ಆ್ಯಪ್ನಗರ

ಸೂಪರ್‌ ಮ್ಯಾಜಿಕ್‌: ಮೊಟ್ಟೆಗೂ ಗೊತ್ತಿದೆ ಡೈವಿಂಗ್‌

ವೈಜ್ಞಾನಿಕ ನಿಯಮವೊಂದರ ಪ್ರಕಾರ, ಮೊಟ್ಟೆ ಕೂಡಾ ಹಾರಬಲ್ಲದು ಅದು ಕೂಡಾ ಉತ್ತಮ ಡೈವರ್‌ ಆಗಬಲ್ಲದು...

Vijaya Karnataka 21 Jul 2019, 5:00 am
ವೈಜ್ಞಾನಿಕ ನಿಯಮವೊಂದರ ಪ್ರಕಾರ, ಮೊಟ್ಟೆ ಕೂಡಾ ಹಾರಬಲ್ಲದು. ಅದು ಕೂಡಾ ಉತ್ತಮ ಡೈವರ್‌ ಆಗಬಲ್ಲದು. ಇದನ್ನು ಕಂಡುಕೊಳ್ಳಲು ಈ ಕೆಳಗಿನ ಪ್ರಯೋಗ ಮಾಡಿ ಫಲಿತಾಂಶ ತಿಳಿದುಕೊಳ್ಳಿ.
Vijaya Karnataka Web An Egg cellent Dive


ಬೇಕಾಗುವ ಸಾಮಗ್ರಿ

ಮೊಟ್ಟೆ, ಕಾರ್ಡ್‌ಬೋರ್ಡ್‌ನ ಟ್ಯೂಬ್‌, ನೀರು, ಅಂಚಿರುವ ಸಣ್ಣ ಪ್ಲಾಸ್ಟಿಕ್‌ ಪ್ಲೇಟ್‌, ಲೋಟ.

ಮಾಡುವ ವಿಧಾನ

1. ಲೋಟವನ್ನು ಟೇಬಲ್‌ ಮೇಲೆ ಅಥವಾ ನೆಲದ ಮೇಲೆ ಇಟ್ಟು ಅದರ ಮುಕ್ಕಾಲು ಭಾಗದಷ್ಟು ನೀರು ತುಂಬಿಸಿ.

2. ಚಿತ್ರದಲ್ಲಿ ತೋರಿಸಿರುವಂತೆ ಲೋಟದ ಮೇಲೆ ಪ್ಲಾಸ್ಟಿಕ್‌ ಪ್ಲೇಟ್‌ ಇಡಿ.

3. ಕಾರ್ಡ್‌ಬೋರ್ಡ್‌ ಟ್ಯೂಬನ್ನು ಪ್ಲೇಟ್‌ನ ಮೇಲಿಡಿ. ಈ ಟ್ಯೂಬ್‌ ನೀರಿನ ಮೇಲಿರುವಂತೆ ನೋಡಿಕೊಳ್ಳಿ.

4. ಈಗ ಮೊಟ್ಟೆಯನ್ನು ಟ್ಯೂಬ್‌ನ ಮೇಲ್ಭಾಗದಲ್ಲಿ ಅಡ್ಡವಾಗಿ ಇಡಿ. ಮೊಟ್ಟೆ ಒಡೆದು ಹೋಗುತ್ತದೆ ಎಂಬ ಭಯವಿದ್ದರೆ ಪ್ಲಾಸ್ಟಿಕ್‌ ಮೊಟ್ಟೆ ಅಥವಾ ಸಣ್ಣ ಚೆಂಡು ಉಪಯೋಗಿಸಬಹುದು.

5. ಈ ಟೇಬಲ್‌ ಬಳಿ ನಿಂತಿಕೊಂಡು ನಿಮ್ಮ ಕೈಯನ್ನು ಪ್ಲೇಟ್‌ನ ಕೆಲವು ಇಂಚುಗಳಷ್ಟು ದೂರದಲ್ಲಿ ಹಾಗೂ ಪ್ಲೇಟ್‌ಗೆ ಸಮಾನಾಂತರವಾಗಿ ಹಿಡಿದುಕೊಳ್ಳಿ.

6. ಈಗ ನೇರವಾಗಿ ಮತ್ತು ಸಮಾನಾಂತರವಾಗಿ ಆ ಪ್ಲೇಟ್‌ಗೆ ಬಲವಾಗಿ ಹೊಡೆಯಿರಿ.

7. ಈ ರೀತಿ ಮಾಡಿದಾಗ ಪ್ಲೇಟ್‌ ಹಾರಿ ಹೋಗುತ್ತದೆ, ಕಾರ್ಡ್‌ಬೋರ್ಡ್‌ ಉರುಳಿ ಬೀಳುತ್ತದೆ ಮತ್ತು ಮೊಟ್ಟೆ ನೇರವಾಗಿ ನೀರಿನೊಳಗೆ ಬೀಳುತ್ತದೆ! ಅಂದರೆ ಅದು ಹಾರಿಕೊಂಡು ನೀರಿಗೆ ಬಂದು ಬಿದ್ದಂತೆ ಭಾಸವಾಗುತ್ತದೆ.

ಕಾರಣ ಇಲ್ಲಿದೆ

ಖ್ಯಾತ ವಿಜ್ಞಾನಿ ಸರ್‌ ಐಸಾಕ್‌ ನ್ಯೂಟನ್‌ ಚಲನೆಯ ಮೂರು ನಿಯಮಗಳನ್ನು ಪರಿಚಯಿಸಿದ್ದಾರೆ. ಈ ಪೈಕಿ ಒಂದು ನಿಯಮದ ಪ್ರಕಾರ, ಆಧಾರದಲ್ಲಿರುವ ವಸ್ತು ಆಧಾರದಲ್ಲಿಯೇ ಇರುತ್ತದೆ ಅಥವಾ ಅದು ಚಲನೆಯಲ್ಲಿದ್ದರೆ ಬಾಹ್ಯ ಬಲ ಅದರ ಮೇಲೆ ಬೀಳುವವರೆಗೂ ಅದು ಚಲಿಸುತ್ತಿರುತ್ತದೆ. ವಸ್ತುವೊಂದು ಆಧಾರದಲ್ಲಿದೆಯೇ ಅಥವಾ ಚಲನೆಯಲ್ಲಿದೆಯೇ ಎಂಬ ಪ್ರವೃತ್ತಿಯನ್ನು ಜಡತ್ವ ಎನ್ನಲಾಗುತ್ತದೆ.

ಈ ಪ್ರಯೋಗದಲ್ಲಿ ಪ್ಲೇಟ್‌ಗೆ ಕೈಯಿಂದ ಹೊಡೆಯುವ ಮೂಲಕ ಅದಕ್ಕೆ ಬಲ ಪ್ರಯೋಗ ಮಾಡಿರಲಾಗುತ್ತದೆ. ಬಲ ಪ್ರಯೋಗವಾದ ಪ್ಲೇಟ್‌ ಕೆಳಗೆ ಬಿದ್ದು ತನ್ನೊಂದಿಗೆ ಕಾರ್ಡ್‌ಬೋರ್ಡ್‌ ಟ್ಯೂಬನ್ನೂ ಎಳೆದೊಯ್ದು ಬೀಳಿಸುತ್ತದೆ. ಆದರೆ ಈ ಬಲ ಪ್ರಯೋಗ ಮೊಟ್ಟೆಯ ಮೇಲೆ ಬಿದ್ದಿರದ ಕಾರಣ ಅದು ಇದ್ದಲ್ಲಿಯೇ ಅಂದರೆ ಆಧಾರದಲ್ಲಿಯೇ ಗುರುತ್ವಾಕರ್ಷಣೆ ಬಲ ಅನ್ವಯವಾಗುವವರೆಗೆ ಇರುತ್ತದೆ. ಮೊಟ್ಟೆಗೆ ಗುರುತ್ವಾಕರ್ಷಣೆ ಬಲ ಪ್ರಯೋಗವಾದ ತಕ್ಷ ಣ ಅದು ನೇರವಾಗಿ ನೀರಿನೊಳಗೆ ಹಾರಿ ಬಂದು ಬೀಳುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ