ಆ್ಯಪ್ನಗರ

ಸೂಪರ್‌ ಕಿಡ್‌: ಬಾಲ ವಿಜ್ಞಾನಿ ಅನಿಶಾ ನಾಯಕ್‌

ಕೆಸು ಎಲೆ ಗೊತ್ತಲ್ಲ, ಕರಾವಳಿ, ಮಲೆನಾಡು ಪ್ರದೇಶದ ತೋಟ ಗದ್ದೆಗಳಲ್ಲಿ ಮಳೆಗಾಲ ಸಮಯದಲ್ಲಿ ಹೇರಳವಾಗಿ ಬೆಳೆಯುವ ಇದು ಪಾರಂಪರಿಕ ಆಹಾರ ಪದಾರ್ಥ ಪತ್ರೊಡೆಗಾಗಿ ಬಳಕೆಯಲ್ಲಿದೆ.

Vijaya Karnataka Web 17 Jul 2016, 4:00 am
ಕೆಸು ಎಲೆ ಗೊತ್ತಲ್ಲ, ಕರಾವಳಿ, ಮಲೆನಾಡು ಪ್ರದೇಶದ ತೋಟ ಗದ್ದೆಗಳಲ್ಲಿ ಮಳೆಗಾಲ ಸಮಯದಲ್ಲಿ ಹೇರಳವಾಗಿ ಬೆಳೆಯುವ ಇದು ಪಾರಂಪರಿಕ ಆಹಾರ ಪದಾರ್ಥ ಪತ್ರೊಡೆಗಾಗಿ ಬಳಕೆಯಲ್ಲಿದೆ. ನೀರು ಬಿದ್ದಾಗ ಮೈಗೆ ಒಂದಿನಿತೂ ಅಂಟಿಕೊಳ್ಳದ ಈ ಸೊಪ್ಪನ್ನು ಆಹಾರಕ್ಕಾಗಿ ಬಳಕೆ ಮಾಡಬಹುದು ಎಂದು ಕಂಡುಕೊಂಡಿದ್ದನ್ನು ಪಾರಂಪರಿಕ ವಿಜ್ಞಾನ ಎನ್ನಬಹುದು.
Vijaya Karnataka Web super kid
ಸೂಪರ್‌ ಕಿಡ್‌: ಬಾಲ ವಿಜ್ಞಾನಿ ಅನಿಶಾ ನಾಯಕ್‌


ಈಗಿನ ಕಾಲದ ವಿಜ್ಞಾನಿಯೊಬ್ಬರು ಕೆಸು ಎಲೆಯ ವ್ಯಾಪ್ತಿಯನ್ನು ಆಹಾರಕ್ಕಲ್ಲದೆ ಮತ್ತೊಂದು ಉಪಯುಕ್ತ ಬಳಕೆಗೂ ವಿಸ್ತರಿಸಿದ್ದಾರೆ. ಕೆಸು ಎಲೆ ಬಳಸಿ ಮಾಡಿದ ದ್ರವವನ್ನು ಗೋಡೆಗೆ ಹಚ್ಚುವ ಬಣ್ಣದಲ್ಲಿ ಮಿಶ್ರ ಮಾಡಿ ಬಳಿದರೆ ದೀರ್ಘ ಮಳೆಯ ಕಾರಣದಿಂದ ಬರುವ ಫಂಗಸ್‌ ತಡೆಯಬಹುದಂತೆ. ಈ ಸಾಧನೆ ಮಾಡಿದವರು ಅಮೆರಿಕದ ವಿಜ್ಞಾನಿಗಳಲ್ಲ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಾಲೆ ಅನಿಶಾ ನಾಯಕ್‌.

ಪುತ್ತೂರಿನ ಸುಧಾನ ವಸತಿ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿಯಾದ ಅನಿಶಾ, ಕೆಸು ಎಲೆ ಬಳಸಿ ಮಾಡಿದ ಪ್ರಾಜೆಕ್ಟ್ 'ಹೈಡ್ರೋಫೋಬಿಸಿಟಿ ಆಫ್‌ ಕೊಲೊಕಾಸಿಯ ಇಸ್ಯುಲೆಂಟಾ ಲೀವ್ಸ್‌ ಅಸ್‌ ಎ ವಾಲ್‌ ಪ್ರೊಟೆಕ್ಟರ್‌'ಗೆ ಅಮೆರಿಕದ ಹ್ಯೂಸ್ಟನ್‌ನಲ್ಲಿ ನಡೆದ ಇಂಟರ್‌ನ್ಯಾಷನಲ್‌ ಸಸ್ಟೈನಬಲ್‌ ವರ್ಲ್ಡ್‌ ಎನರ್ಜಿ, ಎಂಜಿನಿಯರಿಂಗ್‌ ಆಂಡ್‌ ಎನ್ವಾರ್ಯನ್ಮೆಂಟ್‌ ಪ್ರಾಜೆಕ್ಟ್ ಒಲಿಂಪಿಯಾಡ್ನಲ್ಲಿ ಕಂಚಿನ ಪದಕ ಲಭಿಸಿದೆ. ಏಪ್ರಿಲ್‌ 27 ಮತ್ತು 28ರಂದು ನಡೆದ ಒಲಿಂಪಿಯಾಡ್‌ನಲ್ಲಿ 62 ದೇಶದ ವಿದ್ಯಾರ್ಥಿಗಳು ಒಟ್ಟು 585 ಪ್ರಾಜೆಕ್ಟ್ ಮಂಡಿಸಿದ್ದು, ದಕ್ಷಿಣ ಭಾರತವನ್ನು ಪ್ರತಿನಿಧಿಸಿದ ಏಕೈಕ ವಿದ್ಯಾರ್ಥಿನಿ ಎಂಬ ಗೌರವಕ್ಕೆ ಅನಿಶಾ ನಾಯಕ್‌ ಪಾತ್ರರಾಗಿದ್ದಾರೆ. ಜೊತೆಗೆ ಅವರು ಮಂಡಿಸಿದ ಪ್ರಾಜೆಕ್ಟ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂರನೇ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ.

ಈ ಪ್ರಾಜೆಕ್ಟ್ ಕುರಿತಾಗಿ ಕಳೆದ ಆರು ತಿಂಗಳಿಂದ ಪ್ರಯೋಗಗಳನ್ನು ಮಾಡುತ್ತಿದ್ದ ಅನಿಶಾ ಹೆಚ್ಚಿನ ಪ್ರಯೋಗಗಳಿಗಾಗಿ ಮಂಗಳೂರಿನ ಯೇನಪೋಯ ಮತ್ತು ನಿಟ್ಟೆ ವಿದ್ಯಾಸಂಸ್ಥೆಗಳ ಲ್ಯಾಬ್‌ ಬಳಸಿಕೊಂಡಿದ್ದಾರೆ. ಅಲ್ಲದೆ ಮುಂಬಯಿ ಮತ್ತು ರಾಜ್‌ಕೋಟ್‌ನಲ್ಲಿ ವಿಶೇಷ ತರಬೇತಿಯನ್ನು ಪಡೆದಿದ್ದಾರೆ. ಇದೇ ಪ್ರಾಜೆಕ್ಟ್ಗೆ ಹಿಂದೆ ಚೆನ್ನೈನಲ್ಲಿ ನಡೆದ ನ್ಯಾಷನಲ್‌ ಸೈನ್ಸ್‌ ಫೇರ್‌ನಲ್ಲಿ ಚಿನ್ನದ ಪದಕ ಲಭಿಸಿದೆ. ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದ ನ್ಯಾಷನಲ್‌ ಸೈನ್ಸ್‌ ಆ್ಯಂಡ್‌ ಎಂಜಿನಿಯರ್‌ ಫೇರ್‌ನಲ್ಲಿಯೂ ದ್ವಿತೀಯಾ ಗ್ರಾಂಡ್‌ ಗೋಲ್ಡ್‌ ಅವಾರ್ಡ್‌ ಲಭಿಸಿತ್ತು. ಪ್ರಸ್ತುತ ಪ್ರಾಜೆಕ್ಟ್ ಮೂಲದಲ್ಲಿ ಅನಿಶಾ ಅವರದೇ ಆಲೋಚನೆಯಾಗಿದ್ದು ಇದಕ್ಕೆ ಶಿಕ್ಷ ಕಿ ಸಾಧನಾ ಹೆಬ್ಬಾರ್‌ ಮಾರ್ಗದರ್ಶನ ನೀಡಿದ್ದಾರೆ.

- ಅನಿತಾ ಬನಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ