ಆ್ಯಪ್ನಗರ

'ಮುನಿರತ್ನ ಅವರ ಮಾನವೀಯ ಗುಣಕ್ಕಾಗಿ ಪ್ರಚಾರ ಮಾಡುತ್ತಿದ್ದೇನೆ'- ನಟ ದರ್ಶನ್‌

ನಟ ದರ್ಶನ್‌ ಅವರು ರಾಜರಾಜೇಶ್ವರಿ ನಗರ ಉಪ ಚುನಾವಣೆಯ ಪ್ರಚಾರ ಕಣಕ್ಕೆ ಇಳಿದಿದ್ದಾರೆ. ಇಂದು (ಅ.30) ಬಿಜೆಪಿ ಪಕ್ಷದ ಅಭ್ಯರ್ಥಿ ಮುನಿರತ್ನ ಅವರ ಪರ ಪ್ರಚಾರ ಮಾಡುತ್ತಿದ್ದಾರೆ. ಅಷ್ಟಕ್ಕೂ ಅವರ ಪರ ಪ್ರಚಾರ ಮಾಡಲು 'ಡಿ ಬಾಸ್' ನೀಡಿದ ಕಾರಣವೇನು?

Vijaya Karnataka Web 30 Oct 2020, 1:32 pm
ರಾಜ್ಯದಲ್ಲಿ ಉಪಚುನಾವಣಾ ಕಣ ರಂಗೇರುತ್ತಿದೆ. ರಾಜರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ನಿರ್ಮಾಪಕ ಮುನಿರತ್ನ, ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇಂದು (ಅ.30) ಅವರ ಪರವಾಗಿ ನಟ ದರ್ಶನ್ ಪ್ರಚಾರ ಮಾಡುತ್ತಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಶುರುವಾಗಿರುವ ಈ ಚುನಾವಣಾ ಪ್ರಚಾರ ರಾತ್ರಿವರೆಗೂ ನಡೆಯಲಿದೆ. ಅಂದಹಾಗೆ, ಮನಿರತ್ನ ಅವರ ಪರ ಪ್ರಚಾರ ಮಾಡುವುದಕ್ಕೆ ಕಾರಣವೇನು ಎಂಬುದನ್ನು 'ಡಿ ಬಾಸ್' ಹೇಳಿಕೊಂಡಿದ್ದಾರೆ.
Vijaya Karnataka Web Munirathna


ಪ್ರಚಾರಕ್ಕೆ ಹೋಗುವುದಕ್ಕೆ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ದರ್ಶನ್‌, ಕೊರೊನಾ ಸಂಕಷ್ಟದಲ್ಲಿ ಮುನಿರತ್ನ ತೋರಿದ ಮಾನವೀಯತೆ ಕಂಡು ನಾನು ಅವರ ಪರ ಪ್ರಚಾರ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. 'ಇಡೀ ಪ್ರಪಂಚಕ್ಕೆ ಕೊರೊನಾ ಸಮಸ್ಯೆ ಆಗಿದೆ. ಈ ಸಮಯದಲ್ಲಿ ಎಲ್ಲರೂ ಹೇಗೆಲ್ಲ ಕಷ್ಟಪಟ್ಟಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಮುನಿರತ್ನ ಓರ್ವ ಎಂಎಲ್ಎ, ನಿರ್ಮಾಪಕ ಅನ್ನೋದನ್ನೆಲ್ಲ ಸೈಡ್‌ಗೆ ಇಡೋಣ. ಕೊರೊನಾ ಟೈಮ್‌ನಲ್ಲಿ ಮನೆಯಲ್ಲಿ ಲಕ್ಷ ಲಕ್ಷ ದುಡ್ಡು ಇಟ್ಟುಕೊಂಡಿರುವವನು ಕೂಡ ಕ್ಯೂ ಅಲ್ಲಿ ನಿಂತುಕೊಂಡು ಅಕ್ಕಿ ತಗೊಂಡಿರುವ ಕಥೆಗಳು ಇದ್ದಾವೆ' ಎಂದಿದ್ದಾರೆ ದರ್ಶನ್‌.

'ಮುನಿರತ್ನ ಎಂಎಲ್‌ಎ ಆಗಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಪಕ್ಕಕ್ಕೆ ಇಡೋಣ. ಆದರೆ, ಕೊರೊನಾ ಸಮಯದಲ್ಲಿ ಅವರು ಒಂದಷ್ಟು ದಿವಸ ದಾಸೋಹ ನಡೆಸಿದರು. ನನ್ನ ಪ್ರಕಾರ, ಅದು ತುಂಬ ದೊಡ್ಡದು. ಅವರು ನನಗೆ ಸಿನಿಮಾ ನಿರ್ಮಾಣ ಮಾಡಿರಬಹುದು, ಕಾರ್ಪೋರೇಟರ್, ಶಾಸಕ ಎಲ್ಲವೂ ಆಗಿರಬಹುದು. ಆದರೆ, ಕಷ್ಟದ ಸಮಯದಲ್ಲಿ ಜನರಿಗೆ ಸಹಾಯ ಮಾಡಿದ್ರಲ್ಲ, ಅದು ಮಾನವೀಯತೆ. ಆ ಒಂದು ಕಾರಣ ಸಾಕಲ್ಲವೇ ನಾನು ಅವರಿಗೆ ಸಪೋರ್ಟ್ ಮಾಡೋಕೆ' ಎಂದು ಹೇಳಿದ್ದಾರೆ ದರ್ಶನ್‌.

ಮುನಿರತ್ನ ಪರವಾಗಿ ಆರ್‌.ಆರ್‌. ನಗರದಲ್ಲಿ ನಟ ದರ್ಶನ್‌ ಚುನಾವಣಾ ಪ್ರಚಾರ! ರಂಗೇರಿದ ಅಖಾಡ

'ಕೆಲಸ ಕಾರ್ಯಕ್ಕಿಂತ ಮಾನವೀಯತೆ ದೊಡ್ಡದು, ನಾನು ಅದನ್ನು ನೋಡುತ್ತೇನೆ. ಆ ಒಂದೇ ಕಾರಣಕ್ಕಾಗಿ ನಾನು ಹೋಗುತ್ತಿದ್ದೇನೆ. ಕೊರೊನಾ ಇರೋದ್ರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ನಾವು ಮಾಸ್ಕ್ ಹಾಕಿಕೊಂಡೇ ಪ್ರಚಾರ ಮಾಡುತ್ತೇವೆ. ಇಲ್ಲಿವರೆಗೂ ನಾನು ಯಾವುದೇ ಪಕ್ಷದ ಹೆಸರೇಳಿ ಪ್ರಚಾರ ಮಾಡಿಲ್ಲ. ವ್ಯಕ್ತಿಗಾಗಿ ಪ್ರಚಾರ ಮಾಡಿದ್ದೇನೆ. ಮುನಿರತ್ನ ಅವರು ಎಲ್ಲೆಲ್ಲಿ ಪ್ರಚಾರಕ್ಕೆ ಕರೆದುಕೊಂಡು ಹೋಗ್ತಾರೋ, ಅಲ್ಲಿಗೆ ಹೋಗ್ತಿನಿ' ಎಂದು ಹೇಳಿದ್ದಾರೆ ದರ್ಶನ್. ಇನ್ನು, ಕಳೆದ ಬಾರಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಅವರು ಸುಮಲತಾ ಅಂಬರೀಷ್‌ ಪರ ಪ್ರಚಾರ ಮಾಡಿದ್ದರು. ಆಗ ಕಣದಲ್ಲಿ ನಿಖಿಲ್‌ ಕುಮಾರ್ ಪ್ರತಿಸ್ಪರ್ಧಿಯಾಗಿದ್ದರು. ಈಗ ರಾಜರಾಜೇಶ್ವರಿನಗರದಲ್ಲೂ ನಿಖಿಲ್, ತಮ್ಮ ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಕೇಳಿದ್ದಕ್ಕೆ, 'ನಿಖಿಲ್ ಕುಮಾರ್ ಅವರು, ಅವರ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡ್ತಿದ್ದಾರೆ. ನಾವು ನಿರ್ಮಾಪಕರ ಪರವಾಗಿ, ಒಂದು ಮಾನವೀಯ ದೃಷ್ಟಿಯಿಂದ ಪ್ರಚಾರಕ್ಕೆ ಹೋಗುತ್ತಿದ್ದೇನೆ' ಎಂದು ದರ್ಶನ್ ಹೇಳಿದ್ದಾರೆ.

ಆರ್‌ಆರ್‌ ನಗರ: ಕುಸುಮಾ ಪರವಾಗಿ ಡಿಕೆಶಿ, ಸಿದ್ದರಾಮಯ್ಯ ರೋಡ್ ಶೋ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌