ಆ್ಯಪ್ನಗರ

ಕೆಪಿಎಸ್‌ಸಿ ಪರೀಕ್ಷಾ ಅಕ್ರಮ ಹಿನ್ನೆಲೆ ಎಸ್‌ಡಿಎ, ಎಫ್‌ಡಿಎ ಅಭ್ಯರ್ಥಿ ಆಯ್ಕೆ ರದ್ದು

2018 ರಲ್ಲಿ ನಡೆದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ), ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಪರೀಕ್ಷೆಯಲ್ಲಿ ಆಯ್ಕೆಯಾದ 20 ಅಭ್ಯರ್ತಿಗಳನ್ನು ಪಟ್ಟಿಯಿಂದ...

Vijaya Karnataka Web 22 Oct 2020, 9:51 am
2018 ರಲ್ಲಿ ನಡೆದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ), ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಪರೀಕ್ಷೆಯಲ್ಲಿ ಆಯ್ಕೆಯಾದ 20 ಅಭ್ಯರ್ತಿಗಳನ್ನು ಪಟ್ಟಿಯಿಂದ ಕೈ ಬಿಡುವಂತೆ ಗೃಹ ಇಲಾಖೆ ಪತ್ರ ಬರೆದಿದೆ. ಇದರೊಂದಿಗೆ ಕೆಪಿಎಸ್‌ಸಿ'ಯ ಮತ್ತೊಂದು ಪರೀಕ್ಷಾ ಅಕ್ರಮ ಬಯಲಾಗಿದೆ.
Vijaya Karnataka Web kpsc
kpsc exam illegal background latest news


ಎಸ್‌ಡಿಎ, ಎಫ್‌ಡಿಎ ಹುದ್ದೆಗಳ ಭರ್ತಿಗಾಗಿ ಆಯೋಗ 2018ರಲ್ಲಿ ರಾಜ್ಯಾದ್ಯಂತ ಪರೀಕ್ಷೆ ನಡೆಸಿತ್ತು. ಕಲಬರುಗಿ ಮತ್ತು ಬೆಳಗಾವಿಯ ಗೋಕಾಕ್‌ನ ಒಂದೇ ಕೋಣೆಯಲ್ಲಿ ಪರೀಕ್ಷೆ ಬರೆದ ಎಲ್ಲರೂ ಅಯ್ಕೆಯಾಗಿದ್ದರು. ಅದರಲ್ಲಿ ಕಲಬುರಗಿಯಲ್ಲಿ 28 ಮತ್ತು ಗೋಕಾಕ್‌ನಲ್ಲಿ 17 ಜನ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ದೂರುಗಳು ಬಂದಿದ್ದವು. ಈ ಬಗ್ಗೆ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಿಸಲಾಗಿತ್ತು.

ತನಿಖೆ ನಡೆಸಿದ ಪೊಲೀಸರಿಗೆ ಅಕ್ರಮ ಪತ್ತೆಯಾದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪಟ್ಟಿಯಲ್ಲಿ ಕೆಲವು ಅಭ್ಯರ್ಥಿಗಳನ್ನು ಆರೋಪಿಗಳನ್ನಾಗಿ ಪೊಲೀಸರು ಹೆಸರಿಸಿದ್ದರು. ಈ ಆರೋಪಿತ ಅಭ್ಯರ್ಥಿಗಳನ್ನು ಎಫ್‌ಡಿಎ ಮತ್ತು ಎಸ್‌ಡಿಎ ಅಂತಿಮ ಪಟ್ಟಿಯಿಂದ ತೆಗೆದುಹಾಕುವಂತೆ ಒಳಾಡಳಿತ ಇಲಾಖೆ ಕಾರ್ಯದರ್ಶಿ ಡಿ.ರೂಪಾ ಮೌದ್ಗಿಲ್ ಅವರು ಕೆಪಿಎಸ್‌ಸಿ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಜತೆಗೆ ಪರಿಷ್ಕೃತ ಪಟ್ಟಿ ಪ್ರಕಟಿಸುವಂತೆ ಸೂಚಿಸಿದ್ದಾರೆ.

KPSC ಇಂದ ನ್ಯಾಯಾಂಗ ನಿಂದನೆ ಮೇಲ್ನೋಟಕ್ಕೆ ಸಾಬೀತು: ಹೈಕೋರ್ಟ್‌ನಿಂದ ನೋಟಿಸ್

ಆರೋಪಿಗಳ ವಿರುದ್ಧ ಐಪಿಸಿ 406, 408, 409, 417, 418, 120 B, 379, 201, 166, 109 (ಸರ್ಕಾರಿ ನೌಕರನಿಂದ ನಂಬಿಕೆ ದ್ರೋಹ) ಮತ್ತು 'ಕೆಪಿಎಸ್‌ಸಿ ಎಕ್ಸಾಮಿನೇಷನ್ ಮಾಲ್‌ ಪ್ರ್ಯಾಕ್ಟೀಸ್ ಆಕ್ಟ್ ' ಅಡಿ 20 ಅಭ್ಯರ್ಥಿಗಳ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಪಡಿಸಿ ಕೋರ್ಟ್‌ಗೆ ಸಲ್ಲಿಸಲಾಗಿದೆ ಎಂದು ಡಿ.ರೂಪಾ ಮೌದ್ಗಿಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಆರೋಪಿಗಳು ಸಿಕ್ಕ ಕೆಲಸ ಕಳೆದುಕೊಳ್ಳವುದಲ್ಲದೆ ಕಾನೂನು ಕ್ರಮವನ್ನೂ ಎದುರಿಸುವುದು ಅನಿವಾರ್ಯವಾಗಿದೆ.

ಪರಿಶ್ರಮ ಪಟ್ಟು ಓದಿ ಪರೀಕ್ಷೆ ಬರೆಯುವ ಪ್ರತಿಭಾವಂತರಿಗೆ ಅನ್ಯಾಯ ಆಗುತ್ತಿದೆ. ಹೀಗಾಗಿ ಪರೀಕ್ಷಾ ಅಕ್ರಮ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಲಬುರಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದೀಪಕ್ ನಾಗ್ ಪುಣ್ಯಶೆಟ್ಟಿ ಅವರು ದೂರು ಸಲ್ಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಾಗ ಅಕ್ರಮ ನಡೆದಿರುವುದು ಸಾಬೀತಾಗಿದೆ. ಕಲಬುರಗಿಯ ಗ್ಲೋಬಲ್ ಪರೀಕ್ಷಾ ಕೇಂದ್ರದ ಒಂದೇ ಕೋಣೆಯಲ್ಲಿ ಹಾಜರಾಗಿದ್ದ ಎಲ್ಲ 28 ಜನರೂ ನೌಕರಿಗೆ ಆಯ್ಕೆಯಾಗಿದ್ದರು. ಎಲ್ಲರೂ ಒಟ್ಟಿಗೇ ಆಯ್ಕೆಯಾಗಲು ಹೇಗೆ ಸಾಧ್ಯ? ಎಂಬ ವಿಚಾರ ಎಲ್ಲ ಕಡೆ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ತನಿಖೆಗೆ ಇತರೆ ಅಭ್ಯರ್ಥಿಗಳು ಒತ್ತಾಯಿಸಿದ್ದರು.

ಒಂದೇ ಊರಿನವರು - ಒಂದೇ ಕೋಣೆ

ಎಸ್‌ಡಿಎ, ಎಫ್‌ಡಿಎ ಆಯ್ಕೆಯಾದ ಬಹುತೇಕರು ಒಂದೇ ಊರಿನವರು, ಅದರಲ್ಲೂ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿಗೆ ಸೇರಿದವರೇ ಹೆಚ್ಚಿನವರು ಎಂಬುದು ಅಚ್ಚರಿಗೆ ಕಾರಣವಾಗಿತ್ತು. ಗೋಕಾಕ್ ನವರೂ ಬಹಳಷ್ಟು ಮಂದಿ ಇದ್ದರು. ಎಲ್ಲರ ಕ್ರಮ ಸಂಖ್ಯೆಗಳೂ ಅಕ್ಕಪಕ್ಕವೇ ಇದ್ದವು ಎನ್ನವುದು ಮತ್ತೊಂದು ಅಚ್ಚರಿ.

ಬ್ಯುಸಿನೆಸ್‌ ಸ್ಟಡಿ ಪದವೀಧರರಿಗೆ ಈ ಎಲ್ಲಾ ಕ್ಷೇತ್ರದಲ್ಲಿವೆ ಉದ್ಯೋಗಾವಕಾಶ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ