ಆ್ಯಪ್ನಗರ

ವಿಕ ವಿದ್ಯಾನಿಧಿ 2019: ಅನಾಥನ ಸಾಧನೆ ಅನನ್ಯ, ಬೇಕಿದೆ ನೆರವು

ಸಾಧಿಸುವ ಛಲವಿದ್ದರೆ ಬಡತನ ಎಂದೂ ಅಡ್ಡಿಯಲ್ಲ ಎಂಬುದಕ್ಕೆ ಈ ವಿದ್ಯಾರ್ಥಿಗಳೇ ಸಾಕ್ಷಿ. ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಅದು ಪ್ರತಿಫಲನಗೊಂಡಿದೆ. ಶಿಕ್ಷಣ ಎಲ್ಲರ ಮೂಲಭೂತ ಹಕ್ಕು. ಅದನ್ನು ಎಲ್ಲರೂ ಪಡೆಯಲೇಬೇಕು. ಆ ನಿಟ್ಟಿನಲ್ಲಿ ಈ ಪ್ರತಿಭಾನ್ವಿತರಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಹೋಗಲು, ಆ ಮೂಲಕ ತಮ್ಮ ಗುರಿ ಸಾಧಿಸಲು ದಾನಿಗಳ ನೆರವು ಅತ್ಯಗತ್ಯವಾಗಿದೆ. ಇಂದು ನೀವು ನೀಡುವ ಒಂದಷ್ಟು ನೆರವು ಈ ವಿದ್ಯಾರ್ಥಿಗಳ ಬದುಕನ್ನೇ ಬದಲಿಸಬಲ್ಲದು. ಇಂದು ನೀವು ಅವರಿಗೆ ನೆರವಾದರೆ ಭವಿಷ್ಯದಲ್ಲಿ ಅವರು ಸಮಾಜಕ್ಕೆ ನೆರವಾಗಬಲ್ಲರು.

Vijaya Karnataka 11 May 2019, 4:15 pm
ಸಾಧಿಸುವ ಛಲವಿದ್ದರೆ ಬಡತನ ಎಂದೂ ಅಡ್ಡಿಯಲ್ಲ ಎಂಬುದಕ್ಕೆ ಈ ವಿದ್ಯಾರ್ಥಿಗಳೇ ಸಾಕ್ಷಿ. ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಅದು ಪ್ರತಿಫಲನಗೊಂಡಿದೆ. ಶಿಕ್ಷಣ ಎಲ್ಲರ ಮೂಲಭೂತ ಹಕ್ಕು. ಅದನ್ನು ಎಲ್ಲರೂ ಪಡೆಯಲೇಬೇಕು. ಆ ನಿಟ್ಟಿನಲ್ಲಿ ಈ ಪ್ರತಿಭಾನ್ವಿತರಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಹೋಗಲು, ಆ ಮೂಲಕ ತಮ್ಮ ಗುರಿ ಸಾಧಿಸಲು ದಾನಿಗಳ ನೆರವು ಅತ್ಯಗತ್ಯವಾಗಿದೆ. ಇಂದು ನೀವು ನೀಡುವ ಒಂದಷ್ಟು ನೆರವು ಈ ವಿದ್ಯಾರ್ಥಿಗಳ ಬದುಕನ್ನೇ ಬದಲಿಸಬಲ್ಲದು. ಇಂದು ನೀವು ಅವರಿಗೆ ನೆರವಾದರೆ ಭವಿಷ್ಯದಲ್ಲಿ ಅವರು ಸಮಾಜಕ್ಕೆ ನೆರವಾಗಬಲ್ಲರು.
Vijaya Karnataka Web NAMMA BAGALKOT


ಅನಾಥನ ಸಾಧನೆ ಅನನ್ಯ
ಬೀಳಗಿ: ತಂದೆ- ತಾಯಿಗಳನ್ನು ಬಾಲ್ಯದಲ್ಲೇ ಕಳೆದುಕೊಂಡ ಈ ವಿದ್ಯಾರ್ಥಿ, ಅನಾಥಾಶ್ರಮದಲ್ಲಿ ಆಶ್ರಯ ಪಡೆದು ಶೇ.87 ರಷ್ಟು ಅಂಕ ಗಳಿಸಿ ಪಿಯು ವಾಣಿಜ್ಯ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾನೆ. ಬೀಳಗಿಯ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜ್‌ನ ಲೋಕನಾಥ ಹಣಮಂತ ಮಾದರ ಮೂಲತಃ ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಲೋಕನಾಥ, ಹಣಮಂತ- ಇಂದ್ರವ್ವ ದಂಪತಿಯ ಮೊದಲ ಮಗ. ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾಗ ಚಿಕಿತ್ಸೆ ವೆಚ್ಚಕ್ಕೆ 2 ವರ್ಷ ಇನ್ನೊಬ್ಬರ ಮನೆಯಲ್ಲಿ ಜೀತದಾಳಾಗಿ ದುಡಿದವ. ತಂದೆ, ತಾಯಿ ಆಸರೆ ಇಲ್ಲದೇ ಬೀಳಗಿಯ ಕೊರ್ತಿ ಪುನರ್ ವಸತಿ ಕೇಂದ್ರದಲ್ಲಿರುವ ಅನಾಥ ಆಶ್ರಮದಲ್ಲಿ ತನ್ನ ಸಹೋದರನ ಜತೆ ಆಶ್ರಯ ಪಡೆದು ಸದ್ಯದ ಶಿಕ್ಷಣ ಮುಗಿಸಿದ್ದಾನೆ.
ಪೂರ್ಣ ಹೆಸರು: LOKANATH HANAMANT MADAR

ನೇಕಾರ ಕುಟುಂಬದ ದೀಪ
ಇಳಕಲ್: ಇಳಕಲ್ ನೇಕಾರ ಕುಟುಂಬದ ವಿದ್ಯಾರ್ಥಿ ವಿಜ್ಞಾನ ವಿಭಾಗದಲ್ಲಿ ಭಾರಿ ಸಾಧನೆ ಮಾಡಿದ್ದು, ಭೌತಶಾಸ್ತ್ರ ವಿಷಯದಲ್ಲಿ ಇಡೀ ರಾಜ್ಯಕ್ಕೆ 7 ವಿದ್ಯಾರ್ಥಿಗಳು ನೂರರಷ್ಟು ಅಂಕ ಪಡೆದವರ ಸಾಲಿನಲ್ಲಿ ಇವನೂ ಒಬ್ಬ. ಇಲ್ಲಿನ ಡಿವಿಜನ್ ನಂ.4ರನೇಕಾರ ಬಡಾವಣೆಯ ಪ್ರದೀಪ ಗೋಪಾಲ ಚೇಗೂರ, ದ್ವಿತೀಯ ಪಿಯುನಲ್ಲಿ 600ಕ್ಕೆ 572 ಅಂಕ ಪಡೆದವ. ಜತೆಗೆ ಗಣಿತ ಹಾಗೂಭೌತಶಾಸ್ತ್ರದಲ್ಲಿ ನೂರರಷ್ಟು ಅಂಕ ಸಂಪಾದಿಸಿ ಪಿಗ್ಮಿ ಏಜೆಂಟ್ ತಂದೆ ಹಾಗೂ ಮನೆಗೆಲಸದ ತಾಯಿಗೆ ಹೆಮ್ಮೆ ತಂದಿದ್ದಾನೆ. ನೀಟ್ ಪರೀಕ್ಷೆಗಾಗಿ ಹುಬ್ಬಳ್ಳಿಯಲ್ಲಿ ವಸತಿ ನಿಲಯಕ್ಕೆ ಫೀ ಕಟ್ಟಬೇಕಾದಾಗ, ಈತನ ಅಜ್ಜನಿಂದ ಹಿಡಿದು ನೆರೆ ಹೊರೆಯವರು ಸಹಾಯ ಮಾಡಿದ್ದಾರೆ.
ಪೂರ್ಣ ಹೆಸರು: PRADEEP GOPAL CHEGUR

ರನ್ನ ನಾಡಿನ ಪ್ರತಿಭೆ ಅಮೃತಾ
ಮುಧೋಳ: ಕ್ಷೌರಿಕ ವೃತ್ತಿ ಕುಟುಂಬದ ಹಿನ್ನೆಲೆ ಹೊಂದಿರುವ ಬಡ ಗ್ರಾಮೀಣ ಪ್ರತಿಭೆ, ಮುಧೋಳ ತಾಲೂಕಿನ ಮಳಲಿ ಗ್ರಾಮದ ಅಮೃತಾ ಗಿರಿಮಲ್ಲಪ್ಪ ನಾವ್ಹಿ ಶೇ. 92ರಷ್ಟು ಅಂಕ ಸಂಪಾದಿಸಿ ಸಾಧನೆ ಮಾಡಿದ ಸಾಧಕಿ. ತನ್ನೂರಿನಿಂದ 3 ಕಿಮೀ ಅಂತರದ ನಾಗರಾಳ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜ್‌ಗೆ ನಿತ್ಯ ಸೈಕಲ್ ತುಳಿದ ಪ್ರತಿಭಾನ್ವಿತೆ. ತಂದೆ ನಿತ್ಯ ಕೂಲಿ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದಾರೆ. ಬೆಳಗ್ಗೆ ಕಾಲೇಜ್‌ಗೆ ಹೋಗುವ ಮುನ್ನ ತಾಯಿಯ ಕೆಲಸಕ್ಕೆ ಸಹಾಯ ಮಾಡಿ ಕಾಲೇಜ್‌ಗೆ ಹೋಗಿ ಬಂದ ನಂತರ ಅಭ್ಯಾಸದಲ್ಲಿತೊಡಗಿಸಿಕೊಂಡವಳು.
ಪೂರ್ಣ ಹೆಸರು: AMRUTA GIRIMALLAPPA NAVI

ಏಕ್ ನಂಬರ್ ಬೇಟಿ !
ಬಾಗಲಕೋಟ: ತಾಯಿಯ ಕೂಲಿಯಲ್ಲೇ ಶಿಕ್ಷಣ ಪಡೆಯುತ್ತಿರುವ ಈ ಬೇಟಿ, ಬಾಗಲಕೋಟ ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜ್‌ಗೆ ಕಲಾ ವಿಭಾಗದಲ್ಲಿ ಏಕ್ ನಂಬರ್. ಬಾಗಲಕೋಟ ತಾಲೂಕಿನ ಹೊಸ ಮುರನಾಳ ಗ್ರಾಮದಲ್ಲಿ ಕೂಲಿ ಮಾಡಿ 4 ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿರುವ ಬಡ ರೋಷನ್‌ಬೀ ಸೌದಾಗರ ಅವರ 2ನೇ ಪುತ್ರಿ ಮದೀನಾ. ಎಷ್ಟೇ ಕಷ್ಟದ ಪರಿಸ್ಥಿತಿ ಇದ್ದರೂ ಸಾಕಿ ಸಲುಹುತ್ತಿರುವ ತಾಯಿ ರೋಷನ್‌ಬೀ, ಮಕ್ಕಳ ಕಲಿಕೆ ಮೊಟಕು ಗೊಳಿಸುವುದಿಲ್ಲ ಎಂದು ಆತ್ಮಸ್ಥೈರ್ಯದಿಂದ ಹೇಳುತ್ತಿರುವುದು ಮದೀನಾ ಕಲಿಕೆಗೆ ಸ್ಫೂರ್ತಿ ತುಂಬಿದೆ. ಬಡತನದಲ್ಲೂ ನನ್ನ ತಾಯಿ, ಹಾಗೂ ಶಿಕ್ಷಕ ವೃಂದದ ಪ್ರೋತ್ಸಾಹ ನನಗೆ ಈ ಅಂಕ ಗಳಿಸಲು ಸಾಧ್ಯವಾಯಿತು ಎಂಬ ಕೃತಜ್ಞತಾ ಭಾವ ಸಾಧಕ ಬಾಲಕಿಯಲ್ಲಿದೆ.
ಪೂರ್ಣ ಹೆಸರು: MADINA ABDULRAHIMAN SOUDAGAR

ಶ್ರಮಕ್ಕೆ ದೊರೆತ ಪೂಜಾ ಫಲ
ಗುಳೇದಗುಡ್ಡ: ಕೈ ಮಗ್ಗ ನೇಕಾರರೇ ವಾಸಿಸಿರುವ ಪಟ್ಟಣದಲ್ಲಿ ಇದೇ ಬಡ ನೇಕಾರ ಕುಟುಂಬದ ಹುಡುಗಿ ವಾಣಿಜ್ಯ ವಿಭಾಗದಲ್ಲಿ ಕಾಲೇಜ್‌ಗೆ ಪ್ರಥಮ ಸ್ಥಾನದಲ್ಲಿ ಬಂದಿದ್ದಾಳೆ. ಗುಳೇದಗುಡ್ಡದ ರೇಷ್ಮೆ ಖಣ ಇಡೀ ದೇಶದಲ್ಲಿ ಹೆಸರುವಾಸಿ. ಆದರೆ ಇಲ್ಲಿರುವ ನೇಕಾರರು ಮಾತ್ರ ಒಪ್ಪಿತ್ತನ ಊಟಕ್ಕೂ ಪರದಾಡುವ ಸ್ಥಿತಿ. ಇಂತಹ ನೇಕಾರ ಕುಟುಂಬದ ಪೂಜಾ ಈರಪ್ಪ ಹನಮಸಾಗರ ಪಟ್ಟಣದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಪಿಯು ಪ್ರವೇಶ ಪಡೆದು ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಶೇ.93ರಷ್ಟು ಅಂಕಗಳಿಸಿ ಸಾಧನೆ ಮಾಡಿದ್ದಾಳೆ. ನೇಕಾರಿಕೆ ವೃತ್ತಿಗೆ ಇಡೀ ಮನೆಯವರೇ ಕೆಲಸ ಮಾಡುತ್ತಾರೆ. ಅದರಂತೆ ಈ ವಿದ್ಯಾರ್ಥಿನಿಯೂ ನೇಕಾರಿಕೆಗೆ ಪೂರಕವಾದ ಕೆಲಸ ಮಾಡುವುದರ ಜತೆಗೆ ಓದಿನಲ್ಲೂ ಆಸಕ್ತಿ ಬೆಳೆಸಿಕೊಂಡು ಉತ್ತಮ ಫಲಿತಾಂಶ ಪಡೆಯುವಲ್ಲಿ ಸಫಲಳಾಗಿದ್ದಾಳೆ.
ಪೂರ್ಣ ಹೆಸರು: POOJA HANAMASAGAR

ಗಣ್ಯರ ಮೆಚ್ಚುಗೆ
ವಿದ್ಯಾರ್ಥಿಗಳ ವಿದ್ಯಾಭ್ಯಾಸದ ದೃಷ್ಠಿಯಿಂದ ವಿಜಯ ಕರ್ನಾಟಕ ಪತ್ರಿಕೆ ತನ್ನ ಸಮುದಾಯದ ಜವಾಬ್ದಾರಿ ನಿಭಾಯಿಸುತ್ತಿರುವುದು ಉತ್ತಮ ಕೆಲಸ. ಬಹಳಷ್ಟು ವಿದ್ಯಾರ್ಥಿಗಳು ಆರ್ಥಿಕ ಕೊರತೆಯಿಂದ ವಿದ್ಯಾಭ್ಯಾಸ ಮೊಟಕುಗೊಳ್ಳು ಸಾಧ್ಯತೆ ಇರುತ್ತದೆ. ಬಡವರು, ಅಲ್ಪಸಂಖ್ಯಾತರು, ಪರಿಶಿಷ್ಠ ಜಾತಿ, ಪಂಗಡ ಸೇರಿದಂತೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಶೈಕ್ಷಣಿಕ ಅಭಿವೃದ್ಧಿಗಾಗಿ ನೆರವು ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಶಿಕ್ಷಣದ ಒಂದು ಸುಭಾಷಿತ ಹೇಳುವಂತೆ ಕಲಿತ ಋಣ ಕಲಿಸಿ ತೀರಿಸುವ ಎಂದರೆ ಆರ್ಥಿಕವಾಗಿ ಅನುಕೂಲ ಇರುವ ಸಹೃದಯಿ ಬಂಧುಗಳು ನೆರವು ನೀಡುವುದು ಅಗತ್ಯ.
-ಎಸ್.ಆರ್.ಮನಹಳ್ಳಿ, ನಿರ್ದೇಶಕರು, ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಬವಿವ ಸಂಘ ಬಾಗಲಕೋಟ

ಈ ಹಿಂದೆ ನೆರವು ಪಡೆದ ವಿದ್ಯಾರ್ಥಿ ಅನಿಸಿಕೆ
ವಿಜಯ ಕರ್ನಾಟಕ ಪತ್ರಿಕೆ ಕೇವಲ ಒಂದು ವಿಭಾಗಕ್ಕೆ ಸೀಮಿತವಾಗದೆ ಎಲ್ಲ ವರ್ಗಕ್ಕೂ ಗಮನ ನೀಡುತ್ತಿರುವುದು ಗಮನಾರ್ಹ. ಪಿಯುಸಿಯಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆಯಿಲ್ಲದೆ ಶಿಕ್ಷಣ ಮೊಟಕುಗೊಳ್ಳುತ್ತಿರುವ ಅನೇಕ ಶೈಕ್ಷಣಿಕ ಸಾಧಕರನ್ನು ಗುರ್ತಿಸಿ ಸಹಾಯಧನ ನೀಡುತ್ತಿರುವುದು ವಿದ್ಯಾರ್ಥಿಗಳ ಓದಿಗೂ ಸಹಕಾರಿ. ಪತ್ರಿಕೆ ನನ್ನನ್ನು ಗುರ್ತಿಸಿದ ನಂತರ ಹಲವು ಎನ್‌ಜಿಒಗಳು ನನಗೆ ಸಹಾಯ ಮಾಡಿವೆ. ಬಡತನವಿದ್ದರೂ ಉತ್ತಮ ಸಾಧನೆ ತೋರಿರುವ ನಮ್ಮಂತಹ ಅನೇಕರಿಗೆ ವಿಜಯ ಕರ್ನಾಟಕದ ಸಹಾಯಧನ ಸ್ಪೂರ್ತಿ ಆಗುತ್ತದೆ.
-ರಿಯಾಜಅಹಮ್ಮದ ಪಾರಸ್, ವಿಕ ವಿದ್ಯಾನಿಧಿ ಪಡೆದ ವಿದ್ಯಾರ್ಥಿ.


ನೆರವು ಹೀಗೆ ನೀಡಲ ಹೀಗೆ ಮಾಡಿ
ನೀವು ಯಾವ ವಿದ್ಯಾರ್ಥಿಗೆ ಸಹಾಯ ಮಾಡಬೇಕೋ ಆ ವಿದ್ಯಾರ್ಥಿಯ ಹೆಸರನ್ನು ಸ್ಪಷ್ಟವಾಗಿ ಬರೆದು, ದಾನಿಗಳು ಈ ಕೆಳಗಿನ ವಿಳಾಸಕ್ಕೆ ತಮ್ಮ ಚೆಕ್‌ಗಳನ್ನು ಕಳುಹಿಸಬಹುದು. ಲಕೋಟೆ ಮೇಲೆ ಮೇಲೆ ವಿಕ ವಿದ್ಯಾನಿಧಿ ಎಂದು ನಮೂದಿಸಿ. ವಿಳಾಸ ಈ ಕೆಳಗೆ ನೀಡಲಾಗಿದೆ.

ವಿಜಯಪುರ ಕಚೇರಿ ವಿಳಾಸ
ವಿಜಯ ಕರ್ನಾಟಕ, ಪ್ರೇಮಶ್ರೀ ಟವರ್, 2ನೇ ಮಹಡಿ, ಬಿ ಎಸ್ ಎನ್‌ಎಲ್ ಕಚೇರಿ ಎದುರು, ಎಂ.ಜಿ. ರಸ್ತೆ, ವಿಜಯಪುರ. ದೂ: 08352 220288

ಬಾಗಲಕೋಟ ಕಚೇರಿಯ ವಿಳಾಸ
ವಿಜಯ ಕರ್ನಾಟಕ, ಪ್ಲಾಟ್ ನಂ.9, ಕೆಎಸ್‌ಎಸ್‌ಐಡಿಸಿ, ಇಂಡಸ್ಟ್ರೀಯಲ್ ಎಸ್ಟೇಟ್, ಕಲಾದಗಿ ರೋಡ್, ವಿದ್ಯಾಗಿರಿ, ಬಾಗಲಕೋಟ-587101. ದೂ: 08354 234107
ವಾಟ್ಸ್‌ಆ್ಯಪ್ ನಂಬರ್ 7899874141

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ