ಆ್ಯಪ್ನಗರ

ಸಕ್ಕರೆ ಅಪಾಯಕಾರಿ ಏಕೆ

ಮಕ್ಕಳಿರುವಾಗಲೇ ಸಕ್ಕರೆಯಂಶವನ್ನು ಹೆಚ್ಚು ತಿನ್ನಿಸುವ ಅಭ್ಯಾಸ ತಪ್ಪಿಸಬೇಕು

Vijaya Karnataka Web 5 May 2016, 6:39 am

-ವನಿತಾ ಅಶೋಕ್‌

ಮಕ್ಕಳಿರುವಾಗಲೇ ಸಕ್ಕರೆಯಂಶವನ್ನು ಹೆಚ್ಚು ತಿನ್ನಿಸುವ ಅಭ್ಯಾಸ ತಪ್ಪಿಸಿ. ಏಕೆಂದರೆ ಸಕ್ಕರೆ ನಾನಾ ರೋಗಗಳಿಗೆ ಕಾರಣವಾಗುತ್ತದೆ.

ನೀವು ಯಾವುದೇ ಶಾಲೆಗಳಲ್ಲಿನ ಮಕ್ಕಳನ್ನು ನೋಡಿ, ನೀವು ದಶಕಗಳ ಹಿಂದೆ ನೋಡದ ಮಕ್ಕಳಿಗೂ ಆ ಮಕ್ಕಳಿಗೂ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತದೆ. ಹಿಂದಿನ ಮಕ್ಕಳು ತೆಳ್ಳಗಿದ್ದು ಆರೋಗ್ಯವಂತರಾಗಿರುತ್ತಿದ್ದರು. ಆದರೆ ಇಂದಿನ ಮಕ್ಕಳು ಗುಂಡು ಗುಂಡಾಗಿ ದಪ್ಪವಾಗಿರುತ್ತವೆ. ಅತಿಯಾದ ಸಕ್ಕರೆ ಅಂಶದ ಪದಾರ್ಥಗಳ ಸೇವನೆಯಿಂದಾಗಿ ಈ ಮಕ್ಕಳ ದೇಹದ ತೂಕ ನಿರೀಕ್ಷೆಗೂ ಮೀರಿ ಇರುತ್ತದೆ.

ಪೋಷಕರು ಮಕ್ಕಳಿಗೆ ಬಲವಂತವಾಗಿ ಹೆಚ್ಚುವರಿ ಆಹಾರ ಸೇವನೆ ಮಾಡುವಂತೆ ಮಾಡುತ್ತಾರೆ. ಗುಂಡು ಗುಂಡಾಗಿರುವ ಮಗು ಆರೋಗ್ಯವಂತವಾಗಿರುತ್ತದೆ ಎಂಬ ತಪ್ಪ್ಪು ಕಲ್ಪನೆ ಬಹುತೇಕ ಪೋಷಕರಲ್ಲಿ ಮೂಡಿರುತ್ತದೆ. ಅದೇ ರೀತಿ ತೆಳ್ಳಗಿರುವ ಮಗು ದುರ್ಬಲವಾಗಿರುತ್ತದೆ ಮತ್ತು ಅಪೌಷ್ಠಿಕತೆಯಿಂದ ಬಳಲುತ್ತದೆ ಎಂದೂ ಭಾವಿಸಲಾಗುತ್ತದೆ. ಮಕ್ಕಳು ಉತ್ತಮ ತೂಕವಿದ್ದರೆ ಅದು ಖುಷಿಯ ಸಂಕೇತ ಎಂದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಪೋಷಕರು ರುಚಿರುಚಿಯಾದ ಖಾದ್ಯಗಳ ಮೊರೆ ಹೋಗುತ್ತಾರೆ. ಆದರೆ ಇಂಥ ಮನಸ್ಥಿತಿ ಮಗುವಿನ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತದೆ.

ಮಕ್ಕಳಲ್ಲಿ ಒಬೆಸಿಟಿ

ಇತ್ತೀಚೆಗೆ ಒಬೆಸಿಟಿ ಎಂಬ ನಿಯತಕಾಲಿಕೆ ಪ್ರಕಟಿಸಿದ ಅಧ್ಯಯನ ವರದಿ ಪ್ರಕಾರ, ಸಕ್ಕರೆ ಸೇವಿಸುವುದು ಕೇವಲ ಕೆಟ್ಟ ಆಹಾರ ಪದ್ಧತಿಯಷ್ಟೇ ಅಲ್ಲ. ಅದು ತೂಕ ಹೆಚ್ಚಳಕ್ಕೆ ಸೋಪಾನ. ದೇಹದಲ್ಲಿ ಹಲವು ಬದಲಾವಣೆಗಳನ್ನು ತರುತ್ತದೆ. 9 ರಿಂದ 18 ವರ್ಷದೊಳಗಿನ ಬೊಜ್ಜು ಇರುವ 43 ಮಕ್ಕಳನ್ನು ಸಂಶೋಧಕರು ಅಧ್ಯಯನ ಮಾಡಿದ್ದಾರೆ. ಇವರಲ್ಲಿ ಬಹುತೇಕ ಮಕ್ಕಳು ಜೀರ್ಣಶಕ್ತಿಯ ತೊಂದರೆ ಅನುಭವಿಸುತ್ತಿರುವುದು ಕಂಡುಬಂದಿತು. ಹೆಚ್ಚು ರಕ್ತದೊತ್ತಡ ಕಂಡು ಬಂದಿದ್ದು, ಲಿವರ್‌ನ ಗಾತ್ರ ದೊಡ್ಡದಾಗಿರುತ್ತದೆ. ಈ ಮಕ್ಕಳು 9 ದಿನಗಳ ಕಾಲ ಸಕ್ಕರೆ ಅಂಶವಿಲ್ಲದ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡರು. ಈ ಸಂದರ್ಭದಲ್ಲಿ ಮಕ್ಕಳಲ್ಲಿ ಕ್ಯಾಲರಿ ಪ್ರಮಾಣದಲ್ಲಿ ಸ್ಥಿರತೆ ಕಂಡುಬಂದಿತು.

9 ದಿನಗಳ ನಂತರ ಈ ಮಕ್ಕಳಲ್ಲಿ ರಕ್ತದೊತ್ತಡದ ಪ್ರಮಾಣ ಸರಾಸರಿ 5 ಎಂಎಂಎಚ್‌ಜಿಗೆ ಇಳಿಯಿತು. ಅವರ ಟ್ರಿಗ್ಲಿ ಸಿರೈಡ್ಸ್‌ ಮಟ್ಟ 33 ಪಾಯಿಂಟ್‌ಗಳಿಗೆ ಇಳಿಯುವುದರ ಜತೆಗೆ ಕೊಬ್ಬಿನ ಪ್ರಮಾಣ 10 ಪಾಯಿಂಟ್‌ಗಳಿಗೆ ಇಳಿಕೆ ಆಯಿತು. ಇನ್‌ಸುಲಿನ್‌ ಪ್ರಮಾಣವೂ ಸಹಜಸ್ಥಿತಿಯತ್ತ ಅಂದರೆ ಮೂರು ಪಟ್ಟು ಇಳಿಕೆ ಕಂಡಿತು. ಲಿವರ್‌ನ ಕಾರ್ಯಕ್ಷ ಮತೆಯಲ್ಲಿ ಸುಧಾರಣೆ ಕಂಡು ಬಂದಿತು.

ಇದಕ್ಕೆ ಪೂರಕವಾಗಿ ಅಮೆರಿಕನ್‌ ಜರ್ನಲ್‌ ಆಫ್‌ ಕ್ಲಿನಿಕಲ್‌ ನ್ಯೂಟ್ರಿಷಿಯನ್‌ ಹೇಳುವ ಪ್ರಕಾರ, ಸಕ್ಕರೆ ಪ್ರಮಾಣ ಅಥವಾ ಮಧುಮೇಹದ ಪ್ರಮಾಣ ಹೆಚ್ಚಾಗಿದ್ದ ಸಂದರ್ಭದಲ್ಲಿ ಆಹಾರದ ಪಥ್ಯ ಮಾಡಿದರೆ 2ನೇ ಹಂತದ ಮಧುಮೇಹಕ್ಕೆ ತುತ್ತಾಗಬೇಕಾಗುತ್ತದೆ. ನೀವು ಮಧುಮೇಹಿಗಳಾಗಿದ್ದಲ್ಲಿ ಅದು ಮೊದಲ ಹಂತ ಅಥವಾ 2 ನೇ ಹಂತದ್ದಾಗಿರಲಿ ಅಥವಾ ಗರ್ಭವತಿಯಾಗಿದ್ದಲ್ಲಿ ನಿಮ್ಮ ಪಥ್ಯದಲ್ಲಿ ಸಕ್ಕರೆ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿದ್ದರೆ ನಿಮ್ಮ ರಕ್ತದ ಸಕ್ಕರೆ ಪ್ರಮಾಣವನ್ನು ಆರೋಗ್ಯಕಾರಿ ಸ್ಥಿತಿಯಲ್ಲಿಡುತ್ತದೆ.

ಸಕ್ಕರೆ ಕ್ಯಾಲೋರಿಗಳು ಬಹಳಷ್ಟು ಅಪಾಯಕಾರಿ. ಏಕೆಂದರೆ ಈ ಕ್ಯಾಲೋರಿಗಳು ತೂಕವನ್ನು ಹೆಚ್ಚಿಸುತ್ತವೆ, ಬೊಜ್ಜು ಬರಿಸುತ್ತವೆ, ಎಚ್‌ಡಿಎಲ್‌ ಪ್ರಮಾಣವನ್ನು ಕಡಿಮೆ ಮಾಡಿ ಎಲ್‌ಡಿಎಲ್‌ ಪ್ರಮಾಣವನ್ನು ಹೆಚ್ಚು ಮಾಡುತ್ತವೆ. ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಏರುವಂತೆ ಮಾಡುತ್ತವೆ. ಇದಲ್ಲದೇ ರಕ್ತದೊತ್ತಡವನ್ನು ಅಧಿಕಗೊಳಿಸುತ್ತವೆ. ಇದೆಲ್ಲಕ್ಕಿಂತ ಮುಖ್ಯವಾಗಿ ಹೃದಯ ಸಂಬಂಧಿ ರೋಗಗಳನ್ನು ಹೆಚ್ಚು ಮಾಡುತ್ತವೆ. ಸಕ್ಕರೆ ಪ್ರಮಾಣ ಹೆಚ್ಚಾಗಿದ್ದೇ ಆದಲ್ಲಿ ನಿಮ್ಮ ಲಿವರ್‌ ಅನ್ನು ಹಾನಿಗೊಳಿಸುತ್ತದೆ. ದಂತಕ್ಷ ಯಕ್ಕೂ ಇದು ದಾರಿ ಮಾಡಿಕೊಡುತ್ತದೆ.

ಸಕ್ಕರೆಗೆ ಪರ್ಯಾಯ

ಸಕ್ಕರೆ ತಿನ್ನುವ ಪ್ರಮಾಣವನ್ನು ಕಡಿಮೆ ಮತ್ತು ನಿಗದಿತ ಪ್ರಮಾಣದಲ್ಲಿ ಸೇವಿಸಬೇಕು. ಜೀರೋ ಕ್ಯಾಲೋರಿ ಇರುವಂತಹ ಸ್ವೀಟ್ನರ್‌ಗಳನ್ನು ಖರೀದಿಸಬಹುದು. ಇವುಗಳ ಸೇವನೆಯಿಂದ ನಮ್ಮ ದೇಹ ತೂಕದಂತಹ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಇದು ಕೇವಲ ಮಧುಮೇಹದಿಂದ ಬಳಲುತ್ತಿರುವವರಿಗೆ ಸೀಮಿತವಾಗಿಲ್ಲ. ಈ ಜೀರೋ ಕ್ಯಾಲೋರಿ ಸ್ವೀಟ್ನರ್‌ಗಳನ್ನು ದಿನನಿತ್ಯ ಸೇವಿಸುವುದರಿಂದ ಬಾಯಿಯ ಆರೋಗ್ಯವನ್ನು ಉತ್ತಮವಾಗಿಡಬಲ್ಲವು. ಇವುಗಳಲ್ಲಿ ಸಕ್ಕರೆ ಇರುವುದಿಲ್ಲ, ಹೀಗಾಗಿ ದಂತಕ್ಷ ಯವೂ ಇರುವುದಿಲ್ಲ. ಇದರೊಂದಿಗೆ ನೀವು ಸುವಾಸನೆಯನ್ನು ಹೆಚ್ಚು ಮಾಡಿಕೊಳ್ಳಬಹುದು.

ಸಕ್ಕರೆಯುಕ್ತ ಪಾನೀಯಗಳು, ಬಿಸ್ಕತ್ತುಗಳು, ಕೇಕ್‌ಗಳ ಸೇವನೆಯನ್ನೂ ಬಿಡುವುದು ಒಳಿತು. ಇದರ ಬದಲಾಗಿ ಖರ್ಜೂರ, ಬಾಳೆಹಣ್ಣು, ದ್ರಾಕ್ಷಿ ಸೇರಿದಂತೆ ಒಣ ಹಣ್ಣುಗಳ ಸೇವನೆಯನ್ನು ರೂಢಿಸಿಕೊಳ್ಳಿ. ಸಿಹಿ ತಿನ್ನಬೇಕೆಂಬ ಆಸೆಯನ್ನು ಈ ಹಣ್ಣುಗಳು ಈಡೇರಿಸುವುದಷ್ಟೇ ಅಲ್ಲ, ನಿಮ್ಮ ದೇಹದಲ್ಲಿ ಫೈಬರ್‌, ವಿಟಮಿನ್‌ ಮತ್ತು ಮಿನರಲ್‌ಗಳ ಪ್ರಮಾಣವನ್ನು ವೃದ್ಧಿಸುತ್ತವೆ.

ಈ ಹಣ್ಣುಗಳನ್ನು 2-3 ಗಂಟೆಗೊಮ್ಮೆ ತಿನ್ನುವುದನ್ನು ರೂಢಿಸಿಕೊಂಡರೆ ಸಿಹಿ ತಿನ್ನಬೇಕೆಂಬ ನಿಮ್ಮ ಬಯಕೆಯನ್ನು ಕಡಿಮೆ ಮಾಡುತ್ತವೆ. ಸಂಸ್ಕರಿಸಿದ ಆಹಾರ ಸೇವನೆಯನ್ನು ಬಿಟ್ಟುಬಿಡಿ. ಆಗ ಆರೋಗ್ಯಕಾರಿ ಕೊಬ್ಬಿನ ಅಂಶಗಳುಳ್ಳ ಆಹಾರವನ್ನು ಸೇವಿಸುವ ಪ್ರಮಾಣ ಹೆಚ್ಚುತ್ತದೆ. ಇದರ ಜತೆಗೆ ನೀವು ಮೊಸರು, ಇಡ್ಲಿ ಮತ್ತು ಡೋಕ್ಲಾದಂತಹ ಆಹಾರವನ್ನು ಪ್ರತಿನಿತ್ಯ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಈ ಆಹಾರಗಳಲ್ಲಿರುವ ಉತ್ತಮವಾದ ಬ್ಯಾಕ್ಟೀರಿಯಾಗಳು ನಿಮ್ಮ ಪಚನ ಕ್ರಿಯೆಯು ಸುಲಲಿತವಾಗಿ ಸಾಗಲು ಮತ್ತು ನಿರ್ವಿಶೀಕರಣಕ್ಕೆ ನೆರವಾಗುತ್ತದೆ. ಲಿವರ್‌ನ ಗಾತ್ರವನ್ನು ಚಿಕ್ಕದು ಮಾಡಲು ಸಹಕಾರಿಯಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ