Please enable javascript.ಭೂಸ್ವಾಧೀನ ಕಾಯಿದೆ ಕಾಂಗ್ರೆಸಿಗೆ ಸಂಜೀವಿನಿ: ಜೈರಾಂ ರಮೇಶ್ - Land Acquisition Act, Congress Reviver: Jairam Ramesh - Vijay Karnataka

ಭೂಸ್ವಾಧೀನ ಕಾಯಿದೆ ಕಾಂಗ್ರೆಸಿಗೆ ಸಂಜೀವಿನಿ: ಜೈರಾಂ ರಮೇಶ್

ವಿಕ ಸುದ್ದಿಲೋಕ 26 Apr 2015, 4:00 am
Subscribe

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 1978 ರಲ್ಲಿ ನಡೆದ ಉಪ ಚುನಾವಣೆ ಕಾಂಗ್ರೆಸ್‌ಗೆ ಸಂಜೀವಿನಿಯಾದಂತೆ ಭೂಸ್ವಾಧೀನ ಕಾಯಿದೆ ವಿರುದ್ಧದ ಹೋರಾಟವು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸಂಜೀವಿನಿಯಾಗಲಿದೆ ಎಂದು ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್ ಹೇಳಿದ್ದಾರೆ.

land acquisition act congress reviver jairam ramesh
ಭೂಸ್ವಾಧೀನ ಕಾಯಿದೆ ಕಾಂಗ್ರೆಸಿಗೆ ಸಂಜೀವಿನಿ: ಜೈರಾಂ ರಮೇಶ್
ಬೆಂಗಳೂರು: ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 1978 ರಲ್ಲಿ ನಡೆದ ಉಪ ಚುನಾವಣೆ ಕಾಂಗ್ರೆಸ್‌ಗೆ ಸಂಜೀವಿನಿಯಾದಂತೆ ಭೂಸ್ವಾಧೀನ ಕಾಯಿದೆ ವಿರುದ್ಧದ ಹೋರಾಟವು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸಂಜೀವಿನಿಯಾಗಲಿದೆ ಎಂದು ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಭೂಸ್ವಾಧೀನ ಕಾಯಿದೆ ವಿರುದ್ಧ ಕಾಂಗ್ರೆಸ್ ಸಂಘಟಿಸಿರುವ ರಾಷ್ಟ್ರವ್ಯಾಪಿ ಆಂದೋಲನದ ಬಗ್ಗೆ ಮಾಹಿತಿ ನೀಡಲು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಶನಿವಾರ ಮಾತನಾಡಿದ ಅವರು, ಹೀಗೆ ಹೇಳುವ ಮೂಲಕ ಈ ಹೋರಾಟದಲ್ಲಿ ರಾಜಕೀಯ ಲಾಭದ ಹುಡುಕಾಟವೂ ಇದೆ ಎನ್ನುವ ಸ್ಪಷ್ಟ ಸುಳಿವಿತ್ತರು.

‘‘ತುರ್ತು ಪರಿಸ್ಥಿತಿ ಹೇರಿಕೆ ನಂತರದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುಂಡಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ವೈಯಕ್ತಿಕವಾಗಿಯೂ ಸೋಲಾಗಿತ್ತು. ಬಳಿಕ ಕರ್ನಾಟಕದ ಚಿಕ್ಕಮಗಳೂರು ಕ್ಷೇತ್ರದ ಅಂದಿನ ಸಂಸದ ಡಿ.ಬಿ. ಚಂದ್ರೇಗೌಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪ ಚುನಾವಣೆಯಲ್ಲಿ ಇಂದಿರಾ ಸ್ಪರ್ಧೆಗೆ ದಾರಿ ಮಾಡಿಕೊಟ್ಟಿದ್ದರು. ಆಗಿನ ಉಪ ಚುನಾವಣೆಯಲ್ಲಿನ ಇಂದಿರಾ ಗೆಲುವನ್ನು ಕಾಂಗ್ರೆಸ್‌ನ ಮರು ಹುಟ್ಟು ಎಂದೇ ವಿಶ್ಲೇಷಿಸಲಾಗಿತ್ತು. ಈಗ ಕೈಗೆತ್ತಿಕೊಂಡಿರುವ ಭೂಸ್ವಾಧೀನ ಕಾಯಿದೆ ವಿರುದ್ಧದ ಹೋರಾಟವೂ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೆರವಿಗೆ ಬರಲಿದೆ,’’ ಎಂದು ಜೈರಾಂ ರಮೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಲಾಭಕ್ಕಾಗಿಯೇ ಕಾಂಗ್ರೆಸ್ ಈ ಹೋರಾಟ ಕೈಗೆತ್ತಿಕೊಂಡಿದೆಯೇ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘‘ಹೌದು ನಮ್ಮದು ರಾಜಕೀಯ ಪಕ್ಷ. ಇದು ಯಾವುದೇ ಸನ್ಯಾಸಿ ಸಂಘಟನೆಯಲ್ಲ. ಎನ್‌ಜಿಒ ಕೂಡ ಅಲ್ಲ. ರಾಜಕೀಯ ಪಕ್ಷವೊಂದು ರಾಜಕೀಯ ನಿರ್ಧಾರಗಳನ್ನೂ ತೆಗೆದುಕೊಳ್ಳಬೇಕಾಗುತ್ತದೆ,’’ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ರಾಜಿ ಪ್ರಶ್ನೆಯಿಲ್ಲ
‘‘ಭೂಸ್ವಾಧೀನ ವಿಧೇಯಕದ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ರಾಜ್ಯಸಭೆಯಲ್ಲಿ ಈ ವಿಧೇಯಕ ಅಂಗೀಕಾರಕ್ಕೆ ಅವಕಾಶ ಕೊಡುವುದಿಲ್ಲ. ಈ ಸಂಬಂಧ ಸಂಸತ್‌ನ ಒಳ, ಹೊರಗೆ ಹೋರಾಡಲಾಗುವುದು. ರೈತರೂ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಾರತೀಯ ಕಿಸಾನ್ ಸಂಘ ಈ ಕಾಯಿದೆಯನ್ನು ವಿರೋಧಿಸಿದ್ದರೆ, ಆರ್‌ಎಸ್‌ಎಸ್ ಕೂಡ ಆಕ್ಷೇಪಿಸಿದೆ. ಎಸ್ಪಿ, ಬಿಎಸ್ಪಿ, ಡಿಎಂಕೆ, ಜೆಡಿಯು, ಎನ್‌ಸಿಪಿ, ಎಡಪಕ್ಷಗಳು ಕಾಂಗ್ರೆಸ್ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಕರ್ನಾಟಕದಲ್ಲಿಯೂ ಈ ನಿಟ್ಟಿನಲ್ಲಿ ಹೋರಾಟ ನಡೆಯಲಿದೆ. ಆದರೆ, ಇಲ್ಲಿನ ಪರಿಸ್ಥಿತಿ ತುಸು ಭಿನ್ನವಾಗಿದ್ದು, ನಾವು ಆಡಳಿತ ಪಕ್ಷದಲ್ಲಿದ್ದೇವೆ. ಸ್ಥಳೀಯ ಸರಕಾರವು ಕೇಂದ್ರದ ಕಾಯಿದೆಯನ್ನು ಅಳವಡಿಸಿಕೊಂಡಿಲ್ಲ. ಬದಲಾಗಿ ರಾಜ್ಯದ ಕಾಯಿದೆಯನ್ನು ಅನುಸರಿಸಲಾಗುತ್ತಿದ್ದು, ಅದು ಉತ್ತಮವಾಗಿದೆ,’’ ಎಂದು ತಿಳಿಸಿದರು.

‘‘ಯುಪಿಎ ಅವಧಿಯಲ್ಲಿನ ಭೂಸ್ವಾಧೀನ ವಿಧೇಯಕವನ್ನು ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳೂ ಬೆಂಬಲಿಸಿವೆ. ಆದರೆ, ಮೋದಿ ಸರಕಾರ ಆಡಳಿತಕ್ಕೆ ಬರುತ್ತಿದ್ದಂತೆ ಕಾಯಿದೆಗೆ ತರಾತುರಿಯಲ್ಲಿ ತಿದ್ದುಪಡಿ ತರಲು ಹೊರಟಿದೆ. ಇದು ಸರ್ವಾಧಿಕಾರದ ಧೋರಣೆ,’’ ಎಂದು ಆಕ್ಷೇಪಿಸಿದರು.

‘‘ಭೂಮಿ ನೀಡುವ ರೈತರ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ, ಪುನರ್ವಸತಿ ಕಲ್ಪಿಸುವುದು, ಮಾರುಕಟ್ಟೆ ಮೌಲ್ಯದ 4 ಪಟ್ಟು ಅಧಿಕ ಪರಿಹಾರ ನೀಡುವುದು ಯುಪಿಎ ವಿಧೇಯಕದಲ್ಲೆ ಇತ್ತು. ಸೇನೆ, ರಕ್ಷಣೆ ಉದ್ದೇಶಕ್ಕೆ 24 ಗಂಟೆಯೊಳಗೆ ಜಮೀನು ಸ್ವಾಧೀನಕ್ಕೂ ಅವಕಾಶವಿತ್ತು. ಅಲ್ಲದೆ, ಸರಕಾರಿ ಪ್ರಾಯೋಜಿತ ನೀರಾವರಿ ಯೋಜನೆಗಳಿಗೆ ಸಂತ್ರಸ್ತರ ಅಭಿಪ್ರಾಯ ಪಡೆಯುವ ಅಗತ್ಯವಿಲ್ಲವೆನ್ನುವ ಅಂಶ ಸೇರಿಸಲಾಗಿತ್ತು. ಆದರೆ, ಮೋದಿ ಸುಳ್ಳು ಹೇಳಿಕೆ ನೀಡಿ ದೇಶದ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ,’’ ಎಂದು ಆಪಾದಿಸಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಸುದ್ದಿಗೋಷ್ಠಿಯಲ್ಲಿದ್ದರು.
-----

ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಿ
ಯುಪಿಎ ಅವಧಿಯಲ್ಲಿ ನೀಡಿದ ಭರವಸೆಯಂತೆ ವಿಭಜಿತ ಆಂಧ್ರ ಪ್ರದೇಶಕ್ಕೆ ಸಂವಿಧಾನಬದ್ಧವಾಗಿ ವಿಶೇಷ ಸ್ಥಾನಮಾನ ನೀಡಬೇಕಿದೆ. ಆದರೆ, ಎನ್‌ಡಿಎ ಈ ವಿಚಾರವನ್ನು ಮರೆತಿದೆ. ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಅವರೂ ಮುಗುಮ್ಮಾಗಿದ್ದಾರೆ
- ಜೈರಾಂ ರಮೇಶ್

ಪರಿಸರ ರಕ್ಷಣೆಗೂ ಹೋರಾಟ
‘‘ಅರಣ್ಯ, ಪರಿಸರ ರಕ್ಷಣೆ ಸಂಬಂಧಿತ ಕಾಯಿದೆಗಳನ್ನು ದುರ್ಬಲಗೊಳಿಸುವುದಕ್ಕೂ ಬಿಜೆಪಿ ಹೊರಟಿದೆ. ಮುಂಬರುವ ದಿನಗಳಲ್ಲಿ ಇದರ ವಿರುದ್ಧವೂ ಹೋರಾಡಲಾಗುವುದು. ಯಾವುದೇ ರಾಜ್ಯ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದರೂ ಕಾಂಗ್ರೆಸ್ ದನಿ ಎತ್ತಲಿದೆ’’ಎಂದರು.

ರಾಜ್ಯದಲ್ಲಿಯೂ ಹೋರಾಟ
ಮೋದಿ ಸರಕಾರದ ಭೂಸ್ವಾಧೀನ ಕಾಯಿದೆ ವಿರುದ್ಧ ರಾಜ್ಯದಲ್ಲಿಯೂ ಹೋರಾಟ ಪ್ರಾರಂಭಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ತಿಳಿಸಿದರು.

‘‘ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಅವರಿಗೆ ಜಾರಿ ಮಾಡಲಾಗಿದ್ದ ನೋಟಿಸ್‌ಗೆ ಉತ್ತರ ನೀಡಿದ್ದಾರೆ. ವೈಯಕ್ತಿಕವಾಗಿ ಭೇಟಿ ಮಾಡಲು ಅವರು ಬಯಿಸಿರುವುದಾಗಿ ಮಾಧ್ಯಮ ವರದಿಯಿಂದ ಗೊತ್ತಾಗಿದೆ. ಇನ್ನೂ ಭೇಟಿಯಾಗಿಲ್ಲ,’’ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ