದ ಪಾತ್ರ ಮಾಡಿದ್ದರು ವಿಜಯ್. ಅದು ಮೂರು ಭಾಷೆಯಲ್ಲಿ ತೆರೆಕಂಡಿದ್ದ ಸಿನಿಮಾವಾಗಿತ್ತು. ಆ ಸಿನಿಮಾದ ನಂತರ ವಿಜಯ್‌ಗೆ ದೊಡ್ಡ ಬ್ರೇಕ್ ಸಿಕ್ಕಿದ್ದು 'ನಾನು ಅವನಲ್ಲ ಅವಳು' ಚಿತ್ರದ ಮೂಲಕ.

ರಾಷ್ಟ್ರ ಪ್ರಶಸ್ತಿ ನಟ ಸಂಚಾರಿ ವಿಜಯ್ ವಿಧಿವಶ! ಬಾರದ ಲೋಕಕ್ಕೆ ಸಂಚಾರ ಮಾಡಿದ ನಟ

ಸಂಚಾರಿ ಬದುಕಿಗೆ ಅದೃಷ್ಟ ತಂಡ ಮಂಗಳಮುಖಿ ಪಾತ್ರ

ಬಿ.ಎಸ್. ಲಿಂಗದೇವರು ನಿರ್ದೇಶನ ಮಾಡಿದ್ದ 'ನಾನು ಅವನಲ್ಲ ಅವಳು' ಚಿತ್ರದಲ್ಲಿ ಮಂಗಳಮುಖಿ ಪಾತ್ರ ಮಾಡಿದ್ದರು. ಅದು ಅವರ ವೃತ್ತಿ ಜೀವನಕ್ಕೆ ಬಹುದೊಡ್ಡ ಮೈಲೇಜ್ ನೀಡಿತ್ತು. ಆ ಚಿತ್ರದಲ್ಲಿ ಮಂಗಳಮುಖಿಯರ ಬದುಕಿನ ಕಥಾಹಂದರವಿತ್ತು. ಮಂಗಳಮುಖಿ ಪಾತ್ರ ಮಾಡುವ ದೊಡ್ಡ ಸವಾಲು ವಿಜಯ್‌ ಮುಂದಿತ್ತು. ಬಹಳ ಚಿಕ್ಕ ವಯಸ್ಸಿನಲ್ಲೇ ತುಂಬ ಸವಾಲು ಇರುವ ಪಾತ್ರ ಮಾಡುವ ಅವಕಾಶ ವಿಜಯ್‌ಗೆ ಸಿಕ್ಕಿತ್ತು. ಪಾತ್ರಕ್ಕಾಗಿ ಸಾಕಷ್ಟು ಅಧ್ಯಯನ ಮಾಡಿ, ಅವರೊಂದಿಗೆ ಬೆರೆತು, ಅವರ ಬದುಕಿನ ಶೈಲಿಯನ್ನು ಅರ್ಥ ಮಾಡಿಕೊಂಡು ವಿಜಯ್ ಪಾತ್ರ ನಿರ್ವಹಿಸಿದ್ದರು. ಅದಕ್ಕೆ ತಕ್ಕನಾದ ಪ್ರತಿಫಲವನ್ನೂ ಸಹ ವಿಜಯ್ ಪಡೆದುಕೊಂಡರು.

ನಟ ಸಂಚಾರಿ ವಿಜಯ್ ಮಿದುಳು ನಿಷ್ಕ್ರಿಯ ಆಗಿದೆ ಎಂದ ವೈದ್ಯರು

​32ನೇ ವಯಸ್ಸಿಗೆ ರಾಷ್ಟ್ರ ಪ್ರಶಸ್ತಿ ಪಡೆದ ವಿಜಯ್

'ನಾನು ಅವನಲ್ಲ ಅವಳು' ಚಿತ್ರದಲ್ಲಿನ ನಟನೆಗಾಗಿ ವಿಜಯ್‌ಗೆ 62ನೇ 'ಅತ್ಯುತ್ತಮ ನಟ' ರಾಷ್ಟ್ರ ಪ್ರಶಸ್ತಿ ದೊರಕಿತ್ತು. ಅದರ ಜೊತೆಗೆ ಅದೇ ಸಿನಿಮಾದ ನಟನೆಗೆ ರಾಜ್ಯ ಪ್ರಶಸ್ತಿ, ಪ್ರತಿಷ್ಠಿತ ಫಿಲ್ಮ್‌ಫೇರ್‌ ಪ್ರಶಸ್ತಿಯೂ ಸಿಕ್ಕಿತ್ತು. ಕನ್ನಡಕ್ಕೆ ಇದುವರೆಗೂ ಕನ್ನಡದಲ್ಲಿ 'ಅತ್ಯುತ್ತಮ ನಟ' ರಾಷ್ಟ್ರ ಪ್ರಶಸ್ತಿ ಬಂದಿರುವುದು ಕೇವಲ ಮೂರು ಜನರಿಗೆ ಮಾತ್ರ. 1975ರಲ್ಲಿ ವಾಸುದೇವ ರಾವ್, 1986ರಲ್ಲಿ ಚಾರು ಹಾಸನ್‌ಗೆ ಸಿಕ್ಕಿತ್ತು. ಆನಂತರ 2015ರಲ್ಲಿ ಸಂಚಾರಿ ವಿಜಯ್‌ಗೆ ಪ್ರಶಸ್ತಿ ಸಿಕ್ಕಿತ್ತು. ಅದೇ ವರ್ಷ ವಿಜಯ್ ನಟನೆಯ 'ಹರಿವು' ಚಿತ್ರಕ್ಕೂ ಕೂಡ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಅಲ್ಲದೆ, ಹರಿವು ಚಿತ್ರದಲ್ಲಿನ ವಿಜಯ್ ನಟನೆಗೂ ಭಾರಿ ಮೆಚ್ಚುಗೆ ಸಿಕ್ಕಿತ್ತು.

ಪವಾಡ ಸಂಭವಿಸಲಿ, ಸಂಚಾರಿ ವಿಜಯ್ ಬದುಕಲಿ; ಸಹಸ್ರಾರು ಅಭಿಮಾನಿಗಳ ಪ್ರಾರ್ಥನೆ

​ಆಕ್ಟ್-1978 ಸಿನಿಮಾದಲ್ಲಿ ನಟಿಸಿದ್ದ ವಿಜಯ್‌

ವಿಜಯ್ ಬದುಕಿದ್ದಾಗ ಕೊನೆಯದಾಗಿ ಕಾಣಿಸಿಕೊಂಡಿದ್ದು 'ಆಕ್ಟ್-1978' ಸಿನಿಮಾದಲ್ಲಿ. ವಿಶೇಷವೆಂದರೆ, ಮಂಸೋರೆ ನಿರ್ದೇಶನ ಮಾಡಿರುವ ಹರಿವು, ನಾತಿಚರಾಮಿ, ಆಕ್ಟ್-1978 ಈ ಮೂರು ಸಿನಿಮಾಗಳಲ್ಲೂ ವಿಜಯ್ ನಟಿಸಿದ್ದರು. ಆನಂತರ 'ರಿಕ್ತ', 'ಸಿಪಾಯಿ', 'ಕಿಲ್ಲಿಂಗ್ ವೀರಪ್ಪನ್', 'ನನ್ನ ಮಗಳೇ ಹೀರೋಯಿನ್', 'ಆರನೇ ಮೈಲಿ', 'ಆಡುವ ಗೊಂಬೆ' ಹೀಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಮೇಲೊಬ್ಬ ಮಾಯಾವಿ', 'ಲಂಕೆ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ವಿಜಯ್ ನಟಿಸಿದ್ದರು. ಅವೆಲ್ಲ ತೆರೆಕಾಣಬೇಕಿದೆ. ಪ್ರತಿಭಾನ್ವಿತ ನಟರಾಗಿದ್ದ ವಿಜಯ್‌ ಇನ್ನೂ ಅನೇಕ ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು, ಸಿನಿಪ್ರಿಯರನ್ನು ರಂಜಿಸುವ ಬಯಕೆ ಇಟ್ಟುಕೊಂಡಿದ್ದರು. ಆದರೆ, ಅದೆಲ್ಲವೂ ಕನಸಾಗಿಯೇ ಉಳಿದಿದೆ.

ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌