ಆ್ಯಪ್ನಗರ

ಜಿ.ವಿ. ಅಯ್ಯರ್ ನಿಕಟವರ್ತಿ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಜಿ. ಮೂರ್ತಿ ನಿಧನ!

ಕಲಾ ನಿರ್ದೇಶಕ, ಸಿನಿಮಾ ನಿರ್ದೇಶಕ, ನಿರ್ಮಾಪಕ ಜಿ. ಮೂರ್ತಿ ಶನಿವಾರ (ಅ.24) ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು. ಕನ್ನಡ ಮಾತ್ರವಲ್ಲದೆ, ಇತರೆ ಭಾಷೆಯ ಸಿನಿಮಾಗಳಿಗೂ ಅವರು ಕೆಲಸ ಮಾಡಿದ್ದರು.

Vijaya Karnataka Web 24 Oct 2020, 6:14 pm
ಕನ್ನಡ ಚಿತ್ರರಂಗದಲ್ಲಿ ವಿಶೇಷ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದ ನಿರ್ದೇಶಕ, ಕಲಾ ನಿರ್ದೇಶಕ ಜಿ. ಮೂರ್ತಿ ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಇಹಲೋಕ ತ್ಯಜಿಸಿದರು. ಮನೆಯಲ್ಲಿ ಜಾರಿ ಬಿದ್ದ ಪರಿಣಾಮ ಅವರ ತಲೆಗೆ ಪೆಟ್ಟಾಗಿತ್ತು. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಅವರು ಬ್ರೈನ್‌ ಹ್ಯಾಮರೇಜ್‌ನಿಂದಾಗಿ ಮೃತಪಟ್ಟರು ಎಂಬ ಮಾಹಿತಿ ಕೇಳಿಬಂದೆ.
Vijaya Karnataka Web ಜಿ. ಮೂರ್ತಿ


ಜಿ. ಮೂರ್ತಿ ಅವರು ಹಿರಿಯ ಚಿತ್ರ ನಿರ್ದೇಶಕ ಜಿ.ವಿ. ಅಯ್ಯರ್‌ ಅವರ ನಿಕಟವರ್ತಿಯಾಗಿದ್ದರು. ಅಯ್ಯರ್‌ ಅವರ ಸಿನಿಮಾಗಳಿಗೆ ಕಲಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಪಿ. ಕೃಷ್ಣಮೂರ್ತಿ ಅವರಿಗೆ ಸಹಾಯಕರಾಗಿ ಮೂರ್ತಿಯವರು ವೃತ್ತಿಜೀವನ ಆರಂಭಿಸಿದ್ದರು. ನಂತರ ಸ್ವತಂತ್ರ ನಿರ್ದೇಶಕರಾಗಿ 80ಕ್ಕೂ ಹೆಚ್ಚು ಸಿನಿಮಾಗಳಿಗೆ ಕಲಾನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಕನ್ನಡ ಚಿತ್ರರಂಗ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಚಿತ್ರಗಳಿಗೂ ಅವರು ಕೆಲಸ ಮಾಡಿದ್ದರು.

‘ಚಂದ್ರಚಕೋರಿ’ ಮತ್ತು ‘ಕುರುನಾಡು’ ಚಿತ್ರಗಳ ಅತ್ಯುತ್ತಮ ಕಲಾ ನಿರ್ದೇಶನಕ್ಕಾಗಿ ಅವರಿಗೆ ಎರಡು ಬಾರಿ ರಾಜ್ಯ ಪ್ರಶಸ್ತಿ ಸಂದಿದೆ. ‘ಕುರುನಾಡು’ ಅವರ ನಿರ್ದೇಶನದ ಚಿತ್ರವೂ ಹೌದು. ಅವರ ನಿರ್ದೇಶನದ ‘ಶಂಕರ ಪುಣ್ಯಕೋಟಿ’ ಚಿತ್ರಕ್ಕೆ ಮೂರನೇ ಅತ್ಯುತ್ತಮ ಚಿತ್ರ ರಾಜ್ಯಪ್ರಶಸ್ತಿ (2008-09) ಗೌರವ ಸಂದಿದೆ. ವೈಷ್ಣವಿ, ಹಳ್ಳಿಯ ಮಕ್ಕಳು, ಅರಳುವ ಹೂಗಳು, ಸಿದ್ದಗಂಗ, ಸುಗಂಧಿ ಸೇರಿದಂತೆ ಒಟ್ಟು ಎಂಟು ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು.

ನಟ ಶ್ರೀನಿವಾಸ ಪ್ರಭು ಅವರ ಜೊತೆಗೂಡಿ ‘ಬಿಂಬ’ ಸಿನಿಮಾ ನಿರ್ಮಿಸಿ, ನಿರ್ದೇಶಿಸಿದ್ದರು. ಒಂದೇ ಶಾಟ್‌ನಲ್ಲಿ ಒಬ್ಬನೇ ಕಲಾವಿದ ಅಭಿನಯಿಸಿದ್ದ ಜಗತ್ತಿನ ಮೊದಲ ಚಿತ್ರವಾಗಿ ಇದು ದಾಖಲಾಗಿದೆ. ಜಿ. ಮೂರ್ತಿ ನಿರ್ದೇಶನದ ಸಿನಿಮಾಗಳು ದೇಶ, ವಿದೇಶಗಳ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿವೆ. ಮೂರ್ತಿ ಅವರ ಅಕಾಲಿಕ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌