Please enable javascript.ಇದು ಹೃದಯದ ವಿಷಯ - ಇದು ಹೃದಯದ ವಿಷಯ - Vijay Karnataka

ಇದು ಹೃದಯದ ವಿಷಯ

Vijaya Karnataka Web 29 Sep 2014, 4:37 am
Subscribe

ಆಧುನಿಕ ಜೀವನಶೈಲಿ, ಮನೆ ಹಾಗೂ ಕಚೇರಿಯನ್ನು ಸರಿದೂಗಿಸಿಕೊಂಡು ಹೋಗುವ ಒತ್ತಡದಿಂದಾಗಿ ಮಹಿಳೆಯರು ಕೂಡ ಅಧಿಕ ಸಂಖ್ಯೆಯಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದು ಅಧ್ಯಯನದಿಂದ ತಿಳಿದುಬಂದಿದೆ.

ಇದು ಹೃದಯದ ವಿಷಯ
* ಕಲ್ಪನಾ ಪಿ.

ಅನಾರೋಗ್ಯಕರ ಜೀವನಶೈಲಿ, ಒತ್ತಡದಿಂದಾಗಿ ಹೃದಯಾಘಾತಕ್ಕೆ ಒಳಗಾಗುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಆದರೆ ಜನರು ಮಾತ್ರ ಈ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಿಲ್ಲ.

ಈಗ ಮತ್ತೊಮ್ಮೆ ವಿಶ್ವ ಹೃದಯ ದಿನ ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆಯು ಈ ಬಾರಿಯೂ ಉಪ್ಪು ಸೇವನೆಯನ್ನು ಕಡಿಮೆ ಮಾಡಿ ಎಂದು ಎಂದಿನಂತೆ ಮತ್ತೆ ಮತ್ತೆ ಹೇಳುತ್ತಿದೆ. ಇದಕ್ಕೆ ಕಾರಣವೆಂದರೆ ವರ್ಷಕ್ಕೆ ಸುಮಾರು 2.5 ಮಿಲಿಯನ್ ಜನರು ಹೃದಯ ಸಂಬಂಧಿ ಕಾಯಿಲೆಯಿಂದ ಸಾಯುತ್ತಿದ್ದಾರೆ.

ಸಾಮಾನ್ಯವಾಗಿ ಹೃದಯಾಘಾತಕ್ಕೆ ಒಳಗಾಗುವವರ ಪೈಕಿ ಪುರುಷರೇ ಹೆಚ್ಚು ಎಂದು ಜನರು ಭಾವಿಸಿರುತ್ತಾರೆ. ಆದರೆ ಇದು ಜನರ ತಪ್ಪು ಕಲ್ಪನೆ. ಸದ್ದಿಲ್ಲದೆ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಹೃದಯಾಘಾತಕ್ಕೀಡಾಗುತ್ತಿದ್ದಾರೆ.

ಬೆಂಗಳೂರಿನಲ್ಲಿ ಸುಮಾರು ಶೇ.70 ರಷ್ಟು ಮಹಿಳೆಯರ ಪೈಕಿ ಶೇ.35 ಕ್ಕಿಂತ ಹೆಚ್ಚಿನ ಮಹಿಳೆಯರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ 35 ರಿಂದ 44 ವರ್ಷದ ಮಹಿಳೆಯರೇ ಈ ಕಾಯಿಲೆಗೆ ತುತ್ತಾದವರು. ಬೆಂಗಳೂರು, ಅಹಮದಾಬಾದ್, ದಿಲ್ಲಿ, ಮುಂಬಯಿ, ಹೈದರಾಬಾದ್ ಮತ್ತು ಚೆನ್ನೈ ನಗರದ ಸುಮಾರು ಎರಡು ಲಕ್ಷ ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಜತೆಗೆ ಇಂದು ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅಧ್ಯಯನದಿಂದ ತಿಳಿದು ಬಂದಿರುವ ಇನ್ನೊಂದು ವಿಚಾರವೆಂದರೆ ಶೇ.63 ರಷ್ಟು ಮಹಿಳೆಯರು ಜಡ ಜೀವನಶೈಲಿ, ಶೇ.53ರಷ್ಟು ಮಹಿಳೆಯರು ಬೊಜ್ಜಿನಿಂದ ಬಳಲುತ್ತಿದ್ದಾರೆ. ಧೂಮಪಾನ ಮಾಡುವವರಲ್ಲಿ ಕೋಲ್ಕೊತಾದ ಮಹಿಳೆಯರು ಅತಿ ಹೆಚ್ಚು ಎಂದು ಕೂಡ ತಿಳಿದುಬಂದಿದೆ.

ಹಾಗಾದರೆ ಮಹಿಳೆಯರು ಈ ಕಾಯಿಲೆಗೆ ತುತ್ತಾಗಲು ಕಾರಣವೇನು?ಅಧಿಕ ಒತ್ತಡ, ಸ್ಯಾಚುರೇಟೆಡ್ ಕೊಬ್ಬಿನ ಅಧಿಕ ಸೇವನೆ, ಉಪ್ಪು ಕೂಡ ಹೆಚ್ಚು ಸೇವಿಸುವುದು, ಜತೆಗೆ ಕಡಿಮೆ ವ್ಯಾಯಾಮವೇ ಕಾರಣ ಎಂದು ಹೃದಯ ತಜ್ಞರು ಹೇಳುತ್ತಾರೆ.

ನೀವು ಕಚೇರಿಯಲ್ಲಿ ಕೆಲಸ ಮಾಡುತ್ತಿರುವಾಗಲೂ ಪ್ರತಿ ಗಂಟೆಗೊಮ್ಮೆ ವಿಶ್ರಾಂತಿ ತೆಗೆದುಕೊಳ್ಳಿ, 50 ಹೆಜ್ಜೆ ನಡೆಯಿರಿ. ದಿನಕ್ಕೆ ಒಂದು ಸಾವಿರ ಹೆಜ್ಜೆ ನಡೆಯಬೇಕು. ದಿನದಲ್ಲಿ ಅರ್ಧ ಗಂಟೆ ವ್ಯಾಯಾಮ ಮಾಡಬೇಕು ಎಂದು ವೈದ್ಯರು ಹೇಳುತ್ತಾರೆ.

ಮಹಿಳೆಯರಲ್ಲಿ ಹೃದಯಾಘಾತ ಅದರಲ್ಲೂ ವಿಶೇಷವಾಗಿ ಉದ್ಯೋಗಸ್ಥ ಮಹಿಳೆಯರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರಿಗೆ ಕಚೇರಿ ಮತ್ತು ಮನೆಯ ಜವಾಬ್ದಾರಿ ಇರುವುದರಿಂದ ಅಧಿಕ ಒತ್ತಡ ಉಂಟಾಗುತ್ತದೆ. ಹೃದಯ ಸಂಬಂಧಿ ಕಾಯಿಲೆಯ ಲಕ್ಷಣದಲ್ಲಿ ಪುರುಷರಿಗಿಂತ ಮಹಿಳೆಯರಲ್ಲಿ ವಿಭಿನ್ನವಾಗಿರುತ್ತದೆ. ಈ ಸಂದರ್ಭದಲ್ಲಿ ಮಹಿಳೆಯರನ್ನು ನಿಯಮಿತವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು ಎನ್ನುತ್ತಾರೆ ವೈದ್ಯರು.

ಕೊಲ್ಲುವುದು ಒತ್ತಡ: ಒತ್ತಡವು ದೇಹದ ಒಳಗಿನ ಭಾಗಕ್ಕೆ ಆಗುವಂಥದ್ದು. ನೀವು ಒತ್ತಡವನ್ನು ಎಷ್ಟರಮಟ್ಟಿಗೆ ತಡೆದುಕೊಳ್ಳುತ್ತೀರಿ ಎಂಬುದು ಇಲ್ಲಿ ಮುಖ್ಯವಲ್ಲ. ಆದರೆ ಇದು ಜೀವಕ್ಕೆ ಅಪಾಯವನ್ನು ಉಂಟು ಮಾಡಬಲ್ಲದು ಎಂಬುದೇ ಮುಖ್ಯ. ಇಂದಿನ ಆಧುನಿಕ ಜೀವನವು ನಮಗೆ ಐಷಾರಾಮಿ ಬದುಕನ್ನು ಕೊಡಬಲ್ಲದು. ಆದರೆ ಎಲ್ಲ ಕಡೆಯಿಂದಲೂ ಒತ್ತಡ ಇರುತ್ತದೆ. ಟ್ರಾಫಿಕ್, ಕಚೇರಿ, ಮನೆಯ ಕೆಲಸದವಳು ಬಾರದಿದ್ದರೆ, ಮಕ್ಕಳು ನಡವಳಿಕೆ, ವಿದ್ಯಾಭ್ಯಾಸ ಹೀಗೆ ಎಲ್ಲ ವಿಧದಲ್ಲಿ ಒತ್ತಡ ಉಂಟಾಗುತ್ತಲೇ ಇರುತ್ತದೆ. ಇವೆಲ್ಲವುಗಳಿಗಿಂತಲೂ ಹೆಚ್ಚಾಗಿ ಆರ್ಥಿಕಮಟ್ಟ ಇನ್ನೂ ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತದೆ. ಜೀವನದ ಉತ್ತಮ ಗುಣಮಟ್ಟವನ್ನು ಕಾಪಾಡುವುದಕ್ಕಾಗಿ ಇಂದು ಗಂಡ ಹೆಂಡತಿಯರು ಹೆಚ್ಚಿಗೆ ಸಂಪಾದನೆ ಮಾಡಬೇಕಾದ ಪರಿಸ್ಥಿತಿ ಇದೆ. ಇನ್ನು ಗಂಡನ ಕೆಲಸ ಹೋದರೂ ಮಹಿಳೆಯರೇ ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ. ಆಕೆ ಕೆಲಸಕ್ಕೆ ಹೋಗಲೇಬೇಕು, ಮಕ್ಕಳ ಬಗ್ಗೆ ಕೇರ್ ತೆಗೆದುಕೊಳ್ಳಬೇಕು. ಇವುಗಳೊಂದಿಗೆ ಗಂಡನಿಗೆ ಸರಿಯಾಗಿ ಪ್ರೀತಿ ಕೊಡುತ್ತಿದ್ದೇನೆಯೇ ಎಂಬುದರ ಬಗ್ಗೆ ಗಮನ ಹರಿಸಬೇಕು. ಆದರೆ ಈ ಎಲ್ಲ ಕೆಲಸಗಳು ಆಕೆಯನ್ನು ಒತ್ತಡಕ್ಕೆ ತಳ್ಳುತ್ತಿರುವುದು ಆಕೆಗೇ ಗೊತ್ತಾಗುವುದಿಲ್ಲ.

ಪರಿಹಾರ: ಪುರುಷರೇ ಆಗಿರಲಿ, ಮಹಿಳೆಯರೇ ಆಗಿರಲಿ ಕಚೇರಿ ಮತ್ತು ಮನೆಯನ್ನು ಬ್ಯಾಲೆನ್ಸ್ ಮಾಡಬೇಕು. ಶಾರೀರಿಕ ವ್ಯಾಯಾಮವನ್ನು ಕಡ್ಡಾಯವಾಗಿ ಮಾಡಬೇಕು. ಇದನ್ನು ತಮ್ಮ ಪ್ರತಿನಿತ್ಯದ ಕೆಲಸದಲ್ಲಿ ಸೇರಿಸಿಕೊಳ್ಳಬೇಕು. ವ್ಯಾಯಾಮವನ್ನು ಏಕಾಗ್ರತೆಯಿಂದ ಗಮನವಿಟ್ಟು ಮಾಡಬೇಕು. ಆಧುನಿಕ ಜೀವನಶೈಲಿಯಲ್ಲಿ ಮಹಿಳೆಯರಿಗೆ ಬಿಡುವು ಸಿಗುವುದೇ ಅಪರೂಪ. ಆದರೂ ತಮಗಾಗಿ ಸಮಯ ಮೀಸಲಿಡಬೇಕು ಎನ್ನುತ್ತಾರೆ ಹೃದಯ ತಜ್ಞರು.

ಮಹಿಳೆಯರು ತಮ್ಮಂತೆಯೇ ಹೃದಯ ಕಾಯಿಲೆಗೆ ಒಳಗಾಗುತ್ತಾರೆ ಎಂಬುದನ್ನು ಪುರುಷರು ಕೂಡ ಅರಿತುಕೊಳ್ಳಬೇಕು. ತಮ್ಮ ತಾಯಿ, ಸೋದರಿ ಅಥವಾ ಪತ್ನಿಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ತಪಾಸಣೆ ನಡೆಸುವುದು ಪುರುಷರ ಕರ್ತವ್ಯ. ವಿಶೇಷವಾಗಿ ಕೊಲೆಸ್ಟ್ರಾಲ್ ಬಗ್ಗೆ ತಪಾಸಣೆ ಮಾಡಿಸಬೇಕು ಎನ್ನುತ್ತಾರೆ ವೈದ್ಯರು. ಶೇ.71 ರಷ್ಟು ಮಹಿಳೆಯರಿಗೆ ಹೃದಯಾಘಾತವಾದ ಅನುಭವಾಗುತ್ತದೆ. ಉದಾಹರಣೆಗೆ ಇದ್ದಕ್ಕಿದ್ದಂತೆಯೇ ಸುಸ್ತಾಗುವುದು, ಫ್ಲೂ ಜ್ವರ ಬಂದಂತೆ ಆಗುವುದು. ಕೆಲವು ಬಾರಿ ಹೃದಯ ಬೇನೆ ಆಗುವುದೇ ಇಲ್ಲ. ಈ ರೀತಿಯ ಲಕ್ಷಣ ಕಂಡು ಬಂದರೆ ತಕ್ಷಣ ತಪಾಸಣೆ ಮಾಡಿಸಿಕೊಳ್ಳಬೇಕು. ಈ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ