ಆ್ಯಪ್ನಗರ

ಲಾಕ್‌ಡೌನ್‌ ಕಷ್ಟಕಾಲದಲ್ಲಿ ಸರಳವಾಗಿ ಮದುವೆಯಾದ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಇವರು!

ಚಂದನವನದಲ್ಲೀಗ ವಿವಾಹ ಕಾಲ. ಕೊರೊನಾದಿಂದಾಗಿ ಎಲ್ಲರೂ ಪರದಾಡುತ್ತಿರುವಾಗ ಸ್ಯಾಂಡಲ್‌ವುಡ್‌ನ ಅನೇಕ ನಟ ನಟಿಯರು ತಾವು ಪ್ರೀತಿಸಿದವರನ್ನು ಮದುವೆಯಾಗಿ ಎಲ್ಲರಿಗೆ ಸರ್‌ಪ್ರೈಸ್‌ ನೀಡಿದ್ದಾರೆ.

Vijaya Karnataka Web 7 Nov 2020, 5:31 pm
(ಪದ್ಮಾ ಶಿವಮೊಗ್ಗ)
Vijaya Karnataka Web sandalwood celebrities who got married during coronavirus lockdown
ಲಾಕ್‌ಡೌನ್‌ ಕಷ್ಟಕಾಲದಲ್ಲಿ ಸರಳವಾಗಿ ಮದುವೆಯಾದ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಇವರು!

ಚಿತ್ರರಂಗದಲ್ಲಿ ಬಿಝಿಯಾಗಿದ್ದವರೆಲ್ಲಾ ಕೊರೊನಾ ವೈರಸ್‌ ಹರಡುವ ಭೀತಿಯಿಂದ ಉಂಟಾದ ಲಾಕ್‌ಡೌನ್‌ನಿಂದಾಗಿ ಬಿಡುಗಡೆ ಇಲ್ಲದಂತೆ ಮನೆಯಲ್ಲೇ ಬಂಧಿತರಾಗಿದ್ದರು. ಈ ಸಮಯ ಅವರನ್ನು ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಯೋಚಿಸುವಂತೆ ಮಾಡಿದ್ದರೆ ಆಶ್ಚರ್ಯವಿಲ್ಲ. ಈ ಕಾರಣಕ್ಕೋ ಏನೋ, ಹಲವು ವರ್ಷಗಳಿಂದ ಗುಟ್ಟಾಗಿ ಪ್ರೀತಿಸುತ್ತಿದ್ದ ನಟ, ನಟಿಯರು, ತಂತ್ರಜ್ಞರು ಸದ್ದಿಲ್ಲದೆ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಳೆದ ಆರು ತಿಂಗಳಲ್ಲಿ ಲಾಕ್‌ಡೌನ್‌ ಕಟ್ಟುಪಾಡುಗಳ ನಡುವೆಯೂ ಪ್ರೀತಿಸಿದವರನ್ನು ಸರಳವಾಗಿ ಮದುವೆಯಾಗಿರುವ ಸೆಲೆಬ್ರಿಟಿಗಳ ಪಟ್ಟಿ ದೀರ್ಘವಿದೆ. ಇವರಲಿ ಕೆಲವರು ದಿಢೀರ್‌ ಎಂದು ವಿವಾಹವಾಗಿದ್ದಾರೆ. ಇನ್ನು ಕೆಲವರು ಬಹುದಿನಗಳಿಂದ ಪ್ಲಾನ್‌ ಮಾಡಿದ್ದರೂ ಈ ಸಮಯದಲ್ಲಿ ವಿವಾಹವಾಗಿದ್ದಾರೆ.

ಚಿತ್ರರಂಗದವರೆಲ್ಲರ ಸಮ್ಮುಖದಲ್ಲಿ ಅದ್ಧೂರಿ ಮದುವೆಯ ಕನಸು ಕಂಡಿದ್ದ ಇವರೆಲ್ಲ ಸರಳವಾಗಿ ಸಂತಸದಿಂದ ಮದುವೆಯಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಮನೆಯಲ್ಲೇ ಲಾಕ್‌ ಆದ ಸೆಲೆಬ್ರಿಟಿಗಳಲ್ಲಿ ಸಾಲಾಗಿ ವೈವಾಹಿಕ ಬದುಕಿಗೆ ಕಾಲಿಟ್ಟವರ ಪಟ್ಟಿ ಉದ್ದ ಇದೆ. ರಾಜ್ ದೀಪಕ್‌ ಶೆಟ್ಟಿ, ಎ.ಪಿ. ಅರ್ಜುನ್‌, ಚಂದು ಗೌಡ, ಧನು ಗೌಡ ಸೇರಿದಂತೆ ಅನೇಕರು ದಾಂಪತ್ಯ ಜೀವನ ಆರಂಭಿಸಿದ್ದಾರೆ. ಮುಂದೆ ಓದಿ...

​ಸಿಂಪಲ್‌ ಮದುವೆಗೆ ಕಾರಣವಾದ ಲಾಕ್‌ಡೌನ್‌

ಕೊಲ್ಲೂರಿನಲ್ಲಿ ಗೌರಿ ಮದುವೆ: 'ರಾಜಹಂಸ' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಟ ಗೌರಿ ಶಂಕರ್‌ ಬಹುಕಾಲದ ಗೆಳತಿ ಅರುಣಾ ಅವರನ್ನು ಕೊಲ್ಲೂರು ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ಕೈಹಿಡಿದಿದ್ದಾರೆ. ಸರಳವಾಗಿ ಮನೆಯವರ ಸಮ್ಮುಖದಲ್ಲಿ ಅಕ್ಟೋಬರ್‌29ರಂದು ವಿವಾಹವಾಗಿದ್ದಾರೆ.

ಚಂದು ಗೌಡ-ಶಾಲಿನಿ: ಲಕ್ಷ್ಮೀ ಬಾರಮ್ಮ ಧಾರಾವಾಹಿ ಖ್ಯಾತಿಯ ನಟ ಚಂದನ್‌ ಗೌಡ ಮಾಡೆಲ್‌ ಶಾಲಿನಿಯವರನ್ನು ಕಳೆದ ವಾರ ಮದುವೆಯಾಗಿದ್ದಾರೆ. ಆತ್ಮೀಯರಷ್ಟೇ ಈ ವಿವಾಹದಲ್ಲಿ ಪಾಲ್ಗೊಂಡಿದ್ದಾರೆ.

ರಾಜ್‌ ದೀಪಕ್‌ ಶೆಟ್ಟಿ ಕಲ್ಯಾಣ: ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ಖಳನಟನಾಗಿ ಹೆಸರು ಮಾಡಿರುವ ರಾಜ್‌ ದೀಪಕ್‌ ಶೆಟ್ಟಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳತಿ ಸೋನಿಯಾ ರಾಡ್ರಿಗಸ್‌ ಅವರನ್ನು ಸರಳವಾಗಿ ಮದುವೆಯಾದರು. ನ.4ರಂದು ಪಣಂಬೂರಿನ ನಂದನೇಶ್ವರ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ.

also read: ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯದಂತೆ ಮದುವೆ ಆದ ಬಹುಭಾಷಾ ನಟ ರಾಜ್ ದೀಪಕ್ ಶೆಟ್ಟಿ

​ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ

ಪ್ರಣತಿ-ಗಣೇಶ್‌: ಒಂದ್‌ ಕಥೆ ಹೇಳ್ಲಾ, ಫ್ಯಾನ್‌ ಮತ್ತಿತರ ಚಿತ್ರಗಳಲ್ಲಿ ನಟಿಸಿದ್ದ ನಟಿ ಪ್ರಣತಿ ಗಾಣಿಗ ತಮ್ಮ ಗೆಳೆಯ ಗಣೇಶ್‌ ಕಿಣಿಯವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಇವರಿಬ್ಬರ ಮದುವೆ ಸರಳವಾಗಿ ಶಿವಮೊಗ್ಗದ ಪಂಚಮುಖಿ ದೇವಸ್ಥಾನದಲ್ಲಿ ನಡೆಯಿತು. ಇಬ್ಬರೂ ಶಿವಮೊಗ್ಗದವರಾಗಿದ್ದು, ಮದುವೆ ಮನೆಯಲ್ಲಿ ಆದ ಪರಿಚಯ ಪ್ರೇಮಕ್ಕೆ ತಿರುಗಿತ್ತು.

ಧನು ಗೌಡ-ರಾಣಿ: 'ಹೊಂಬಣ್ಣ' ಚಿತ್ರದ ನಟ ಧನು ಗೌಡ ದೀರ್ಘ ಕಾಲದ ಗೆಳತಿ ರಾಣಿ ಜತೆ ಏಪ್ರಿಲ್‌ 10ರಂದು ಶಿವಮೊಗ್ಗದಲ್ಲಿ ಸರಳವಾಗಿ ಮದುವೆಯಾದರು. ರಾಣಿ ಕೂಡಾ ನಟಿ. 'ನೆನಪುಗಳು' ಚಿತ್ರದಲ್ಲಿ ನಟಿಸಿದ್ದರು.

ಅರ್ಜುನ ವಿವಾಹ : ಅಂಬಾರಿ, ಅದ್ಧೂರಿ, ಕಿಸ್‌ ಮತ್ತಿತರ ಚಿತ್ರಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ಎ.ಪಿ. ಅರ್ಜುನ್‌ ಹಾಸನದ ಅನ್ನಪೂರ್ಣ ಅವರನ್ನು ಸ್ವಗೃಹದಲ್ಲಿ ಸರಳವಾಗಿ ಮದುವೆಯಾದರು. ಇವರ ಮದುವೆಗೆ ನಟ ಧ್ರುವ ಸರ್ಜಾ, ನಟ ವಿರಾಟ್‌ ಮತ್ತಿತರರು ಹಾಜರಿದ್ದು ಶುಭ ಹಾರೈಸಿದ್ದರು.

also read: 'ಮೆಗಾ ಸ್ಟಾರ್' ಕುಟುಂಬದ ಏಕೈಕ ನಟಿ ನಿಹಾರಿಕಾ ವಿವಾಹಕ್ಕೆ ದಿನಾಂಕ ನಿಗದಿ! ಹೇಗಿದೆ ಮದುವೆ ತಯಾರಿ?

​ಸುಮನಾ ಕಿತ್ತೂರು, ಮಯೂರಿಗೆ ಕಂಕಣ ಭಾಗ್ಯ

ಮೇ. 25ರಂದು ನಿರ್ದೇಶಕಿ ಸುಮನಾ ಕಿತ್ತೂರು ಕೂಡ ಪಾಂಡಿಚೆರಿಯಲ್ಲಿ ಸರಳವಾಗಿ ಗೆಳೆಯ ಶ್ರೀನಿವಾಸ್‌ರನ್ನು ಮದುವೆಯಾಗಿದ್ದಾರೆ. ಕಿರುತೆರೆ, ಹಿರಿತೆರೆ ಎರಡರಲ್ಲೂ ಬಿಝಿಯಾಗಿರುವ ನಟಿ ಮಯೂರಿ ತಮ್ಮ ಬಹುಕಾಲದ ಗೆಳೆಯ ಅರುಣ್‌ ಅವರನ್ನು ಕುಟುಂಬಸ್ಥರ ಸಮ್ಮುಖದಲ್ಲಿ ಜೂನ್‌ 12ರಂದು ನಾಲ್ಕು ಜನ ಆಪ್ತರ ಸಮ್ಮುಖದಲ್ಲಿ ವಿವಾಹವಾದರು.

ನಿಶ್ಚಿತಾರ್ಥ ಮಾಡಿಕೊಂಡ ನಟ-ನಟಿಯರು

ನಟಿ ಶುಭಾ ಪೂಂಜಾ ಗೆಳೆಯ ಸುಮಂತ್‌ ಮಹಾಬಲರನ್ನು ಮದುವೆಯಾಗಲಿರುವ ಸಂಗತಿ ಬಹಿರಂಗಪಡಿಸಿದ್ದಾರೆ. ಮಂಗಳೂರು ಮೂಲದ ಸುಮಂತ್‌ ಉದ್ಯಮಿಯಾಗಿದ್ದಾರೆ. 'ಹ್ಯಾಪಿ ನ್ಯೂ ಯಿಯರ್‌' ಚಿತ್ರದಲ್ಲಿ ನಟಿಸಿದ್ದ ನಟಿ ರಾಜಶ್ರೀ ಪೊನ್ನಪ್ಪ ಸಹ ಬಾಲಿವುಡ್‌ನ ಕಂಟೆಂಟ್‌ ರೈಟರ್‌ ಅಧೀರ್‌ ಭಟ್‌ ಎಂಬವರ ಜತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

also read: ಮದುವೆಯಾಗುವ ಹುಡುಗನ ಪರಿಚಯ ಮಾಡಿಕೊಟ್ಟ ನಟಿ ರಾಜಶ್ರೀ ಪೊನ್ನಪ್ಪ!

​ಲಾಕ್‌ಡೌನ್‌ನಲ್ಲಿ ನಿಖಿಲ್‌ ಹೊಸ ಜೀವನ ಆರಂಭ

ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರ್‌ ಮತ್ತು ರೇವತಿ ಮದುವೆಯಲ್ಲಿ ರಾಜಕೀಯ ಮತ್ತು ಚಿತ್ರರಂಗ ಎರಡೂ ಕ್ಷೇತ್ರದವರು ಒಂದೆಡೆ ಸೇರುತ್ತಾರೆ ಎನ್ನಲಾಗಿತ್ತು. ಆದರೆ ಕೊರೊನಾ ವೈರಸ್‌ ಹಾವಳಿಯ ಕಾರಣಕ್ಕೆ ಇದು ಸರಳವಾಗಿ ನಡೆಯಿತು. ರಾಮನಗರದ ಸಮೀಪ ಎಕರೆಗಟ್ಟಲೆ ಜಾಗದಲ್ಲಿ ವಿವಾಹಕ್ಕಾಗಿ ಪೆಂಡಾಲ್‌ ನಿರ್ಮಾಣ ಕಾರ್ಯಕ್ಕೆ ಕೈಹಾಕಿದ್ದರು. ಆದರೆ, ಅಷ್ಟರಲ್ಲಿ ಕೊರೊನಾ ಎಲ್ಲಕ್ಕೂ ತಣ್ಣೀರೆರೆಚಿತು. ಎಲ್ಲೆಡೆ ಲಾಕ್‌ಡೌನ್‌ ಜಾರಿ ಆಗಿದ್ದರಿಂದ, ಕೊನೆಗೆ ನಟ ನಿಖಿಲ್‌ ಕುಮಾರ್‌ ಏಪ್ರಿಲ್‌ 17ರಂದು ರೇವತಿಯವರನ್ನು ತಮ್ಮ ತೋಟ ಮನೆಯಲ್ಲೇ ಸರಳವಾಗಿ ಎರಡೂ ಕುಟುಂಬಗಳ ಬೆರಳೆಣಿಕೆಯಷ್ಟು ಮಂದಿಯ ಸಮ್ಮುಖದಲ್ಲಿ ಮದುವೆಯಾದರು.

also read: 'ಡಾರ್ಲಿಂಗ್' ಕೃಷ್ಣ-ಮಿಲನಾ ಮದುವೆಗೆ ದಿನಾಂಕ ಫಿಕ್ಸ್! ಪ್ರೇಮಿಗಳ ದಿನದಂದು ನಡೆಯಲಿದೆ ಕಲ್ಯಾಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌