ಆ್ಯಪ್ನಗರ

ಉಜ್ವಲ ಭವಿಷ್ಯಕ್ಕೆ ಮುನ್ನುಡಿ ಬರೆಯುವ ಕೋರ್ಸ್‌ಗಳು

ಬದಲಾದ ಕಾಲಗತಿಯಲ್ಲಿ ಶಿಕ್ಷಣ ಕ್ಷೇತ್ರದ ಸ್ವರೂಪವೂ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗ ಭವಿಷ್ಯ ಉಜ್ವಲವಾಗುವಂತೆ ಮಾಡುವ ಹೊಸ ಶಿಕ್ಷಣ ವಿಭಾಗಗಳ ಕುರಿತು ಇಲ್ಲಿದೆ ಮಾಹಿತಿ.

Vijaya Karnataka Web 16 Apr 2018, 11:53 am
ಬದಲಾದ ಕಾಲಗತಿಯಲ್ಲಿ ಶಿಕ್ಷಣ ಕ್ಷೇತ್ರದ ಸ್ವರೂಪವೂ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗ ಭವಿಷ್ಯ ಉಜ್ವಲವಾಗುವಂತೆ ಮಾಡುವ ಹೊಸ ಶಿಕ್ಷಣ ವಿಭಾಗಗಳ ಕುರಿತು ಇಲ್ಲಿದೆ ಮಾಹಿತಿ.
Vijaya Karnataka Web future oriented courses
ಉಜ್ವಲ ಭವಿಷ್ಯಕ್ಕೆ ಮುನ್ನುಡಿ ಬರೆಯುವ ಕೋರ್ಸ್‌ಗಳು


ಶಿಕ್ಷಣ ಕ್ಷೇತ್ರವು ನಿಂತ ನೀರಲ್ಲ. ಅಲ್ಲಿ ಆದ್ಯತೆಗಳು ಬದಲಾಗುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಯಾವ ಕೋರ್ಸ್‌ಗಳು ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿವೆ ಎಂಬುದನ್ನು ತಿಳಿದುಕೊಂಡು ಅಂತಹ ಕೋರ್ಸ್‌ ಆಯ್ಕೆ ಮಾಡಿಕೊಂಡರೆ ವಿದ್ಯಾರ್ಥಿಗಳ ಉದ್ಯೋಗ ಭವಿಷ್ಯ ಉಜ್ವಲವಾಗುತ್ತದೆ.

ಡೇಟಾ ಸೈನ್ಸ್‌ : ಕೆಲವೇ ವರ್ಷಗಳ ಹಿಂದೆ ಹೊಸದಾಗಿ ಆರಂಭವಾದ ಶಿಕ್ಷಣ ವಿಭಾಗ ಡೇಟಾ ಸೈನ್ಸ್‌. ಒಂದು ಕಂಪನಿಯ ದತ್ತಾಂಶಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ, ಒಳ ಸುಳಿಗಳನ್ನು ಕಂಡು ಹಿಡಿದು ಈ ಮೂಲಕ ಕಂಪನಿಯ ವ್ಯವಹಾರವನ್ನು ಹೆಚ್ಚಿಸಲು ಅನುಕೂಲ ಮಾಡುವ ಜ್ಞಾನ ಒದಗಿಸುವ ಶಿಕ್ಷಣ ವಿಭಾಗವಿದು.

ವಿಶ್ವದೆಲ್ಲೆಡೆ ಎಲ್ಲಾ ಕಂಪನಿಗಳು ಸಂಶೋಧನೆ ಮತ್ತು ವಿಶ್ಲೇಷಣೆಗೆ ಪ್ರತ್ಯೇಕ ವಿಭಾಗ ಈಗ ರಚಿಸುತ್ತಿವೆ. ಈ ಮೂಲಕ ಡೇಟಾ ಸೈಂಟಿಸ್ಟ್‌ಗಳಿಗೆ ಭಾರೀ ಬೇಡಿಕೆ ಕಂಡು ಬಂದಿದೆ. 2020ರೊಳಗೆ ಈ ಬೇಡಿಕೆಯಲ್ಲಿ ಇನ್ನಷ್ಟು ಗಣನೀಯ ಏರಿಕೆ ಕಾಣುವ ಸಾಧ್ಯತೆಯಿದೆ. ಇದಕ್ಕಾಗಿ ಬಿ.ಇ., ಬಿ.ಟೆಕ್‌, ಬ್ಯಾಚುಲರ್‌ ಇನ್‌ ಸ್ಟಾಟಿಸ್ಟಿಕ್ಸ್‌ ಅಥವಾ ಮ್ಯಾಥಮೆಟಿಕ್ಸ್‌ ವಿತ್‌ ಡೇಟಾ ವೇರ್‌ಹೌಸಿಂಗ್‌ ಸ್ಕಿಲ್‌ ಮೊದಲಾದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಸೈಕಲಾಜಿಕಲ್‌ ತೆರಪಿ: ಇತ್ತೀಚಿನ ದಿನಗಳಲ್ಲಿ ವೈವಾಹಿಕ ಸಂಬಂಧ ಸಮಸ್ಯೆಗಳು ಹೆಚ್ಚುತ್ತಿವೆ. ಹೀಗಾಗಿ ಸೈಕಾಲಾಜಿಕಲ್‌ ಥೆರಪಿಸ್ಟ್‌ ಅಥವಾ ಮ್ಯಾರೇಜ್‌ ಕೌನ್ಸೆಲರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಸುಮಾರು 10 ವರ್ಷಗಳ ಹಿಂದಕ್ಕೆ ಕಣ್ಣು ಹಾಕಿದರೆ ಈ ವಿಭಾಗಕ್ಕೆ ಬೇಡಿಕೆಯೇ ಇರಲಿಲ್ಲ. ಆದರೆ ಈಗ ಹಾಗಿಲ್ಲ. ಮದುವೆ ಕೌನ್ಸೆಲಿಂಗ್‌ ಎನ್ನುವುದು ಪೂರ್ಣ ಪ್ರಮಾಮದ ಉದ್ಯೋಗವಾಗಿ ಬಿಟ್ಟಿದೆ. ಹೀಗಾಗಿ ಈ ವಿಭಾಗಕ್ಕೆ ಬೇಡಿಕೆ ಹೆಚ್ಚಿದೆ. ಇಲ್ಲಿ ವೃತ್ತಿಪರರು ಮಾನಸಿಕ ಆರೋಗ್ಯ ಏರುಪೇರು ಮತ್ತು ವೈವಾಹಿಕ ಸಂಬಂಧದಲ್ಲಿ ಉಂಟಾಗುವ ಬಿರುಕಿನ ಕುರಿತಂತೆ ನೇರವಾಗಿ ಸಮಾಲೋಚನೆ ನಡೆಸಿ ಸಲಹೆ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಬಿಎ ಅಥವಾ ಎಂಎ ಇನ್‌ ಕ್ಲಿನಿಕಲ್‌ ಸೈಕಾಲಜಿ/ಆರ್ಗನೈಸೇಶನಲ್‌ ಬಿಹೇವಿಯರ್‌ ಕೋರ್ಸ್‌ ಮಾಡಬೇಕು. 2020ರೊಳಗೆ ಶೇ. 36.3ರಷ್ಟು ಈ ವಿಭಾಗ ಬೆಳವಣಿಗೆ ಕಾಣಲಿದೆ ಎಂದು ಅಂದಾಜಿಸಲಾಗಿದೆ.

ಪ್ರಾಣಿ ಚಿಕಿತ್ಸಕರು: ಇದು ಮತ್ತೊಂದು ಪ್ರವರ್ಧಮಾನಕ್ಕೆ ಬರುತ್ತಿರುವ ಶಿಕ್ಷಣ ಕ್ಷೇತ್ರ. ಬ್ಯಾಚುಲರ್‌ / ಮಾಸ್ಟರ್ಸ್‌ ಇನ್‌ ವೆಟರ್ನರಿ ಸೈನ್ಸ್‌ ಆಂಡ್‌ ಅನಿಮಲ್‌ ಹಸ್ಬೆಂಡರಿ ಅಥವಾ ಬ್ಯಾಚುಲರ್‌ ಆಫ್‌ ಫಿಶರಿಸ್‌ ಸೈನ್ಸ್‌ ಕೋರ್ಸ್‌ಗಳನ್ನು ಇದಕ್ಕಾಗಿ ಮಾಡಬೇಕಾಗುತ್ತದೆ. ಪ್ರಾಣಿಗಳ ರೋಗ ಪತ್ತೆ ಮತ್ತು ಚಿಕಿತ್ಸೆ ಇವರ ಮುಖ್ಯ ಕೆಲಸವಾಗಿರುತ್ತದೆ. ಚಿಕ್ಕ ಅಥವಾ ದೊಡ್ಡ ಎರಡೂ ವಿಭಾಗಗಳ ಪ್ರಾಣಿಗಳು ಇದರ ವ್ಯಾಪ್ತಿಗೆ ಬರುತ್ತದೆ. ಅರಣ್ಯ ಇಲಾಖೆ ಸೇರಿದಂತೆ ಸರಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಇದರಲ್ಲಿ ಸಾಕಷ್ಟಿದೆ. 2020ರೊಳಗೆ ಈ ವಿಭಾಗ ಶೇ. 34ರ ಬೆಳವಣಿಗೆ ಕಾಣುವ ನಿರೀಕ್ಷೆಯಿದೆ.

ಇಂಟರ್‌ಪ್ರಿಟರ್‌: ಇಂಟರ್‌ನೆಟ್‌ ಸಮಾಜದ ಎಲ್ಲಾ ವಿಭಾಗಗಳನ್ನೂ ತಲುಪಿರುವ ಈ ಯುಗದಲ್ಲಿ ಇಂಗ್ಲೀಷ್‌ ನಿಧಾನವಾಗಿ ತನ್ನ ಪ್ರಾಬಲ್ಯ ಕಳೆದುಕೊಳ್ಳುತ್ತಾ ಬರುತ್ತಿದೆ. ಆದ್ದರಿಂದ ಟ್ರಾನ್ಸ್‌ಲೇಟರ್‌ ಮತ್ತು ಇಂಟರ್‌ಪ್ರಿಟೇಶನ್‌ ಎಂಬ ಭಾಷೆಗೆ ಸಂಬಂಧಿಸಿದ ಎರಡು ವಿಭಾಗಗಳು ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿವೆ. ಇಲ್ಲಿ ಇಂಟರ್‌ಪ್ರಿಟರ್‌ ಮಾತಿನ ಮೂಲಕ ಭಾಷಾಂತರ ಮಾಡಿದರೆ, ಟ್ರಾನ್ಸ್‌ಲೇಟರ್‌ ಅದನ್ನು ಅಕ್ಷರ ರೂಪಕ್ಕೆ ತರ್ಜುಮೆ ಮಾಡುತ್ತಾರೆ. ಈ ವಿಭಾಗದಲ್ಲಿ ಡಿಗ್ರಿ, ಡಿಪ್ಲೋಮಾ ಮತ್ತು ವಿದೇಶಿ ಭಾಷೆಯ ಸರ್ಟಿಫಿಕೇಟ್‌ ಕೋರ್ಸ್‌ಗಳು ಸಾಕಷ್ಟು ಲಭ್ಯವಿವೆ. ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ಖಾಸಗಿ ಸಂಸ್ಥೆಗಳು ಮತ್ತು ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಹೇರಳವಾಗಿ ಸಿಗುತ್ತಿದ್ದು, ಈ ವಿಭಾಗ 2020ರೊಳಗೆ ಶೇ. 22ರ ಬೆಳವಣಿಗೆ ಕಾಣುವ ಸಾಧ್ಯತೆಯಿದೆ.

ಫಿಸಿಯೋಥೆರಪಿಸ್ಟ್‌: ಬ್ಯಾಚುಲರ್‌ ಮತ್ತು ಮಾಸ್ಟರ್ಸ್‌ ಆಫ್‌ ಫಿಸಿಯೋಥೆರಪಿ ಕೋರ್ಸ್‌ಗಳು ಈಗ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿವೆ. ಇದರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳ ಕುರಿತು ವಿದ್ಯಾರ್ಥಿಗಳಿಗೆ ಜ್ಞಾನ ತುಂಬಲಾಗುತ್ತದೆ. ದುಬಾರಿ ಶಸ್ತ್ರಚಿಕಿತ್ಸೆಗಳಿಲ್ಲದೆ ರೋಗಿಗಳ ಆರೋಗ್ಯ ಸುಧಾರಣೆಯ ಈ ವಿಭಾಗವು ಈಗ ಬಹು ಜನಪ್ರಿಯವಾಗಿದೆ. 2020ರೊಳಗೆ ವಿಭಾಗ ಸುಮಾರು ಶೇ. 23ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿದೆ.

ಬಯೋಮೆಡಿಕಲ್‌ ಎಂಜಿನಿಯರಿಂಗ್‌: ವಿಶ್ವದಲ್ಲಿ ಅತಿ ವೇಗವಾಗಿ ಜನಪ್ರಿಯವಾಗುತ್ತಿರುವ ವಿಭಾಗಗಳ ಪೈಕಿ ಬಯೋಮೆಡಿಕಲ್‌ ಎಂಜಿನಿಯರಿಂಗ್‌ ಕೂಡ ಒಂದು. ಕೃತಕ ಅಂಗಾಗಗಳು ಸೇರಿದಂತೆ ದೇಹಕ್ಕೆ ಸಂಬಂಧಿಸಿದ ನಾನಾ ಅಂಶಗಳನ್ನು ಕೃತಕವಾಗಿ ವಿನ್ಯಾಸಗೊಳಿಸಿ ಉತ್ಪಾದಿಸುವ ಜವಾಬ್ದಾರಿ ಇವರಿಗೆ ಇರುತ್ತದೆ. ಬಿ.ಇ., ಬಿ.ಟೆಕ್‌ ಇನ್‌ ಬಯೋಮೆಡಿಕಲ್‌ ಎಂಜಿನಿಯರಿಂಗ್‌ ಕೋರ್ಸ್‌ಗಳನ್ನು ಮಾಡಿದರೆ ಉದ್ಯೋಗ ಭವಿಷ್ಯ ಉಜ್ವಲವಾಗುವುದರಲ್ಲಿ ಸಂಶಯವಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ