ಆ್ಯಪ್ನಗರ

ಎಫ್‌ಡಿಎ-ಎಸ್‌ಡಿಎ 754 ಹುದ್ದೆ ಸೇರ್ಪಡೆ

ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ಮತ್ತು ದ್ವಿತೀಯ ದರ್ಜೆ ಸಹಾಯಕರ (ಎಸ್‌ಡಿಎ) ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಕೊನೆಗೂ ಸೇರ್ಪಡೆ ಅಧಿಸೂಚನೆ ಹೊರಡಿಸಿದೆ.

Vijaya Karnataka Web 29 Nov 2017, 6:27 pm

ಕೆಪಿಎಸ್‌ಸಿಯಿಂದ ಅಧಿಸೂಚನೆ ಪ್ರಕಟ | ಮತ್ತೆ ಅರ್ಜಿ ಸಲ್ಲಿಸಲು ಅವಕಾಶ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್‌ 12, 2017

ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಡಿಸೆಂಬರ್‌ 13, 2017

ಸಹಾಯವಾಣಿ ಸಂಖ್ಯೆ: 9986739013, 9986736594

ಹೆಚ್ಚಿನ ಮಾಹಿತಿಗೆ : www.kpsc.kar.nic.in

*ಒಟ್ಟು ಹುದ್ದೆಗಳು 1,058+754=1,812

ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಪ್ರಥಮ ದರ್ಜೆ ಸಹಾಯಕರ (ಎಫ್‌ಡಿಎ) ಮತ್ತು ದ್ವಿತೀಯ ದರ್ಜೆ ಸಹಾಯಕರ (ಎಸ್‌ಡಿಎ) ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಕೊನೆಗೂ ಸೇರ್ಪಡೆ ಅಧಿಸೂಚನೆ ಹೊರಡಿಸಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಈ ಹುದ್ದೆಗಳ ನೇಮಕಕ್ಕೆ ಹೊರಡಿಸಿದ್ದ ಅಧಿಸೂಚನೆಗೆ (1,058 ಹುದ್ದೆ ) ಈಗ 754 ಹುದ್ದೆಗಳನ್ನು ಸೇರಿಸಲಾಗಿದೆ. ಒಟ್ಟಾರೆಯಾಗಿ ಈಗ 1,812 ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲಾಗುತ್ತದೆ.

ಸೇರ್ಪಡೆಗೊಂಡ ಎಫ್‌ಡಿಎ ಹುದ್ದೆಗಳಲ್ಲಿ 220 ಹುದ್ದೆಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿವೆ. ಅರಣ್ಯ ಇಲಾಖೆಯಲ್ಲಿನ 74 ಹುದ್ದೆಗಳು ಹಾಗೂ ಪೌರಾಡಳಿತ ಇಲಾಖೆಯ 54 ಹುದ್ದೆಗೂ ಸೇರ್ಪಡೆಗೊಂಡಿವೆ. ಲೋಕಾಯುಕ್ತದಲ್ಲಿ ಖಾಲಿರುವ 11ಎಫ್‌ಡಿಎ ಹುದ್ದೆಗಳಿಗೂ ನೇಮಕ ನಡೆಯಲಿದೆ. 300ಎಸ್‌ಡಿಎ ಹುದ್ದಗಳಲ್ಲಿ 292 ಹುದ್ದೆಗಳು ವಿವಿಧ ಜಿಲ್ಲಾ ನ್ಯಾಯಾಲಯಗಳಿಗೆ ಸಂಬಂಧಿಸಿವೆ.

ಹೆಚ್ಚುವರಿ ಹುದ್ದೆಗಳ ಸೇರ್ಪಡೆ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದ್ದು, ಇದೀಗ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಡಿಸೆಂಬರ್‌ 12 ಕೊನೆಯ ದಿನವಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೆ ಅರ್ಜಿ ಸಲ್ಲಿಸಬೇಕಾಗಿಲ್ಲ. ಕೌನ್ಸಿಲಿಂಗ್‌ ಮೂಲಕ ಇಲಾಖೆಗಳನ್ನು ಹಂಚಿಕೆ ಮಾಡಲಾಗುವುದರಿಂದ, ಇಲಾಖಾ ಆದ್ಯತೆ ನೀಡುವ/ಬದಲಾಯಿಸುವ ಅವಶ್ಯಕತೆಯೂ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಅರ್ಹತೆಗಳೇನು?

ಯಾವುದೇ ವಿಷಯದಲ್ಲಿ ಪದವಿ ಪಡೆದವರು ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.ಅಂತೆಯೇ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಗಳಾದ ಐಟಿಐ ಮತ್ತು ಇತರೆ ಮೂರು ವರ್ಷದ ಡಿಪ್ಲೊಮಾ ಕೋರ್ಸ್‌ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಪರೀಕ್ಷಾ ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 300 ರೂ. ಪ್ರವರ್ಗ 2ಎ, 2ಬಿ, 3ಎ, 3ಬಿಗೆ ಸೇರಿದ ಅಭ್ಯರ್ಥಿಗಳಿಗೆ 150 ರೂ ಹಾಗೂ ಪರಿಶಿಷ್ಟ ಜಾತಿ/ಪಂಗಡ, ಪ್ರವರ್ಗ-1,ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯ್ತಿ ನೀಡಲಾಗಿದೆ. ಎಲೆಕ್ಟ್ರಾನಿಕ್‌ ಅಂಚೆ ಕಚೇರಿಗಳ ಮೂಲಕ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.

ಗಮನಿಸಿ: ಮುಕ್ತ ವಿಶ್ವವಿದ್ಯಾಲಯಗಳು ನಡೆಸುವ 10+2 ಪರೀಕ್ಷೆಯನ್ನು ನಿಗದಿತ ವಿದ್ಯಾರ್ಹತೆ ಎಂದು ಪರಿಗಣಿಸಲಾಗುವುದಿಲ್ಲ.ಅರ್ಜಿ ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿಯು ಸಾಮಾನ್ಯ ವರ್ಗ-35 ವರ್ಷ, 2ಎ, 2ಬಿ, 3ಎ, 3ಬಿ ವರ್ಗ-38 ವರ್ಷ, ಎಸ್‌ಸಿ/ಎಸ್‌ಟಿ/ಪ್ರವರ್ಗ-1ಕ್ಕೆ 40 ವರ್ಷ ನಿಗದಿಪಡಿಸಲಾಗಿದೆ.

ಹುದ್ದೆಗಳ ವರ್ಗೀಕರಣ

ಎಫ್‌ಡಿಎ: 961 (ಕಳೆದ ಸಲ 507, ಹೆಚ್ಚುವರಿ ಸೇರ್ಪಡೆ 454)

ಎಸ್‌ಡಿಎ: 851 (ಕಳೆದ ಸಲ 551, ಹೆಚ್ಚುವರಿ ಸೇರ್ಪಡೆ 300)

ಹೈ-ಕ ಅಭ್ಯರ್ಥಿಗಳಿಗೆ: ಎಫ್‌ಡಿಎ- 151 ಮತ್ತು ಎಸ್‌ಡಿಎ-85

ಲಿಖಿತ ಪರೀಕ್ಷೆ ಎಂದು?

ಸೇರ್ಪಡೆ ಅಧಿಸೂಚನೆಯಲ್ಲಿ ಲಿಖಿತ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಕೆಪಿಎಸ್‌ಸಿಯು ಪ್ರಕಟಿಸಿತ್ತು. ಆದರೆ ಈಗ ಪ್ರಕಟಗೊಂಡಿರುವ ಅಧಿಸೂಚನೆಯಲ್ಲಿಯೂ ಪರೀಕ್ಷೆಯ ದಿನಾಂಕ ಪ್ರಕಟಿಸಲಾಗಿಲ್ಲ. ಆದರೆ , ಮುಂದಿನ ವರ್ಷದ ಜನವರಿಯ ಕಡೆಯ ವಾರದಲ್ಲಿ ಹಾಗೂ ಫೆಬ್ರವರಿಯ ಮೊದಲ ವಾರದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಪರೀಕ್ಷಾ ದಿನಾಂಕವನ್ನು ತದನಂತರ ನಿಗದಿಪಡಿಸಿ, ಅಭ್ಯರ್ಥಿಗಳ ಮಾಹಿತಿಗಾಗಿ ಆಯೋಗದ ವೆಬ್‌ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

ಇತ್ತ ಗಮನಿಸಿ

* ಅರ್ಜಿಯನ್ನು ಸಲ್ಲಿಸುವಾಗ ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್‌ ಕಾರ್ಡ್‌ ಸಂಖ್ಯೆಯನ್ನು ಭರ್ತಿ ಮಾಡಬೇಕಿರುತ್ತದೆ.

*ಎಫ್‌ಡಿಎ, ಎಸ್‌ಡಿಎ ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದ್ದಲ್ಲಿ ಪ್ರತ್ಯೇಕ ಅರ್ಜಿ ಮತ್ತು ಶುಲ್ಕ ಪಾವತಿಸಬೇಕು.

*ಅಭ್ಯರ್ಥಿಯು ಎಫ್‌ಡಿಎ ಮತ್ತು ಎಸ್‌ಡಿಎ ಎರಡೂ ಹುದ್ದೆಗಳಿಗೂ ಅರ್ಹತೆ ಹೊಂದಿದ ಪಕ್ಷದಲ್ಲಿ ಯಾವುದಾದರೂ ಒಂದು ಹುದ್ದೆಗೆ ಮಾತ್ರ ಪರಿಗಣಿಸಿ, ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ