ಆ್ಯಪ್ನಗರ

ಸೂಪರ್‌ ಮ್ಯಾಜಿಕ್‌: ಆಹಾರದಲ್ಲಿರುವ ಕಬ್ಬಿಣ ಕಂಡು ಹಿಡಿಯಿರಿ

ನೀವು ಬ್ರೇಕ್‌ಫಾಸ್ಟ್‌ಗೆ ತಿನ್ನುವ ಕಾರ್ನ್‌ಫ್ಲೇಕ್ಸ್‌ನಲ್ಲಿ ನಿಜವಾಗಲೂ ಕಬ್ಬಿಣಂಶ ಇದೆಯೇ? ಇದನ್ನು ಆಯಸ್ಕಾಂತವನ್ನು ಬಳಸಿ ...

Vijaya Karnataka 17 Mar 2019, 5:00 am
ನೀವು ಬ್ರೇಕ್‌ಫಾಸ್ಟ್‌ಗೆ ತಿನ್ನುವ ಕಾರ್ನ್‌ಫ್ಲೇಕ್ಸ್‌ನಲ್ಲಿ ನಿಜವಾಗಲೂ ಕಬ್ಬಿಣಂಶ ಇದೆಯೇ? ಇದನ್ನು ಆಯಸ್ಕಾಂತವನ್ನು ಬಳಸಿ ಸುಲಭವಾಗಿ ಕಂಡು ಹಿಡಿಯಲು ಸಾಧ್ಯವಿದೆ. ಈ ಕೆಳಗಿನ ಪ್ರಯೋಗ ಮಾಡಿ ಫಲಿತಾಂಶ ತಿಳಿದುಕೊಳ್ಳಿ.
Vijaya Karnataka Web A Magnetic Breakfast


ಬೇಕಾಗುವ ಸಾಮಗ್ರಿ

ಗಟ್ಟಿಯಾದ ಆಯಸ್ಕಾಂತ, ಝಿಪ್‌ಲಾಕ್‌ ಬ್ಯಾಗ್‌, ಕಾರ್ನ್‌ಫ್ಲೇಕ್ಸ್‌ ಅಥವಾ ಕಬ್ಬಿಣಂಶ ಇದೆ ಎನ್ನಲಾಗುವ ಯಾವುದಾದರೂ ಧಾನ್ಯಗಳ ಫ್ಲೇಕ್ಸ್‌.

ಮಾಡುವ ವಿಧಾನ

1. ಝಿಪ್‌ಲಾಕ್‌ ಬ್ಯಾಗ್‌ಗೆ ಒಂದು ಕಪ್‌ ಕಾರ್ನ್‌ಫ್ಲೇಕ್ಸ್‌ ಹಾಕಿ. ಅದರ ಮೇಲೆ ಉಗುರು ಬೆಚ್ಚನೆಯ ನೀರು ಸುರಿಯಿರಿ. ಬ್ಯಾಗ್‌ನ ಅರ್ಧ ಭಾಗ ಬರುವಷ್ಟು ಮಾತ್ರ ನೀರು ಹಾಕಿದರೆ ಸಾಕು.

2. ಬ್ಯಾಗನ್ನು ಸೀಲ್‌ ಮಾಡಿ ಚೆನ್ನಾಗಿ ಅಲುಗಾಡಿಸಿ ಒಳಗಿನ ಮಿಶ್ರಣ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ ಒಂದು ಗಂಟೆ ಹಾಗೆಯೇ ಇಡಿ. ಇದರಿಂದ ಫ್ಲೇಕ್ಸ್‌ ದಪ್ಪಗಾಗಿ ನೀರಿನಲ್ಲಿ ಕರಗುತ್ತದೆ.

3. ನಿಮ್ಮ ಒಂದು ಅಂಗೈಯಲ್ಲಿ ಆಯಸ್ಕಾಂತವನ್ನು ಇಡಿ. ಇದರ ಮೇಲೆ ಝಿಪ್‌ಲಾಕ್‌ ಬ್ಯಾಗ್‌ ಇಡಿ. ನಿಮ್ಮ ಇನ್ನೊಂದು ಕೈಯಿಂದ ಬ್ಯಾಗ್‌ನ ಮೇಲ್ಭಾಗವನ್ನು ಹಿಡಿದುಕೊಂಡು ಒಂದು ನಿಮಿಷ ಆಯಸ್ಕಾಂತ ಮೇಲೆ ತಿರುಗಿಸಿ.

4. ಈಗ ಆಯಸ್ಕಾಂತ ಮೇಲ್ಭಾಗಕ್ಕೆ ಬರುವಂತೆ ಬ್ಯಾಗನ್ನು ತಲೆ ಕೆಳಗೆ ಮಾಡಿ. ಇದರಿಂದ ಅದರೊಳಗಿನ ದ್ರಾವಣ ಬ್ಯಾಗ್‌ನ ತಳ ಭಾಗಕ್ಕೆ ಹೋಗುತ್ತದೆ. ಆದರೆ ಮೇಲಿರುವ ಆಯಸ್ಕಾಂತ ಬ್ಯಾಗ್‌ನೊಳಗಿರುವ ಸಣ್ಣ ಸಣ್ಣ ಕಣಗಳನ್ನು ಹಿಡಿದುಕೊಂಡಿರುತ್ತದೆ. ಇದುವೇ ಆ ಫ್ಲೇಕ್ಸ್‌ನಲ್ಲಿರುವ ಕಬ್ಬಿಣಂಶವಾಗಿದೆ.

5. ಆಯಸ್ಕಾಂತ ಇಂಥ ಸಣ್ಣ ಕಣಗಳನ್ನು ಹಿಡಿದುಕೊಳ್ಳದಿದ್ದರೆ ಆ ಕಾರ್ನ್‌ಫ್ಲೇಕ್ಸ್‌ನಲ್ಲಿ ಕಬ್ಬಿಣಂಶ ಇಲ್ಲ ಎಂದು ಅರ್ಥ.

ಕಾರಣ ಇಲ್ಲಿದೆ

ಬ್ರೇಕ್‌ಫಾಸ್ಟ್‌ಗೆ ಬಳಸುವ ಬಹುತೇಕ ಧಾನ್ಯಗಳ ಫ್ಲೇಕ್ಸ್‌ ಪೌಷ್ಟಿಕಾಂಶ ಭರಿತವಾಗಿರುತ್ತವೆ. ಅಂದರೆ ಅದರಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ವಿಟಮಿನ್‌ಗಳು ಮತ್ತು ಕಬ್ಬಿಣ ಸೇರಿದಂತೆ ವಿವಿಧ ಖನಿಜಾಂಶಗಳಿರುತ್ತವೆ. ನಮ್ಮ ದೇಹಕ್ಕೆ ಕಬ್ಬಿಣದ ಅಗತ್ಯವಿದೆ. ಆದರೆ ದೇಹದೊಳಗೆ ಕಬ್ಬಿಣ ಉತ್ಪತ್ತಿಯಾಗುವುದಿಲ್ಲ. ನಾವು ಸೇವಿಸುವ ಆಹಾರಗಳ ಮೂಲಕ ನಮ್ಮ ದೇಹ ಕಬ್ಬಿಣವನ್ನು ಹೀರಿಕೊಳ್ಳುತ್ತದೆ. ದ್ವಿದಳ ಧಾನ್ಯ, ಒಣ ಬೀಜ, ಮೊಟ್ಟೆ, ಮಾಂಸ ಮುಂತಾದ ನೈಸರ್ಗಿಕ ಆಹಾರಗಳಲ್ಲಿ ಕಬ್ಬಿಣಂಶ ಇರುತ್ತದೆ. ಧಾನ್ಯಗಳಿಂದ ಮಾಡಿದ ಫ್ಲೇಕ್ಸ್‌ಗೆ ಪೌಷ್ಟಿಕಾಂಶ ತುಂಬಲು ಉತ್ಪಾದಕರು ಅದಕ್ಕೆ ಫುಡ್‌ ಗ್ರೇಡ್‌ ಕಬ್ಬಿಣ ಹಾಕುತ್ತಾರೆ. ಅತ್ಯಂತ ಸಣ್ಣ ಪ್ರಮಾಣದಲ್ಲಿರುವ ಇಂಥ ಕಬ್ಬಿಣವನ್ನು ಪತ್ತೆ ಹಚ್ಚಲು ಗಟ್ಟಿಯಾದ ಆಯಸ್ಕಾಂತವೇ ಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ