ಆ್ಯಪ್ನಗರ

ಸೂಪರ್‌ ಮ್ಯಾಜಿಕ್‌: ಬಣ್ಣದ ದ್ರಾವಣಗಳ ಗೋಪುರ

ಗಾಜಿನ ಲೋಟದಲ್ಲಿ ವಿವಿಧ ಬಣ್ಣಗಳ ಪದರು ಅಂದರೆ ಗೋಪುರ ಮೂಡಿಸಲು ಸಾಧ್ಯವೇ? ಇದನ್ನು ಕಂಡುಕೊಳ್ಳಲು ಈ ಕೆಳಗಿನ ಪ್ರಯೋಗ ಮಾಡಿ ಫಲಿತಾಂಶ ಕಂಡುಕೊಳ್ಳಿ...

Vijaya Karnataka 23 Jun 2019, 12:00 am
ಗಾಜಿನ ಲೋಟದಲ್ಲಿ ವಿವಿಧ ಬಣ್ಣಗಳ ಪದರು ಅಂದರೆ ಗೋಪುರ ಮೂಡಿಸಲು ಸಾಧ್ಯವೇ? ಇದನ್ನು ಕಂಡುಕೊಳ್ಳಲು ಈ ಕೆಳಗಿನ ಪ್ರಯೋಗ ಮಾಡಿ ಫಲಿತಾಂಶ ಕಂಡುಕೊಳ್ಳಿ.
Vijaya Karnataka Web Witch_s_Cauldron


ಬೇಕಾಗುವ ಸಾಮಗ್ರಿ

ಕಾರ್ನ್‌ ಸಿರಪ್‌ ಅಥವಾ ಜೇನುತುಪ್ಪ, ಅಡುಗೆ ಎಣ್ಣೆ, ನೀರು, ಬೇಕಿಂಗ್‌ ಸೋಡಾ, ಕೃತಕ ಆಹಾರ ಬಣ್ಣ, ವಿನಿಗರ್‌, ಡ್ರಾಪರ್‌, ಸಣ್ಣ ಕಪ್‌ಗಳು, ಗಾಜಿನ ದೊಡ್ಡ ಗ್ಲಾಸ್‌.

ಮಾಡುವ ವಿಧಾನ

1. ಗಾಜಿನ ಲೋಟದ ಒಂದು ಇಂಚಿನವರೆಗೆ ಕಾರ್ನ್‌ ಸಿರಪ್‌ ಅಥವಾ ಜೇನುತುಪ್ಪ ಸುರಿಯಿರಿ. ಇದಕ್ಕೆ ಎರಡು ಹನಿ ಕೆಂಪು ಬಣ್ಣ ಹಾಕಿ ಚೆನ್ನಾಗಿ ಬೆರೆಸಿ.

2. ಈ ಮಿಶ್ರಣಕ್ಕೆ ಕಾಲು ಇಂಚಿನವರೆಗೆ ಬೇಕಿಂಗ್‌ ಸೋಡಾ ಹಾಕಿ. ಆದರೆ ಮಿಕ್ಸ್‌ ಮಾಡಬೇಡಿ.

3. ಇದಕ್ಕೆ ನೀರನ್ನು ಗಾಜಿನ ಬದಿಗಳ ಮೂಲಕ ಒಂದು ಇಂಚಿನವರೆಗೆ ನಿಧಾನವಾಗಿ ಸುರಿಯಿರಿ. ನಂತರ ಅಡುಗೆ ಎಣ್ಣೆಯನ್ನು ಒಂದು ಇಂಚಿನವರೆಗೆ ಸುರಿಯಿರಿ.

4. ಪ್ರತ್ಯೇಕ ಕಪ್‌ವೊಂದಕ್ಕೆ ವಿನಿಗರ್‌ ಸುರಿಯಿರಿ. ಇದಕ್ಕೆ ಸ್ವಲ್ಪ ಹನಿ ನೀಲಿ ಬಣ್ಣ ಹಾಕಿ. ಇದರಿಂದ ಇತರ ದ್ರಾವಣಗಳ ಪದರದ ವ್ಯತ್ಯಾಸ ಗೊತ್ತಾಗುತ್ತದೆ.

5. ಆ ಗಾಜಿನ ಲೋಟದಲ್ಲಿ ಎಲ್ಲಾ ದ್ರಾವಣಗಳು ಪ್ರತ್ಯೇಕ ಪದರುಗಳಲ್ಲಿಯೇ ಇರುತ್ತವೆ. ಈಗ ಡ್ರಾಪರ್‌ನಿಂದ ಬಣ್ಣದ ವಿನಿಗರ್‌ ಅನ್ನು ಸ್ವಲ್ಪ ತೆಗೆದುಕೊಂಡು ಲೋಟದಲ್ಲಿರುವ ಮಿಶ್ರಣಕ್ಕೆ ಹಾಕುತ್ತಾ ಅಲ್ಲಾಗುವ ವ್ಯತ್ಯಾಸವನ್ನು ಗಮನಿಸುತ್ತಿರಿ.

6. ಈ ರೀತಿ ಮಾಡಿದಾಗ ಆ ಡ್ರಾಪರ್‌ನಿಂದ ಬೀಳುವ ವಿನಿಗರ್‌ ಅಡುಗೆ ಎಣ್ಣೆಯವರೆಗೆ ಹೋಗುತ್ತದೆ. ಆದರೆ ಅದಕ್ಕೆ ನೀರಿನ ಪದರಕ್ಕೆ ಹೋಗಲು ಆಗುವುದಿಲ್ಲ.

7. ಈಗ ಡ್ರಾಪರ್‌ಗೆ ಮತ್ತೆ ವಿನಿಗರ್‌ ತುಂಬಿಸಿ ಅದರ ತುದಿಯನ್ನು ಬೇಕಿಂಗ್‌ ಸೋಡಾದ ಪದರದವರೆಗೆ ತಳ್ಳಿ ವಿನಿಗರ್‌ ಹಿಂಡಿ.

8. ಬೇಕಿಂಗ್‌ ಸೋಡಾಗೆ ವಿನಿಗರ್‌ ಬಿದ್ದ ತಕ್ಷ ಣ ಲೋಟದಲ್ಲಿ ಗುಳ್ಳೆಗಳು ಕಾಣಿಸಿಕೊಂಡು ನೊರೆ ಬರುತ್ತದೆ.

ಕಾರಣ ಇಲ್ಲಿದೆ

ಈ ಪ್ರಯೋಗದಲ್ಲಿ ನೀವು ಮಾಡಿದ್ದು ಮೂಲತಃ ಸಾಂದ್ರತೆಯ ಗೋಪುರ. ಅಂದರೆ ವಿವಿಧ ಸಾಂದ್ರತೆಗಳಿರುವ ದ್ರವಗಳ ಗೋಪುರ. ಒಂದು ವಸ್ತುವಿನಲ್ಲಿ ಅಣುಗಳು ಒಂದಕ್ಕೊಂದು ಎಷ್ಟು ಸಮೀಪವಾಗಿ ಬೆಸೆದುಕೊಂಡಿರುತ್ತವೆ ಎಂಬುದೇ ಸಾಂದ್ರತೆ. ಅಣುಗಳ ನಡುವಿನ ಜಾಗ ಕಡಿಮೆಯಿದ್ದರೆ ಆ ವಸ್ತುವಿನ ಸಾಂದ್ರತೆ ಕಡಿಮೆಯಿರುತ್ತದೆ. ಒಂದು ವಸ್ತು ದ್ರವದ ಮೇಲೆ ತೇಲಬೇಕಿದ್ದರೆ ಆ ವಸ್ತುವಿನ ಸಾಂದ್ರತೆ ಆ ದ್ರವದ ಸಾಂದ್ರತೆಗಿಂತ ಕಡಿಮೆಯಿರಬೇಕು. ಈ ಪ್ರಯೋಗದಲ್ಲಿ ಕಾರ್ನ್‌ ಸಿರಪ್‌ ಅಥವಾ ಜೇನುತುಪ್ಪದ ಸಾಂದ್ರತೆ ಅಧಿಕವಾಗಿರುವ ಕಾರಣ ಅದು ತಳಕ್ಕೆ ಹೋಗುತ್ತದೆ. ನೀರಿನ ಸಾಂದ್ರತೆ ಎಣ್ಣೆಗಿಂತ ಹೆಚ್ಚಿದ್ದರೂ ಕಾರ್ನ್‌ ಸಿರಪ್‌ನ ಸಾಂದ್ರತೆಗಿಂತ ಕಡಿಮೆಯಿದೆ. ಆದ್ದರಿಂದ ಅದು ಮಧ್ಯದ ಪದರಾಗಿ ರೂಪುಗೊಂಡು ಎಣ್ಣೆಯ ಪದರ ಮೇಲಿರುತ್ತದೆ.

ವಿನಿಗರ್‌ ಹೆಚ್ಚಾಗಿ ನೀರಿನಿಂದಲೇ ಮಾಡಲ್ಪಡುವ ಕಾರಣ ಅದರ ಸಾಂದ್ರತೆ ಎಣ್ಣೆಗಿಂತ ಹೆಚ್ಚಿರುತ್ತದೆ. ಆದ್ದರಿಂದ ಅದು ಎಣ್ಣೆಯ ಪದರದ ಮೂಲಕ ಕೆಳಗೆ ಹೋಗಲು ಯತ್ನಿಸುತ್ತದಾದರೂ ಅದಕ್ಕೆ ಸಾಧ್ಯವಾಗದೆ ಮತ್ತು ಎರಡು ದ್ರಾವಣಗಳು ಮಿಶ್ರವಾಗದ ಕಾರಣ ಅದು ಅಲ್ಲಿಯೇ ಹರಳುಗಟ್ಟಿ ಎಣ್ಣೆಯ ಪದರದಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಕೊನೆಗೆ ನೀವು ಬೇಕಿಂಗ್‌ ಸೋಡಾದ ಪದರಿಗೆ ವಿನಿಗರ್‌ ಹಾಕಿದಾಗ ಅಲ್ಲಿ ನಡೆಯುವ ರಾಸಾಯನಿಕ ಪ್ರಕ್ರಿಯೆಯಿಂದ ಕಾರ್ಬನ್‌ ಡೈಆಕ್ಸೈಡ್‌ ಬಿಡುಗಡೆಯಾಗುತ್ತದೆ. ಈ ಅನಿಲ ಗುಳ್ಳೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ