ಆ್ಯಪ್ನಗರ

ಗರ್ಭಾವಸ್ಥೆ ಸೆಕ್ಸ್‌ ಏಕೆ ಬೇಕು ?

ಗರ್ಭಾವಸ್ಥೆ ಸೆಕ್ಸ್‌ ಮಗುವಿಗೆ ಅಪಾಯವೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ...

ವಿಕ ಸುದ್ದಿಲೋಕ 28 Jan 2017, 12:03 pm
ಗರ್ಭಾವಸ್ಥೆಯಲ್ಲಿ ಸೆಕ್ಸ್‌ ಎಂದರೆ ಆತಂಕವೇ. ಬದಲಾದ ದೈಹಿಕ ಸ್ಥಿತಿ ಮಹಿಳೆಯ ಚಿಂತೆ ಆದರೆ, ಎಲ್ಲಿ ಮಗುವಿಗೆ ಏನಾದರೂ ಆಗಿಬಿಡುವುದೋ ಎನ್ನುವುದು ಪುರುಷನ ಕಳವಳ.
Vijaya Karnataka Web is it ok to have sex during pregnancy
ಗರ್ಭಾವಸ್ಥೆ ಸೆಕ್ಸ್‌ ಏಕೆ ಬೇಕು ?


ಸಾಮಾನ್ಯವಾಗಿ ದೈಹಿಕ ಸಂಬಂಧ ಬೇಡವೆಂದೇ ಗರ್ಭಣಿಯರಿಗೆ ಹೇಳಲಾಗುತ್ತದೆ. ಸೆಕ್ಸ್‌ ಮಗುವಿನ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಬಹುದು, ಅವಧಿ ಪೂರ್ವ ಹೆರಿಗೆ ಅಥವಾ ಸೋಂಕು ತಗಲುವ ಸಾಧ್ಯತೆ ಹೆಚ್ಚು ಎಂದೂ ಎಚ್ಚರಿಸಲಾಗುತ್ತದೆ.

ಗರ್ಭಾವಸ್ಥೆಯಲ್ಲಿ ಮಹಿಳೆಯ ದೇಹ ಸಾಕಷ್ಟು ಬದಲಾವಣೆಗೆ ಒಳಗಾಗುತ್ತದೆ, ಹಾರ್ಮೋನ್‌ ಮಟ್ಟದಲ್ಲಿ ಏರುಪೇರಾಗುವುದು, ವಾಕರಿಕೆ, ಇಷ್ಟಪಟ್ಟು ತಿನ್ನುತ್ತಿದ್ದ ಆಹಾರವೇ ಬೇಡವಾಗುತ್ತದೆ. ಏನೋ ಮನಸ್ಸಿನಲ್ಲಿ ಕಳವಳ, ಕಿರಿಕಿರಿ. ಇದೆಲ್ಲದರ ನಡುವೆ ಲೈಂಗಿಕ ಆಸಕ್ತಿ ಕಡಿಮೆ ಆದರೂ, ಎಲ್ಲವೂ ಸರಿ ಇದ್ದರೆ ಸಹಜ ಲೈಂಗಿಕತೆಗೆ ಆತಂಕ ಬೇಕಿಲ್ಲ ಎನ್ನುತ್ತಾರೆ ತಜ್ಞರು.

'ಗರ್ಭಿಣಿ ಆರೋಗ್ಯ ಸರಿಯಿದ್ದು, ಯಾವುದೇ ಕಿರಿಕಿರಿ ಇಲ್ಲದಿದ್ದರೆ ಮಿಲನದಿಂದ ದೂರ ಇರಬೇಕಿಲ್ಲ. ಅಮ್ನೋಟಿಕ್‌ ಚೀಲ ಹಾಗೂ ಗರ್ಭಾಶಯದ ಸ್ನಾಯು ಹೊಟ್ಟೆಯೊಳಗಿರುವ ಮಗುವಿಗೆ ರಕ್ಷಾ ಕವಚವಾಗಿರುತ್ತದೆ. ಗರ್ಭಾಶಯದ ಕೊರಳಿನ ಭಾಗ ಬಂದ್‌ ಆಗಿರುವುದರಿಂದ ಸೋಂಕು ತಗುಲುವ ಭೀತಿ ಇರುವುದಿಲ್ಲ. ಪುರುಷ ಜನನೇಂದ್ರಿಯ ಯಾವುದೇ ಕಾರಣಕ್ಕೂ ಮಗುವನ್ನು ತಲುಪಲು ಸಾಧ್ಯವೇ ಇಲ್ಲ,' ಎಂದು ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರಾದ ಡಾ. ಮಧೂ ಶ್ರೀವಾಸ್ತವ ಹೇಳಿದ್ದಾರೆ.

ಗರ್ಭಾವಸ್ಥೆ ಸೆಕ್ಸ್‌ ಮಗುವಿಗೆ ಅಪಾಯವೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ:

ಗರ್ಭಾವಸ್ಥೆ ಸೆಕ್ಸ್‌ ಒಳ್ಳೆಯದು ಹೇಗೆ: ಗರ್ಭಾವಸ್ಥೆಯ ಸೆಕ್ಸ್‌ನಿಂದ ಶ್ರೋಣಿ (ಪೆಲ್ವಿಕ್‌) ಭಾಗಕ್ಕೆ ರಕ್ತ ಹರಿದು ಸ್ನಾಯುಗಳು ಸಡಿಲಗೊಳ್ಳುವುದು. ಸೆಕ್ಸ್‌ ಕೂಡ ಹೆಚ್ಚು ತೃಪ್ತಿಕರವಾಗಿರುವುದು. ಗರ್ಭಾವಸ್ಥೆ ಸೆಕ್ಸ್‌ ಹಿಂದೆಂದಿಗಿಂತಲೂ ಹೆಚ್ಚಿನ ಖುಷಿ ಅನುಭವ ನೀಡಿದೆ ಎಂದು ಕೆಲವು ಮಹಿಳೆಯರು ಅನುಭವ ಹಂಚಿಕೊಂಡಿದ್ದಾರೆ.

ಸಂಬಂಧ ಸುಧಾರಣೆ: ಗಂಡ ಹೆಂಡತಿ ನಡುವೆ ಸಣ್ಣ ಪುಟ್ಟ ಜಗಳ, ಭಿನ್ನಾಭಿಪ್ರಾಯ ಸಾಮಾನ್ಯ. ಆದರೆ, ಗರ್ಭಾವಸ್ಥೆ ಸೆಕ್ಸ್‌ ಎಲ್ಲ ಕಹಿ ಮರೆಸಿ, ಪರಸ್ಪರ ಆಕರ್ಷಣೆ, ಅಭಿಮಾನ ಮೂಡಿಸುತ್ತದೆ. ಆಕ್ಸಿಟೋಸಿನ್‌ ಎಂಬ ಹಾರ್ಮೋನ್‌ ಬಿಡುಗಡೆ ಆಗುವುದೇ ಈ ಸಂತೋಷಕ್ಕೆ ಕಾರಣವಂತೆ.

ಸಮಾಧಾನದ ಭಾವ: ಸೆಕ್ಸ್‌ನಿಂದ ಅಶಾಂತಿ, ಕಳವಳ ದೂರವಾಗಿ ಗರ್ಭಿಣಿಗೆ ನೆಮ್ಮದಿಯ ನಿದ್ರೆ ಸಾಧ್ಯವಾಗುವುದು ಎಂದು ಹೇಳಲಾಗುತ್ತದೆ. ಗರ್ಭಿಣಿಯ ರಕ್ತದೊತ್ತಡ ತಗ್ಗಿಸಲು ಸೆಕ್ಸ್‌ ಸಹಕಾರಿ.

ವೀರ್ಯದ ಪ್ರೋಟಿನ್‌ ಒಳ್ಳೆಯದು: ವೀರ್ಯದಲ್ಲಿ ವಿಶಿಷ್ಟ ರೀತಿಯ ಪ್ರೋಟಿನ್ ಇದ್ದು, ಪ್ರಸವಾಪಸ್ಮಾರ ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಯಾವ ಭಂಗಿ ಸೂಕ್ತ:

ಇದು ವೈಯಕ್ತಿಕ ಆಯ್ಕೆಯಾದರೂ, ಗರ್ಭಿಣಿಯರಿಗೆ ಅನುಕೂಲಕರವಾದ ಭಂಗಿ ಒಳ್ಳೆಯದು. ದಿ ಸ್ಪೂನ್‌ ಪೊಸಿಷನ್‌ ಅಥವಾ ವುಮನ್‌ ಆನ್‌ ಟಾಪ್‌ ಪೊಸಿಷನ್‌ ಅನುಕೂಲಕರ. ಚೇರ್‌ ಮೇಲೆ ಕುಳಿತ, ಮಂಚದ ತುದಿಯಲ್ಲಿ ಮಹಿಳೆ ಇದ್ದರೂ ತೊಂದರೆ ಆಗದು.

ಗರ್ಭಾವಸ್ಥೆಯಲ್ಲಿ ಸೆಕ್ಸ್‌ ಅಪಾಯಕಾರಿ ಅಲ್ಲವಾದರೂ, ಹೈ ರಿಸ್ಕ್‌ ಪ್ರೆಗ್ನೆನ್ಸಿ ಎಂದು ಹೇಳಿದ್ದರೆ ಅಥವಾ ಇನ್ನಾವುದೇ ತೊಂದರೆ ಇದ್ದರೆ ವೈದ್ಯರ ಸಲಹೆ ತಪ್ಪದೇ ಪಡೆಯಬೇಕು.

Read this in English

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ